ಗೋಳಿತ್ತೊಟ್ಟು ಗ್ರಾಮಸಭೆ

0

ಇಲಾಖಾಧಿಕಾರಿಗಳ ಗೈರು, ಅಸಮರ್ಪಕ ಜೆಜೆಎಂ ಕಾಮಗಾರಿ; ಗ್ರಾಮಸ್ಥರ ಆಕ್ರೋಶ, ಗದ್ದಲ

ನೆಲ್ಯಾಡಿ: ಇಂಜಿನಿಯರ್ ಸಹಿತ ಇಲಾಖಾಧಿಕಾರಿಗಳ ಗೈರು ಹಾಜರಿ ಹಾಗೂ ಜೆಜೆಎಂ ಕಾಮಗಾರಿ ಅಸಮರ್ಪಕವಾಗಿ ನಡೆದಿದೆ ಎಂದು ಆರೋಪಿಸಿ ಗ್ರಾಮಸ್ಥರ ಆಕ್ರೋಶ, ಗದ್ದಲ ಉಂಟಾದ ಘಟನೆ ಗೋಳಿತ್ತೊಟ್ಟು ಗ್ರಾಮಸಭೆಯಲ್ಲಿ ನಡೆದಿದೆ.


ಸಭೆ ಆ.17ರಂದು ಗ್ರಾ.ಪಂ.ಅಧ್ಯಕ್ಷೆ ಸವಿತಾ ಆಲಂತಾಯ ಅವರ ಅಧ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು. ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್ ಅವರು ಮಾರ್ಗದರ್ಶಿ ಅಧಿಕಾರಿಯಾಗಿದ್ದರು. ಗ್ರಾಮಸಭೆ ಆರಂಭವಾಗುತ್ತಿದ್ದಂತೆ ಗ್ರಾಮಸ್ಥ ಅಬ್ದುಲ್ಲಾ ಕುಂಞಿ ಕೊಂಕೋಡಿ ಅವರು, ಜಿಲ್ಲಾ ಪಂಚಾಯತ್ ಇಂಜಿನಿಯರ್ ಸಹಿತ ಪ್ರಮುಖ ಇಲಾಖಾಧಿಕಾರಿಗಳ ಗೈರು ಹಾಜರಿ ವಿಚಾರ ಪ್ರಸ್ತಾಪಿಸಿದರು. ರಘು ಪಾಲೇರಿ, ಯು.ಕೆ.ಉಮ್ಮರ್ ಕೋಲ್ಪೆ, ಪ್ರಸಾದ್ ಕೆ.ಪಿ., ಬೈಜು ಸಹಿತ ಹಲವು ಗ್ರಾಮಸ್ಥರು ಇಲಾಖಾಧಿಕಾರಿಗಳ ಗೈರು ಹಾಜರಿಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಕೆ.ಬಾಬು ಪೂಜಾರಿ, ಸದಸ್ಯ ಜನಾರ್ದನ ಪಟೇರಿ ಅವರು, ಎಲ್ಲಾ ಇಲಾಖೆಯ ಅಧಿಕಾರಿಗಳಿಗೆ ಗ್ರಾಮಸಭೆ ಆಮಂತ್ರಣ ಕಳಿಸಿಕೊಡಲಾಗಿದೆ ಎಂದರು. ಆದರೂ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಕರ್ತವ್ಯ ಲೋಪ ಪ್ರಕರಣ ದಾಖಲಿಸಬೇಕು ಇಲ್ಲವೇ ಅಮಾನತುಗೊಳಿಸಬೇಕೆಂದು ಆಗ್ರಹಿಸಿದ ಗ್ರಾಮಸ್ಥರು ಅಧಿಕಾರಿಗಳು ಬಾರದೇ ಇದ್ದಲ್ಲಿ ಗ್ರಾಮಸಭೆ ನಡೆಸುವುದು ಬೇಡ ಎಂದು ಪಟ್ಟು ಹಿಡಿದರು. ಈ ವೇಳೆ ಮಾತನಾಡಿದ ಅಧ್ಯಕ್ಷೆ ಸವಿತಾ ಅವರು, ಗ್ರಾಮಸಭೆ ಮುಂದುವರಿಸುವ, ಇಂಜಿನಿಯರ್ ಅವರನ್ನು ಗ್ರಾಮ ಪಂಚಾಯತ್‌ಗೆ ಕರೆದು ಮತ್ತೊಂದು ಸಭೆ ನಡೆಸುವ ಎಂದು ಹೇಳಿದರು. ಆದರೆ ಇದಕ್ಕೆ ಒಪ್ಪದ ಗ್ರಾಮಸ್ಥರು ಅಧಿಕಾರಿಗಳು ಬಂದ ಬಳಿಕವೇ ಸಭೆ ನಡೆಸುವ ಎಂದರು. ಇಲಾಖಾಧಿಕಾರಿಗಳ ಗೈರು ಹಾಜರಿಗೆ ಸಂಬಂಧಿಸಿದಂತೆ ಸಭೆಯಲ್ಲಿ ಆಕ್ರೋಶ, ಗದ್ದಲವೂ ನಡೆದು ಬಹುತೇಕ ಗ್ರಾಮಸ್ಥರು ಸಭೆ ಬಹಿಷ್ಕರಿಸಿ ಸಭೆಯಿಂದ ಹೊರ ನಡೆದರು.


