ಶಿರಾಡಿ ಗ್ರಾಮಸಭೆ

0

ಉದನೆ ಪೇಟೆಯಲ್ಲಿ ಎಕ್ಸ್‌ಪ್ರೆಸ್ ಬಸ್ಸು ನಿಲುಗಡೆಗೆ ಆಗ್ರಹ; ಮನವಿಗೆ ನಿರ್ಣಯ

ನೆಲ್ಯಾಡಿ: ಶಿರಾಡಿ ಗ್ರಾಮದ ಕೇಂದ್ರ ಭಾಗಿರುವ ಉದನೆ ಪೇಟೆಯಲ್ಲಿ ಎಕ್ಸ್‌ಪ್ರೆಸ್ ಬಸ್‌ಗಳ ನಿಲುಗಡೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದು ಈ ಬಗ್ಗೆ ಕೆಎಸ್‌ಆರ್‌ಟಿಸಿಗೆ ಮನವಿ ಮಾಡಲು ಶಿರಾಡಿ ಗ್ರಾಮಸಭೆಯಲ್ಲಿ ನಿರ್ಣಯಿಸಲಾಗಿದೆ.


ಸಭೆ ಆ.7ರಂದು ಗ್ರಾ.ಪಂ.ಅಧ್ಯಕ್ಷ ಕಾರ್ತಿಕೇಯನ್ ಅವರ ಅಧ್ಯಕ್ಷತೆಯಲ್ಲಿ ಶಿರಾಡಿ ಸೈಂಟ್ ಪೀಟರ್ ಚರ್ಚ್‌ನ ಸಭಾಂಗಣದಲ್ಲಿ ನಡೆಯಿತು. ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಯಶಸ್ ಅವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾ.ಪಂ.ಮಾಜಿ ಸದಸ್ಯ ಸೆಬಾಸ್ಟಿಯನ್ ಅವರು ಮಾತನಾಡಿ, ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಬರುವ ಉದನೆ ಸುತ್ತಲಿನ 5 ಗ್ರಾಮಗಳ ಜನ ಬಂದು ಸೇರುವ ಜಾಗ. ಅಲ್ಲದೇ ಶಿರಾಡಿ ಗ್ರಾಮದ ಕೇಂದ್ರ ಭಾಗವೂ ಆಗಿದೆ. ಆದರೆ ಇಲ್ಲಿ ಯಾವುದೇ ಎಕ್ಸ್‌ಪ್ರೆಸ್ ಬಸ್ಸುಗಳಿಗೆ ನಿಲುಗಡೆ ಇಲ್ಲ. ಈ ಬಗ್ಗೆ ಇಲಾಖೆಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ ಎಂದರು. ಇದಕ್ಕೆ ಪೂರಕವಾಗಿ ಮಾತನಾಡಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಶಿರಾಡಿ, ಅಡ್ಡಹೊಳೆಯಲ್ಲೂ ಕೆಎಸ್‌ಆರ್‌ಟಿಸಿ ವೇಗದೂತ ಬಸ್ಸು ನಿಲ್ಲಿಸುತ್ತಿಲ್ಲ. ಇದರಿಂದಾಗಿ ಶಾಲಾ ಮಕ್ಕಳಿಗೆ, ಸಾರ್ವಜನಿಕರಿಗೆ ತೊಂದರೆಯಾಗಿದೆ. ಜನ ಗುಂಡ್ಯದಲ್ಲಿ ಇಳಿದು ಅಲ್ಲಿಂದ ಆಟೋ ಇಲ್ಲವೇ ಬೇರೆ ವಾಹನದಲ್ಲಿ ಮತ್ತೆ ಅಡ್ಡಹೊಳೆ,ಶಿರಾಡಿಗೆ ಬರಬೇಕಾಗಿದೆ. ಈ ಬಗ್ಗೆ ಗ್ರಾ.ಪಂ.ನಿಂದಲೂ ಕೆಎಸ್‌ಆರ್‌ಟಿಸಿಯವರಿಗೆ ಮನವಿ ಮಾಡಲಾಗಿದೆ. ಆದರೆ ಅವರಿಂದ ಪೂರಕ ಸ್ಪಂಧನೆ ಸಿಕ್ಕಿಲ್ಲ. ಇದರ ವಿರುದ್ಧ ಹೋರಾಟ, ಪ್ರತಿಭಟನೆ ನಡೆಸುವುದಾದಲ್ಲಿ ಅಧ್ಯಕ್ಷನಾಗಿ ಗ್ರಾಮಸ್ಥರೊಂದಿಗೆ ನಾನೂ ಸೇರಿಕೊಳ್ಳುತ್ತೇನೆ ಎಂದರು.

