ಧರ್ಮ ಸಂರಕ್ಷಣೆಗೆ ಧೈರ್ಯ, ಸಾಮರ್ಥ್ಯ, ದೃಢತೆ ಬೇಕು-ಕುಂಟಾರು ವಾಸುದೇವ ತಂತ್ರಿ
ಪುತ್ತೂರು: ಈಶ್ವರಮಂಗಲ ಶ್ರೀಪಂಚಲಿಂಗೇಶ್ವರ ದೇವಾಲಯದ ಆಶ್ರಯದಲ್ಲಿ ಶ್ರೀಪಂಚಲಿಂಗೇಶ್ವರ ಶ್ರೀವರಮಹಾಲಕ್ಷ್ಮೀ ಪೂಜಾ ಸಮಿತಿ ವತಿಯಿಂದ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆ ಈಶ್ವರಮಂಗಲ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿಗಳ ಮಾರ್ಗದರ್ಶನದಲ್ಲಿ ಸುಳ್ಯ ವೇ.ಮೂ.ನಾಗರಾಜ ಭಟ್‌ರವರ ನೇತೃತ್ವದಲ್ಲಿ ಪೂಜಾ ಕಾರ್ಯಕ್ರಮ ನಡೆಯಿತು. ಬೆಳಿಗ್ಗೆ 9ರಿಂದ ಸಂಕಲ್ಪ ವ್ರತಧಾರಣೆ, ಮಧ್ಯಾಹ್ನ ಮಹಾಪೂಜೆ ನಡೆಯಿತು. ಸುಮಾರು 845ರಷ್ಟು ಮಹಿಳೆಯರು ಸಾಮೂಹಿಕ ವ್ರತ ಪೂಜೆ ಮಾಡಿಸಿದರು. ಮಹಿಳೆಯರು ವ್ರತಧಾರಿಗಳಾಗಿ ವರಮಹಾಲಕ್ಷ್ಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಧಾರ್ಮಿಕ ಸಭಾ ಕಾರ್ಯಕ್ರಮ, ಸನ್ಮಾನ:
ಪೂಜಾ ಕಾರ್ಯಕ್ರಮ ಬಳಿಕ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಿತು. ಬ್ರಹ್ಮಶ್ರೀ ಕುಂಟಾರು ವಾಸುದೇವ ತಂತ್ರಿವರ್ಯರು ಧಾರ್ಮಿಕ ಸಭೆಯಲ್ಲಿ ಆಶೀರ್ವಚನ ನೀಡಿ ಪೂಜೆಯ ಪುಣ್ಯ ಕಾರ್ಯದಲ್ಲಿ ಭಾಗವಹಿಸಿದ್ದು ನನ್ನ ಭಾಗ್ಯ. ಸಂಕ್ರಮಣದ ಕಾಲದಲ್ಲಿ ಐಶ್ವರ್ಯದ ಅನುಗ್ರಹದ ಜೊತೆಗೆ ಧೈರ್ಯದ ಅನುಗ್ರಹ ಕೂಡ ಬೇಡಬೇಕು. ಮಾನಸಿಕ ಧೃಡತೆ, ಜ್ಞಾನ, ದೈಹಿಕ ಸಾಮರ್ಥ್ಯ ನಮಗೆ ಬೇಕು. ಇಲ್ಲದಿದ್ದರೆ ನಮ್ಮ ಧಾರ್ಮಿಕ ಪ್ರಜ್ಞೆಯನ್ನು ಸಂರಕ್ಷಿಸಿಕೊಳ್ಳಲು ಕಷ್ಟವಾಗಬಹುದು ಎಂದರು. ಇಂದು ಧರ್ಮ ರಕ್ಷಣೆಗೆ ಕ್ಲಿಷ್ಟಕರವಾದ ವಾತಾವರಣ ನಿರ್ಮಾಣವಾಗುತ್ತಿದೆ. ಆಚರಣೆಗಳಲ್ಲಿ ಎಲ್ಲರ ಮನಸ್ಸು ಐಕ್ಯತೆಯಲ್ಲಿರಬೇಕು. ಇದು ಪೂಜೆಗೆ ಮಾತ್ರ ಸೀಮಿತವಾಗಬಾರದು. ನಮ್ಮ ಧಾರ್ಮಿಕ ಆಚರಣೆ, ಅನುಷ್ಠಾನಗೊಳಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.ಎಲ್ಲರೂ ಧರ್ಮ ಸಂರಕ್ಷಣೆಗೆ ತೊಡಗಬೇಕು ಎಂದು ಹೇಳಿದರು.