ಮತ್ತೆ ಸಭೆ ಆರಂಭ:
ಗ್ರಾಮಸ್ಥರ ಒಂದು ಗುಂಪು ಸಭೆಯಿಂದ ಹೊರ ನಡೆಯುತ್ತಿದ್ದಂತೆ ಗ್ರಾ.ಪಂ.ಸಿಬ್ಬಂದಿ ವರದಿ ವಾಚಿಸಲು ಆರಂಭಿಸಿದ್ದರು. ಈ ವೇಳೆ ಮತ್ತೆ ಸಭಾಂಗಣದೊಳಗೆ ಆಗಮಿಸಿದ ಗ್ರಾಮಸ್ಥರು ಸಭೆ ನಡೆಸದಂತೆ ಒತ್ತಾಯಿಸಿದರು. ಇದಕ್ಕೆ ಎಪಿಎಂಸಿ ಮಾಜಿ ನಿರ್ದೇಶಕರೂ ಆದ ಕುಶಾಲಪ್ಪ ಗೌಡ ಅನಿಲ ಆಕ್ಷೇಪಿಸಿ ಗ್ರಾಮಸಭೆ ನಡೆಸುವಂತೆ ಹೇಳಿದರು. ಈ ವೇಳೆ ಗ್ರಾಮಸ್ಥರೊಳಗೆ ಪರ, ವಿರೋಧ ಚರ್ಚೆ ನಡೆದು ಗದ್ದಲ ಉಂಟಾಯಿತು. ಸುಮಾರು 11.30ರ ವೇಳೆಗೆ ಜಿ.ಪಂ.ಇಂಜಿನಿಯರ್ ಹೊಳೆಬಸಪ್ಪ ಅವರು ಸಭೆಗೆ ಆಗಮಿಸಿದ್ದು ಅವರನ್ನು ಅಬ್ದುಲ್ಲಾ ಕುಂಞಿ ಹಾಗೂ ಇತರೇ ಗ್ರಾಮಸ್ಥರು ಜೆಜೆಎಂ ಕಾಮಗಾರಿ ಕುರಿತು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಹೊಳೆಬಸಪ್ಪ ಅವರು ನಾನು ಹೊಸದಾಗಿ ಆಗಮಿಸಿದ್ದೇನೆ. ಹಿಂದಿನ ಇಂಜಿನಿಯರ್ ಎಸ್.ಎಸ್.ಹುಕ್ಕೇರಿ ಅವರು ಜೆಜೆಎಂ ಕಾಮಗಾರಿ ಸಲುವಾಗಿಯೇ ನಡೆಯುವ ಮೀಟಿಂಗ್‌ಗೆ ಹೋಗಿದ್ದಾರೆ. ಅವರಿಂದ ಮಾಹಿತಿ ಪಡೆದು ತಿಳಿಸುವುದಾಗಿ ಹೇಳಿದರು. ಆದರೆ ಇದಕ್ಕೆ ಒಪ್ಪದ ಗ್ರಾಮಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಅಬ್ದುಲ್ಲಾ ಕುಂಞಿ ಅವರು ಮಾತನಾಡಿ, ಉದ್ಯೋಗ ಖಾತ್ರಿ ಯೋಜನೆ ಗ್ರಾಮಸಭೆಯಲ್ಲಿ ಹುಕ್ಕೇರಿ ಅವರೇ ಗ್ರಾಮಸಭೆಯಲ್ಲಿ ವಿಚಾರ ಪ್ರಸ್ತಾಪಿಸುವಂತೆ ಹೇಳಿದ್ದರು. ಈಗ ಅವರೇ ಗೈರು ಹಾಜರಿಯಾಗಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಸಮಿತಿ ಇಂಜಿನಿಯರ್ ಈಶ್ವರ ಕೆ.ಎಸ್.ಅವರು ಸಭೆಗೆ ಆಗಮಿಸಿದರು.