ಪೇಟೆಯಲ್ಲೇ ಬಸ್‌ನಿಲ್ದಾಣ ಆಗಲಿ:
ಉದನೆ ಪೇಟೆಯ ಮಧ್ಯೆ ಬಸ್ ನಿಲ್ದಾಣ ಮಾಡುವ ಬದಲು ಪೇಟೆಯ ಒಂದು ಬದಿಯಲ್ಲಿ ಅದರಲ್ಲೂ ಆನೆ ಸಂಚಾರ ಇರುವ ಜಾಗದಲ್ಲಿ ಬಸ್ ನಿಲ್ದಾಣ ಮಾಡಲಾಗಿದೆ. ಇದರ ಬದಲು ಪೇಟೆಯ ಮಧ್ಯೆ ಇಲ್ಲವೇ ಉದನೆ ಶಾಲೆಯ ಮುಂಭಾಗದಲ್ಲಿ ಬಸ್ ನಿಲ್ದಾಣ ಮಾಡಬೇಕೆಂದು ಸೆಬಾಸ್ಟಿಯನ್ ಒತ್ತಾಯಿಸಿದರು. ಇದಕ್ಕೆ ಇತರೇ ಗ್ರಾಮಸ್ಥರೂ ಧ್ವನಿಗೂಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಈ ವಿಚಾರವನ್ನು ಗುತ್ತಿಗೆದಾರರ ಗಮನಕ್ಕೆ ತಂದಿದ್ದೇವೆ. ಉದನೆ ಪೇಟೆಯಲ್ಲಿ ಯಾರೂ ಜಾಗ ಬಿಡಲಿಲ್ಲ. ಅಡ್ಡಹೊಳೆ, ಶಿರಾಡಿಯಲ್ಲೂ ಬಸ್ ನಿಲ್ದಾಣ ಆಗಬೇಕಾಗಿದೆ. ಈ ಬಗ್ಗೆ ಇಲಾಖೆಯವರಿಗೆ ಮನವಿ ಮಾಡುವುದಾಗಿ ಹೇಳಿದರು. ಹೆದ್ದಾರಿ ಕಾಮಗಾರಿಗಾಗಿ ಬಂಡೆ ಒಡೆಯುವ ವೇಳೆ ಪರಿಸರದ ಮನೆಗಳಿಗೆ ಹಾನಿಯಾಗುತ್ತಿದೆ. ಈ ಬಗ್ಗೆ ಇಲಾಖೆಯವರಿಗೆ ಮಾಹಿತಿ ನೀಡಿದರೂ ಸ್ಪಂದಿಸುತ್ತಿಲ್ಲ ಎಂದು ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾ ಆರೋಪಿಸಿದರು.

