*ನಿರಂತರ ಲೂಟಿ, ದರೋಡೆಯಲ್ಲಿ ನಿರತರಾಗಿರುವ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡಲಿ- ಬಿ.ಎಸ್.ವೈ ಮಾಜಿ ಮುಖ್ಯಮಂತ್ರಿ
*ಬಿಜೆಪಿಯವರು ರಾಜ್ಯದಲ್ಲಿ ಭ್ರಷ್ಟಾಚಾರದ ಪಿತಾಮಹರು, ಅವರ ಮೇಲೆ 21 ಹಗರಣಗಳಿವೆ, ಅವರನ್ನು ಜೈಲಿಗೆ ಕಳುಹಿಸುತ್ತೇವೆ- ಸಿದ್ದರಾಮಯ್ಯ ಮುಖ್ಯಮಂತ್ರಿ
*ಹಣ ಕೊಳ್ಳೆ ಹೊಡೆಯುವುದು ಸಾಮಾಜಿಕ ನ್ಯಾಯವೇ? ಸಮಾಜವಾದವೇ ಈ ಅತ್ಯಂತ ಭ್ರಷ್ಟ ಮತ್ತು ಕೆಟ್ಟ ಸರಕಾರ ತೊಲಗಬೇಕು- ಕುಮಾರಸ್ವಾಮಿ, ಕೇಂದ್ರ ಸಚಿವ
*ಭ್ರಷ್ಟಾಚಾರಿ ಗಳಿಂದ, ಭ್ರಷ್ಟಾಚಾರಿ ಗಳಿಗೋಸ್ಕರ , ಭ್ರಷ್ಟಾಚಾರಿಗಳೇ ಪಾದಯಾತ್ರೆ ನಡೆಸುತ್ತಿದ್ದಾರೆ- ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ
*ಸಿ.ಎಂ. ತಪ್ಪು ಮಾಡಿಲ್ಲ ಎನ್ನುವು ದಾದರೆ ನೋಟೀಸ್ ಕೊಟ್ಟ ರಾಜ್ಯಪಾಲರನ್ನು ಪ್ರಶ್ನಿಸುತ್ತಿರುವುದು ಏಕೆ? ಆರ್. ಅಶೋಕ್ ವಿಪಕ್ಷ ನಾಯಕ
*ಭ್ರಷ್ಟ ಕಾಂಗ್ರೆಸ್ ಸರಕಾರವನ್ನು ಕಿತ್ತೊಗೆಯಲು ಈ ಪಾದ ಯಾತ್ರೆ ಹಮ್ಮಿ ಕೊಂಡಿದ್ದೇವೆ-ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ
*ಭ್ರಷ್ಟಾಚಾರ ಮಾಡಿದವರೇ ಭ್ರಷ್ಟಾಚಾರದ ವಿರುದ್ಧ ಹೋರಾಟ ಮಾಡಿದರೆ ಅದಕ್ಕೆ ಮಹತ್ವ ಇರುವುದಿಲ್ಲ, ಯಡಿಯೂರಪ್ಪ ಅಧಿಕಾರದಿಂದ ಇಳಿಯಲು ವಿಜಯೇಂದ್ರ
ಕಾರಣ – ಯತ್ನ್ನಾಳ್, ಶಾಸಕ
*ಕ್ಷೇತ್ರದಲ್ಲಿ ಭ್ರಷ್ಟಾಚಾರ ಕಡಿಮೆಯಾಗುತ್ತಿದೆ-ಅಶೋಕ್ ಕುಮಾರ್ ರೈ ಪುತ್ತೂರು ಶಾಸಕರು
