ವಿಧಾನಸಭಾ ಕ್ಷೇತ್ರ, ಬ್ಲಾಕ್ ಯುವ ಕಾಂಗ್ರೆಸ್ ಚುನಾವಣೆ -11 ಅಭ್ಯರ್ಥಿಗಳು ಅಂತಿಮ ಕಣದಲ್ಲಿ

0

* ಪುತ್ತೂರು ವಿಧಾನಸಭಾ ಕ್ಷೇತ್ರ, ಬ್ಲಾಕ್ -ತಲಾ ನಾಲ್ವರು
* ವಿಟ್ಲ-ಉಪ್ಪಿನಂಗಡಿ 3 ಅಭ್ಯರ್ಥಿಗಳು
* ಪುತ್ತೂರು ಕ್ಷೇತ್ರ, ಬ್ಲಾಕ್‌ನಿಂದ ಇಬ್ಬರ ನಾಮಪತ್ರ ತಿರಸ್ಕೃತ
* ರಾಜ್ಯ ಯುವ ಕಾಂಗ್ರೆಸ್‌ಗೆ ಪುತ್ತೂರಿನಿಂದ ಇಬ್ಬರ ನಾಮಪತ್ರ- ಒಂದು ತಿರಸ್ಕೃತ
* ಜಿಲ್ಲೆಗೂ ಇಬ್ಬರಿಂದ ನಾಮಪತ್ರ
* ಒಂದೆರಡು ದಿನಗಳಲ್ಲಿ ಅಂತಿಮ ಪಟ್ಟಿ ಪ್ರಕಟ

ಪುತ್ತೂರು: ಯುವ ಕಾಂಗ್ರೆಸ್‌ನಲ್ಲಿ ಹೊಸ ನಾಯಕರನ್ನು ಸೃಷ್ಟಿಸುವ ಉದ್ದೇಶದಿಂದ ಆಂತರಿಕ ಚುನಾವಣಾ ಪ್ರಕ್ರಿಯೆ ನಡೆಯುತ್ತಿದ್ದು ಪುತ್ತೂರು ವಿಧಾನಸಭಾ ಕ್ಷೇತ್ರ ಹಾಗೂ ಪುತ್ತೂರು ಬ್ಲಾಕ್‌ನಿಂದ ನಾಮಪತ್ರ ಸಲ್ಲಿಸಿರುವವರ ಪೈಕಿ ಇಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ. ಪುತ್ತೂರಿನಿಂದ ಜಿಲ್ಲೆಗೆ ನಾಮಪತ್ರ ಸಲ್ಲಿಸಿರುವ ಪುತ್ತೂರಿನ ಇಬ್ಬರ ಪೈಕಿ ಒಬ್ಬರ ನಾಮಪತ್ರ ತಿರಸ್ಕೃತಗೊಂಡಿದೆ. ಪುತ್ತೂರು ಬ್ಲಾಕ್ ಮತ್ತು ವಿಧಾನಸಭಾ ಕ್ಷೇತ್ರಕ್ಕೆ ಸಂಬಂಧಿಸಿ ತಲಾ ನಾಲ್ಕು ಅಭ್ಯರ್ಥಿಗಳು ಮತ್ತು ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ಗೆ ಸಂಬಂಧಿಸಿ ಮೂವರು ಅಭ್ಯರ್ಥಿಗಳು ಅಂತಿಮ ಕಣದಲ್ಲಿದ್ದಾರೆ.

ಆ.2ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ನಾಮಪತ್ರಗಳ ಪರಿಶೀಲನೆ ನಡೆದು ರಾಜ್ಯದಿಂದ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಪುತ್ತೂರು ವಿಧಾನಸಭಾ ಕ್ಷೇತ್ರ ಮತ್ತು ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ತಲಾ ಐದು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಈ ಪೈಕಿ ತಲಾ ಓರ್ವ ಅಭ್ಯರ್ಥಿಯ ನಾಮಪತ್ರ ತಿರಸ್ಕೃತಗೊಂಡಿದ್ದು, ಬ್ಲಾಕ್ ಮತ್ತು ವಿಧಾನಸಭಾ ಕ್ಷೇತ್ರದಿಂದ ತಲಾ ನಾಲ್ವರು ಅಭ್ಯರ್ಥಿಗಳ ನಾಮಪತ್ರ ಸ್ವೀಕೃತಗೊಂಡಿದೆ. ವಿಟ್ಲ-ಉಪ್ಪಿನಂಗಡಿ ಬ್ಲಾಕ್‌ನಿಂದ ಮೂರು ಮಂದಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಅವರೆಲ್ಲರ ನಾಮಪತ್ರ ಕ್ರಮಬದ್ಧವಾಗಿದ್ದು ಸ್ವೀಕೃತವಾಗಿದೆ.