ಸೋಲಾರ್ ಬೀದಿದೀಪ ಉರಿಯುತ್ತಿಲ್ಲ:
ರಾಷ್ಟ್ರೀಯ ಹೆದ್ದಾರಿ ಚತುಷ್ಪಥ ಕಾಮಗಾರಿ ಹಿನ್ನೆಲೆಯಲ್ಲಿ ಹೆದ್ದಾರಿ ಬದಿಯಿದ್ದ ಗ್ರಾ.ಪಂ.ನ ಬಸ್‌ನಿಲ್ದಾಣ, ಬೋರ್‌ವೆಲ್ ತೆರವುಗೊಳಿಸಲಾಗಿದೆ. ಈ ವೇಳೆ ನಷ್ಟ ಪರಿಹಾರವಾಗಿ ಹೆದ್ದಾರಿ ಇಲಾಖೆಯಿಂದ 11 ಲಕ್ಷ ರೂ.ಗ್ರಾ.ಪಂ.ಗೆ ಪಾವತಿಯಾಗಿದೆ. ಇದರದಲ್ಲಿ 10 ಲಕ್ಷ ರೂ. ಮೂರು ವಾರ್ಡ್‌ಗಳಿಗೂ ಹಂಚಿಕೆ ಮಾಡಿ ಸೋಲಾರ್ ದೀಪ ಅಳವಡಿಸಲಾಗಿದೆ. ಆದರೆ ಈಗ ಯಾವುದೂ ಉರಿಯುತ್ತಿಲ್ಲ ಎಂದು ಗ್ರಾ.ಪಂ.ಮಾಜಿ ಸದಸ್ಯ ಸೆಬಾಸ್ಟಿಯನ್ ಸಭೆಯ ಗಮನ ಸೆಳೆದರು. ಅಧ್ಯಕ್ಷರು ಉತ್ತರಿಸಿ 5 ಲಕ್ಷ ರೂ.ವೆಚ್ಚದಲ್ಲಿ 3ನೇ ವಾರ್ಡ್‌ನಲ್ಲಿ ಎರಡು, 1ನೇ ಹಾಗೂ 2ನೇ ವಾರ್ಡ್‌ನಲ್ಲಿ ತಲಾ 1 ಸೋಲಾರ್ ದೀಪ ಅಳವಡಿಸಲಾಗಿದೆ. ಇದು ಕೆಟ್ಟು ಹೋಗಿದ್ದು ಗ್ಯಾರಂಟಿ ಅವಧಿಯೂ ಮುಗಿದಿದೆ. ಇದರ ದುರಸ್ತಿಗೆ ಯಾರೂ ಸಿಗುತ್ತಿಲ್ಲ. ಯಾರಾದರೂ ದುರಸ್ತಿ ಮಾಡುವವರಿದ್ದಲ್ಲಿ ಕೊಟೆಷನ್ ಕೊಡಲಿ. ತಕ್ಷಣ ಪಾಸ್ ಮಾಡುತ್ತೇವೆ ಎಂದರು. ವಿದ್ಯುತ್ ದೀಪದ ಬಗ್ಗೆಯೂ ಚರ್ಚೆ ನಡೆಯಿತು.

3ನೇ ವಾರ್ಡ್ ಕಡೆಗಣನೆ:
3ನೇ ವಾರ್ಡ್‌ನಲ್ಲಿ ಯಾವುದೇ ಅಭಿವೃದ್ಧಿ ಕಾಮಗಾರಿ ನಡೆಯುತ್ತಿಲ್ಲ. ಕಡೆಗಣನೆ ಮಾಡಿರುವುದು ಯಾಕೆ ಎಂದು ಗ್ರಾಮಸ್ಥ ಅಭಿಲಾಷ್ ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ವಾರ್ಡ್ ಸದಸ್ಯ ಎಂ.ಕೆ.ಪೌಲೋಸ್ ಅವರು, 3ನೇ ವಾರ್ಡ್‌ನಲ್ಲಿ ಸಾಕಷ್ಟೂ ಅಭಿವೃದ್ಧಿ ಕೆಲಸ ನಡೆದಿದೆ. ಇಲ್ಲಿನ ರಸ್ತೆ ಕಾಮಗಾರಿ ಬಗ್ಗೆ ನೀವೇ ಲೋಕಾಯುಕ್ತಕ್ಕೆ ದೂರು ನೀಡಿದ್ದೀರಿ. ಈಗ ಕಾಮಗಾರಿ ನಡೆಸಲು ಯಾರೂ ಮುಂದೆ ಬರುತ್ತಿಲ್ಲ ಎಂದರು. ಬಳಿಕ ಈ ಬಗ್ಗೆ ಅಭಿಲಾಷ್ ಹಾಗೂ ಎಂ.ಕೆ.ಪೌಲೋಸ್ ಅವರ ನಡುವೆ ಪರಸ್ಪರ ವಾಗ್ವಾದವೂ ನಡೆಯಿತು.

