ಪುತ್ತೂರು: ಸಿ ಎಂ ವಿರುದ್ಧ ಪ್ರಾಸಿಕ್ಯೂಶನ್ ತನಿಖೆಗೆ ಅನುಮತಿ‌ ನೀಡಿದ ರಾಜ್ಯಪಾಲರ ವಿರುದ್ಧ ಪ್ರತಿಭಟನೆ

0

ಪುತ್ತೂರು:ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಬಿ.ಎಂ.ಪಾರ್ವತಿ ಅವರು ಅಕ್ರಮವಾಗಿ 15 ನಿವೇಶನಗಳನ್ನು ಪಡೆದಿದ್ದಾರೆನ್ನಲಾಗುತ್ತಿರುವ ಪ್ರಕರಣಕ್ಕೆ ಸಂಬಂಧಿಸಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ವಿರುದ್ಧ ತನಿಖೆಗೆ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಅನುಮತಿ ನೀಡಿರುವುದನ್ನು ಖಂಡಿಸಿ ಹಾಗೂ ಬಿಜೆಪಿ-ಜೆಡಿಎಸ್ ಪಕ್ಷಗಳು ಮುಖ್ಯಮಂತ್ರಿ ಮೇಲೆ ಗೂಬೆ ಕೂರಿಸುವ ಮೂಲಕ ರಾಜಕಾರಣ ಮಾಡುತ್ತಿವೆ ಎಂದು ಆರೋಪಿಸಿ ಪುತ್ತೂರು ವಿಧಾನಸಭಾ ಕ್ಷೇತ್ರದ ಶಾಸಕ ಅಶೋಕ್ ಕುಮಾರ್ ರೈ ಅವರ ನೇತೃತ್ವದಲ್ಲಿ ಪುತ್ತೂರು ಮತ್ತು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರಸ್‌ನಿಂದ ಬೃಹತ್ ಪ್ರತಿಭಟನೆಯು ಆ.19ರಂದು ಸಂಜೆ ಪುತ್ತೂರು ತಾಲೂಕು ಆಡಳಿತ ಸೌಧದ ಮುಂದೆ ನಡೆಯಿತು.ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ರಾಜ್ಯಪಾಲರು, ಕೇಂದ್ರ ಸರ್ಕಾರ, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಘೋಷಣೆಗಳನ್ನು ಕೂಗಿಕೊಂಡು ತಾಲೂಕು ಆಡಳಿತ ಸೌಧದ ಮುಂಭಾಗ ಬಂದು ಅಲ್ಲಿ ಪ್ರತಿಭಟನಾ ಸಭೆ ನಡೆಸಿದರು.


ಯಾರು ಬಂದರೂ ಸಿದ್ದರಾಮಯ್ಯ ಅವರನ್ನು ಏನೂ ಮಾಡಲು ಸಾಧ್ಯವಿಲ್ಲ:
