ಕಡಬ: ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖೆಯಲ್ಲಿ ಭದ್ರತಾ ಸಿಬ್ಬಂದಿಯಾಗಿದ್ದ ಕೊಯಿಲ ಗ್ರಾಮದ ಕೆರೆಕೋಡಿ ನಿವಾಸಿ ವರದರಾಜ ಶೆಟ್ಟಿ(45ವ.)ಅವರು ಕೊಯಿಲ ಶಾಖೆಯ ಕೊಠಡಿಯಲ್ಲಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿ ಮೃತಪಟ್ಟ ಘಟನೆ ಆ.18ರಂದು ಬೆಳಿಗ್ಗೆ ನಡೆದಿದೆ.
ಕೆರೆಕೋಡಿ ನಿವಾಸಿ ಶಿವಪ್ಪ ಶೆಟ್ಟಿಯವರ ಪುತ್ರರಾಗಿರುವ ವರದರಾಜ ಶೆಟ್ಟಿ ಅವರು ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕೊಯಿಲ ಶಾಖೆಯಲ್ಲಿ 2014 ರಿಂದ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ಹಿಸಿಕೊಂಡಿದ್ದರು. ಇವರು ಪ್ರತಿದಿನ ರಾತ್ರಿ 8.೦೦ ಗಂಟೆಯಿಂದ ಬೆಳಿಗ್ಗೆ 6.೦೦ ಗಂಟೆಯವರೆಗೆ ಭದ್ರತಾ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಇದರ ಜೊತೆಗೆ ಕಳೆದ ನಾಲ್ಕು ವರ್ಷಗಳಿಂದ ಹಗಲು ವೇಳೆ ಮಾರಾಟ ಸಹಾಯಕರಾಗಿಯೂ ಕೆಲಸ ಮಾಡುತ್ತಿದ್ದರು. ಎಂದಿನಂತೆ ಆ.17ರಂದು ರಾತ್ರಿ 8.೦೦ ಗಂಟೆಗೆ ಕರ್ತವ್ಯಕ್ಕೆ ಆಗಮಿಸಿದ್ದವರು ಆ.18ರಂದು ಬೆಳಿಗ್ಗೆ ಶಾಖೆಯ ಕೊಠಡಿಯಲ್ಲಿ ಕುರ್ಚಿಯಲ್ಲಿ ಕುಳಿತ ಸ್ಥಿತಿಯಲ್ಲಿಯೇ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಕಡಬ ಸರಕಾರಿ ಆಸ್ಪತ್ರೆಗೆ ಕೊಂಡೊಯ್ದು ಮರಣೋತ್ತರ ಪರೀಕ್ಷೆ ಮಾಡಲಾಗಿದೆ. ವರದರಾಜ ಶೆಟ್ಟಿಯವರು ಆರೋಗ್ಯ ಸಮಸ್ಯೆಯಿಂದ ಮೃತಪಟ್ಟಿರಬಹುದು ಎಂದು ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೋಹರ ಪ್ರಕಾಶ್ ಅವರು ನೀಡಿದ ದೂರಿನಂತೆ ಕಡಬ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರು ತಂದೆ ಶಿವಪ್ಪ, ತಾಯಿ ಕಾವೇರಿ, ಪತ್ನಿ ರಾಜೀವಿ, ಪುತ್ರರಾದ ಸೂರಜ್,ಸುಕೇಶ್ ಅವರನ್ನು ಅಗಲಿದ್ದಾರೆ.
ಆಲಂಕಾರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಧರ್ಮಪಾಲ ರಾವ್, ಉಪಾಧ್ಯಕ್ಷ ಪ್ರದೀಪ್ ರೈ ಮನವಳಿಕೆ, ನಿರ್ದೇಶಕರು, ಸಿಬ್ಬಂದಿಗಳು ಸೇರಿದಂತೆ ಹಲವು ಮಂದಿ ಮೃತರ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.
ಇಂದು ರಜೆ:
ಭದ್ರತಾ ಸಿಬ್ಬಂದಿ ವರದರಾಜ್ ಶೆಟ್ಟಿಯವರ ಅಕಾಲಿಕ ಮರಣದ ಗೌರವಾರ್ಥವಾಗಿ ಆ.19ರಂದು ಸಂಸ್ಥೆಗೆ ರಜೆ ಇರುತ್ತದೆ ಎಂದು ಸಂಘದ ಮುಖ್ಯಕಾರ್ಯನಿರ್ವಹಣಾಧಿಕಾರಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.