ಉಪ್ಪಿನಂಗಡಿ ಮೆಸ್ಕಾಂ ಶಾಖೆ ಮೇಲ್ದರ್ಜೆಗೇರಿಸಿ – ಆತೂರು- ಗೋಳಿತೊಟ್ಟಿನಲ್ಲಿ ಶಾಖೆ ನಿರ್ಮಿಸಿ – 34 ನೆಕ್ಕಿಲಾಡಿ ಗ್ರಾಮ ಸಭೆ

0

ಉಪ್ಪಿನಂಗಡಿ: ಕರ್ವೇಲುವಿನಲ್ಲಿ ನಿರ್ಮಾಣವಾಗಲಿರುವ 110 ಕೆ.ವಿ. ವಿದ್ಯುತ್ ಉಪಕೇಂದ್ರದ ಪ್ರಕ್ರಿಯೆಗಳನ್ನು ಶೀಘ್ರವೇ ಪೂರ್ಣಗೊಳಿಸಿ, ಅಲ್ಲಿ ವಿದ್ಯುತ್ ಉಪಕೇಂದ್ರವನ್ನು ನಿರ್ಮಿಸಬೇಕು ಹಾಗೂ ಉಪ್ಪಿನಂಗಡಿ ಮೆಸ್ಕಾಂ ಶಾಖೆಯನ್ನು ಉಪವಿಭಾಗವನ್ನಾಗಿ ಮೇಲ್ದರ್ಜೆಗೇರಿಸಿ, ಇದರಡಿ ಆತೂರು ಮತ್ತು ಗೋಳಿತೊಟ್ಟುವಿನಲ್ಲಿ ಎರಡು ಶಾಖೆಗಳನ್ನು ಆರಂಭಿಸಬೇಕು ಎಂಬ ಒತ್ತಾಯ 34 ನೆಕ್ಕಿಲಾಡಿ ಗ್ರಾಮ ಸಭೆಯಲ್ಲಿ ಕೇಳಿ ಬಂತು.

34 ನೆಕ್ಕಿಲಾಡಿ ಗ್ರಾ.ಪಂ. ಅಧ್ಯಕ್ಷೆ ಸುಜಾತ ಆರ್. ರೈಯವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಗ್ರಾಮ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥೆ ಅನಿ ಮಿನೇಜಸ್, ಉಪ್ಪಿನಂಗಡಿ ಮೆಸ್ಕಾಂ ಶಾಖೆಯು 9 ಗ್ರಾಮಗಳನ್ನೊಳಗೊಂಡ ವಿಶಾಲ ಕಾರ್ಯವ್ಯಾಪ್ತಿಯನ್ನು ಹೊಂದಿದೆ. ಸಿಬ್ಬಂದಿ ಕೊರತೆ, ವಿಶಾಲ ಕಾರ್ಯವ್ಯಾಪ್ತಿಯ ನಡುವೆಯೂ ಮಳೆಗಾಲದಲ್ಲಿ ಉಂಟಾದ ವಿದ್ಯುತ್ ಸಮಸ್ಯೆಗೆ ಉತ್ತಮ ಸ್ಪಂದನೆ ನೀಡಿದೆ. ಇದರ ವಿಶಾಲ ಕಾರ್ಯವ್ಯಾಪ್ತಿಯನ್ನು ಕುಗ್ಗಿಸಬೇಕು. ಆದ್ದರಿಂದ ಉಪ್ಪಿನಂಗಡಿ ಮೆಸ್ಕಾಂ ಶಾಖೆಯನ್ನು ಉಪವಿಭಾಗವನ್ನಾಗಿ ಮೇಲ್ದರ್ಜೆಗೇರಿಸಿ ಅದರಡಿ ಆತೂರು ಮತ್ತು ಗೋಳಿತೊಟ್ಟಿನಲ್ಲಿ ಎರಡು ಶಾಖೆಗಳನ್ನು ತೆರೆಯಬೇಕು. ಹೀಗಾದಲ್ಲಿ ಹೆಚ್ಚಿನ ಸೌಲಭ್ಯ, ಸಿಬ್ಬಂದಿಯೂ ದೊರಕುವುದಲ್ಲದೆ, ಈ ಭಾಗದಲ್ಲಿ ವಿದ್ಯುತ್ ಸಮಸ್ಯೆಗಳಿಗೆ ಶೀಘ್ರ ಪರಿಹಾರ ಕಾಣಲು ಸಾಧ್ಯವಿದೆ. ಅದಲ್ಲದೆ, ವಿದ್ಯುತ್ ಮೀಟರ್‌ಗಳ ಸಮಸ್ಯೆ ಸೇರಿದಂತೆ ಈಗ ಪುತ್ತೂರು ಮೆಸ್ಕಾಂ ಉಪವಿಭಾಗಕ್ಕೆ ಹೋಗಿ ಮಾಡಬೇಕಾದ ಕೆಲಸ ಉಪ್ಪಿನಂಗಡಿಯಲ್ಲೇ ಸಾಧ್ಯವಾಗುವುದರಿಂದ ವಿದ್ಯುತ್ ಗ್ರಾಹಕರಿಗೂ ಅನುಕೂಲವಾಗಲಿದೆ. ಆದ್ದರಿಂದ ಈ ಬಗ್ಗೆ ನಿರ್ಣಯ ಅಂಗೀಕರಿಸಲು ತಿಳಿಸಿದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು. ಗ್ರಾಮಸ್ಥ ರಫೀಕ್ ಅವರು ಮಾತನಾಡಿ, ಕರ್ವೇಲುವಿನಲ್ಲಿ ನಿರ್ಮಾಣವಾಗಲಿರುವ 110 ಕೆ.ವಿ. ವಿದ್ಯುತ್ ಉಪಕೇಂದ್ರದ ಮಾಹಿತಿ ಕೇಳಿದರು. ಅದಕ್ಕೆ ಉತ್ತರಿಸಿದ ಮೆಸ್ಕಾಂ ಉಪ್ಪಿನಂಗಡಿ ಶಾಖೆಯ ಸಹಾಯಕ ಎಂಜಿನಿಯರ್ ನಿತಿನ್ ಕುಮಾರ್, ಕರ್ವೇಲು 110 ಕೆ.ವಿ. ವಿದ್ಯುತ್ ಉಪಕೇಂದ್ರಕ್ಕೆ ಜಾಗ ಮಂಜೂರಾಗಿದ್ದು, ಡಿ.ಪಿ.ಆರ್. ಅನುಮೋದನೆಗೆ ಬಾಕಿ ಇದೆ. ಒಂದು ವರ್ಷದಲ್ಲಿ ಇಲ್ಲಿ ಉಪಕೇಂದ್ರ ನಿರ್ಮಾಣವಾಗಬಹುದು. ಬಳಿಕ ಉಪ್ಪಿನಂಗಡಿ, ಕೋಡಿಂಬಾಡಿ, ಬಿಳಿಯೂರು, 34 ನೆಕ್ಕಿಲಾಡಿ ಗ್ರಾಮಗಳ ಲೋವೋಲ್ಟೇಜ್ ಸಮಸ್ಯೆ ತಪ್ಪುತ್ತದೆ ಎಂದರು. ಆಗ ರಫೀಕ್ ಅವರು ಮಾತನಾಡಿ, ಆದಷ್ಟು ಶೀಘ್ರವಾಗಿ ಇದರ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ, ಇಲ್ಲಿ ವಿದ್ಯುತ್ ಉಪಕೇಂದ್ರ ನಿರ್ಮಾಣವಾಗುವಂತೆ ಗ್ರಾ.ಪಂ.