ಶಾಸಕ ಅಶೋಕ್ ಕುಮಾರ್ ರೈ ಅವರು ಮಾತನಾಡಿ ಸಿದ್ದರಾಮಯ್ಯ ಅವರ ವಿರುದ್ಧ ಮಾಡಿರುವ ಆರೋಪದ ಸತ್ಯಾಸತ್ಯತೆಯನ್ನು ಪ್ರತಿ ಜನರಿಗೆ ತಿಳಿಸುವ ಕೆಲಸ ಆಗಬೇಕಾಗಿದೆ.ಇದನ್ನು ಇಲ್ಲಿ ಹೇಳಿದರೆ ಸಾಲದು ಕಾರ್ಯಕರ್ತರು ಮನೆ ಮನೆಗೆ ತೆರಳಿ ಮಾಹಿತಿ ನೀಡಬೇಕು.ಇವತ್ತು ಸಿದ್ದರಾಮಯ್ಯ ಅವರಿಂದ ಕರ್ನಾಟಕದಲ್ಲಿ 5 ಗ್ಯಾರೆಂಟಿ ಯೋಜನೆ ಯಶಸ್ವಿಯಾಗಿ ನಡೆಯುತ್ತಿರುವಾಗ ಬಿಜೆಪಿ ಬಿಟ್ಟು ಎಲ್ಲರೂ ಕಾಂಗ್ರೆಸ್‌ನತ್ತ ನಡೆ ಹಾಕುತ್ತಾ ಇದ್ದಾರೆ.ಇದನ್ನು ಸಹಿಸಲಾಗದ ಬಿಜೆಪಿ ಅಡ್ಡದಾರಿ ಹಿಡಿದಿದೆ.ಸಿದ್ದರಾಮಯ್ಯ ಅವರನ್ನು ಹೀಗೆ ಬಿಟ್ಟರೆ ಇನ್ನು ನಮಗೆ ಉಳಿಗಾಲವಿಲ್ಲ ಎಂದು ಏನಾದರೂ ಇದೆಯಾ ಎಂದು ಹುಡುಕಾಡುತ್ತಿದ್ದಾರೆ.ಅದಕ್ಕಾಗಿ ಈ ಮುಡಾದ ಕೇಸನ್ನು ಹಿಡಿದುಕೊಂಡು ಬಂದಿದ್ದಾರೆ.ಅಬ್ರಾಹಂ ಅನ್ನುವ 420ಯನ್ನು ಸೃಷ್ಟಿ ಮಾಡಿ ಅವರ ಮೂಲಕ ಕೇಸು ಕೊಟ್ಟಿದ್ದಾರೆ.ಈ ಹಿಂದೆ ಕುಮಾರ ಸ್ವಾಮಿ ಕೂಡಾ ಸೈಟ್ ಮಾಡಿದ್ದಾರೆ.ಅವರ ಮೇಲೂ ಕೇಸ್ ಮಾಡಿ ಎಂದು ಆಗ್ರಹಿಸಿದರು.ಇನ್‌ಕಮ್ ಟ್ಯಾಕ್ಸ್, ಇಡಿ, ಸುಪ್ರೀಂ ಕೋರ್ಟ್ ಆಡಳಿತದ ಮೇಲೆ ರಾಜಕೀಯ ಪ್ರವೇಶ ಮಾಡಿದರೆ ಏನಾದೀತು ಎಂದು ಯೋಚಿಸಿ ಎಂದ ಅವರು, ನನ್ನ ಮೇಲೂ ಸುಮ್ಮನೆ ರೈಡ್ ಮಾಡಿಸಿದ್ದರು.ಬಿಜೆಪಿಯವರು ಕೇವಲ ಕಾಂಗ್ರೆಸ್‌ನವರ ಮೇಲೆ ಮಾತ್ರವಲ್ಲ ಬಿಜೆಪಿಯಲ್ಲಿದ್ದು ಏನಾದರೂ ಸ್ವಲ್ಪ ಮಾತನಾಡಿದರೆ ಅವರನ್ನೂ ಒಳಗೆ ಹಾಕುವ ಕೆಲಸ ಮಾಡುತ್ತಾರೆ.ಹೀಗೆ ಅವರು ಪಕ್ಷವನ್ನೇ ಸರ್ವನಾಶ ಮಾಡಿಕೊಳ್ಳುತ್ತಿದ್ದಾರೆ ಎಂದರು.ರಾಜ್ಯಪಾಲರ ನಿರ್ಧಾರ ಕಾನೂನು ಬಾಹಿರವಾಗಿದೆ.ನಾವು 136 ಮಂದಿ ಶಾಸಕರು ಹೋಗಿ ಸಿದ್ದರಾಮಯ್ಯ ಅವರ ಕೈ ಗಟ್ಟಿ ಮಾಡುತ್ತೇವೆ ಎಂದು ಹೇಳಿದ ಅಶೋಕ್ ಕುಮಾರ್ ರೈ,ರಾಜ್ಯಪಾಲರು ಆದೇಶವನ್ನು ಹಿಂಪಡೆಯಬೇಕು ಎಂದರಲ್ಲದೆ,ಯಾರು ಬಂದರೂ ಸಿದ್ದರಾಮಯ್ಯ ಅವರನ್ನು ಏನೂ ಮಾಡಲು ಆಗುವುದಿಲ್ಲ ಎಂದು ಹೇಳಿದರು.


