ನಿವ್ವಳ ಲಾಭ ರೂ.97,038, ಶೇ.10 ಡಿವಿಡೆಂಡ್, ಲೀ.0.38 ಪೈಸೆ ಬೋನಸ್
ಪುತ್ತೂರು: ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘದ 2023-24 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯು ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರುರವರ ಅಧ್ಯಕ್ಷತೆಯಲ್ಲಿ ಆ.20 ರಂದು ಕುಂಬ್ರ ನವೋದಯ ರೈತ ಸಭಾಭವನದಲ್ಲಿ ನಡೆಯಿತು. ಸಂಘದ 2023-24 ನೇ ಸಾಲಿನ ವಾರ್ಷಿಕ ವರದಿಯನ್ನು ಸಂಘದ ನಿರ್ದೇಶಕ ಕೆ.ದಿನೇಶ್ ರೈಯವರು ಸಭೆಯ ಮುಂದಿಟ್ಟರು. ಸಂಘದಲ್ಲಿ ಪ್ರಸ್ತುತ 134 ಮಂದಿ ಸದಸ್ಯರಿದ್ದು ರೂ.62 ಸಾವಿರ ಪಾಲು ಬಂಡವಾಳವಿದೆ. ಸಂಘವು ವರದಿ ಸಾಲಿನಲ್ಲಿ 42,79,573 ರೂಪಾಯಿಯ 1,23,659 ಲೀಟರ್ ಹಾಲು ಖರೀದಿಸಿರುತ್ತದೆ. ಇದಲ್ಲದೆ ಪಶು ಆಹಾರ, ಲವಣ ಮಿಶ್ರಣ ಮಾರಾಟ ಸೇರಿದಂತೆ ವ್ಯವಹಾರದಲ್ಲಿ ಒಟ್ಟು 6,12,576 ರೂಪಾಯಿ ಲಾಭ ಗಳಿಸಿರುತ್ತದೆ ಎಂದು ತಿಳಿಸಿದರು. ಇದರಲ್ಲಿ ಎಲ್ಲಾ ಖರ್ಚುಗಳನ್ನು ಕಳೆದು ಸಂಘವು ರೂ.97,038.67 ಲಾಭ ಗಳಿಸಿರುತ್ತದೆ ಎಂದು ತಿಳಿಸಿದರು. ಸಂಘವು ಲಾಭ ಗಳಿಸಿರುವುದರಲ್ಲಿ ಸದಸ್ಯರಿಗೆ ಶೇ.10 ಡಿವಿಡೆಂಡ್ ಹಾಗೂ ಲೀಟರ್‌ಗೆ 0.38 ಪೈಸೆ ಬೋನಸ್ ನೀಡುವುದು ಎಂದು ಅಧ್ಯಕ್ಷ ರಕ್ಷಿತ್ ರೈ ಮುಗೇರು ಘೋಷಿಸಿದರು. ಸಂಘದ ಸದಸ್ಯರ ಜಾನುವಾರುಗಳಿಗೆ ಶೇ.75 ರಿಯಾಯಿತಿ ದರದಲ್ಲಿ ವಿಮೆ ಮಾಡಿಸಲಾಗಿದೆ.ಜಾನುವಾರುಗಳಿಗೆ ಉಚಿತವಾಗಿ ರೋಗ ನಿರೋಧಕ ಚುಚ್ಚುಮದ್ದು ಲಸಿಕೆ ಕೊಡಲಾಗಿದೆ. ಕೃತಕ ಗರ್ಭದಾರಣೆ, ಪ್ರಥಮ ಚಿಕಿತ್ಸೆ, ಒಕ್ಕೂಟದಿಂದ ತುರ್ತು ವೈದ್ಯಕೀಯ ಸೌಲಭ್ಯಗಳನ್ನು ಒದಗಿಸಿಕೊಡಲಾಗಿದೆ.