ನಿಂದಲೂ ನಿರ್ಣಯ ಮಾಡಿ ಕಳಿಸೋಣ ಎಂದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ಅಂಗನವಾಡಿಗೆ ಟೀಚರಿಲ್ಲ: ಮೈಂದಡ್ಕದಲ್ಲಿ ಎಲ್ಲರೂ ಸೇರಿ ಅಂಗನವಾಡಿಗೆಂದು ಕಟ್ಟಡ ಕಟ್ಟಿಕೊಟ್ಟಿದ್ದೇವೆ. ಆದರೆ ಅಲ್ಲಿ ಅಂಗನವಾಡಿ ಕಾರ್ಯಕರ್ತೆಯರ ನಿಯೋಜನೆಯಾಗಿಲ್ಲ ಎಂಬ ವಿಷಯ ಗ್ರಾಮಸ್ಥೆ ಚಂದ್ರಾವತಿ ಪ್ರಸ್ತಾಪಿಸಿದರು. ಅದಕ್ಕುತ್ತರಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವೀಚಾರಕಿ ಸುಜಾತ, ಅಂಗನವಾಡಿ ಕಾರ್ಯಕರ್ತೆಯರ ನಿಯೋಜನೆಯ ಪ್ರಕ್ರಿಯೆ ನಡೆಯುತ್ತಿದ್ದು, ಶೀಘ್ರದಲ್ಲಿ ನಿಯೋಜನೆ ಆಗಬಹುದು ಎಂದರು.

ಸುಸ್ಥಿತಿಯಲ್ಲಿದ್ದ ರಸ್ತೆ ಅಗೆದದ್ದೇಕೆ?: ದರ್ಬೆ ರಸ್ತೆಯು ಹದಗೆಟ್ಟಿರುವ ಬಗ್ಗೆ ಗ್ರಾಮ ಸಭೆಯಲ್ಲಿ ಪ್ರಸ್ತಾಪವಾದಾಗ ಉಪಾಧ್ಯಕ್ಷ ಹರೀಶ್ ಡಿ. ಅವರು ಮರಳು ಲಾರಿಗಳ ಸಂಚಾರದಿಂದ ರಸ್ತೆ ಹದಗೆಟ್ಟಿದೆ ಎಂದರು. ಆಗ ಗ್ರಾಮಸ್ಥ ಕಲಂದರ್ ಶಾಫಿ ಮಾತನಾಡಿ, ಪ್ರತಿ ವರ್ಷ ಮರಳು ತುಂಬಿದ ವಾಹನಗಳಿಂದ ಸುಂಕ ವಸೂಲಿಗೆ ಏಲಂ ಪ್ರಕ್ರಿಯೆ ನಡೆಸುತ್ತೀರಿ. ಈ ವರದಿಯಲ್ಲಿಯೂ 2.27 ಲಕ್ಷಕ್ಕೆ ಏಲಂ ಆದ ಬಗ್ಗೆ ತೋರಿಸಲಾಗಿದೆ. ಹಾಗಾದರೆ ಆ ದುಡ್ಡನ್ನು ಯಾವುದಕ್ಕೆ ಬಳಸಿಕೊಳ್ಳಲಾಗುತ್ತಿದೆ. ಮರಳು ಸಾಗಾಟ ವಾಹನಗಳ ಸುಂಕ ವಸೂಲಿ ಏಲಂನಿಂದ ಬರುವ ಹಣದಿಂದ ಮರಳು ಸಾಗಾಟದ ಲಾರಿಗಳು ಹೋಗುವ ರಸ್ತೆಯನ್ನು ದುರಸ್ತಿ ಮಾಡಬಹುದಲ್ಲವೇ ಎಂದು ಪ್ರಶ್ನಿಸಿದರು. ಅನಿ ಮಿನೇಜಸ್ ಮಾತನಾಡಿ, ಮೊದಲು ಈ ರಸ್ತೆ ಸುಸ್ಥಿತಿಯಲ್ಲಿಯೇ ಇತ್ತು. ಆದರೆ ರಸ್ತೆ ವಿಸ್ತರಣೆಯ ನೆಪದಲ್ಲಿ ಅಲ್ಲಿದ್ದ ಡಾಮರು ರಸ್ತೆಯನ್ನು ಅಗೆದದ್ದು ಗ್ರಾ.ಪಂ. ಅಲ್ಲವೇ? ಅದ್ಯಾಕೆ ಎಂದು ಪ್ರಶ್ನಿಸಿದರು.