ರಾಜ್ಯಪಾಲರ ಕಚೇರಿ ಬಿಜೆಪಿ ಕಚೇರಿಯಾಗಿದೆ:
ಜಿ.ಪಂ ಮಾಜಿ ಉಪಾಧ್ಯಕ್ಷ ಎಮ್.ಎಸ್.ಮಹಮ್ಮದ್ ಅವರು ಮಾತನಾಡಿ ಭ್ರಷ್ಟಾಚಾರ ರಹಿತವಾಗಿ ಆಡಳಿತಕೊಟ್ಟ ಹಿರಿಯ ಮುತ್ಸದ್ದಿ ಇದ್ದರೆ ಅದು ನಮ್ಮ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು.ಇದನ್ನು ಬಿಜೆಪಿಯ ಕೋಮುವಾದಿಗಳಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ.ಇದರಲ್ಲೂ ದೊಡ್ಡ ಕೋಮುವಾದಿ ಕುಮಾರಸ್ವಾಮಿಯವರು ಸಿದ್ದರಾಮಯ್ಯ ಅವರ ವಿರುದ್ಧ ಇಲ್ಲಸಲ್ಲದ ಹುರುಳಿಲ್ಲದ ಆರೋಪ ಮಾಡಿದ್ದಾರೆ.ನ್ಯಾಯಯುತವಾಗಿ ಮೂಡಾದಿಂದ ನಿವೇಶನ ಪಡೆದರೆ ಅಂಥವರ ಮೇಲೆ ಗೂಬೆ ಕೂರಿಸುವ ಕೆಲಸ ಮಾಡಿದ್ದಾರೆ.40 ಪರ್ಸೆಂಟ್ ತಿಂದು ತೇಗಿದ ಬಿಜೆಪಿಯವರಿಗೆ ಸಿದ್ದರಾಮಯ್ಯರವರ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ.ರಾಜ್ಯಪಾಲರ ಕಚೇರಿ ಇವತ್ತು ಬಿಜೆಪಿಯ ಕಚೇರಿಯಾಗಿದೆ.ಅಲ್ಲಿ ನರೇಂದ್ರ ಮೋದಿ, ಅಮಿತ್ ಶಾ ಅವರ ಕಚೇರಿಯೂ ಆಗಿದೆ.ಒಂದು ವೇಳೆ ಬಿಜೆಪಿಯವರ ಭ್ರಷ್ಟಾಚಾರದ ಕುರಿತು ತನಿಖೆ ಮಾಡಿದರೆ ಎಲ್ಲರೂ ಸೆರೆಮನೆ ಸೇರಬೇಕಾದೀತು.ಉದಾಹರಣೆಗೆ ಶೋಭಕ್ಕ ಎಲ್ಲಿದ್ದರು, ಈಗ ಏನಾಗಿದ್ದಾರೆ.ಜೇಡಿಎಸ್‌ನ ಹಿರಿಯರು ಎಂದೆನಿಸಿಕೊಂಡ ದೇವೇಗೌಡರು ಕಾಂಗ್ರೆಸ್ ಬೆಂಬಲದಿಂದ ಪ್ರಧಾನಿಯಾಗಿರುವುದು ಎನ್ನುವುದು ನೆನಪಿರಲಿ ಎಂದರು.ಇವತ್ತು ಅನಾಚಾರ, ಅತ್ಯಾಚಾರ, ಭ್ರಷ್ಟಾಚಾರ ಎಲ್ಲವೂ ಬಿಜೆಪಿ ಮಾಡುತ್ತಿದೆ.82 ವರ್ಷದ ವ್ಯಕ್ತಿ ಪೋಕ್ಸೋ ಕಾಯ್ದೆಯ ಮೂಲಕ ಯಾವಾಗ ಜೈಲಿಗೆ ಹೋಗುತ್ತಾರೋ ಗೊತ್ತಿಲ್ಲ.ಕಾಂಗ್ರೆಸ್ ಬ್ರಿಟೀಷರ ವಿರುದ್ಧ ಹೋರಾಡಿದ ಗಾಂಧಿ ಪೀಳಿಗೆಯವರು. ನಮ್ಮಲ್ಲಿ ಅಹಿಂಸಾ ತತ್ವ ಇದೆ.ಆದರೆ ಬಿಜೆಪಿಯವರು ಮಿತಿ ತಪ್ಪಿದರೆ ನಮ್ಮ ಮಿತಿಯೂ ತಪ್ಪುತ್ತದೆ.ಕಾಂಗ್ರೆಸ್ ಸರಕಾರ ಅಸ್ಥಿರಗೊಳಿಸುವ ಪ್ರಯತ್ನ ಮಾಡಿದರೆ ನೀವು ಶಾಶ್ವತ ಅಸ್ಥಿರಗೊಳ್ಳುತ್ತೀರಿ ಎಂದು ಎಚ್ಚರಿಸಿದರು.


