ಸ್ತ್ರೀ ವೇಷಧಾರಿ ಪಾತಾಳ ವೆಂಕಟ್ರಮಣ ಭಟ್ “ಶೇಣಿ ಪ್ರಶಸ್ತಿ”ಗೆ ಭಾಜನ-ಆ.15ರಂದು ಮಂಗಳೂರಿನಲ್ಲಿ ಪ್ರಶಸ್ತಿ ಪ್ರದಾನ

0

ಪುತ್ತೂರು: ಯಕ್ಷಗಾನ ಭೀಷ್ಮ, ಹರಿದಾಸ ಡಾ.ಶೇಣಿ ಗೋಪಾಲಕೃಷ್ಣ ಭಟ್ ಹೆಸರಿನಲ್ಲಿ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿರುವ ಟ್ರಸ್ಟ್ ವತಿಯಿಂದ ನೀಡುವ ಶೇಣಿ ಪ್ರಶಸ್ತಿಗೆ ಈ ಬಾರಿ ಹಿರಿಯ ಯಕ್ಷಗಾನ ಕಲಾವಿದ ಸ್ತ್ರೀವೇಷಧಾರಿ ಪಾತಾಳ ವೆಂಕಟ್ರಮಣ ಭಟ್‌ರವರು ಭಾಜನರಾಗಿದ್ದಾರೆ.


ಆ.15ರಂದು ಸಂಜೆ 4.20ಕ್ಕೆ ಮಂಗಳೂರು ಉರ್ವಸ್ಟೋರ್‌ನಲ್ಲಿರುವ ಮಹಾಗಣಪತಿ ದೇವಸ್ಥಾನದ ಆವರಣದಲ್ಲಿ ನಡೆಯವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ. ಪ್ರಶಸ್ತಿ 30 ಸಾವಿರ ರೂ. ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ. ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು ಕಾರ್ಯಕ್ರಮ ಉದ್ಘಾಟಿಸಲಿದ್ದು ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಸುರೇಂದ್ರ ರಾವ್ ದೀಪ ಬೆಳಗಿಸಲಿದ್ದಾರೆ. ಮಧ್ಯಾಹ್ನ 2.30ಕ್ಕೆ ಯಕ್ಷಗಾನ ತಾಳಮದ್ದಳೆ ನಡೆಯಲಿದೆ ಎಂದು ಟ್ರಸ್ಟ್ ಅಧ್ಯಕ್ಷ ಎಂ.ಆರ್.ವಾಸುದೇವ ತಿಳಿಸಿದ್ದಾರೆ.

ಪಾತಾಳ ವೆಂಕಟ್ರಮಣ ಭಟ್ ಪರಿಚಯ:
ಪುತ್ತೂರು ತಾಲೂಕು ಬೈಪದವು ದಿ|ರಾಮಣ್ಣ ಭಟ್ ಮತ್ತು ಹೇಮಾವತಿ ದಂಪತಿ ಪುತ್ರರಾದ ವೆಂಕಟರಮಣ ಭಟ್‌ರವರು 8ನೇ ತರಗತಿವರೆಗೆ ವಿದ್ಯಾಭ್ಯಾಸ ಪಡೆದರು. ಗುರುಕುಲ ಮಾದರಿಯಲ್ಲಿ ಯಕ್ಷಗಾನ ಮೂಲ ಪಾಠ ಕಲಿತ ಇವರು ಸೌಕೂರು, ಮೂಲ್ಕಿ, ಧರ್ಮಸ್ಥಳ ಹಾಗೂ ಸುರತ್ಕಲ್ ಮೇಳದಲ್ಲಿ ತಿರುಗಾಟ ನಡೆಸಿ ಸ್ತ್ರೀ ಪಾತ್ರಗಳಾದ ರಂಭೆ, ಊರ್ವಶಿ, ಮೇನಕೆ, ಮೋಹಿನಿ, ಮಾಯಾ ಶೂರ್ಪನಖಿ, ಗುಣಸುಂದರಿ, ಅಂಬೆ, ಕೈಕೇಯಿ, ಮಾಯಾ ಅಜಮುಖಿ, ಪೂತನಿ, ಶ್ರೀದೇವಿ, ದ್ರೌಪದಿ, ದಾಕ್ಷಾಯಿನಿ, ಅಮ್ಮದೇವಿ ಮುಂತಾದ ಪ್ರಸಿದ್ಧ ಪಾತ್ರಗಳನ್ನು ನಿರ್ವಹಿಸಿ ನಾಟ್ಯರಾಣಿ ಶಾಂತಲೆ ಬಿರುದನ್ನು ಪಡೆದಿದ್ದಾರೆ.

ಪಾತಾಳ ಪ್ರತಿಷ್ಠಾನ ಎಂಬ ಸಂಸ್ಥೆಯನ್ನು ಸ್ಥಾಪಿಸಿ ವಿವಿಧ ಕಲಾವಿದರಿಗೆ ಪಾತಾಳ ಪ್ರಶಸ್ತಿ ನೀಡಿ ಗೌರವಿಸಿದ್ದರು. ಇವರ ಕಲಾಸೇವೆಗೆ ರಾಜ್ಯಪ್ರಶಸ್ತಿ, ಯಕ್ಷಮಂಗಳ ಪ್ರಶಸ್ತಿ, ಯಕ್ಷಕಲಾನಿಧಿ ಪ್ರಶಸ್ತಿ, ದೇರಾಜೆ ಸೀತಾರಾಮಯ್ಯ ಪ್ರಶಸ್ತಿ, ಶಂಕರನಾರಾಯಣ ಸಾಮಗ ಪ್ರಶಸ್ತಿ, ದೋಗ್ರ ಪೂಜಾರಿ ಸ್ಮಾರಕ ಪ್ರಶಸ್ತಿ, ಕುರಿಯ ವಿಠಲ ಶಾಸ್ತ್ರಿ ಪ್ರಶಸ್ತಿ ಮುಂತಾದ ಪ್ರಶಸ್ತಿ ಹಾಗೂ ವಿವಿಧ ಸಂಘ ಸಂಸ್ಥೆಗಳಿಂದ ಗೌರವಿಸಲ್ಪಟಿದ್ದ ಇವರು ಯಕ್ಷ ಸಾಮ್ರಾಜ್ಞಿಯಾಗಿ ಮೆರೆದಿದ್ದಾರೆ.

LEAVE A REPLY

Please enter your comment!
Please enter your name here