ಪುತ್ತೂರು: ಚೆಕ್ ಬೌನ್ಸ್ ಪ್ರಕರಣದ ಆರೋಪಿಯಾಗಿ ವಿಚಾರಣೆ ಎದುರಿಸುತ್ತಿದ್ದ ಉಪ್ಪಿನಂಗಡಿ ಗ್ರಾಮದ ಕುಕ್ಕಾಡಿ ನಿವಾಸಿ ಚನಿಯಪ್ಪ ನಾಯ್ಕರವರ ಪುತ್ರ ಗೋಪಾಲ ನಾಯ್ಕರವರಿಗೆ ಪುತ್ತೂರು ನ್ಯಾಯಾಲಯ ಶಿಕ್ಷೆ ವಿಧಿಸಿ ಆದೇಶ ನೀಡಿದೆ.
2019ರಲ್ಲಿ ಉಪ್ಪಿನಂಗಡಿ ಗ್ರಾಮದ ಕಜೆಕ್ಕಾರು ನಿವಾಸಿ ಮಹಾಲಿಂಗ ಎಂಬವರಿಂದ ಗೋಪಾಲ ನಾಯ್ಕ ಅವರು 50 ಸಾವಿರ ರೂ ಸಾಲವಾಗಿ ಪಡೆದುಕೊಂಡಿದ್ದು ಸಾಲದ ಮೊತ್ತದ ಮರು ಪಾವತಿಯ ಬಗ್ಗೆ ಚೆಕ್ ನೀಡಿದ್ದರು. ಮಹಾಲಿಂಗರವರು ನಗದೀಕರಣಕ್ಕಾಗಿ ಬ್ಯಾಂಕ್ಗೆ ಚೆಕ್ ಹಾಜರುಪಡಿಸಿದಾಗ ಚೆಕ್ ಬೌನ್ಸ್ ಆಗಿತ್ತು. ಈ ಹಿನ್ನೆಲೆಯಲ್ಲಿ ಮಹಾಲಿಂಗರವರು ಗೋಪಾಲ ನಾಯ್ಕರವರ ವಿರುದ್ಧ ಪುತ್ತೂರು ಪ್ರಿನ್ಸಿಪಾಲ್ ಸಿವಿಲ್ ಜಡ್ಜ್ ಮತ್ತು ಜೆಎಮ್ಎಫ್ಸಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದರು.
ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸಿ ಗೋಪಾಲ ನಾಯ್ಕರವರು ತಪ್ಪಿತಸ್ಥ ಎಂದು ತೀರ್ಮಾನಿಸಿದ್ದು 75 ಸಾವಿರ ರೂಪಾಯಿ ನಗದಾಗಿ ಪಾವತಿಸಬೇಕು. ತಪ್ಪಿದಲ್ಲಿ ಆರು ತಿಂಗಳ ಸೆರೆಮನೆ ವಾಸ ಅನುಭವಿಸಬೇಕು. 75 ಸಾವಿರ ರೂಪಾಯಿಯಲ್ಲಿ 70 ಸಾವಿರ ರೂಪಾಯಿಯನ್ನು ಮಹಾಲಿಂಗರವರಿಗೆ ಮತ್ತು 5 ಸಾವಿರ ರೂಪಾಯಿಯನ್ನು ಸರಕಾರಕ್ಕೆ ಕಾನೂನು ಕ್ರಮದ ಖರ್ಚಿನ ಬಗ್ಗೆ ಪಾವತಿಸಬೇಕು ಎಂದು ಆದೇಶ ನೀಡಿದೆ. ಪಿರ್ಯಾದುದಾರರ ಪರವಾಗಿ ನ್ಯಾಯವಾದಿ ಡಿ. ಶಂಭು ಭಟ್ ವಾದಿಸಿದ್ದರು.