ಸಂಪ್ಯ ಜಂಕ್ಷನ್‌ನಲ್ಲಿ ಹಠಾತ್ ಪ್ರತ್ಯಕ್ಷಗೊಂಡ ಬಾಳೆಯ ತೋಟ!!..

0

ಕೆಸರಲ್ಲಿ ಹೂತುಹೋಗುತ್ತಿವೆ ವಾಹನಗಳು..

ಪುತ್ತೂರು: ಅರೆ… ಇದೇನಪ್ಪಾ ಅಂತಾ ಹೆಡ್ಡಿಂಗ್ ನೋಡಿ ಹುಬ್ಬೇರಿಸಿಬಿಟ್ರಾ.. ಬಾಳೆತೋಟ ಸಾಮಾನ್ಯ ಸಂಗತಿ.. ಅದರಲ್ಲಿ ಸಂಪ್ಯದಲ್ಲಿರುವ ಬಾಳೆತೋಟ ಏನು ವಿಶೇಷ… !?
ಹೌದು ಈ ಬಾಳೆತೋಟ ನೋಡಿದ್ರೆ ನಿಮಗೆ ನಗಬೇಕೋ ? ಅಳಬೇಕೋ ? ಗೊತ್ತಾಗಲ್ಲ..


ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆ ಇರೋದು ಆರ್ಯಾಪು ಗ್ರಾಮದ ಸಂಪ್ಯದಲ್ಲಿ. ಹಾಗಾಗಿ ಇಲ್ಲಿ ಬಸ್ ನಿಲ್ದಾಣ, ರಿಕ್ಷಾ ನಿಲ್ದಾಣಗಳಿವೆ. ಸಾಕಷ್ಟು ಜನಸಂಚಾರವಿದೆ. ಅಂಗಡಿ ಮುಂಗಟ್ಟುಗಳಿವೆ. ಅನೇಕ ವರ್ಷಗಳಿಂದ ಇಲ್ಲಿ ರಿಕ್ಷಾ ನಿಲ್ದಾಣವಿದೆ. ವಿಶಾಲವಾದ ಗೋಳಿ ಮತ್ತು ಮಾವು ವೃಕ್ಷಗಳ ಅಡಿಯಲ್ಲಿ ರಿಕ್ಷಾ ನಿಲ್ದಾಣವಿತ್ತು. ಮಳೆ ಬಿಸಿಲಿಗೂ ಆ ವೃಕ್ಷ ವರದಾನವಾಗಿತ್ತು. ಆದರೆ ಆ ವೃಕ್ಷವನ್ನು ತೆಗೆದು ನೂತನ ರಿಕ್ಷಾ ನಿಲ್ದಾಣಕ್ಕಾಗಿ 6 ತಿಂಗಳ ಹಿಂದೆ ಶಂಕುಸ್ಥಾಪನೆ ನೆರವೇರಿಸಲಾಗಿತ್ತು.

ಆದರೆ ಇನ್ನೂ ಇಲ್ಲಿ ರಿಕ್ಷಾ ನಿಲ್ದಾಣ ನಿರ್ಮಾಣವಾಗಿಲ್ಲ. ಶಂಕುಸ್ಥಾಪನೆಯ ವೇಳೆ ನಿಲ್ದಾಣಕ್ಕಾಗಿ ಜೆಸಿಬಿ ಮೂಲಕ ನೆಲ ಸಮತಟ್ಟು ಮಾಡಲಾಗಿತ್ತು. ಹೀಗಾಗಿ ಈ ಮಳೆಗಾಲದಲ್ಲಿ ಆ ಜಾಗ ಸಂಪೂರ್ಣ ಕೆಸರುಮಯವಾಗಿದೆ. ಇಲ್ಲಿ ಅನೇಕ ಬಾರಿ ರಿಕ್ಷಾಗಳು ಕೆಸರಲ್ಲಿ ಹೂತು ಹೋಗುತ್ತಿವೆ. ಇತ್ತೀಚೆಗೆ ಸಾರ್ವಜನಿಕರ ಇತರ ವಾಹ‌ನಗಳೂ ಕೆಸರಿನ ಅರಿವಿಲ್ಲದೇ ಹೋಗಿ ಕೆಸರಿನಲ್ಲಿ ವಾಹನಗಳು ಹೂತು ಹೋಗಿರುವ ಘಟನೆಗಳು ನಡೆಯುತ್ತಿವೆ.


ರಿಕ್ಷಾಗಳು, ಇತರ ವಾಹನಗಳು ಕೆಸರಿನಲ್ಲಿ ಹೂತು ಹೋದಾಗ ಮೇಲಕ್ಕೆತ್ತಲು ರಿಕ್ಷಾ ಚಾಲಕರೇ ಬೇಕಾಗುತ್ತದೆ. ಇದರಿಂದ ಬೇಸತ್ತ ಸ್ಥಳೀಯರು ಸುಲಭ ಉಪಾಯವೊಂದನ್ನು ಕಂಡುಕೊಂಡಿದ್ದಾರೆ. ಕೆಸರುಮಯವಾದ ಜಾಗಕ್ಕೆ ವಾಹನಗಳು ಹೋಗದಂತೆ ಅಲ್ಲಿ ಬಾಳೆಗಿಡಗಳನ್ನು ನೆಟ್ಟು ಬಿಟ್ಟಿದ್ದಾರೆ. ಬಾಳೆಗಿಡ ನೆಟ್ಟ ಬಳಿಕ ಕೆಸರಿನಲ್ಲಿ ಹೂತುಹೋಗುವ ದೃಶ್ಯಗಳು ಕಾಣುತ್ತಿಲ್ಲ. ಆದರೆ ರಿಕ್ಷಾ ಚಾಲಕರು ತಮ್ಮ ರಿಕ್ಷಾಗಳನ್ನು ಅಲ್ಲೋ‌ ಇಲ್ಲೋ ಪಾರ್ಕಿಂಗ್ ಮಾಡಿ ಹರಸಾಹಸಪಡುತ್ತಿದ್ದಾರೆ.


ನೆಟ್ಟ ಬಾಳೆಗಿಡ ಗೊನೆ ಹಾಕುತ್ತೋ ಇಲ್ಲವೋ‌ ಗೊತ್ತಿಲ್ಲ. ಗೊನೆ ಹಾಕುವ ಮೊದಲು ಇಲ್ಲವೇ ಬಾಳೆಗಿಡ ಸಾಯುವ‌ ಮೊದಲು ಆದಷ್ಟು ಶೀಘ್ರ ಇಲ್ಲಿ ರಿಕ್ಷಾ ನಿಲ್ದಾಣ ನಿರ್ಮಾಣವಾಗಬೇಕೆಂಬ ಸಂದೇಶವೋ, ಎಚ್ಚರಿಕೆಯೋ ಈ ಮೂಲಕ ಕೊಟ್ಟಂತಾಗಿದೆ. ಇನ್ನಾದರೂ ಜನಪ್ರತಿನಿಧಿಗಳು ಇತ್ತ ಗಮನಹರಿಸುವುದು ಸೂಕ್ತ.

LEAVE A REPLY

Please enter your comment!
Please enter your name here