ಪಿತೂರಿಯನ್ನು ನಿಲ್ಲಿಸದಿದ್ದಲ್ಲಿ ರಾಜ್ಯದಲ್ಲಿ ನಡೆಯುವ ಅಶಾಂತಿಗೆ ನೀವೇ ಕಾರಣರಾಗುತ್ತೀರಿ:
ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ ಮೂಡ ಸ್ವಾಽನ ಮಾಡಿಕೊಂಡ ಜಮೀನಿಗೆ ಬದಲಾಗಿ ಶೇ.೫೦ ಬೇರೆ ಜಮೀನು ಕೊಟ್ಟಿರುವುದು ಹೊರತು ಯಾವುದೇ ಕಾರಣಕ್ಕೂ ಸಿದ್ದರಾಮಯ್ಯ ಅವರು ಅನ್ಯಾಯ ಮಾಡಿಲ್ಲ.ಆದರೆ ಬಿಜೆಪಿಯವರು ಮೊಸರಿನಲ್ಲಿ ಕಲ್ಲು ಹುಡುಕುವ ಕೆಲಸ ಮಾಡುತ್ತಿದ್ದಾರೆ.೧೩ ಬಾರಿ ಬಜೆಟ್ ಮಂಡಿಸುವಾಗಲೂ ಒಂದೇ ಒಂದು ಅಪಾದನೆ ಇಲ್ಲದ ಸಿದ್ದರಾಮಯ್ಯ ಅವರ ಮೇಲೆ ಇವತ್ತು ಬಿಜೆಪಿಯವರು ಸುಳ್ಳು ಆರೋಪ ಮಾಡುತ್ತಿದ್ದಾರೆ.ಗ್ಯಾರೆಂಟಿ ಯೋಜನೆಯ ಮೂಲಕ ಪುತ್ತೂರಿನಲ್ಲಿ ೧೪೯.೪೮ ಕೋಟಿಯನ್ನು ಈಗಾಗಲೇ ಜನರಿಗೆ ಮುಟ್ಟಿಸುವ ಕೆಲಸ ಆಗಿದೆ.ಸಿದ್ದರಾಮಯ್ಯ ಅವರು ಇಡೀ ೧ ವರ್ಷದ ಬಜೆಟ್‌ನ್ನು ಜನಸಾಮಾನ್ಯರಿಗೆ ಕೊಡುವ ಮುಖ್ಯಮಂತ್ರಿಯಾಗಿ ಕಾಣಿಸಿಕೊಂಡಿದ್ದಾರೆ.ಇಂತಹ ಸಿದ್ದರಾಮಯ್ಯ ಅವರ ಮೇಲೆ ಸುಳ್ಳು ಆಪಾದನೆ ಮಾಡುವ ಪ್ರಯತ್ನ ಬಿಜೆಪಿಯವರು ಮಾಡುತ್ತಲೇ ಬಂದರು.ಶಾಸಕರನ್ನು ಖರೀದಿಸುವ ಪ್ರಯತ್ನ ಮಾಡಿದರು ಆದು ಆಗಲಿಲ್ಲ.ಕೊನೆಗೆ ಕರ್ನಾಟಕದಲ್ಲಿ ಅದು ನಡೆಯುವುದಿಲ್ಲ ಎಂದು ಮೋದಿ ಮತ್ತು ಅಮಿತ್ ಶಾ ರಾಜ್ಯಪಾಲರನ್ನು ಉಪಯೋಗಿಸಿ ಮುಖ್ಯಮಂತ್ರಿಗಳ ಮೇಲೆ ಆಪಾದನೆ ಹೊರಿಸಿದರು.ನಿಮ್ಮ ಪಿತೂರಿಯನ್ನು ನಿಲ್ಲಿಸಿ. ಇಲ್ಲವಾದಲ್ಲಿ ರಾಜ್ಯದಲ್ಲಿ ನಡೆಯುವ ಅಶಾಂತಿಗೆ ನೀವೇ ಕಾರಣರಾಗುತ್ತೀರಿ ಎಂದು ಎಚ್ಚರಿಕೆ ನೀಡಿದರು.


ರಾಜ್ಯಪಾಲರನ್ನು ರಾಜ್ಯದಿಂದ ಎತ್ತಂಗಡಿ ಮಾಡಬೇಕು:
ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜಾರಾಮ್ ಕೆ.ಬಿ.ಅವರು ಮಾತನಾಡಿ ರಾಜ್ಯದಲ್ಲಿ ಮುದಿ ಗೂಬೆ ಯಡಿಯೂರಪ್ಪ, ಅವರ ಪುತ್ರ ವಿಜಯೇಂದ್ರ ಒಂದು ಜಾತಿಯಾದರೆ ಕುಮಾರ ಸ್ವಾಮಿ ಕಂದಡಿ ಜಾತಿಯವರು.ಯಾಕೆಂದರೆ ಈಗಾಗಲೇ ಕುಮಾರಸ್ವಾಮಿಯವರನ್ನು ಪ್ಯಾಚ್‌ವರ್ಕ್ ಮಾಡಿದ್ದಾರೆ.ಕಂದಡಿ ಯಾವಾಗ ತನ್ನ ವಿಷ ಬಿಡುತ್ತದೆ ಎಂಬುದು ಗೊತ್ತಿಲ್ಲ. ಇವತ್ತು ಬಡವರ ಆಶಾಕಿರಣ ಸಿದ್ಧರಾಮಯ್ಯ ಅವರ ಮೇಲೆ ಗೂಬೆ ಕೂರಿಸುವ ಕೆಲಸವನ್ನು ಬಿಜೆಪಿ ಮಾಡುತ್ತಿದೆ.ಆದರೆ ಬಿಜೆಪಿಯವರಿಗೆ ಅನಿಷ್ಠ ಬರಲಿದೆ.ಅವರಿಗೆ ಅನಿಷ್ಠವಾಗಿ ಕುಮಾರಸ್ವಾಮಿಯವರೇ ಸಾಕು ಎಂದು ಹೇಳಿ,ರಾಜ್ಯಪಾಲರನ್ನು ರಾಜ್ಯದಿಂದಲೇ ಎತ್ತಂಗಡಿ ಮಾಡಬೇಕು ಎಂದರು.


ಸುಪ್ರೀಂ ಕೋರ್ಟ್ ಮಧ್ಯಪ್ರವೇಶಿಸಬೇಕು:
ಪುತ್ತೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಬಿ.ವಿಶ್ವನಾಥ ರೈ ಅವರು ಮಾತನಾಡಿ ಕೇಂದ್ರ ಸರಕಾರ ಕೆಲಸಕ್ಕೆ ಬಾರದವರನ್ನು ರಾಜ್ಯಪಾಲರನ್ನಾಗಿ ಮಾಡಿದೆ.ಹಾಗಾಗಿ ರಾಜ್ಯಪಾಲರು ಕೇಂದ್ರ ಸರಕಾರದ ಋಣ ತೀರಿಸುವ ಕೆಲಸ ಮಾಡುತ್ತಿದ್ದಾರೆ.ಅಬ್ರಾಹಂ ಕೊಟ್ಟ ಕೇಸನ್ನು ಪರಿಶೀಲನೆ ಮಾಡದೆ ತಕ್ಷಣ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವುದು ಯಾವ ನ್ಯಾಯ?. ಮೂಡಾದಿಂದ ಸೈಟ್ ಪ್ರಕರಣದ ಸುಳ್ಳು ಆರೋಪದಲ್ಲಿ ಸಿದ್ದರಾಮಯ್ಯ ಅವರ ಸಹಿ ಇಲ್ಲ. ಶಿ-ರಸ್ಸು ಕೂಡಾ ಇಲ್ಲ.ಆಗ ಮುಖ್ಯಮಂತ್ರಿಯಾಗಿದ್ದದ್ದು ಬಸವರಾಜ ಬೊಮ್ಮಾಯಿ. ಆದರೆ ಸ್ವಾಭಾವಿಕವಾಗಿ ಅದನ್ನು ಭ್ರಷ್ಟಾಚಾರ ಎಂದು ಬಿಂಬಿಸುವ ಕೆಲಸ ಆಗುತ್ತಿದೆ.ಹಾಗಾಗಿ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಬೇಕೆಂದು ಆಗ್ರಹಿಸಿದರು.