ನೀರಿನ ಟ್ಯಾಂಕ್ ಸೋರಿಕೆ:
ಗ್ರಾಮದಲ್ಲಿ ಹೊಸದಾಗಿ ನಿರ್ಮಾಣಗೊಂಡ ನೀರಿನ ಟ್ಯಾಂಕ್ ಸೋರಿಕೆಯಾಗುತ್ತಿದೆ. ಹೊಸ ಪೈಪ್‌ಲೈನ್‌ಗಾಗಿ ಹಳೆಯ ಪೈಪ್‌ಲೈನ್ ಕೆಡವಿ ಹಾಕಲಾಗಿದೆ. ಆದರೆ ಹೊಸ ಪೈಪ್‌ಲೈನ್ ಸಹ ಆಗಿಲ್ಲ ಎಂದು ಗ್ರಾಮಸ್ಥ ನಾರಾಯಣ ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಇದು ಜೆಜೆಎಂ ಯೋಜನೆಯಡಿ ನಡೆದಿರುವ ಕಾಮಗಾರಿ ಆಗಿದೆ. ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ. ಕಾಮಗಾರಿ ಸಮರ್ಪಕವಾಗದೇ ಇದ್ದಲ್ಲಿ ಪಂಚಾಯತ್‌ಗೆ ಹ್ಯಾಂಡ್‌ಓವರ್ ತೆಗೆದುಕೊಳ್ಳುವುದಿಲ್ಲ ಎಂದರು. ಡಾಮರು ಮಾರ್ಗ ಅಗೆದು ಪೈಪ್ ಅಳವಡಿಸಲಾಗಿದೆ. ಆದರೆ ಅದನ್ನು ಸರಿಯಾಗಿ ಮುಚ್ಚಿಲ್ಲ. ಕೆಲವು ಕಡೆ ಪೈಪ್ ಮೇಲ್ಭಾಗದಲ್ಲೇ ಹಾಕಲಾಗಿದೆ ಎಂದು ಗ್ರಾಮಸ್ಥರು ದೂರಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ.ಇಂಜಿನಿಯರ್ ಹುಕ್ಕೇರಿ ಅವರು, ಜೆಜೆಎಂ ಕಾಮಗಾರಿ ಪೂರ್ಣಗೊಂಡಿಲ್ಲ. ಕೆಲಸ ಸರಿಯಾಗಿ ಆಗದೇ ಪಂಚಾಯತ್‌ಗೆ ಹಸ್ತಾಂತರ ಮಾಡುವುದಿಲ್ಲ ಎಂದು ಹೇಳಿದರು.

ನಿರ್ಣಯ ಅನುಷ್ಠಾನ ಆಗುತ್ತಿಲ್ಲ:
ಕಳೆದ ಗ್ರಾಮಸಭೆಯಲ್ಲಿ ಕೈಗೊಂಡ ನಿರ್ಣಯ ಅನುಷ್ಠಾನ ಆಗದೇ ಇರುವುದಕ್ಕೆ ಗ್ರಾಮಸ್ಥರಾದ ಜಿಮ್ಸನ್, ಸೆಬಾಸ್ಟಿಯನ್, ಪ್ರಕಾಶ್ ಗುಂಡ್ಯ ಅವರು ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ಗ್ರಾಮ ಪಂಚಾಯತ್ ಹಂತದಲ್ಲಿ ಆಗುವ ಕೆಲಸ ಮಾಡಲಾಗಿದೆ. ಉಳಿದಂತೆ ಆಯಾ ಇಲಾಖೆಗೆ ಸಂಬಂಧಿಸಿದ ನಿರ್ಣಯ ಕಳಿಸಿಕೊಡಲಾಗಿದೆ ಎಂದರು.