ಎಲ್ಲಾ ಧರ್ಮಕ್ಕೂ ಮಾನ್ಯತೆ ನೀಡಿ: ವರದಿಯ ಚರ್ಚೆಗೆ ಸಂಬಂಧಿಸಿ ಮಾತನಾಡಿದ ಗ್ರಾಮಸ್ಥ ಅಬ್ದುರ್ರಹ್ಮಾನ್ ಯುನಿಕ್, ಹೈಮಾಸ್ಕ್ ಸೋಲಾರ್ ದೀಪವನ್ನು ಅಳವಡಿಸುವಾಗ ಒಂದು ಧರ್ಮದ ಧಾರ್ಮಿಕ ಕೇಂದ್ರಗಳಿಗೆ ಮಾತ್ರ ಮಾನ್ಯತೆ ನೀಡಲಾಗಿದೆ. ಅಲ್ಲಿ ಹೈಮಾಸ್ಕ್ ಸೋಲಾರ್ ದೀಪ ಅಳವಡಿಸಿರುವುದರ ಬಗ್ಗೆ ನನ್ನದು ಆಕ್ಷೇಪವಿಲ್ಲ. ಆದರೆ 34 ನೆಕ್ಕಿಲಾಡಿ ಮಸೀದಿಯ ಬಳಿಯೂ ಹೈಮಾಸ್ಕ್ ದೀಪ ಅಳವಡಿಸಬೇಕೆಂದು ನಾವು ಮನವಿ ನೀಡಿದ್ದೇವೆ. ಆದರೆ ಅದನ್ನು ಗ್ರಾ.ಪಂ. ಕಾರ್ಯಗತಗೊಳಿಸಿಲ್ಲ. ಹೈಮಾಸ್ಕ್ ಸೋಲಾರ್ ದೀಪ ಅಳವಡಿಸುವಾಗ ಎಲ್ಲಾ ಧರ್ಮದ ಧಾರ್ಮಿಕ ಕೇಂದ್ರಗಳಿಗೂ ಆದ್ಯತೆ ನೀಡಿ ಎಂದರು. ಝಕಾರಿಯಾ ಕೊಡಿಪ್ಪಾಡಿ ಕೂಡಾ ಇದನ್ನು ಬೆಂಬಲಿಸಿ ಮಾತನಾಡಿದರು.

