“ಜೀವನದ ಪ್ರತಿಕ್ಷಣವೂ ಭವಿಷ್ಯತ್ತನ್ನು ನಿರ್ಮಾಣ ಮಾಡುತ್ತದೆ”- ಸ್ವಾಮಿ ಮಹಾಮೇಧಾನಂದಜಿ
ಪುತ್ತೂರು: “ನಾವು ಬದುಕುವ ಪ್ರತಿಕ್ಷಣವೂ ಕೂಡ ನಮ್ಮ ಭವಿಷ್ಯತ್ತನ್ನು ನಿರ್ಧಾರ ಮಾಡುತ್ತಾ ಹೋಗುತ್ತದೆ. ನಮ್ಮ ಯೋಚನಾ ಶಕ್ತಿಯು ನಮ್ಮ ಜ್ಞಾನದ ವಿಸ್ತಾರವನ್ನು ತಿಳಿಸುತ್ತದೆ. ಆದುದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಅವನ ಭವಿಷ್ಯವನ್ನು ರೂಪಿಸುವಲ್ಲಿ ಕಾರ್ಯಮಗ್ನನಾಗಬೇಕಿದೆ. ಕಲಿಕೆ ಎಂಬುದು ವಿದ್ಯಾರ್ಥಿಗಳಿಗೆ ಸೀಮಿತವಾಗಬೇಕಿಲ್ಲ, ಜೀವನಪರ್ಯಂತ ನಿರಂತರವಾದ ಜ್ಞಾನಾರ್ಜನೆಗೆ ಸರ್ವರಿಗೂ ಅವಕಾಶವಿದೆ. ಸತ್ಯದ ಪರಿಪಾಲನೆ, ಆತ್ಮಸಂಯಮ, ಪರೋಪಕಾರ ಈ ಮೂರು ಆದರ್ಶಗಳನ್ನು ನಾವು ಪರಿಪಾಲಿಸಿದಲ್ಲಿ ನಮ್ಮ ಏಳಿಗೆಗೆ ನಾವೇ ಶಿಲ್ಪಿಗಳಾಗುತ್ತೇವೆ.” ಎಂದು ರಾಮಕೃಷ್ಣ ನೈತಿಕ ಮತ್ತು ಆಧ್ಯಾತ್ಮಿಕ ಶಿಕ್ಷಣ ಸಂಸ್ಥೆ ಮೈಸೂರು, ಇದರ ಮುಖ್ಯಸ್ಥರಾದ ಸ್ವಾಮಿ ಮಹಾಮೇಧಾನಂದಜಿ ಅವರು ಹೇಳಿದರು.
ಅವರು ರಾಮಕೃಷ್ಣ ಮಿಷನ್ ಮಂಗಳಾದೇವಿ,ಮಂಗಳೂರು ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳಗಂಗೋತ್ರಿ, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ವಿವೇಕಾನಂದ ಪದವಿಪೂರ್ವ ವಿದ್ಯಾಲಯದ ಸಹಯೋಗದೊಂದಿಗೆ ವೈದೇಹಿ ಸಭಾಂಗಣದಲ್ಲಿ ನಡೆದ “ನನ್ನ ಏಳಿಗೆಗೆ ನಾನೇ ಶಿಲ್ಪಿ” ವಿವೇಕ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸತೀಶ್ ರಾವ್ ಉಪಾಧ್ಯಕ್ಷರು ಆಡಳಿತ ಮಂಡಳಿ, ವಿವೇಕಾನಂದ ವಿದ್ಯಾವರ್ಧಕ ಸಂಘ, ಪುತ್ತೂರು ಇವರು ಮಾತನಾಡುತ್ತಾ, “ಭಾರತೀಯ ಶಿಕ್ಷಣದ ಮೂಲತತ್ವ ಸಂಸ್ಕಾರದೊಂದಿಗೆ ಶಿಕ್ಷಣ ನೀಡುವುದಾಗಿದೆ. ಭಾರತೀಯ ಸನಾತನ ಸಂಸ್ಕೃತಿ,ಆಧ್ಯಾತ್ಮಿಕತೆ ಇವುಗಳಿಗೆ ಪೋಷಣೆಯನ್ನು ಒದಗಿಸುತ್ತದೆ. ಸ್ವಾಮಿ ವಿವೇಕಾನಂದರಂತಹ ಧೀಮಂತ ವ್ಯಕ್ತಿಯ ತತ್ವ ಸಿದ್ದಾಂತಗಳನ್ನು ಅರ್ಥೈಸಿಕೊಂಡು, ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕವಾಗುತ್ತದೆ” ಎಂದು ನುಡಿದರು. ಕಾರ್ಯಕ್ರಮದ ವೇದಿಕೆಯಲ್ಲಿ ಬೆಳ್ಳಾಲ ಗೋಪಿನಾಥ್ ರಾವ್ ನಿವೃತ್ತ ಯೋಧರು, ಡಾ. ಚಂದ್ರು ಹೆಗ್ಡೆ ಸಂಯೋಜಕರು, ಮಂಗಳೂರು ವಿಶ್ವವಿದ್ಯಾಲಯ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರ ಮಂಗಳಗಂಗೋತ್ರಿ, ಮಂಗಳೂರು ಹಾಗೂ ವಿವೇಕಾನಂದ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷರಾದ ರವೀಂದ್ರ ಪಿ. ಹಾಗೂ ಸದಸ್ಯರಾದ ಡಾ. ಕೆ.ಎನ್ ಸುಬ್ರಹ್ಮಣ್ಯ ಇವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿವೇಕಾನಂದ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರು,ಉಪನ್ಯಾಸಕ, ಉಪನ್ಯಾಸಕೇತರ ವೃಂದದವರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿ, ಶೈಕ್ಷಣಿಕ ಸಂಯೋಜಕರಾದ ಶ್ರೀವತ್ಸ ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಉಪನ್ಯಾಸಕಿ ಶೀತಲಾ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.