ರಾಜ್ಯದ, ದೇಶದ ಪ್ರತಿಯೊಬ್ಬ ಮತದಾರರ (ಪ್ರಜೆ) ಮನಸ್ಸಿನಲ್ಲಿ ನಮ್ಮ ರಾಜ್ಯ, ದೇಶ ಲಂಚ, ಭ್ರಷ್ಟಾಚಾರ ಮುಕ್ತವಾಗಿ ಜನರಿಗೆ ನಿಜವಾದ ಸ್ವಾತಂತ್ರ್ಯ ದೊರಕಲಿ ಎಂದಿದೆ. ಆದರೆ ಎಲ್ಲಾ ಪಕ್ಷಗಳು ಚುನಾವಣೆಯಲ್ಲಿ ಲಂಚ, ಭ್ರಷ್ಟಾಚಾರದ ವಿರುದ್ಧ ಘೋಷಣೆ ಮಾಡುತ್ತಾರೆ. ಆಡಳಿತಕ್ಕೆ ಬಂದರೆ ಲಂಚ, ಭ್ರಷ್ಟಾಚಾರ ಮುಕ್ತ ಮಾಡುವುದಾಗಿ ಭರವಸೆ ನೀಡುತ್ತಾರೆ. ಗೆದ್ದ ಮೇಲೆ ಆಶ್ವಾಸನೆ ಮರೆಯುತ್ತಾರೆ. ಗ್ರಾಮದ ಹಳ್ಳಿ ಹಳ್ಳಿಗಳಲ್ಲಿಯೂ ಲಂಚ, ಭ್ರಷ್ಟಾಚಾರ ಮೆರೆಯುತ್ತದೆ. ಅದು ಇಲ್ಲದಿದ್ದರೆ ಕೆಲಸವೇ ಆಗುವುದಿಲ್ಲ ಎಂದು ಎಲ್ಲರಿಗೂ ಗೊತ್ತಿದೆ. ಇತ್ತೀಚಿನ ದಿನಗಳಲ್ಲಿ ಜನರು ಜಾಗೃತರಾಗುತ್ತಿದ್ದಾರೆ. ಲಂಚ, ಭ್ರಷ್ಟಾಚಾರ ಕಾರಣಕ್ಕಾಗಿಯೇ ಅಭ್ಯರ್ಥಿಗಳನ್ನು ಸರಕಾರಗಳನ್ನು ಸೋಲಿಸುತ್ತಿದ್ದಾರೆ/ ಗೆಲ್ಲಿಸುತ್ತಿದ್ದಾರೆ. ಅದರ ಪರಿಣಾಮವೇ ಬಿಜೆಪಿ ಮತ್ತು ದಳದಿಂದ ಬೆಂಗಳೂರಿನಿಂದ ಮೈಸೂರಿಗೆ ಈ ಜಾಥಾ ಮತ್ತು ಕಾಂಗ್ರೆಸ್‌ನಿಂದ ಅಲ್ಲಲ್ಲಿ ಪ್ರತಿಭಟನೆ, ಸಭೆಗಳಾಗಿವೆ.
ಇಲ್ಲಿ ಯಾರ್ಯಾರು ಭ್ರಷ್ಟಾಚಾರ ಮಾಡುತ್ತಾರೆ ಎಂದು ಜನತೆಗೆ ಗೊತ್ತಿದೆ. ಆದರೆ ಅವರಿಗೆ ಶಿಕ್ಷೆಯಾಗಬೇಕಾದರೆ ಪ್ರಕರಣ ಬಹಿರಂಗವಾಗಬೇಕು ಮತ್ತು ತನಿಖೆಯಾಗಬೇಕು. ಅದು ಯಶಸ್ವಿಯಾಗಬೇಕಾದರೆ ಲಂಚ, ಭ್ರಷ್ಟಾಚಾರ ಯಾರೇ ಮಾಡಿದ್ದರೂ ಜನತೆ ಪಕ್ಷ, ಜಾತಿ, ಧರ್ಮ ಭೇದ ಭಾವ ಬಿಟ್ಟು ಅವರನ್ನು ವಿರೋಧಿಸಬೇಕು. ಭ್ರಷ್ಟಾಚಾರಿಗಳು ಯಾರೇ ಆಗಿದ್ದರೂ ಅವರಿಗೆ ಶಿಕ್ಷೆಯಾಗಬೇಕು ಅವರ ಆಸ್ತಿ ಪಾಸ್ತಿಗಳನ್ನು ಸರಕಾರ ವಶಪಡಿಸಿಕೊಳ್ಳುವಂತಾಗಬೇಕು. ಅದು ದೇಶ, ರಾಜ್ಯದಿಂದ ಗ್ರಾಮ ಮಟ್ಟದವರೆಗೂ ನಡೆಯಬೇಕು. ಹಾಗೆ ಆದರೆ ಮಾತ್ರ ಮಹಾತ್ಮ ಗಾಂಽ ಹೇಳಿದ ನಿಜವಾದ ಸ್ವಾತಂತ್ರ್ಯ ಜನರಿಗೆ ದೊರಕುತ್ತದೆ. ಅದಕ್ಕಾಗಿ ಇದೇ ಆಗಸ್ಟ್ 15ರ ಸ್ವಾತಂತ್ರ್ಯದ ದಿನವನ್ನು ಲಂಚ, ಭ್ರಷ್ಟಾಚಾರ ಮುಕ್ತ ದಿನವನ್ನಾಗಿ ಘೋಷಿಸಲು ಪ್ರಜಾ ರಾಜರಾದ ಜನತೆ ಒತ್ತಾಯಿಸಬೇಕು.