ಜಲಸಿರಿ ಶುದ್ಧ ನೀರು ಬೇಕು: ಗ್ರಾಮಸ್ಥ ಕಲಂದರ್ ಶಾಫಿ ಮಾತನಾಡಿ, 34 ನೆಕ್ಕಿಲಾಡಿಯಲ್ಲಿ ಕೊಳವೆ ಬಾವಿಯಲ್ಲಿ ಗುಣಮಟ್ಟದ ಕುಡಿಯುವ ನೀರು ಸಿಗುತ್ತಿಲ್ಲ. ಪುತ್ತೂರಿಗೆ ಶುದ್ಧೀಕರಣಗೊಂಡು ಕುಡಿಯುವ ನೀರು ಹೋಗುವುದು ನೆಕ್ಕಿಲಾಡಿ ಗ್ರಾಮದಿಂದ. ಆದರೆ ಅವರಿಗೆ ಶುದ್ಧ ನೀರು ಕೊಡುವ ನಾವು ಮಾತ್ರ ಗುಣಮಟ್ಟವಿಲ್ಲದ ನೀರು ಕುಡಿಯಬೇಕೇ ಎಂದು ಪ್ರಶ್ನಿಸಿದರು. ಇದಕ್ಕೆ ಪೂರಕವಾಗಿ ಅಸ್ಕರ್ ಅಲಿ ಮಾತನಾಡಿ, ಇಲ್ಲಿಂದ ನೀರು ತೆಗೆದುಕೊಂಡು ಹೋಗುವಾಗ ಪುತ್ತೂರು ನಗರಸಭೆಯವರು ನಮ್ಮ ಗ್ರಾಮಕ್ಕೂ ಕುಡಿಯುವ ನೀರು ಕೊಡುತ್ತೇವೆ ಎಂದು ಒಪ್ಪಿಕೊಂಡಿದ್ದಾರೆ. ಆದರೆ ಬಳಿಕ ಜಲಸಿರಿಯಾಗಲಿ ಆ ಬಳಿಕ ಕೊಡುತ್ತೇವೆ ಎಂದಿದ್ದರು. ಈಗ ಜಲಸಿರಿಯೂ ಆಗಿದೆ. ಆದರೆ ನಮಗೆ ಕುಡಿಯುವ ನೀರು ಕೊಡುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಆಗ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸತೀಶ ಬಂಗೇರ ಮಾತನಾಡಿ, ಜಲಸಿರಿಯ ಮೀಟಿಂಗ್‌ನಲ್ಲಿ ನೆಕ್ಕಿಲಾಡಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಿಂದ ನೀರು ಕೊಡುವುದು. ಜಲಸಿರಿಯಿಂದ ಕೊಡುವುದು ಬೇಡ ಅಂತ ಆಗಿದೆ ಎಂದರು. ಅದಕ್ಕೆ ಅಸ್ಕರ್ ಅಲಿ ಮಾತನಾಡಿ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಕೇವಲ ಪ್ರಸ್ತಾಪದಲ್ಲಿ ಮಾತ್ರ ಇರುವುದು. ಯೋಜನೆ ಆರಂಭವಾಗಿಲ್ಲ. ಅದು ಆಗುವಾಗ 15 ವರ್ಷನೂ ಆಗಬಹುದು. ಅವರವರೇ ಮೀಟಿಂಗ್ ಮಾಡಿ ತೀರ್ಮಾನ ಮಾಡುವುದಲ್ಲ. ಜಲಸಿರಿ ಅಧಿಕಾರಿಗಳು ನೆಕ್ಕಿಲಾಡಿಗೆ ಬಂದು ಇಲ್ಲಿನ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ತೀರ್ಮಾನ ತೆಗೆದುಕೊಳ್ಳಬೇಕು ಎಂದರು. ಆಗ ರಫೀಕ್ ಮಾತನಾಡಿ, ಜನತಾ ನ್ಯಾಯಾಲಯದಲ್ಲಿ ನೆಕ್ಕಿಲಾಡಿ ಗ್ರಾಮಕ್ಕೆ ಪುತ್ತೂರಿಗೆ ಹೋಗುವ ಶುದ್ಧ ಕುಡಿಯುವ ನೀರು ಕೊಡಬೇಕೆಂಬ ಆದೇಶವಾಗಿದೆ. ಆದರೆ ಇದನ್ನು ಕಡೆಗಣಿಸಿದರೆ ನಾವು ಹೈಕೋರ್ಟ್‌ನಲ್ಲಿ ದಾವೆ ಹೂಡಬೇಕಾಗುತ್ತದೆ ಎಂದರು.


