ಪುತ್ತೂರು: ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿಗಳ ಚಿಂತನೆ ಪ್ರತಿ ಸಮಾಜಕ್ಕೂ ಮತ್ತು ಸರ್ವಕಾಲಕ್ಕೂ ಪ್ರಸ್ತುತ ಎಂದು ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ಹೆಚ್ ಅವರು ಹೇಳಿದರು.
ಪುತ್ತೂರು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಸಂಯುಕ್ತ ಆಶ್ರಯದಲ್ಲಿ ಆ.20ರಂದು ಪುತ್ತೂರು ತಾಲೂಕು ಆಡಳಿತ ಸೌದದ ತಹಶೀಲ್ದಾರ್ ಸಭಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಬ್ರಹ್ಮಶ್ರೀ ನಾರಾಯಣ ಗುರು ಸ್ವಾಮಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾರಾಯಣಗುರುಗಳು ಕೇವಲ ಒಂದು ಸಮಾಜಕ್ಕೆ ಮಾತ್ರ ಸೀಮಿತವಾಗದೆ ಎಲ್ಲಾ ಸಮಾಜಕ್ಕೂ ಅವರ ಮಾರ್ಗದರ್ಶಕರಾಗಿದ್ಧಾರೆ. ಜಾತಿ ಪದ್ಧತಿ ನಿರ್ಮೂಲನೆ, ಮೇಲುಕೀಳು, ತಾರತಮ್ಯ ನಿರ್ಮೂಲನೆ ಮತ್ತು ಶಿಕ್ಷಣ ಕ್ರಾಂತಿಗೆ ಸಾಕಷ್ಟು ಕಾರ್ಯಕ್ರಮ ಮಾಡಿದ್ದಾರೆ. ಅವರು ಮುಟ್ಟದ ಕ್ಷೇತ್ರ ಯಾವುದೂ ಇಲ್ಲ. ಕೇವಲ ಶಿಕ್ಷಣ ಪಡೆದರೆ ಸಾಲದು ಮೌಲ್ಯವನ್ನು ಮುಖ್ಯವಾಗಿರಿಸಿಕೊಳ್ಳಬೇಕು. ಅವರ ತತ್ವಗಳನ್ನು ನಾವು ಪಾಲಿಸುವುದಲ್ಲದೆ ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆಂದರು.
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘದ ಅಧ್ಯಕ್ಷ ಸತೀಶ್ ಕೆಡೆಂಜಿ ಅವರು ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಪಾಪೆಮಜಲು ಸ.ಪ್ರೌ.ಶಾಲೆಯ ಶಿಕ್ಷಕ ಮೋನಪ್ಪ ಪೂಜಾರಿ ಅವರು ಗುರುಸಂದೇಶದಲ್ಲಿ ನಾರಾಯಣಗುರುಗಳ ಜೀವನವನ್ನು ತಿಳಿಸಿದ ಅವರು ವೃತ್ತಿ ಶಿಕ್ಷಣಕ್ಕೆ, ವಸತಿ ಶಿಕ್ಷಣಕ್ಕೆ, ವಯಸ್ಕರಿಗೂ ಶಿಕ್ಷಣ ಅದ್ಯತೆ ನೀಡಿದರು. ಜಾತಿ ಬೇಧವನ್ನು ಹೋಗಲಾಡಿಸಿದರು. ಶೊಷಿತ ವೃರ್ಗದ ನೇತಾರರಾಗಿ ಗುರುತಿಸಿಕೊಂಡರು. ಒಟ್ಟಿನಲ್ಲಿ ಸಮಾಜದಲ್ಲಿ ಕ್ರಾಂತಿಯ ಹೆಜ್ಜೆಯನ್ನು ತೋರಿಸಿದರು. ಹುಚ್ಚರ ಆಸ್ಪತ್ರೆ ಎಂದು ಕರೆಸಿಕೊಳ್ಳುತ್ತಿದ್ದ ಕೇರಳವನ್ನು ಶಿಕ್ಷಣ ಬಿತ್ತುವ ಮೂಲಕ ಇಡಿ ದೇಶದಲ್ಲಿ ಸುಶೀಕ್ಷಿತರ ರಾಜ್ಯವನ್ನಾಗಿ ಕಾಣಲು ನಾರಾಯಣ ಗುರುಗಳ ಕೊಡುಗೆ ಅಪಾರ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್.ಆರ್ ಸದ್ಭಾವನಾ ಪ್ರತಿಜ್ಞೆ ಭೋಧಿಸಿದರು. ವಿಶ್ವ ಸೊಳ್ಳೆ ದಿನದ ಅಂಗವಾಗಿ ಸೊಳ್ಳೆಯಿಂದ ಬರುವ ಡೆಂಗ್ಯೂ ಮಲೇರಿಯ ಕುರಿತು ಮುನ್ನೆಚ್ಚರಿಕೆ ಕ್ರಮವಾಗಿ ಕೈಗೊಳ್ಳಬೇಕಾದ ಕ್ರಮದ ಕುರಿತು ಪ್ರತಿಜ್ಞಾ ವಿಧಿಯನ್ನು ತಾಲೂಕು ಆರೋಗ್ಯಾಧಿಕಾರಿ ಡಾ. ದೀಪಕ್ ರೈ ಅವರು ಬೋಧಿಸಿದರು. ಬಿಲ್ಲವ ಮಹಿಳಾ ಸಂಘದ ಉಷಾ ಅಂಚನ್, ವೇದಾವತಿ, ವಿಜಯ ಕುಮಾರ್ ಸೊರಕೆ ಸಹಿತ ಹಲವಾರು ಮಂದಿ ಬಿಲ್ಲವ ಸಂಘದ ಪ್ರಮುಖರು, ಅಬ್ದುಲ್ ರಹಿಮಾನ್ ಯುನಿಕ್ ಈ ಸಂದರ್ಭ ಉಪಸ್ಥಿತರಿದ್ದರು. ಕಂದಾಯ ಇಲಾಖೆಯ ದಯಾನಂದ ಸ್ವಾಗತಿಸಿ, ವೀಣಾ ಕಾರ್ಯಕ್ರಮ ನಿರೂಪಿಸಿದರು.