ಕಡಬ: ನಿಲ್ಲಿಸಿದ್ದ ಸ್ಕೂಟಿಯನ್ನು ಅಪರಿಚಿತನೋರ್ವ ಬಹುದೂರ ಕೊಂಡೊಯ್ದು ಬಳಿಕ ವಾಹನವನ್ನು ರಸ್ತೆಯಲ್ಲೇ ನಿಲ್ಲಿಸಿ ಪರಾರಿಯಾದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಸಿಸಿಟಿವಿ ದೃಶ್ಯದ ಮೂಲಕ ಆತನ ಚಲನವಲನ ಪತ್ತೆಯಾಗಿದೆ.
ಆ.1ರಂದು ತಡ ರಾತ್ರಿ ಈ ಘಟನೆ ನಡೆದಿದ್ದು ಗಣಪತಿ ದೇವಸ್ಥಾನದ ಬಳಿ ಇರುವ ಇ ಕಾಮರ್ಸ್ ಸಂಸ್ಥೆ ನಿರ್ವಹಿಸುತ್ತಿರುವ ರಂಜಿತ್ ಎಂ ಎಂಬವರ ಸ್ಕೂಟಿಯನ್ನು ಅಪರಿಚಿತ ಕೊಂಡು ಹೋಗಿರುವುದಾಗಿ ತಿಳಿದು ಬಂದಿದೆ. ತಡ ರಾತ್ರಿ ತನ್ನ ಸಂಸ್ಥೆಗೆ ಪಾರ್ಸೆಲ್ ಬರುವ ಹಿನ್ನೆಲೆ ರಂಜಿತ್ ಅವರು ಸ್ಕೂಟಿಯನ್ನು ತನ್ನ ಕಚೇರಿ ಬಳಿ ನಿಲ್ಲಿಸಿ ಕೀ ಯನ್ನು ಅದರಲ್ಲೇ ಇಟ್ಟಿದ್ದರು. ಕಚೇರಿಯ ಒಳಗೆ ಕುಳಿತು ಕೆಲಸ ಮಾಡುತ್ತಿದ್ದ ವೇಳೆ ಸ್ಕೂಟರ್‌ನ ಶಬ್ದ ಕೇಳಿ ಹೊರ ಬಂದಾಗ ತನ್ನ ಸ್ಕೂಟಿಯನ್ನು ಕೊಂಡು ಹೋಗುತ್ತಿರುವುದು ಗೊತ್ತಾಗಿದೆ.
ತನ್ನ ಸ್ನೇಹಿತರು ಕೊಂಡು ಹೋದರೆಂದು ಭಾವಿಸಿ ಕೆಲ ಹೊತ್ತು ಕಾದು ಬಳಿಕ ಕೆಲವರಿಗೆ -ನಾಯಿಸಿದ್ದರು. ಯಾರೋ ಅಪರಿಚಿತರು ಕೊಂಡು ಹೋಗಿರುವುದು ಗಮನಕ್ಕೆ ಬರುತ್ತಲೇ ಸಿಸಿಟಿವಿ ಪರಿಶೀಲಿಸಿದ್ದಾರೆ. ಕೂಡಲೇ ಹುಡುಕಾಡುತ್ತಾ ಹೋದಾಗ ಸ್ಕೂಟಿಯನ್ನು ಪಟ್ಟಣ ಪಂಚಾಯತ್ ಕಚೇರಿ ಬಳಿ ಬಿಟ್ಟು ಆತ ಎಸ್ಕೇಪ್ ಆಗಿದ್ದಾನೆ. ಮರು ದಿನ ಕಡಬ ಪೇಟೆಯ ಹಲವು ಅಂಗಡಿಗಳ ಸಿಸಿಟಿವಿ ಪರಿಶೀಲಿಸಿದ್ದು ಈ ವೇಳೆ ಆತ ಕಡಬ ಮುಖ್ಯ ರಸ್ತೆಯ ಮೂಲಕ ಓಡುತ್ತಾ ಮುಂದೆ ಸಾಗಿ ಬಾರೊಂದರ ಸನಿಹದಿಂದ ಸಾಗಿ ತಲೆ ಮರೆಸಿಕೊಂಡಿರುವುದು ಸಿಸಿಟಿವಿ ದೃಶ್ಯದಲ್ಲಿದೆ.