85,830.55 ರೂ. ನಿವ್ವಳ ಲಾಭ, ಶೇ.10 ಡಿವಿಡೆಂಡ್, 0.31 ರೂ. ಬೋನಸ್
ಪುತ್ತೂರು: ಬೆಟ್ಟಂಪಾಡಿ ಹಾಲು ಉತ್ಪಾದಕರ ಸಹಕಾರ ಸಂಘದ 2023-24ನೇ ಸಾಲಿನ ವಾರ್ಷಿಕ ಮಹಾಸಭೆ ಆ.6ರಂದು ಸಂಘದ ಸಭಾಭವನದಲ್ಲಿ ಸಂಘದ ಅಧ್ಯಕ್ಷ ಕರುಣಾಕರ ಶೆಟ್ಟಿ ಕೊಮ್ಮಂಡರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘದ ಕಾರ್ಯದರ್ಶಿ ಸತೀಶ್ ರೈ ಮೂರ್ಕಾಜೆ ವರದಿ ವಾಚಿಸಿ ಸಂಘದಲ್ಲಿ ಒಟ್ಟು 212 ಸದಸ್ಯರು ನೋಂದಾಯಿಸಿಕೊAಡಿದ್ದು 60330 ರೂ. ಪಾಲು ಬಂಡವಾಳವಿರುತ್ತದೆ. ಪ್ರಸಕ್ತ ಸಾಲಿನಲ್ಲಿ ಸದಸ್ಯರಿಂದ 1,30,235ಲೀ ಹಾಲು ಸಂಗ್ರಹಣೆ ಮಾಡಲಾಗಿದ್ದು ಒಟ್ಟು 85,830.55 ರೂ. ಲಾಭ ಬಂದಿರುತ್ತದೆ. ಸಂಘದ 23 ಸದಸ್ಯರು ಹೆಣ್ಣು ಕರು ಸಾಕಾಣಿಕೆ ಯೋಜನೆಯನ್ನು ಪಡೆದಿದ್ದಾರೆ. ಹಾಲು ಒಕ್ಕೂಟದಿಂದ ಸದಸ್ಯರಿಗೆ ರಬ್ಬರ್ ಮ್ಯಾಟ್, ಹುಲ್ಲು ಬೆಳೆಸಲು ಅನುದಾನ ಹಾಗೂ ಚಾಪ್ ಕಟ್ಟರ್ ಪಡೆಯಲು ಅನುದಾನ ನೀಡಲಾಗಿದೆ. ಹಾಲು ಪೂರೈಸಿದ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ 31 ಪೈಸೆ ಬೋನಸ್ಸು ನೀಡಲಾಗುತ್ತದೆ ಎಂದು ತಿಳಿಸಿದರು.
ದ.ಕ.ಹಾಲು ಒಕ್ಕೂಟದ ವೈದ್ಯಾಧಿಕಾರಿ ಅನುದೀಪ್ ಮಾತನಾಡಿ ಒಕ್ಕೂಟದಿಂದ ಸಿಗುವ ಸೌಲಭ್ಯಗಳನ್ನು ತಿಳಿಸಿದರು. ದ.ಕ.ಹಾಲು ಒಕ್ಕೂಟಕ್ಕೆ ದಿನವಹಿ 3ಲಕ್ಷ ಲೀ ಹಾಲು ಪೂರೈಕೆಯಾಗುತ್ತದೆ. ಆದರೆ 5ಲಕ್ಷ ಲೀ.ನಷ್ಟು ಹಾಲಿನ ಬೇಡಿಕೆಯಿದೆ. ಹೆಚ್ಚುವರಿ ಹಾಲನ್ನು ಹಾಸನ ಜಿಲ್ಲೆಯಿಂದ ಖರೀದಿ ಮಾಡಲಾಗುತ್ತದೆ. ದ.ಕ. ಹಾಗೂ ಉಡುಪಿ ಜಿಲ್ಲೆಯಲ್ಲಿ ಹಾಳಿನ ಉತ್ಪಾದನಾ ವೆಚ್ಚ ಹೆಚ್ಚು ಇದೆ. ಅಲ್ಲದೆ ಕಾರ್ಮಿಕರ ಸಮಸ್ಯೆಯೂ ಇದೆ. ಹಾಲಿನ ದರವನ್ನು ಸರಕಾರ ನಿರ್ಧರಿಸುತ್ತದೆ ಎಂದ ಅವರು ಸದಸ್ಯರು ಹಾಲಿನ ಉತ್ಪಾದನೆ ಹೆಚ್ಚು ಮಾಡಿ ಒಕ್ಕೂಟದೊಂದಿಗೆ ಸಹಕರಿಸಿ ಎಂದರು. ಹೆಣ್ಣಕರು ಯೋಜನೆ, ಹಸಿರು ಹುಲ್ಲು ಬೆಳೆಸುವುದಕ್ಕೆ ಒಕ್ಕೂಟದಿಂದ ನೀಡಲಾಗುವ ಅನುದಾನದ ಬಗ್ಗೆ ತಿಳಿಸಿದರು. ಹಸಿರು ಹುಲ್ಲಿನ ಕೊರತೆಯಿರುವವರಿಗೆ ಹುಲ್ಲಿನ ಬದಲಿಗೆ ಸೈಲೇಜ್‌ನ್ನು ಒಕ್ಕೂಟದಿಂದ ಪೂರೈಸಲಾಗುತ್ತದೆ ಎಂದರು. ಹಾಳು ಪೂರೈಸುವ ಸದಸ್ಯರಿಗೆ ಒಕ್ಕೂಟದಿಂದ ದನಗಳಿಗೆ ವಿಮೆ ಸೌಲಭ್ಯವಿದೆ. ಯೋಜನೆಗಳ ಸದುಪಯೋಗಪಡಿಸಿಕೊಳ್ಳಿ ಎಂದರು.