ತುಂಡು ಗುತ್ತಿಗೆ ನಿಲ್ಲಿಸಿ: ಗ್ರಾ.ಪಂ.ನ ನೂತನ ಗ್ರಂಥಾಲಯ ಕಟ್ಟಡವು ಐದು ಲಕ್ಷ ರೂ. ವೆಚ್ಚದ ಕಾಮಗಾರಿ. ಆದರೆ ನೀವು ಯಾಕೆ ಇದನ್ನು ಟೆಂಡರ್ ಕರೆದು ಗುತ್ತಿಗೆಗೆ ನೀಡಿಲ್ಲ ಎಂದು ಅಬ್ದುರ್ರಹ್ಮಾನ್ ಯುನಿಕ್ ಪ್ರಶ್ನಿಸಿದರು. ಆಗ ಸ್ಪಷ್ಟನೆ ನೀಡಿದ ಪಿಡಿಒ ಸತೀಶ್ ಬಂಗೇರ, ಐದು ಲಕ್ಷದೊಳಗಿನ ಕಾಮಗಾರಿಯನ್ನು ತುಂಡು ಗುತ್ತಿಗೆ ನೀಡುವ ಮೂಲಕ ಮಾಡಬಹುದು. ಆದ್ದರಿಂದ ಇದನ್ನು ತುಂಡು ಗುತ್ತಿಗೆ ನೀಡಲಾಗಿದೆ ಎಂದರು. ಆಗ ಅಬ್ದುರ್ರಹ್ಮಾನ್ ಯುನಿಕ್ ಪ್ರತಿಕ್ರಿಯಿಸಿ, ತುಂಡು ಗುತ್ತಿಗೆ ನೀಡುವುದರಿಂದ ಗ್ರಾ.ಪಂ.ಗೆ ನಷ್ಟ ಆಗುವ ಸಾಧ್ಯತೆ ಹಾಗೂ ಭ್ರಷ್ಟಾಚಾರವಾಗುವ ಸಾಧ್ಯತೆ ಇದೆ. ಆದ್ದರಿಂದ ಇನ್ನು ಮುಂದೆ ಒಂದು ಲಕ್ಷಕ್ಕಿಂತ ಮೇಲ್ಪಟ್ಟ ಎಲ್ಲಾ ಕಾಮಗಾರಿಗಳು ಟೆಂಡರ್ ಪ್ರಕ್ರಿಯೆ ಮೂಲಕನೇ ನಡೆಯಬೇಕು ಎಂದರು. ಈ ಬಗ್ಗೆ ನಿರ್ಣಯ ಅಂಗೀಕರಿಸಲಾಯಿತು.

ತ್ಯಾಜ್ಯ ತೆರವಿಲ್ಲ: ಶಾಂತಿನಗರ- ಕವೇಲು ರಸ್ತೆಯ ಬದಿ ತ್ಯಾಜ್ಯ ಬಿಸಾಡಿದ್ದಕ್ಕೆ ಗ್ರಾ.ಪಂ. ದಂಡ ಹಾಕಿದೆ. ಆದರೆ ಇನ್ನೂ ಆ ತ್ಯಾಜ್ಯವನ್ನು ತೆರವುಗೊಳಿಸುವ ಕೆಲಸ ಗ್ರಾ.ಪಂ.ನಿಂದ ಆಗಿಲ್ಲ ಎಂದು ಸಮೀರ್ ಆರೋಪಿಸಿದರು. ಅದಕ್ಕೆ ಗ್ರಾ.ಪಂ. ಸದಸ್ಯ ಪ್ರಶಾಂತ್ ಎನ್. ಉತ್ತರಿಸಿ, ಆ ತ್ಯಾಜ್ಯ ತೆಗೆಯಲಾಗಿದೆ. ಆದರೆ ಅದು ಆ ಬಳಿಕ ತಂದು ಬಿಸಾಡಿರುವುದು ಎಂದು ಸ್ಪಷ್ಟನೆ ನೀಡಿದರು.