ಬಂಜೆತನ ನಿವಾರಣಾ ಶಿಬಿರಗಳನ್ನು ನಡೆಸಲಾಗಿದೆ.ಮಿನಿಡೈರಿ ಯೋಜನೆ ಹಾಗೂ ಮೇವು ಅಭಿವೃದ್ಧಿ ಯೋಜನೆಯಡಿ ಸಹಾಯಧನ ಒದಗಿಸಿಕೊಡಲಾಗಿದೆ. ಹೆಣ್ಣುಕರು ಸಾಕಾಣಿಕೆ ಯೋಜನೆಯಡಿ ಸದಸ್ಯರಿಗೆ ಉಚಿತವಾಗಿ ಕರುಗಳ ಪಶು ಆಹಾರ, ಜಂತು ಹುಳದ ಔಷಧಿ ನೀಡಲಾಗಿದೆ ಎಂದು ತಿಳಿಸಿದರು. ಎಲ್ಲಾ ಸದಸ್ಯರು ಸಂಘದಲ್ಲಿ ಸಿಗುವ ರಿಯಾಯಿತಿ ದರದ ಲವಣ ಮಿಶ್ರಣ, ಕಾಕಂಬಿ ಬಿಲ್ಲೆ, ಜಂತು ಹುಳದ ಔಷಧಿಗಳನ್ನು ಪಡೆದುಕೊಂಡು ಜಾನವಾರುಗಳಿಗೆ ಉಪಯೋಗಿಸಿಕೊಂಡು ಇದು ನಮ್ಮ ಸಂಘ ನಮ್ಮ ಸಂಪತ್ತು ಎಂಬ ಧ್ಯೇಯ ವಾಕ್ಯದೊಂದಿಗೆ ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವಂತೆ ವಿನಂತಿ ಮಾಡಿಕೊಳ್ಳಲಾಯಿತು.
ಅಧಿಕ ಹಾಲು ಹಾಕಿದ ಸದಸ್ಯರಿಗೆ ಬಹುಮಾನ ವಿತರಣೆ
22,068 ಲೀಟರ್ ಹಾಲು ಹಾಕಿದ ಸದಸ್ಯ ಸುಧಾಕರ ಶೆಟ್ಟಿಯವರು ಪ್ರಥಮ ಬಹುಮಾನ ಪಡೆದುಕೊಂಡರು, ದ್ವಿತೀಯ ಬಹುಮಾನವನ್ನು 8262 ಲೀಟರ್ ಹಾಲು ಹಾಕಿದ ದಿನೇಶ್ ಶೆಟ್ಟಿ ಪಡೆದುಕೊಂಡರೆ, ತೃತೀಯ ಬಹುಮಾನವನ್ನು 5588 ಲೀಟರ್ ಹಾಕಿದ ಅನಿತಾ ಕೆ ರೈಪಡೆದುಕೊಂಡರು. ಚತುರ್ಥ ಬಹುಮಾನವನ್ನು 5463 ಲೀಟರ್ ಹಾಲು ಹಾಕಿದ ವಸಂತ ಶೆಟ್ಟಿ ಪಡೆದುಕೊಂಡರೆ ಉಳಿದಂತೆ 4 ರಿಂದ 5 ಸಾವಿರ ಲೀಟರ್ ಹಾಕಿದವರಲ್ಲಿ ವಸಂತ ಮಣಿಯಾಣಿ, ಕೆ.ಸೀತಾರಾಮ ರೈ, 2 ರಿಂದ 3 ಸಾವಿರ ಲೀಟರ್‌ನಲ್ಲಿ ದಿನೇಶ್ ರೈ ಕೆ, ಉಷಾ ನಾರಾಯಣ ಗೌಡ, ಅಶೋಕ್ ಪೂಜಾರಿ, ಸತೀಶ್ ಕೆ,ಸುಪ್ರೀತ್ ಕೆರವರುಗಳು ಬಹುಮಾನ ಪಡೆದುಕೊಂಡರು.