ರಾಜ್ಯಪಾಲರು ಪೈಪ್ ಮಾರಾಟಕ್ಕೆ ಹೋಗಲಿ-ಮಹಮ್ಮದ್ ಬಡಗನ್ನೂರು:
ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು ಅವರು ಕಾರ್ಯಕ್ರಮ ನಿರೂಪಿಸಿ ಮಾತನಾಡಿ ರಾಜ್ಯಪಾಲರು ಗುಜರಾತಿನಲ್ಲಿ ಪೈಪ್ ಮಾರಾಟ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.ಹಾಗಾಗಿ ಅವರು ಗುಜರಾತಿಗೆ ಪೈಪ್ ಮಾರಾಟ ಮಾಡಲು ಹೋಗಲಿ ಎಂದರು.


ತಾಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ಉಮಾನಾಥ್ ಶೆಟ್ಟಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಕೃಷ್ಣಪ್ರಸಾದ್ ಆಳ್ವ,ಕೆಪಿಸಿಸಿ ವಕ್ತಾರ ಅಮಳ ರಾಮಚಂದ್ರ, ರೋಶನ್ ರೈ, ಮುರಳೀಧರ ರೈ ಮಠಂತಬೆಟ್ಟು, ಚಂದ್ರಹಾಸ ಶೆಟ್ಟಿ, ಚಂದ್ರಹಾಸ ರೈ ಬೋಳೋಡಿ, ಲ್ಯಾನ್ಸಿ ಮಸ್ಕರೇನಸ್, ಅನ್ವರ್ ಖಾಸಿಂ, ರವಿಪ್ರಸಾದ್ ಶೆಟ್ಟಿ, ಶ್ರೀಪ್ರಸಾದ್ ಪಾಣಾಜೆ, ದಾಮೋದರ್ ಭಂಡಾರ್ಕರ್, ವೇದನಾಥ ಸುವರ್ಣ, ಅಭಿಷೇಕ್, ನಿಹಾಲ್ ಶೆಟ್ಟಿ, ಸುದೇಶ್ ಶೆಟ್ಟಿ, ಕೋಡಿಂಬಾಡಿ ಗ್ರಾ.ಪಂ ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು, ಅನಿಮಿನೇಜಸ್, ಮೋನು ಬಪ್ಪಳಿಗೆ, ಅದ್ದು ಪಡೀಲ್, ಮೌರಿಸ್ ಮಸ್ಕರೇನಸ್, ಸುಮಂತ್ ಕಂಬಳಬೆಟ್ಟು, ಅಖಿಲ್ ಕಲ್ಲಾರೆ, ಪ್ರಶಾಂತ್ ಸಾಮೆತ್ತಡ್ಕ, ಸಂತೋಷ್ ಭಂಡಾರಿ ಚಿಲ್ಮೆತ್ತಾರು, ಫಾರೂಕ್ ಬಾಯಬ್ಬೆ,ಫಾರೂಕ್ ಪೆರ್ನೆ, ಅಸ್ಮಾ ಗಟ್ಟಮನೆ, ವಿಜಯಲಕ್ಷ್ಮೀ, ಅವಿನಾಶ್ ಕುಡ್ಚಿಲ, ಸತೀಶ್ ನಿಡ್ಪಳ್ಳಿ, ಇಸ್ಮಾಯಿಲ್ ಗಟ್ಟಮನೆ, ಬಶೀರ್ ಕೊಲ್ಲೆಜಾಲು ಸಹಿತ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