ಪುತ್ತೂರು ವಿಧಾನಸಭಾ ಕ್ಷೇತ್ರ: ಪುತ್ತೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಪದಾಧಿಕಾರಿ ಹುದ್ದೆಗೆ ಆಯ್ಕೆ ಬಯಸಿ ಮಹಮ್ಮದ್ ಫಾರೂಕ್ ಪೆರ್ನೆ, ಜಗದೀಶ್ ಕಜೆ ಬೆಳ್ಳಿಪ್ಪಾಡಿ, ಇಬ್ರಾಹಿಂ ಬಾತೀಷ್ ಎಂ. ಅಳಕೆಮಜಲು, ಮೊಹಮ್ಮದ್ ಶಾಲಿಕ್ ಸಾಲ್ಮರ, ಅಹಮ್ಮದ್ ಸೆಮಿ ಕೆ.ಗಾಳಿಮುಖ ನಾಮಪತ್ರ ಸಲ್ಲಿಸಿದ್ದರು. ಈ ಪೈಕಿ ಇಬ್ರಾಹಿಂ ಬಾತೀಷ್ ಎಂ.ಅಳಕೆಮಜಲು ಅವರ ನಾಮಪತ್ರ ತಿರಸ್ಕೃತಗೊಂಡಿದೆ. ಉಳಿದ ನಾಲ್ವರ ನಾಮಪತ್ರ ಸ್ವೀಕೃತಗೊಂಡಿದೆ.

ಪುತ್ತೂರು ಬ್ಲಾಕ್: ಪುತ್ತೂರು ಬ್ಲಾಕ್ ಯುವ ಕಾಂಗ್ರೆಸ್‌ಗೆ ಅಖಿಲ್ ಕಲ್ಲಾರೆ, ಅಬ್ದುಲ್ ರಹಿಮಾನ್ ಸಂಪ್ಯ, ಆಶಿಕ್ ಸಂಪ್ಯ, ನವೀನ್ ಕುಮಾರ್ ಶೆಟ್ಟಿ ಹಾಗೂ ಮೊಹಮ್ಮದ್ ಉವೈಸ್ ಅವರು ನಾಮಪತ್ರ ಸಲ್ಲಿಸಿದ್ದಾರೆ. ಈ ಪೈಕಿ ಆಶಿಕ್ ಸಂಪ್ಯ ಅವರ ನಾಮಪತ್ರ ತಿರಸ್ಕೃತಗೊಂಡಿದೆ.

ವಿಟ್ಲ-ಉಪ್ಪಿನಂಗಡಿ: ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಯುವ ಕಾಂಗ್ರೆಸ್‌ನಿಂದ ಅಬ್ದುಲ್ ಸಮದ್ ಪೆರ್ನೆ, ಸುಮಿತ್ ಶೆಟ್ಟಿ ಕಂಬಳಬೆಟ್ಟು ಹಾಗೂ ಮೊಹಮ್ಮದ್ ಉನೈಸ್ ಗಡಿಯಾರ ಅವರು ನಾಮಪತ್ರ ಸಲ್ಲಿಸಿದ್ದು ಮೂವರ ನಾಮಪತ್ರವೂ ಸ್ವೀಕೃತಗೊಂಡಿದೆ.

ಜಿಲ್ಲಾ ಯುವ ಕಾಂಗ್ರೆಸ್ ಪ್ರಧಾನ ಕಾರ‍್ಯದರ್ಶಿ ಸ್ಥಾನಕ್ಕೆ ಕಡಬ ತಾಲೂಕಿನಿಂದ ಬಾತಿಶಾ ಆತೂರು ಹಾಗೂ ಪುತ್ತೂರು ವಿಧಾನಸಭಾ ಕ್ಷೇತ್ರದಿಂದ ಸಂಶುದ್ದೀನ್ ಅಜ್ಜಿನಡ್ಕ ನಾಮಪತ್ರ ಸಲ್ಲಿಸಿದ್ದು ಅದು ಸ್ವೀಕೃತಗೊಂಡಿದೆ. ರಾಜ್ಯ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಪುತ್ತೂರಿನಿಂದಲೂ ಇಬ್ಬರು ನಾಮಪತ್ರ ಸಲ್ಲಿಸಿದ್ದಾರೆ. ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಹಾಗೂ ಅಭಿಷೇಕ್ ಬೆಳ್ಳಿಪ್ಪಾಡಿರವರು ರಾಜ್ಯ ಯುವ ಕಾಂಗ್ರೆಸ್‌ಗೆ ನಾಮಪತ್ರ ಸಲ್ಲಿಸಿದ್ದು ಅಭಿಷೇಕ್ ಬೆಳ್ಳಿಪ್ಪಾಡಿ ಅವರ ನಾಮಪತ್ರ ತಿರಸ್ಕೃತಗೊಂಡಿದೆ ಎಂದು ವರದಿಯಾಗಿದೆ.

