ಬೆಟ್ಟಂಪಾಡಿ: ಸಾರ್ವಜನಿಕ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ ಶ್ರೀ ಕ್ಷೇತ್ರ ಬೆಟ್ಟಂಪಾಡಿ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಟ್ಟಂಪಾಡಿ ಇದರ ಆರನೇ ವರ್ಷದ ವರಮಹಾಲಕ್ಷ್ಮಿ ಪೂಜೆ ಹಾಗೂ ಧಾರ್ಮಿಕ ಸಭಾ ಕಾರ್ಯಕ್ರಮವು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿಯಲ್ಲಿ ಆ.16ರಂದು ಜರುಗಿತು. ವೇದಮೂರ್ತಿ ಶ್ರೀ ರಾಧಾಕೃಷ್ಣ ಭಟ್ ಕಕ್ಕೂರು ಪೂಜಾ ವಿಧಿ ವಿಧಾನ ನೆರವೇರಿಸಿದರು.
ಬಳಿಕ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಧಾರ್ಮಿಕ ಉಪನ್ಯಾಸ ನೀಡಿದ ವೆಂಕಟೇಶ ಅನಂತಾಡಿ ಇವರು ಮಾತನಾಡುತ್ತಾ, ಸನಾತನ ಹಿಂದೂ ಧರ್ಮದ ಸಂಸ್ಕಾರ ಸಂಸ್ಕೃತಿಗಳನ್ನು ಮಾತೆಯರು ಇನ್ನಷ್ಟು ಹೆಚ್ಚಿಸುವ ಪ್ರಯತ್ನ ಮಾಡುವಂತಾಗಲಿʼ ಎಂದರು.
ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ ಅಧ್ಯಕ್ಷೆ ಶ್ರೀಮತಿ ಸವಿತಾ ಚಂದ್ರನ್ ತಲೆಪಾಡಿ ಅಧ್ಯಕ್ಷತೆ ವಹಿಸಿದ್ದರು. ವೇದಮೂರ್ತಿ ರಾಧಾಕೃಷ್ಣ ಭಟ್ ಕಕ್ಕೂರು, ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ತಾಲೂಕು ಪಂಚಾಯತ್ ಪುತ್ತೂರು ಇದರ ಸಹಾಯಕ ನಿರ್ದೇಶಕರಾದ ಶ್ರೀಮತಿ ಶೈಲಜಾ ಭಟ್, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಬ್ಯಾಂಕ್ ಮಂಗಳೂರು ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬೆಟ್ಟಂಪಾಡಿ ವಲಯ ಮೇಲ್ವಿಚಾರಕ ಸೋಹನ್ ಗೌಡ, ಯಕ್ಷಗಾನ ಹಾಡು ಸುಗಮ ಸಂಗೀತ ಹಾಗೂ ಶಾಸ್ತ್ರೀಯ ಸಂಗೀತ ಕಲಾವಿದೆ ಕುಮಾರಿ ಸಮನ್ವಿ ಆರ್. ರೈ ನುಳಿಯಾಲು ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಮಹಾಲಿಂಗೇಶ್ವರ ದೇವಸ್ಥಾನ ಬೆಟ್ಟಂಪಾಡಿ ಇದರ ಅನುವಂಶಿಕ ಆಡಳಿತ ಮೊಕ್ತೇಸರ ವಿನೋದ್ ಕುಮಾರ್ ಬಲ್ಲಾಳ್ ಬೀಡು, ಮೊಕ್ತೇಸರ ವಿನೋದ್ ಕುಮಾರ್ ರೈ ಉಪಸ್ಥಿತರಿದ್ದರು.
ಶ್ರೀಮತಿ ಸುಮನ ಬಲ್ಲಾಳ್ ಹಾಗೂ ಶ್ರೀಮತಿ ಸುಲೋಚನಾ ರೈ ಕೊಮ್ಮಂಡ ಪ್ರಾರ್ಥಿಸಿದರು. ಕೋಶಾಧಿಕಾರಿ ಶ್ರೀಮತಿ ಶಕುಂತಲಾ ಎನ್. ಪೂಜಾರಿ ಸ್ವಾಗತಿಸಿ, ಲಕ್ಷ್ಮಿನಾರಾಯಣ ರೈ ಡೆಮ್ಮಂಗರ ವಂದಿಸಿದರು. ಕಾರ್ಯದರ್ಶಿ ಶ್ರೀಮತಿ ಅನನ್ಯ ಕೆ. ಶೆಟ್ಟಿ ಕೋರ್ಮಂಡ ವರದಿ ವಾಚನ ಮಾಡಿದರು. ಪ್ರಿಯದರ್ಶಿನಿ ವಿದ್ಯಾಸಂಸ್ಥೆ, ಬೆಟ್ಟಂಪಾಡಿಯ ಸಹ ಶಿಕ್ಷಕಿ ಶ್ರೀಮತಿ ಭವ್ಯ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಸಾರ್ವಜನಿಕ ಅನ್ನಸಂತರ್ಪಣೆ ನೆರವೇರಿತು.