ಮುಖ್ಯ ಅತಿಥಿಯಾಗಿದ್ದ ದ.ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪ ವ್ಯವಸ್ಥಾಪಕರಾ ಡಾ.ಡಿ.ಆರ್.ಸತೀಶ್ ರಾವ್‌ರವರು ಮಾತನಾಡಿ, ಹಾಲಿನ ದರದಲ್ಲಿ ಡೈರಿಯಿಂದ ಹೈನುಗಾರರಿಗೆ ಕೊಡುವ ಹಾಲಿನ ದರವು ದ.ಕ ಜಿಲ್ಲೆಯಲ್ಲೇ ಅತೀ ಹೆಚ್ಚು ಇದೆ. ಕನಿಷ್ಠ 35 ರೂಪಾಯಿಗಳನ್ನು ಕೊಡಲಾಗುತ್ತಿದೆ. ಇನ್ನು ಗುಣಮಟ್ಟದ ಹಾಲನ್ನು ಹಾಕಿದರೆ ಹೆಚ್ಚು ದರವನ್ನು ಕೊಡಲಾಗುತ್ತಿದೆ ಎಂದು ತಿಳಿಸಿದರು. ಹೈನುಗಾರಿಕೆ ಸ್ವಲ್ಪ ಕಷ್ಟ ಅಂತ ಅನ್ನಿಸಿದರು ಅದರಿಂದ ಲಾಭ ಖಂಡಿತ ಇದೆ. ರೈತರು ತಮ್ಮ ಜಾನುವಾರುಗಳಿಗೆ ಉತ್ತಮ ಗುಣಮಟ್ಟದ ಹಿಂಡಿ, ಹುಲ್ಲುಗಳನ್ನು ಕೊಡುವ ಮೂಲಕ ಗುಣಮಟ್ಟದ ಹಾಲನ್ನು ಪಡೆಯಲು ಸಾಧ್ಯವಿದೆ. ಪ್ರಸ್ತುತ ಹೆಚ್ಚು ಬೇಡಿಕೆ ಇರುವ ಗಿಣಿ ಹುಲ್ಲನ್ನು ತಾವುಗಳು ತಮ್ಮ ತೋಟಗಳಲ್ಲಿ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು. ಒಳಮೊಗ್ರು ಹಾಲು ಉತ್ಪಾದಕರ ಸಹಕಾರಿ ಸಂಘವು ಬಹಳ ಹಿಂದಿನ ಸಂಘವಾಗಿದ್ದು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಾ ಹೋಗುತ್ತಿದೆ ಎಂದು ಹೇಳಿ ಶುಭ ಹಾರೈಸಿದರು.
ಸಂಘದ ಕಾರ್ಯದರ್ಶಿ ಶೇಖರ್ ರೈಯವರು, ಮುಂದಿನ ಯೋಜನೆಗಳು ಹಾಗೂ ಸದಸ್ಯರಿಗೆ ಒಕ್ಕೂಟ ಹಾಗೂ ಸರಕಾರದಿಂದ ಸಿಗುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು.ವೇದಿಕೆಯಲ್ಲಿ ವೈದ್ಯಾಧಿಕಾರಿ ಡಾ.ಅನುದೀಪ್, ಸಂಘದ ನಿರ್ದೇಶರಕರುಗಳಾದ ಮೋಹನ್‌ದಾಸ ರೈ ಕುಂಬ್ರ, ವಸಂತ ಶೆಟ್ಟಿ, ಸುಧಾಕರ ಶೆಟ್ಟಿ, ಕೆ.ದಿನೇಶ್ ರೈ, ಚಂದ್ರಕಾಂತ ಶಾಂತಿವನ, ವಾರಿಜಾಕ್ಷಿ ಪಿ.ಶೆಟ್ಟಿ, ಅದ್ದು ಯಾನೆ ಅದ್ರಾಮ, ಚಿತ್ರಾ ಎನ್.ಟಿ ಉಪಸ್ಥಿತರಿದ್ದರು. ನಿರ್ದೇಶಕ ವಸಂತ ಶೆಟ್ಟಿ ಪ್ರಾರ್ಥಿಸಿದರು. ಸಂಘದ ಅಧ್ಯಕ್ಷ ರಕ್ಷಿತ್ ರೈ ಮುಗೇರು ಸ್ವಾಗತಿಸಿದರು. ಕಾರ್ಯದರ್ಶಿ ಶೇಖರ ರೈ ವಂದಿಸಿದರು. ಸಂಘದ ಸಿಬ್ಬಂದಿಗಳಾದ ಸಹಾಯಕಿ ನಳಿನಿ ರೈ, ಹಾಲು ಪರೀಕ್ಷಕಿ ಸುಷ್ಮಾ ಕುಮಾರಿ ವಿವಿಧ ಕಾರ್ಯಕ್ರಮ ನಿರೂಪಿಸಿದರು.