ಸರ್ವೇಗೆ ನಿರ್ಣಯ: ನೆಕ್ಕಿಲಾಡಿ ಶಾಲೆಯ ಬಳಿ ಅನಾದಿಕಾಲದಿಂದಲೂ ಇದ್ದ ದಾರಿಯೊಂದನ್ನು ಖಾಸಗಿ ವ್ಯಕ್ತಿಯೋರ್ವರು ಮುಚ್ಚಿದ್ದಾರೆ. ಇದರಿಂದ ಇಲ್ಲಿನ ಸುಮಾರು 20 ಮನೆಗಳಿಗೆ ದಾರಿಯಿಲ್ಲದಂತಾಗಿದೆ ಎಂದು ಅಲ್ಲಿನ ನಿವಾಸಿಗಳು ತಿಳಿಸಿದರು. ಈ ಬಗ್ಗೆ ಚರ್ಚೆಯಾಗಿ ಸರ್ವೆಗೆ ಕಂದಾಯ ಇಲಾಖೆಗೆ ಬರೆಯಲು ನಿರ್ಧರಿಸಲಾಯಿತು.

ಹಿಂಬರಹ ಕೊಡಿ: 34 ನೆಕ್ಕಿಲಾಡಿ ಗ್ರಾಮದಲ್ಲಿ ಹಲವು ವರ್ಷಗಳ ಹಿಂದೆ ಅಪ್ರಾಪ್ತ ಬಾಲಕಿಯೋರ್ವಳ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದ್ದು, ಈಕೆಗೆ ಪರಿಹಾರ ನೀಡುವಂತೆ ನ್ಯಾಯಾಲಯ ಆದೇಶಿಸಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯು ಈವರೆಗೆ ಪರಿಹಾರ ನೀಡಿಲ್ಲ. ಪ್ರತಿ ಗ್ರಾಮ ಸಭೆಯಲ್ಲಿಯೂ ಇದರ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ ಸಮಾಜ ಕಲ್ಯಾಣ ಇಲಾಖೆಯವರು ಸ್ಪಂದಿಸುತ್ತಿಲ್ಲ ಎಂದು ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ. ಪ್ರಶ್ನಿಸಿದರು. ಅದಕ್ಕೆ ಉತ್ತರಿಸಿದ ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿಯವರು, ನಾನು ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಆಗ ಅವರು ನ್ಯಾಯಾಲಯದ ಆದೇಶದಲ್ಲಿ ಯಾವ ಇಲಾಖೆ ಪರಿಹಾರ ನೀಡಬೇಕು ಎಂಬ ಬಗ್ಗೆ ಉಲ್ಲೇಖವಿಲ್ಲ. ಹಾಗಾಗಿ ನಮಗೆ ಕೊಡಲು ಬರುವುದಿಲ್ಲ ಎಂದು ತಿಳಿಸಿದ್ದಾರೆ ಎಂದರು. ಅದಕ್ಕೆ ಅನಿ ಮಿನೇಜಸ್ ಮಾತನಾಡಿ, ಸಮಾಜ ಕಲ್ಯಾಣ ಇಲಾಖೆಯವರು ಆ ರೀತಿ ಹಿಂಬರಹ ನೀಡಲಿ. ಆಮೇಲೆ ಈ ಬಗ್ಗೆ ನ್ಯಾಯಾಲಯಕ್ಕೆ ಮೇಲ್ಮನವಿ ಸಲ್ಲಿಸಿ ಎಂದರು.