ಮುಖ್ಯ ಅತಿಥಿ ಸುರುಳಿಮೂಲೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿ ಮಾತನಾಡಿ, ಎಲ್ಲರನ್ನು ಒಗ್ಗೂಡಿಸಿಕೊಂಡು ಕಾರ್ಯಕ್ರಮ ನಡೆಯುತ್ತಿರುವುದು ವಿಶೇಷವಾಗಿದೆ. ಪೂಜಾ ಕಾರ್ಯಕ್ರಮದ ಜೊತೆಗೆ ಸಾಧಕರನ್ನು ಹಾಗೂ ಸೈನಿಕರಂತೆ ಇರುವ ಮೆಸ್ಕಾಂ ಸಿಬ್ಬಂದಿಗಳನ್ನು ಸನ್ಮಾನಿಸಿರುವುದರಿಂದ ಈ ಕಾರ್ಯಕ್ರಮ ವಿಶೇಷವಾಗಿದೆ ಎಂದರು. ಪೂಜಾ ಸಮಿತಿಯ ಮುಂದಾಳು ಹಾಗೂ ಮಾರ್ಗದರ್ಶಕ ರವಿಕಿರಣ್ ಶೆಟ್ಟಿ ಮಾತನಾಡಿ, ಮಹಿಳೆಯರು ಮಹಿಳೆಯರಿಗಾಗಿ ಮಾಡುವ ಕಾರ್ಯಕ್ರಮ ಇದಾಗಿದೆ. ಸಾಧಕರನ್ನು ಹಾಗೂ ಉತ್ತಮ ಕೆಲಸಗಾರರನ್ನು ಗುರುತಿಸಿರುವುದು ಅತ್ಯಂತ ಸಂತೋಷ ತಂದಿದೆ ಎಂದರು. ಸನ್ಮಾನ ಸ್ವೀಕರಿಸಿದ ಮೆಸ್ಕಾಂ ಕಿರಿಯ ಇಂಜಿನಿಯರ್ ರಮೇಶ್ ಗೌಡ ಮಾತನಾಡಿ ಕಳೆದ 2 ತಿಂಗಳಿನಿಂದ ವಿಶ್ರಾಂತಿ ಇಲ್ಲದೆ ಮೆಸ್ಕಾಂ ಸಿಬ್ಬಂದಿಗಳು ಕೆಲಸ ನಿರ್ವಹಿಸಿದ್ದಾರೆ. ಸಾರ್ವಜನಿಕರು ಕೂಡ ಉತ್ತಮ ಸಹಕಾರ ನೀಡಿದ್ದಾರೆ. ಮೆಸ್ಕಾಂನವರನ್ನು ತೆಗಳುವವರೇ ಹೆಚ್ಚು ಆದರೆ ಇಂದು ಗುರುತಿಸಿ ಗೌರವಿಸಿರುವುದು ನಮಗೆ ಹೆಮ್ಮೆಯಾಗಿದೆ ಎಂದರು. ಪೂಜಾ ಸಮಿತಿ ಗೌರವಾಧ್ಯಕ್ಷೆ ಸರೋಜಿನಿ ವಿ. ನಾಗಪ್ಪಯ್ಯ ಪ್ರಾಸ್ತಾವಿಕ ಮಾತನಾಡಿ ಯಾವುದನ್ನು ನಾವು ಪಾಲನೆ, ಆಚರಣೆ ಮಾಡುತಿದ್ದೇವೆಯೋ ಅದುವೇ ಧರ್ಮ. 11 ವರ್ಷಗಳ ಹಿಂದೆ ಸಾಮೂಹಿಕ ಶ್ರೀವರಮಹಾಲಕ್ಷ್ಮೀ ಪೂಜೆ ಆರಂಭ ಗೊಂಡಿದೆ. ಮಹಿಳೆಯರ ಒಗ್ಗಟ್ಟಿನ ದುಡಿಮೆ, ಪುರುಷರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗುತ್ತಿದೆ. ಪೂಜೆಯೊಂದಿಗೆ ಹಲವಾರು ಚಟುವಟಿಕೆಗಳನ್ನು ಮಾಡುತ್ತಿದ್ದು ಸಾಧಕರಿಗೆ ಸನ್ಮಾನ ಮಾಡುತ್ತಿದ್ದೇವೆ. ಎಲ್ಲರನ್ನು ಲಕ್ಷ್ಮೀಯೂ ಹರಸಲಿ ಎಂದರು. ಅಧ್ಯಕ್ಷತೆ ವಹಿಸಿದ್ದ ಪೂಜಾ ಸಮಿತಿ ಅಧ್ಯಕ್ಷೆ ರೋಹಿಣಿ ಶಿವರಾಮ್ ಪೂಜಾರಿ ಮಾತನಾಡಿ ನನಗೆ ವಹಿಸಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿದ್ದೇನೆ. ದೇವರ ಆಶೀರ್ವಾದದಿಂದ ಕಾರ್ಯಕ್ರಮ ಯಶಸ್ವಿಯಾಗಿದೆ. ಶ್ರೀವರಮಹಾಲಕ್ಷ್ಮೀ ಧೈರ್ಯ ಮತ್ತು ಶಕ್ತಿಯನ್ನು ನೀಡಲಿ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.
ವೇ.ಮೂ. ಸುಳ್ಯ ನಾಗರಾಜ್ ಭಟ್, ಪೂಜಾ ಸಮಿತಿ ಖಜಾಂಜಿ ಕೋಮಲ ಕೃಷ್ಣಪ್ಪ ಗೌಡ ನೀರಳಿಕೆ ವೇದಿಕೆಯಲ್ಲಿ ಉಪಸ್ಥಿತರಿದ್ದರು. 100ಕ್ಕಿಂತ ಹೆಚ್ಚಿನ ಪೂಜಾ ರಶೀದಿ ಮಾಡಿಸಿದ ವಸಂತಿ ಪಟ್ರೋಡಿ ಹಾಗೂ ರೋಹಿಣಿ ಶಿವರಾಮ್ ಪೂಜಾರಿರವರನ್ನು ಸ್ಮರಣಿಕೆ ನೀಡಿ ಗೌರವಿಸಲಾಯಿತು. ಪೂಜಾ ಸಮಿತಿ ಕಾರ್ಯಾಧ್ಯಕ್ಷೆ ವಿನೋದ ಜಯರಾಮ್ ವರದಿ ವಾಚಿಸಿದರು. ಗಾಯತ್ರಿ, ರತಿ ರಮೇಶ್ ರೈ ಸನ್ಮಾನಿತರ ಪತ್ರ ವಾಚಿಸಿದರು. ಪೂಜಾ ಸಮಿತಿ ಸ್ಥಾಪಕಾಧ್ಯಕ್ಷೆ ಅಮಿತಾ ಸೀತಾರಾಮ ಮನೋಳಿತ್ತಾಯ ಪಂಚೋಡಿ ಸ್ವಾಗತಿಸಿ ಕಾರ್ಯದರ್ಶಿ ದೇವಿಪ್ರಶಾಂತಿ ವಿಶ್ವನಾಥ್ ಗೌಡ ಅಡ್ಡಂತಡ್ಕ ವಂದಿಸಿದರು. ನೆಟ್ಟಣಿಗೆ ಮುಡ್ನೂರು ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಾಮ ಮೇನಾಲ ಹಾಗೂ ಗಾಯತ್ರಿ ಚಂದ್ರಶೇಖರ್ ಕಾರ್ಯಕ್ರಮ ನಿರೂಪಿಸಿದರು.