ನಮ್ಮವರು ಹೇಳುತ್ತಾರೆ ಹೊರತು ಮಾಡುವುದಿಲ್ಲ
ಬಿಜೆಪಿಯವರ ಅನೇಕ ಭ್ರಷ್ಟಾಚಾರಗಳು ನಮ್ಮ ಮುಂದಿದೆ.ಅದನ್ನು ತನಿಖೆ ಮಾಡಬೇಕು.ಆದರೆ ನಮ್ಮವರು ಹೇಳುತ್ತಾರೆ ಹೊರತು ಮಾಡುವುದಿಲ್ಲ ಯಾಕೆಂದು ನಮ್ಮ ಕಾರ್ಯಕರ್ತರ ಪ್ರಶ್ನೆ. ಅವರ ಮೇಲೆ ಏನೆಲ್ಲ ಆಪಾದನೆ ಇದೆ.ಅವೆಲ್ಲವನ್ನು ಹೊರಗೆ ತರಬೇಕು.ಕಳೆದ ಅವಽ,ಅದರ ಹಿಂದಿನ ಅವಧಿಯಲ್ಲೂ ಇವರ ಮೇಲೆ ಬಹಳ ದೊಡ್ಡ ದೊಡ್ಡ ಅಪಾದನೆ ಇತ್ತು.ಅವರನ್ನೆಲ್ಲ ಜೈಲಿಗೆ ಕಳುಹಿಸಿದರೆ ಅವರ ಆಟ ಎಲ್ಲ ನಿಲ್ಲುತ್ತದೆ.ಇವರು ಹೇಳುತ್ತಾರೆ ಮಾಡುವುದಿಲ್ಲ.ಯಾಕೆ ಮಾಡುವುದಿಲ್ಲ ಎಂದು ಗೊತ್ತಾಗುತ್ತಿಲ್ಲ.ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ನಾವು ಈ ಕುರಿತು ತನಿಖೆಗೆ ಪಕ್ಷದ ನಾಯಕರಿಗೆ ಒತ್ತಾಯ ಮಾಡುತ್ತಿದ್ದೇವೆ -ಹೇಮನಾಥ ಶೆಟ್ಟಿ ಕಾವು

ಬಿಜೆಪಿಯವರು ಚಿಕ್ಕ ವಿಚಾರ ಹಿಡಿದು ಯಶಸ್ವಿಯಾಗುತ್ತಾರೆ
ಬಿಜೆಪಿ ಪಕ್ಷದವರು ಚಿಕ್ಕ ವಿಚಾರವಿದ್ದರೆ ಅದಕ್ಕೆ ಪ್ರತಿಭಟನೆ ಮಾಡಿ ಮನೆ ಮೆನೆಗೆ ಹೋಗಿ ತಿಳಿಸುವ ಕೆಲಸ ಮಾಡುತ್ತಾರೆ.ಇದರಲ್ಲಿ ಯಶಸ್ವಿಯೂ ಆಗಿದ್ದಾರೆ.ಕಾಂಗ್ರೆಸ್ ಪಕ್ಷದ ನಾವು ಕಾರ್ಯಕರ್ತರು ಕೂಡಾ ನಮ್ಮ ವಿಚಾರವನ್ನು ಸಿದ್ಧರಾಮಯ್ಯ ಅವರ ವಿರುದ್ಧ ಸುಳ್ಳು ಕೇಸು ದಾಖಲಿಸಲು ಪ್ರಯತ್ನ ಮಾಡುತ್ತಿರುವ ಕುರಿತು ಸತ್ಯಾಸತ್ಯತೆಯನ್ನು ಪ್ರತಿ ಜನರಿಗೆ ತಿಳಿಸುವ ಪ್ರಯತ್ನ ಮಾಡಬೇಕು.