ಅಂಗಡಿಯವರಿಗೆ ಪರವಾನಿಗೆ ಕೊಡಿ:
ಹೆದ್ದಾರಿ ಬದಿ ಇರುವ ಅಂಗಡಿಯವರಿಗೆ ಪರವಾನಿಗೆ ಕೊಡಲು ಕಳೆದ ಗ್ರಾಮಸಭೆಯಲ್ಲಿ ನಿರ್ಣಯ ಆಗಿದೆ. ಇದರಿಂದ ಗ್ರಾ.ಪಂ.ಗೆ ಆದಾಯ ಬರಲಿದೆ. ಆದರೆ ಇದು ಅನುಷ್ಠಾನ ಆಗಿಲ್ಲ ಎಂದು ಗ್ರಾಮಸ್ಥ ಅಭಿಲಾಷ್ ಹೇಳಿದರು. ಈ ಬಗ್ಗೆ ಎಲ್ಲರಿಗೂ ನೋಟಿಸ್ ನೀಡಲಾಗಿದೆ. ಕೆಲವರು ದಾಖಲೆ ಕೊಟ್ಟಿದ್ದಾರೆ ಎಂದು ಪಿಡಿಒ ಯಶವಂತ ಬೆಳ್ಚಡ ಅವರು ತಿಳಿಸಿದರು.

ಎಂಡೋಸಂತ್ರಸ್ತರ ಔಷಧಿ ಸಿಗುತ್ತಿಲ್ಲ:
ಎರಡು ವರ್ಷದ ಹಿಂದೆ ಸರಕಾರಿ ಆಸ್ಪತ್ರೆಯಲ್ಲಿ ಎಂಡೋ ಸಲ್ಫಾನ್ ಸಂತ್ರಸ್ತರಿಗೆ ಔಷಧಿ ಸಿಗುತಿತ್ತು. ಆದರೆ ಈಗ ಸಿಗುತ್ತಿಲ್ಲ ಎಂದು ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾ ಅವರು ಆರೋಗ್ಯ ಇಲಾಖೆಯವರ ಗಮನಕ್ಕೆ ತಂದರು. ಈ ಬಗ್ಗೆ ಸರಕಾರಕ್ಕೆ ಮನವಿ ಮಾಡಲು ನಿರ್ಣಯ ಕೈಗೊಳ್ಳಲಾಯಿತು.

ಪಶು ಸಖಿ ಬಗ್ಗೆ ಮಾಹಿತಿ ಇಲ್ಲ:
ಪಶು ಆಸ್ಪತ್ರೆ ಹಾಗೂ ಗ್ರಾಮಸ್ಥರ ನಡುವೆ ಕೊಂಡಿಯಾಗಿ ಕೆಲಸ ಮಾಡಲು ಗ್ರಾಮಕ್ಕೆ ಪಶು ಸಖಿ ನೇಮಕ ಆಗಿರುವ ಬಗ್ಗೆ ಪಶುಸಂಗೋಪನಾ ಇಲಾಖೆಯ ಅಧಿಕಾರಿ ಹನುಮಂತ ಅವರು ಸಭೆಗೆ ಮಾಹಿತಿ ನೀಡಿದರು. ಆದರೆ ಈ ಬಗ್ಗೆ ಗ್ರಾ.ಪಂ.ಗಾಗಲೀ, ಗ್ರಾಮಸ್ಥರಿಗೆ ಯಾವುದೇ ಮಾಹಿತಿ ಇಲ್ಲ ಎಂಬ ವಿಚಾರವೂ ಚರ್ಚೆಗೆ ಬಂತು. ಬಳಿಕ ಮಾತನಾಡಿದ ಅಧ್ಯಕ್ಷರು ಪಶು ಸಖಿ ಯಾರೆಂದೂ ನನಗೇ ಗೊತ್ತಿಲ್ಲ. ಅವರ ಮಾಹಿತಿ ಪಡೆದು ನೋಟಿಸ್ ಬೋರ್ಡ್‌ನಲ್ಲಿ ಮೊಬೈಲ್ ನಂಬರ್ ಹಾಕುವುದಾಗಿ ಹೇಳಿದರು.