ಸುಮಾರು 40 ವರ್ಷಗಳಿಂದ ಲಂಚ, ಭ್ರಷ್ಟಾಚಾರ ವಿರುದ್ಧ ಹೋರಾಟದ ಅಂಗವಾಗಿ ಪತ್ರಿಕೆ ನಡೆಸಿದ್ದೇವೆ. ಕಳೆದ ಹಲವು ವರ್ಷಗಳಿಂದ ಮಹಾತ್ಮ ಗಾಂಧಿಯವರ ಗ್ರಾಮ ಸ್ವರಾಜ್ಯದ ಆಶಯದಂತೆ ಮತದಾರರ ಜಾಗೃತಿ ಮಾಡುತ್ತಿದ್ದೇವೆ. ಅದರ ಅಂಗವಾಗಿ ಲಂಚ, ಭ್ರಷ್ಟಾಚಾರದ ವಿರುದ್ಧ ಜನಾಂದೋಲನ ನಡೆಸುತ್ತಿದ್ದೇವೆ. ಈ ವಿಚಾರವನ್ನು ಚುನಾವಣೆಯ ಸಂದರ್ಭದಲ್ಲಿ ಪ್ರಧಾನಿ ಮೋದೀಜಿಯವರ ಕ್ಷೇತ್ರ ವಾರಣಾಸಿಯಲ್ಲಿ, ರಾಹುಲ್ ಗಾಂಧಿಯವರ ಹಿಂದಿನ ಕ್ಷೇತ್ರ ಅಮೇಥಿಯಲ್ಲಿ . ಸಿದ್ದರಾಮಯ್ಯರ ಕ್ಷೇತ್ರ ವರುಣದಲ್ಲಿ , ಬೊಮ್ಮಾಯಿವರ ಕ್ಷೇತ್ರ ಶಿಗ್ಗಾವಿಯಲ್ಲಿ ಪ್ರಚಾರ ಮಾಡಿದ್ದೇವೆ. ಮತದಾರರ ಮುಂದೆ ಇಟ್ಟಿದ್ದೆವು. ದ.ಕ. ಜಿಲ್ಲೆಯ ಸುಳ್ಯ, ಪುತ್ತೂರು, ಬೆಳ್ತಂಗಡಿಗಳಲ್ಲಿ ಈ ಆಂದೋಲನ ಮನೆ ಮಾತಾಗಿದೆ ಮತ್ತು ಲಂಚ, ಭ್ರಷ್ಟಾಚಾರ ವಿರುದ್ಧ ಪರಿಣಾಮ ಬೀರಿದೆ, ಶಾಸಕರುಗಳೂ ಆಂದೋಲನಕ್ಕೆ ಬೆಂಬಲ ನೀಡುತ್ತಿದ್ದಾರೆ. ಇದೀಗ ಅದರ ಮುಂದುವರಿದ ಭಾಗವಾಗಿ ಈ ಆಂದೋಲನವನ್ನು ರಾಜ್ಯಕ್ಕೆ ವಿಸ್ತರಿಸಲು ಆಗಸ್ಟ್ 15ರಂದು ಸ್ವಾತಂತ್ರ್ಯ ದಿನವನ್ನು ಲಂಚ, ಭ್ರಷ್ಟಾಚಾರ ಮುಕ್ತ ದಿನವನ್ನಾಗಿ ಮಾಡಬೇಕೆಂಬ ವಿಚಾರವನ್ನು ಜನತೆಯ ಮುಂದಿಟ್ಟಿದ್ದೇವೆ. ಆ ಮೂಲಕ ಜನತೆಗೆ ನಿಜವಾದ ಸ್ವಾತಂತ್ರ್ಯ ದೊರಕಲಿ ಎಂದು ಆಶಿಸುತ್ತೇವೆ.
ಡಾ.ಯು.ಪಿ.ಶಿವಾನಂದ, ಸುದ್ದಿ ಜನಾಂದೋಲನ ವೇದಿಕೆ.