ಇದನ್ನು ಕೇವಲ ಹೋರಾಟ ಮಾಡಿದರೆ ಸಾಲದು. ನಮ್ಮ ಕಾರ್ಯಕರ್ತರು ಮನೆ ಮನೆಗೆ ತಮ್ಮ ವಾರ್ಡ್‌ನಲ್ಲಿ ಬೂತ್‌ನಲ್ಲಿ ಎಲ್ಲರಿಗೂ ತಿಳಿಸುವ ಅವಶ್ಯಕತೆ ಇದೆ. ಇವತ್ತು ನೀಟ್ ಪರೀಕ್ಷೆಯಲ್ಲಿ ಪ್ರಶ್ನೋತ್ತರ ಪರೀಕ್ಷೆ ಸೋರಿಕೆಯಾಯಿತು. ಆದರೆ ಈ ಕುರಿತು ಯಾರೂ ಕೂಡಾ ಮಾತನಾಡಿಲ್ಲ.ಒಂದು ಸಾವಿರ ಕೋಟಿ ಹಗರಣ ಇದ್ದರೂ ಬಿಜೆಪಿಯವರು ಸುಮ್ಮನೆ ಇದ್ದರು.ಎಲ್ಲಾದರೂ ಕೇಂದ್ರದಲ್ಲಿ ನಮ್ಮ ಸರಕಾರ ಇರುತ್ತಿದ್ದರೆ ರಸ್ತೆ ರಸ್ತೆಯಲ್ಲಿ ಕೂತು ಹೋರಾಟ, ಮನೆಮನೆಗೆ ಹೇಳುವ ಕೆಲಸ ಮಾಡುತ್ತಿದ್ದರು.ಬೇರೆ ರಾಜ್ಯದಲ್ಲಿ ಬಿಜೆಪಿಯೇತರ ಸರಕಾರ ಇದ್ದಲ್ಲಿ ಅಲ್ಲಿ ಯಾವುದೋ ಒಂದು ವಿಚಾರ ತೆಗೆದುಕೊಂಡು ಹೋರಾಟ ಮಾಡುವುದು ಬಿಜೆಪಿಯವರ ಕೆಲಸ ಆಗಿದೆ.ಈ ಕುರಿತು ನಮ್ಮ ಕಾರ್ಯಕರ್ತರು ಜಾಗೃತಿಯಾಗಬೇಕು
-ಅಶೋಕ್ ಕುಮಾರ್ ರೈ ಶಾಸಕರು ಪುತ್ತೂರು

ನಾನು ದೊಡ್ಡ ಮನೆ ಕಟ್ಟುತ್ತಾ ಇದ್ದೇನೆ ಸ್ವಾಮಿ
ಮುಖ್ಯಮಂತ್ರಿಯಾದವರು ಯಾರು ಕೂಡಾ ಹೆಂಡತಿಗೆ ಸೈಟ್ ಕೊಡಲಿಕ್ಕಿಲ್ಲವ.ನಾನು ನನ್ನ ಹೆಂಡತಿಗೆ ಬಂಗಾರ ಕೊಡುವುದು ಬೇಡವಾ?ನಾನು ಮನೆ ಕಟ್ಟುತ್ತಾ ಇದ್ದೇನೆ ಸ್ವಾಮಿ.ಇವತ್ತು ಮಾಧ್ಯಮದವರಿದ್ದೀರಿ.ಶಾಸಕನಾದ ಮೇಲೆ ಕಟ್ಟಿದ್ದು ಎನಿಸಬೇಡಿ.ನಾನು ಮನೆ ಕಟ್ಟಲು ಆರಂಭಿಸಿ ನಾಲ್ಕು ವರ್ಷ ಆಯಿತು.ಬಿಜೆಪಿಯವರು ಹೇಗೆ ಬೇಕಾದರೂ ಅದನ್ನು ತಿರುಗಿಸುತ್ತಾರೆ.ನಾಳೆ ಗೃಹಪ್ರವೇಶಕ್ಕೆ ಅವರೇ ಬರುತ್ತಾರೆ.ಆಶೋಕ್ ರೈ ಅವರು ಕೋಟಿಗಟ್ಟಲೆ ದುಡ್ಡು ಮಾಡಿ ಮನೆ ಕಟ್ಟಿದ್ದಾರೆ ಎಂದು ಹೇಳುತ್ತಾರೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.

LEAVE A REPLY

Please enter your comment!
Please enter your name here