ವಿದ್ಯುತ್ ತಂತಿ ಬದಲಿಸಿ:
ಕುದ್ಕೋಳಿಯಲ್ಲಿ ಹಳೆಯ ವಿದ್ಯುತ್ ತಂತಿಗಳಿದ್ದು ಅದರ ಬದಲಾವಣೆ ಮಾಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಕಿರಿಯ ಅಭಿಯಂತರ ರಾಜನ್ ಅವರು, ತಂತಿ ಬದಲಾವಣೆಗೆ ಡಿಪಿಆರ್ ಮಾಡಿ ಕಳಿಸಿದ್ದು ಮಂಜೂರಾತಿ ಆಗಿ ಬರಬೇಕಾಗಿದೆ ಎಂದರು.

ಖಾಸಗಿಯವರಿಂದ ಬೋರ್‌ವೆಲ್ ಬಳಕೆ:
ಅಡ್ಡಹೊಳೆಯಲ್ಲಿ ಗ್ರಾಮ ಪಂಚಾಯಿತಿಯ ಬೋರ್‌ವೆಲ್ ಅನ್ನು ಖಾಸಗಿ ವ್ಯಕ್ತಿಯೊಬ್ಬರು ತೋಟಕ್ಕೆ ನೀರಿಗಾಗಿ ಬಳಕೆ ಮಾಡುತ್ತಿದ್ದಾರೆ ಎಂದು ಅಭಿಲಾಷ್ ಅವರು ಗಮನಕ್ಕೆ ತಂದರು. ಈ ಬಗ್ಗೆ ಪರಿಶೀಲನೆ ನಡೆಸುವುದಾಗಿ ಪಿಡಿಒ ಭರವಸೆ ನೀಡಿದರು.

ರಸ್ತೆ ಕಾಂಕ್ರಿಟೀಕರಣಕ್ಕೆ ಆಗ್ರಹ:
ಪದಂಬಳ, ಮೇಲ್ತಟ್ಟ, ಕುನ್ನುಂ ಪುರಂ ಪ್ರದೇಶಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯ ದುಸ್ಥಿತಿಯನ್ನು ಪ್ರಸ್ತಾಪಿಸಿದ ಗ್ರಾಮಸ್ಥರು ಸದ್ರಿ ರಸ್ತೆ ಕಾಂಕ್ರಿಟೀಕರಣಗೊಳಿಸಬೇಕೆಂದು ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು, ನರೇಗಾ ಕ್ರೀಯಾಯೋಜನೆಯಲ್ಲಿ ಸೇರಿಸಿದ್ದು ಅನುದಾನ ಲಭ್ಯತೆಯ ಮೇಲೆ ಕಾಮಗಾರಿ ನಡೆಸುವುದಾಗಿ ಭರವಸೆ ನೀಡಿದರು.

ಹಂದಿ ಮಾಂಸ ದರ ವಿಚಾರ-ಚರ್ಚೆ:
ಗುಂಡ್ಯದಲ್ಲಿ ಹಂದಿ ಮಾಂಸ ದರ ಉಳಿದ ಕಡೆಯಿಂದ ಹೆಚ್ಚು ಇದೆ. ಅಲ್ಲದೇ ಮಾಂಸ ಬೇಯಿಸುವ ವೇಳೆ ನೊರೆ ಬರುತ್ತದೆ. ಇದರಿಂದ ಆರೋಗ್ಯಕ್ಕೆ ತೊಂದರೆಯಾಗುತ್ತಿದೆ ಎಂದು ವರ್ಗೀಸ್, ಸಜಿ ಅವರು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಕಾರ್ತಿಕೇಯನ್ ಅವರು ದೂರು ಬಂದ ಹಿನ್ನೆಲೆಯಲ್ಲಿ ಅಂಗಡಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಉಳಿದ ಕಡೆಗಿಂತ ಕಡಿಮೆ ಬೆಲೆಯಲ್ಲೇ ಮಾರಾಟ ಮಾಡುತ್ತಿದ್ದಾರೆ ಎಂದರು. ಪಿಡಿಒ ಯಶವಂತ ಬೆಳ್ಚಡ ಅವರು ಮಾತನಾಡಿ, ಬೆಲೆ ನಿಯಂತ್ರಿಸುವ ಅಧಿಕಾರ ಗ್ರಾ.ಪಂ.ಗೆ ಇಲ್ಲ ಎಂದರು. ಈ ಬಗ್ಗೆ ಅರ್ಜಿದಾರರಿಗೆ ಲಿಖಿತವಾಗಿ ಮಾಹಿತಿ ನೀಡಿದ್ದೀರಾ ಎಂದು ಗ್ರಾಮಸ್ಥ ಸಜಿ ಅವರು ಮತ್ತೆ ಪ್ರಶ್ನಿಸಿದರು. ದೂರು ಅರ್ಜಿಯಲ್ಲಿ ಮೂರನೇ ವಾರ್ಡ್‌ನ ಗ್ರಾಮಸ್ಥರು ಎಂದಿದೆ. ನಾವು ಯಾರಿಗೆ ಮಾಹಿತಿ ಕೊಡುವುದು ಎಂದು ಪಿಡಿಒ ಅವರು ಏರುಧ್ವನಿಯಲ್ಲಿ ಹೇಳಿದರು. ಈ ಬಗ್ಗೆ ಪರ, ವಿರೋಧ ಚರ್ಚೆ ನಡೆದ ಗದ್ದಲವೂ ನಡೆಯಿತು.