ಹಸುಗಳನ್ನು ಮಾರಾಟ ಮಾಡಬೇಡಿ
ಕೆಲವೊಮ್ಮೆ ರೈತರಿಗೆ ಹಸುಗಳನ್ನು ಸಾಕುವುದು ಕಷ್ಟ ಅಂತ ಅನ್ನಿಸಿದರೂ ಹೈನುಗಾರಿಕೆಯಿಂದ ಬಹಳಷ್ಟು ಲಾಭ ಇದೆ. ನಾವು ಕೆಲವೊಮ್ಮೆ ದುಡುಕಿ ಒಳ್ಳೆಯ ಹಸುಗಳನ್ನು ಕಡಿಮೆ ಬೆಲೆಗೆ ಇಪ್ಪತ್ತು ಇಪ್ಪತ್ತೈದು ಸಾವಿರಕ್ಕೆ ಮಾರಾಟ ಮಾಡಿಬಿಡುತ್ತೇವೆ. ಅದೇ ಹಸುವನ್ನು ಘಟ್ಟದ ಮೇಲೆ 50 ಸಾವಿರಕ್ಕೆ ಮಾರಾಟ ಮಾಡುತ್ತಾರೆ ಅಲ್ಲಿ ಅದನ್ನು ಅಷ್ಟು ಬೆಲೆಗೆ ಕೊಳ್ಳುವವರು ಇದ್ದಾರೆ. ನಮಗೆ ಹಸು ಬೇಕು ಎಂದಾಗ ಖರೀದಿಸಲು ಕಷ್ಟವಿದೆ. ಘಟ್ಟದ ಮೇಲೆ ಹಸುವಿಗೆ ದುಬಾರಿ ಬೆಲೆ ಇದೆ. ಇದನ್ನು ನಾವು ಅರ್ಥ ಮಾಡಿಕೊಳ್ಳಬೇಕಾಗಿದೆ ಎಂದು ಡಾ.ಡಿ.ಆರ್.ಸತೀಶ್ ರಾವ್ ಹೇಳಿದರು.
‘ ಸರ್ವ ಸದಸ್ಯರುಗಳ ಸಹಕಾರದಿಂದ ಸಂಘವು ಉತ್ತಮ ರೀತಿಯಲ್ಲಿ ಅಭಿವೃದ್ಧಿ ಹೊಂದುತ್ತಿದೆ. ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಪೂರೈಕೆ ಮಾಡುವ ಮೂಲಕ ‘ಇದು ನಮ್ಮ ಸಂಘ, ನಮ್ಮ ಸಂಪತ್ತು’ ಎಂಬ ರೀತಿಯಲ್ಲಿ ಸಹಕಾರ ನೀಡಬೇಕಾಗಿ ಕೋರಿಕೆ. ಸಂಘದ ಅಭಿವೃದ್ಧಿಯಲ್ಲಿ ಸಹಕರಿಸುತ್ತಿರುವ ಸರ್ವರಿಗೂ ಕೃತಜ್ಞತೆ ಸಲ್ಲಿಸುತ್ತೇವೆ.’
ರಕ್ಷಿತ್ ರೈ ಮುಗೇರು, ಅಧ್ಯಕ್ಷರು ಒಳಮೊಗ್ರು ಹಾ.ಉ.ಸ.ಸಂಘ