ಸದಸ್ಯತ್ವ ನೋಂದಣಿ: ಆ.16ರಿಂದ ಸೆ.16ರವರೆಗೆ ಸದಸ್ಯತ್ವ ನೋಂದಣಿ ನಡೆಯಲಿದೆ.ಸದಸ್ಯರಾಗಲು ಬಯಸುವವರು ಆನ್‌ಲೈನ್ ಮೂಲಕ ಸದಸ್ಯತ್ವ ನೋಂದಣಿ ಮಾಡಿಕೊಳ್ಳಬೇಕು. ಅಭ್ಯರ್ಥಿಗಳ ಪೈಕಿ ಅತಿ ಹೆಚ್ಚು ಮತ ಪಡೆಯುವವರು ಅಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಮತಗಳ ಆಧಾರದ ಮೇಲೆ ನಂತರದ ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಇತರ ಸ್ಥಾನಗಳು ಅಭ್ಯರ್ಥಿಗಳಿಗೆ ದೊರೆಯಲಿವೆ.

ಯುವ ಕಾಂಗ್ರೆಸ್‌ನ ಸದಸ್ಯತ್ವ ಪಡೆದ ದಿನದಿಂದಲೇ ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಘಟಕದ ಅಧ್ಯಕ್ಷರನ್ನು ಆಯ್ಕೆ ಮಾಡಲು ಮತದಾನ ಮಾಡುವ ಅಽಕಾರ ಸಿಗಲಿದೆ. ಒಬ್ಬರಿಗೆ ಆರು ಮತ ಚಲಾಯಿಸಲು ಅಧಿಕಾರವಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಐವೈಸಿ ಆಪ್‌ನಲ್ಲಿ ವೀಕ್ಷಿಸಬಹುದು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಈ ಮೊದಲೇ ತಿಳಿಸಿದ್ದಾರೆ. ಯುವ ಕಾಂಗ್ರೆಸ್ ಸದಸ್ಯತ್ವ ಪಡೆಯುವವರು 35 ವರ್ಷದ ಒಳಗಿನವರಾಗಿರಬೇಕು. ಸದಸ್ಯತ್ವ ನೋಂದಣಿ ಶುಲ್ಕ ರೂ.50 ಕಟ್ಟಬೇಕು. ಮತದಾನ ಮಾಡುವಾಗ ಪಕ್ಷ ನೀಡಿದ ಮತದಾರರ ಗುರುತಿನ ಚೀಟಿ ಕಡ್ಡಾಯವಾಗಿರುತ್ತದೆ. ಮಹಿಳೆಯರು, ಪರಿಶಿಷ್ಟರು, ಅಲ್ಪಸಂಖ್ಯಾತರು ಸೇರಿದಂತೆ ಎಲ್ಲ ವರ್ಗದವರಿಗೂ ಮೀಸಲಾತಿ ಇರುತ್ತದೆ ಎಂದೂ ಡಿಕೆ ಶಿವಕುಮಾರ್ ತಿಳಿಸಿದ್ದರು.

ಯುವ ಕಾಂಗ್ರೆಸ್ ಅಧ್ಯಕ್ಷತೆಗೆ ನಾಮಪತ್ರ ಸಲ್ಲಿಸಿರುವ ಕೆಲವರ ನಾಮಪತ್ರಗಳು ತಿರಸ್ಕೃತಗೊಳ್ಳಲು ಸರಿಯಾದ ಕಾರಣ ತಿಳಿದು ಬಂದಿಲ್ಲ.ಇದು ಅಂತಿಮ ಪಟ್ಟಿ ಅಲ್ಲ. ಅಂತಿಮ ಪಟ್ಟಿ ಒಂದೆರಡು ದಿನದಲ್ಲಿ ಬರಬಹುದು ಎಂದು ಪುತ್ತೂರು ಯುವ ಕಾಂಗ್ರೆಸ್ ಅಧ್ಯಕ್ಷ ಶ್ರೀಪ್ರಸಾದ್ ಪಾಣಾಜೆ ಅವರು ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here