ಶೈಕ್ಷಣಿಕ, ಕ್ರೀಡಾ, ಸಾಮಾಜಿಕ ಕ್ಷೇತ್ರದ ಸಾಧಕರಿಗೆ, ಮೆಸ್ಕಾಂ ಸಿಬ್ಬಂದಿಗಳಿಗೆ ಸನ್ಮಾನ
ಸಭಾ ಕಾರ್ಯಕ್ರಮದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು. 2023-24ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಗಳಿಸಿದ ನೆಟ್ಟಣಿಗೆ ಮುಡ್ನೂರು ಗ್ರಾಮದ ನಿವಾಸಿ, ಗಜಾನನ ಆ.ಮಾ.ಶಾಲಾ ವಿದ್ಯಾರ್ಥಿನಿ ಚಿಂತನಾ ಎ.ಆರ್., ರಾಷ್ಟ್ರಮಟ್ಟದ ಕಬಡ್ಡಿ ಕ್ರೀಡಾಪಟು ಪ್ರಣ್ವಿಕಾ ರೈ ಮುನ್ನಗದ್ದೆ ಹಾಗೂ ಘನತ್ಯಾಜ್ಯ ವಿಲೇವಾರಿ ಘಟಕದ ವಾಹನ ಚಾಲಕಿ ಶ್ರೀಮತಿರವರನ್ನು ಶಾಲು, ಹಾರ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ಸುರುಳಿಮೂಲೆ ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕ ದೇವಿಪ್ರಕಾಶ್ ಶೆಟ್ಟಿರವರನ್ನು ಸನ್ಮಾನಿಸಲಾಯಿತು.
ಮಳೆಗಾಳದಲ್ಲಿ ಉತ್ತಮ ಕಾರ್ಯನಿರ್ವಹಣೆ ಮಾಡಿದ ಮೆಸ್ಕಾಂನ ಕಿರಿಯ ಇಂಜಿನಿಯರ್ ರಮೇಶ್ ಕೆ., ಮೆಕ್ಯಾನಿಕ್ ನಾಗೇಶ್ ಕೆ.ಎಸ್., ಪವರ್‌ಮ್ಯಾನ್‌ಗಳಾದ ಗಂಗಾಧರ ಬಿ., ದಿಲೇಶ್ ಎಸ್., ಪಾಂಡಪ್ಪ ದೊಡ್ಡಮನಿ, ಸಹಾಯಕ ಮಾರ್ಗದಾಳು ಕಿರಣ್ ಆರ್., ಕಿರಿಯ ಮಾರ್ಗದಾಳುಗಳಾದ ರಫೀಕ್ ಅಕ್ಕೋಜಿ, ಸಂಪತ್ ಆರ್., ದರ್ಶನ್ ಹಿಪ್ಪರಗಿರವರನ್ನು ಶಾಲು, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು.
ಲಕ್ಷ್ಮೀಕಟಾಕ್ಷ ವಿಜೇತರ ಆಯ್ಕೆ
ಪೂಜಾ ರಶೀದಿ ಮಾಡಿಸಿ ಲಕ್ಷ್ಮೀಕಟಾಕ್ಷ ವಿಜೇತರಾಗುವ ಯೋಜನೆಯನ್ನು ಹಮ್ಮಿಕೊಂಡಿದ್ದು ಇದರ ಡ್ರಾ. ನಡೆಸಲಾಯಿತು. ಡ್ರಾ.ವಿಜೇತರಾಗಿ ಸಮತಾ ಪಿ. ಪುಳಿಮಾರಡ್ಕ(೬೨೭ ಸಂಖ್ಯೆ)ರವರು ಡ್ರಾ.ವಿಜೇತರಾಗಿ ಆಯ್ಕೆಗೊಂಡರು. ಡ್ರಾ.ವಿಜೇತರ ಪರವಾಗಿ ಅವರ ತಂದೆ ಉದಯಶಂಕರ ಭಟ್ ಪುಳಿಮಾರಡ್ಕರವರಿಗೆ ಬಹುಮಾನವಾಗಿ ಚಿನ್ನದ ಮೂಗುತಿ, ಬಳೆ, ಹಸಿರು ಸೀರೆ ಹಾಗೂ ಬಾಗಿನ ನೀಡಲಾಯಿತು.