ನಾನೊಬ್ಬ ಸಾಮಾನ್ಯ ಸಾಧಕ – ಲೋಕದ ಹಿತವನ್ನು ಬಯಸುವ ಸೇವಕ : ಮಾಣಿಲ ಶ್ರೀ
ವಿಟ್ಲ: ನಿರೀಕ್ಷೆ ಮಾಡದೆ ಮಾಡುವ ಕೆಲಸದಲ್ಲಿ ಯಶಸ್ಸು ಹೆಚ್ಚು. ತಾಯಂದಿರು, ಮಕ್ಕಳಿಗೆ ಸಂಸ್ಕಾರ ಕೊಡುವ ಕೆಲಸ ಇದಾಗಿದೆ. ಮಹಾತ್ಮರ ಮಾತನ್ನು ಮೀರಬಾರದು. ಕಠಿಣ ಪರಿಶ್ರಮ ಹಾಗೂ ಬಹಳಷ್ಟು ಜನರ ಶ್ರಮದಿಂದ ಶ್ರೀಧಾಮ ಈ ಹಂತಕ್ಕೆ ತಲುಪಿದೆ. ಇಪ್ಪತ್ತೆಂಟು ವರ್ಷದಲ್ಲಿ ಹಲವಾರು ಸವಾಲುಗಳು ಎದುರಾಗಿದೆ. ಸವಾಲುಗಳು ಸಾಧನೆಯ ಮೆಟ್ಟಿಲು. ನಾನೊಬ್ಬ ಸಾಮಾನ್ಯ ಸಾಧಕ. ಲೋಕದ ಹಿತವನ್ನು ಬಯಸುವ ಸೇವಕ ಎಂದು ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಶ್ರೀಧಾಮ ಮಾಣಿಲ ಶ್ರೀದುರ್ಗಾಮಹಾಲಕ್ಷ್ಮೀ ಕ್ಷೇತ್ರದಲ್ಲಿ 48 ದಿನಗಳ ಕಾಲ ನಡೆಯುತ್ತಿರುವ ಸಾಮೂಹಿಕ ಶ್ರೀ ಲಕ್ಷ್ಮೀ ಪೂಜೆಯ ಅಂಗವಾಗಿ ನಡೆದ ಬಾಲಭೋಜನದ ಸಮಾಪ್ತಿ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ತಾಯಿಯ ಮಹಿಮೆಯನ್ನು ಅರಿತವರು ಯಾರಿಲ್ಲ
ಪ್ರೀತಿಯನ್ನು ಬಹಸುವ ಶ್ರೀಧಾಮ ಇದಾಗಿದೆ. ಬಾಲಭೋಜನದಲ್ಲಿ ಭಾಗವಹಿಸಿದ ಮಕ್ಕಳು ದುಶ್ಚಟ ಮುಕ್ತರಾಗಿ ಬಹಳಷ್ಟು ದೊಡ್ಡದೊಡ್ಡ ಉದ್ಯೋಗದಲ್ಲಿದ್ದಾರೆ. ಉಳಿತನ್ನು ಮಾಡುವ ಮನಸ್ಸು ನಮ್ಮದಾಗಲಿ. ಗುರಿ ತಲುಪಲು ಗುರು ಮುಖ್ಯ. ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಧರ್ಮ ಶಿಕ್ಷಣದ ಅಗತ್ಯವಿದೆ. ಜ್ಞಾನದ ಕೊರತೆಯಿಂದ ಮಕ್ಕಳು ದಾರಿ ತಪ್ಪುತ್ತಿದ್ದಾರೆ. ದೇವರ ಭಯವೇ ಜ್ಞಾನದ ಆರಂಭ. ಯಾಂತ್ರಿಕ ಬದುಕಿನ ಸೋಗಿಗೆ ಮಕ್ಕಳು ಬಲಿಯಾಗುತ್ತಿದ್ದಾರೆ. ಲೋಕ ಹಿತದ ಕೆಲಸ ನಮ್ಮದಾಗಲಿ. ಒಳ್ಳೆಯ ಮನಸ್ಸು ಭಾವನೆ ಇದ್ದೆಡೆ ಯಶಸ್ಸು ಹೆಚ್ಚು ಎಂದರು.
ಬಾಲಭೋಜನದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು. ಜಯಪ್ರಕಾಶ್ ಪಳ್ಳತ್ತಡ್ಕ ಹಾಗೂ ಹೊಸನಗರ ತಾಲೂಕಿನ ಕುಂಬಾರ ಸಂಘದ ಸದಸ್ಯರಿಂದ ಶ್ರೀಗಳಿಗೆ ಗೌರವಾರ್ಪಣೆ ನಡೆಯಿತು. ಇದೇ ಸಂದರ್ಭದಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ರಕ್ಷಣ್ ಡಿ. ಶೇಖರ ಅವರನ್ನು ಕ್ಷೇತ್ರದ ವತಿಯಿಂದ ಸನ್ಮಾನಿಸಲಾಯಿತು.
ಬೆಳ್ಳಿ ಹಬ್ಬದ ಸಮಿತಿಯ ಅಧ್ಯಕ್ಷರಾದ ಮೋನಪ್ಪ ಭಂಡಾರಿ, ತೆರಿಗೆ ಸಲಹೆಗಾರರಾದ ಕೃಷ್ಣ ಪುತ್ತೂರು, ಕೆನಡಾದ ಉದ್ಯಮಿ ಮಾದವ ಚೆಂಡ್ಲ, ಹೊಸನಗರ ತಾಲೂಕಿನ ಕುಂಬಾರ ಸಂಘದ ಸದಸ್ಯರಾದ ರಾಮಚಂದ್ರ ಹೊಸನಗರ, ಉದ್ಯಮಿ ಮಾಧವ ಕೊಟ್ಟಾರಿ , ಮುಂಬೈಯ ಉದ್ಯಮಿ ಅನಿಲ್ ತಿವಾರಿ, ಮಹಿಳಾ ಸಮಿತಿಯ ಗೌರವಾಧ್ಯಕ್ಷೆ ರೇವತಿ ಪೆರ್ನೆ ಮೊದಲಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಸಂತಿ ಶೆಟ್ಟಿ ಸನ್ಮಾನ ಪತ್ರ ವಾಚಿಸಿದರು. ಮಹಿಳಾ ಸಮಿತಿಯ ಅಧ್ಯಕ್ಷೆ ವನಿತಾ ವಿ. ಶೆಟ್ಟಿ ಸ್ವಾಗತಿಸಿದರು. ನಳಿನಿ ವಿಶ್ವಕರ್ಮ ಕಾರ್ಯಕ್ರಮ ನಿರೂಪಿಸಿದರು. ದೇವದಾಸ್ ಶ್ರೀಧಾಮ ವಂದಿಸಿದರು
ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ:
ಶ್ರೀ ಕ್ಷೇತ್ರದಲ್ಲಿ ಶ್ರೀ ವರಮಹಾಲಕ್ಷ್ಮೀ ವ್ರತಾಚರಣೆ ಬೆಳ್ಳಿಹಬ್ಬದ ಸಮಾರೋಪ ಸಮಾರಂಭದ ಅಂಗವಾಗಿ ಮುಂದಿನ ಮೂರು ದಿನಗಳ ಕಾಲ ನಡೆಯಲಿರುವ ಸಾಂಸ್ಕ್ರತಿಕ ಕಾರ್ಯಕ್ರಮವನ್ನು ಭಜನೆ ಹಾಡುವ ಮೂಲಕ ಶ್ರೀಗಳು ಉದ್ಘಾಟಿಸಿದರು.