ಬೆಟ್ಟಂಪಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಹಿರಿಯ ಸಹಾಯಕ ಆರ್.ಬಿ.ಸುವರ್ಣರವರು ಹೈನುಗಾರಿಕೆ ನಡೆಸಲು ಸಿಗುವ ಸಾಲ ಸೌಲಭ್ಯದ ಮಾಹಿತಿ ನೀಡಿ ಕನಿಷ್ಟ 15 ಸೆಂಟ್ಸ್ ಆರ್‌ಟಿಸಿ ಹೊಂದಿರುವ ರೈತರು ರೂ.3ಲಕ್ಷದ ಮಿತಿ ಮೀರದಂತೆ ಹೈನುಗಾರಿಕೆಗೆ ಕೃಷಿ ಪತ್ತಿನ ಸಹಕಾರ ಸಂಘದಿAದ ಸಾಲ ಪಡೆಯಬಹುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೊಮ್ಮಂಡ ಕರುಣಾಕರ್ ಶೆಟ್ಟಿ ಮಾತನಾಡಿ ಹೈನುಗಾರಿಕೆ ಇಂದು ಕಡಿಮೆಯಾಗಿದೆ. ಇತ್ತೀಚಿನ ದಿನಗಳಲ್ಲಿ ಕಿ.ಮಿ.ಗೆ ಒಂದರAತೆ ಹಾಲು ಉತ್ಪಾದಕರ ಸಹಕಾರ ಸಂಘ ಆರಂಭವಾಗುತ್ತಿದೆ. ಇದರಿಂದ ಹಾಲಿನ ಪೂರೈಕೆ ಕಡಿಮೆಯಾಗುತ್ತಿದೆ. ಮನೆಯಲ್ಲಿ ಹಿರಿಯರಿಗೆ ದನ ಸಾಕಾಣಿಕೆ ಬೇಕು. ಆದರೆ ಯುವಕರು ಹೈನುಗಾರಿಕೆಯ ಬಗ್ಗೆ ಆಸಕ್ತಿ ತೋರಿಸುತ್ತಿಲ್ಲ ಎಂದು ಹೇಳಿದ ಅವರು ಸಂಘದ ಅಭಿವೃದ್ಧಿಗೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
2023-24ನೇ ಸಾಲಿನ ಲೆಕ್ಪರಿಶೋಧನಾ ವರದಿ, ಅನುಪಾಲನಾ ವರದಿಯನ್ನು ಮಂಜೂರು ಮಾಡಲಾಯಿತು. 2023-24ನೇ ಸಾಲಿನ ಕಾರ್ಯಯೋಜನೆಗಳನ್ನು ತಿಳಿಸಲಾಯಿತು. ಸಭೆಯಲ್ಲಿ ಸದಸ್ಯರು ನೀಡಿದ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು. ಸಂಘದ ನಿರ್ದೇಶಕರುಗಳಾದ ಎಂ.ಶೇಷಪ್ಪ ರೈ, ಸದಾನಂದ ರೈ ಬಾಲ್ಯೊಟ್ಟು, ಆನಂದ ಗೌಡ ಮಿತ್ತಡ್ಕ, ಪ್ರಭಾಕರ ರೈ ಬಾಜುವಳ್ಳಿ, ಪ್ರಮೋದ್ ಕುಮಾರ್ ರೈ ಬರೆ, ಶರತ್ ಕುಮಾರ್ ಪಾರ, ಕೇಶವ ನಾಯ್ಕ ಕಜೆ, ದೇವಕಿ ದೇವಿ ಮಜಲುಗುಡ್ಡೆ, ಕುಸುಮ ಎಸ್. ಮಿತ್ತಡ್ಕ, ಜಯಂತಿ ರೈ ಎಣ್ಣೆಗದ್ದೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಪಾಧ್ಯಕ್ಷೆ ಅನಿತಾ ತಿಮ್ಮಪ್ಪ ನಾಯ್ಕ ಪ್ರಾರ್ಥಿಸಿ ನಿರ್ದೇಶಕ ಸೂರ್ಯನಾರಾಯಣ ಭಟ್ ವಂದಿಸಿದರು.
ಅತೀ ಹೆಚ್ಚು ಹಾಲು ಪೂರೈಸಿದ ಸದಸ್ಯರುಗಳಿಗೆ ಬಹುಮಾನ
2023-24ನೇ ಸಾಲಿನಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಪೂರೈಸಿದ ಮೂವರು ಸದಸ್ಯರಿಗೆ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. 5045 ಲೀ. ಹಾಲು ಪೂರೈಸಿದ ಸದಸ್ಯೆ ಸುನಂದ ಮಿತ್ತಡ್ಕರವರಿಗೆ ಪ್ರಥಮ ಬಹುಮಾನ,4911 ಲೀ. ಹಾಲು ಪೂರೈಸಿದ ನಿರ್ದೇಶಕ ಆನಂದ ಗೌಡ ಮಿತ್ತಡ್ಕರವರಿಗೆ ದ್ವಿತೀಯ ಬಹುಮಾನ ಹಾಗೂ 4102 ಲೀ. ಹಾಲು ಪೂರೈಸಿದ ಶಂಕರನಾರಾಯಣ ರಾವ್ ಪಾರರವರಿಗೆ ತೃತೀಯ ಬಹುಮಾನ ನೀಡಿ ಪ್ರೋತ್ಸಾಹಿಸಲಾಯಿತು. 200 ಲೀ.ಗಿಂತ 2000ಲೀ.ವರೆಗೆ ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ರೂಪದಲ್ಲಿ ಬಹುಮಾನ ನೀಡಲಾಯಿತು.