ಪುತ್ತೂರು ವಲಯ ಅರಣ್ಯಾಧಿಕಾರಿ ಕಿರಣ್ ಚರ್ಚಾ ನಿಯಂತ್ರಣಾಧಿಕಾರಿಯಾಗಿ ಸಭೆಯನ್ನು ಮುನ್ನಡೆಸಿದರು. ವೇದಿಕೆಯಲ್ಲಿ ಗ್ರಾ.ಪಂ. ಉಪಾಧ್ಯಕ್ಷ ಹರೀಶ್ ಡಿ., ಸದಸ್ಯರಾದ ಪ್ರಶಾಂತ ಎನ್., ಸ್ವಪ್ನ, ತುಳಸಿ, ರತ್ನಾವತಿ, ರಮೇಶ್ ನಾಯ್ಕ, ವೇದಾವತಿ, ಗೀತಾ, ಹರೀಶ್ ಕೆ., ವಿಜಯಕುಮಾರ್ ಉಪಸ್ಥಿತರಿದ್ದರು. ವಿವಿಧ ಇಲಾಖಾಧಿಕಾರಿಗಳು ಇಲಾಖಾ ಮಾಹಿತಿ ನೀಡಿದರು. ಸಭೆಯಲ್ಲಿ ಗ್ರಾಮಸ್ಥರಾದ ಮುಹಮ್ಮದ್ ಫಯಾಜ್, ಅಬ್ದುಲ್ ಖಾದರ್, ಶರೀಕ್ ಅರಫ್ಪಾ, ವಿಶ್ವನಾಥ, ಧರ್ನಪ್ಪ ಗೌಡ, ಅಬ್ದುಲ್ ರಹಿಮಾನ್ ಮೇದರಬೆಟ್ಟು, ಜೆರಾಲ್ಡ್ ಮಸ್ಕರೇನಸ್, ರಾಜೀವ ನಾಯ್ಕ, ನಾರಾಯಣ ನಾಯ್ಕ ಮತ್ತಿತರರು ಉಪಸ್ಥಿತರಿದ್ದು, ಚರ್ಚೆಯಲ್ಲಿ ಭಾಗವಹಿಸಿದರು.
ಗ್ರಾ.ಪಂ. ಲೆಕ್ಕ ಸಹಾಯಕರಾದ ದೇವಪ್ಪ ನಾಯ್ಕ ಸ್ವಾಗತಿಸಿದರು. ಪಿಡಿಒ ಸತೀಶ ಬಂಗೇರ ವರದಿ ವಾಚಿಸಿದರು. ಸಿಬ್ಬಂದಿಗಳಾದ ವಸಂತಿ, ನಿತಿನ್ ಕುಮಾರ್ ಸಹಕರಿಸಿದರು.


ಸರಕಾರಿ ಮೆಡಿಕಲ್ ಕಾಲೇಜಿಗೆ ಮನವಿ
ದ.ಕ. ಜಿಲ್ಲೆಯಲ್ಲಿರುವ ಮೆಡಿಕಲ್ ಮಾಫಿಯಾದ ಪ್ರಭಾವದಿಂದಾಗಿ ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಮಂಜೂರಾಗುತ್ತಿಲ್ಲ. ದ.ಕ. ಜಿಲ್ಲೆಗೆ ಸರಕಾರಿ ಮೆಡಿಕಲ್ ಕಾಲೇಜು ಅಗತ್ಯವಾಗಿ ಬೇಕಾಗಿದ್ದು, ಇದಕ್ಕೆ ಈ ಗ್ರಾಮ ಸಭೆಯಲ್ಲಿ ಹಕ್ಕೊತ್ತಾಯ ಮಂಡಿಸಬೇಕೆಂದು ಗ್ರಾಮಸ್ಥ ಝಕಾರಿಯಾ ಕೊಡಿಪ್ಪಾಡಿ ಆಗ್ರಹಿಸಿದರಲ್ಲದೆ, ಈ ಬಗ್ಗೆ ಮನವಿ ನೀಡಿದರು. ಗ್ರಾಮಸ್ಥರು ಇದನ್ನು ಬೆಂಬಲಿಸಿದರು. ಅಸ್ಕರ್ ಅಲಿ ಮಾತನಾಡಿ, ದ.ಕ. ಜಿಲ್ಲೆಗೆ ಮೆಡಿಕಲ್ ಕಾಲೇಜು ಮಂಜೂರು ಮಾಡುವುದಿದ್ದಲ್ಲಿ ಅದನ್ನು ಪುತ್ತೂರು ತಾಲೂಕಿಗೆ ಮಂಜೂರುಗೊಳಿಸಬೇಕು ಎಂದರು.

LEAVE A REPLY

Please enter your comment!
Please enter your name here