ಸಿಆರ್‌ಪಿ ಪ್ರಕಾಶ್, ಆರೋಗ್ಯ ಇಲಾಖೆಯ ವನಿತಾ, ಉಷಾ, ಪಶುಸಂಗೋಪನಾ ಇಲಾಖೆಯ ರವೀಂದ್ರ, ಹನುಮಂತ, ಸಮಾಜ ಕಲ್ಯಾಣ ಇಲಾಖೆಯ ಲಕ್ಷ್ಮೀದೇವಿ, ಮೆಸ್ಕಾಂ ಕಿರಿಯ ಅಭಿಯಂತರ ರಾಜನ್, ಗ್ರಾಮ ಆಡಳಿತಾಧಿಕಾರಿ ಸಂತೋಷ್, ತೋಟಗಾರಿಕೆ ಇಲಾಖೆಯ ರವಿರಾಜ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವನಿತಾ, ಅರಣ್ಯ ಇಲಾಖೆಯ ಚಂದ್ರ, ಜಿ.ಪಂ.ಇಂಜಿನಿಯರಿಂಗ್ ಇಲಾಖೆಯ ಎಸ್.ಎಸ್.ಹುಕ್ಕೇರಿ, ಬಸವರಾಜು, ಪೊಲೀಸ್ ಇಲಾಖೆಯ ಪ್ರವೀಣ್, ಶಶಿಕಿರಣ್ ಅವರು ಇಲಾಖಾವಾರು ಮಾಹಿತಿ ನೀಡಿದರು.
ಗ್ರಾ.ಪಂ.ಉಪಾಧ್ಯಕ್ಷೆ ವಿನೀತಾ, ಸದಸ್ಯರಾದ ಎಂ.ಕೆ.ಪೌಲೋಸ್, ಸಣ್ಣಿಜೋನ್, ಲಕ್ಷ್ಮಣ ಗೌಡ, ರಾಧಾತಂಗಪ್ಪನ್, ಸುಮಿತ್ರ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಯಶವಂತ ಬೆಳ್ಚಡ ಸ್ವಾಗತಿಸಿದರು. ಸಿಬ್ಬಂದಿ ರಮ್ಯ ವೈ.ಸಿ.ವರದಿ ವಾಚಿಸಿದರು. ಕಾರ್ಯದರ್ಶಿ ಶಾರದಾ ಅವರು ಕಳೆದ ಗ್ರಾಮಸಭೆಯ ನಿರ್ಣಯ, ವಾರ್ಡ್‌ಸಭೆಯ ಬೇಡಿಕೆ ವಾಚಿಸಿದರು. ಸಿಬ್ಬಂದಿ ವಿಜಯ ವಂದಿಸಿದರು. ಸಿಬ್ಬಂದಿಗಳಾದ ಎಲಿಯಾಸ್, ತೋಮಸ್ ವಿ.ಎ., ಸುನಿಲ್ ಸಹಕರಿಸಿದರು.

LEAVE A REPLY

Please enter your comment!
Please enter your name here