ಜೆಜೆಎಂ ಕಾಮಗಾರಿ ಮಾಹಿತಿ:
ಜೆಜೆಎಂ ಕಾಮಗಾರಿ ಕುರಿತು ಈಶ್ವರ ಕೆ.ಎಸ್.ಅವರು ಮಾಹಿತಿ ನೀಡಿ, ಈ ಯೋಜನೆಯಡಿ ಗೋಳಿತ್ತೊಟ್ಟು ಗ್ರಾಮಕ್ಕೆ 1.02 ಕೋಟಿ ರೂ., ಕೊಣಾಲು ಗ್ರಾಮಕ್ಕೆ 1.09 ಕೋಟಿ ರೂ., ಆಲಂತಾಯ ಗ್ರಾಮಕ್ಕೆ 75 ಲಕ್ಷ ರೂ.ಅನುದಾನ ಬಂದಿದೆ. ಕಾಮಗಾರಿ ಪ್ರಗತಿಯಲ್ಲಿದೆ ಎಂದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಬ್ದುಲ್ಲಾ ಕುಂಞಿ ಅವರು, ಪಂಚಾಯತ್ ಪಕ್ಕದಲ್ಲಿ ಪೈಪುಗೆ ಹಗ್ಗ ಕಟ್ಟಿ ಹಾಕಲಾಗಿದೆ. ಪೈಪು ಮಣ್ಣಿನಡಿಯೂ ಸರಿಯಾಗಿ ಹಾಕಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರ ಕೆ.ಎಸ್.ಅವರು, ಒಂದೂವರೇ ಅಡಿಯಲ್ಲಿ ಪೈಪು ಹಾಕಬೇಕಾಗಿತ್ತು. ಆದರೆ ಕೆಲವು ಕಡೆ ಮನೆಯವರು ಅವಕಾಶ ನೀಡದೇ ಇರುವುದರಿಂದ ಮೇಲೆಯೇ ಹಾಕಲಾಗಿದೆ. ಮನೆಯವರು ಅವಕಾಶ ನೀಡಿದಲ್ಲಿ ಒಂದೂವರೇ ಅಡಿಯಲ್ಲಿ ಪೈಪು ಅಳವಡಿಸಿಕೊಡುವುದಾಗಿ ಹೇಳಿದರು. ಪಂಚಾಯತ್‌ನಿಂದ ನೀಡಿದ ಪಟ್ಟಿಯಂತೆ ಸಂಪರ್ಕ ನೀಡಲಾಗಿದೆ ಎಂದೂ ಅವರು ಸ್ಪಷ್ಪಪಡಿಸಿದರು. ಜೆಜೆಎಂ ಕಾಮಗಾರಿ ಕುರಿತು ಪಂಚಾಯತ್ ಮುಂದೆ ಮಾಹಿತಿ ಬೋರ್ಡ್ ಅಳವಡಿಸಲಾಗಿತ್ತು. ಆದರೆ ಅದನ್ನು ಅಂದೇ ತೆರವುಗೊಳಿಸಲಾಗಿದೆ. ಈ ರೀತಿ ಮಾಡಿರುವುದು ಯಾಕೆ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಈಶ್ವರ ಕೆ.ಎಸ್.ಅವರು, ನಾಮಫಲಕ ಮತ್ತೆ ಅಳವಡಿಸಲಾಗುವುದು ಎಂದು ಹೇಳಿದರು.


ನೀರಿನ ಬಿಲ್ಲು ಹೆಚ್ಚಳಕ್ಕೂ ಆಕ್ಷೇಪ:
ಕುಡಿಯುವ ನೀರಿನ ಬಳಕೆದಾರರ ಸಭೆ ಕರೆಯದೆಯೇ ಬಿಲ್ಲು ಹೆಚ್ಚಳ ಮಾಡಿರುವುದಕ್ಕೂ ಗ್ರಾಮಸ್ಥರಿಂದ ವಿರೋಧ ವ್ಯಕ್ತವಾಯಿತು. ಜೆಜೆಎಂ ಯೋಜನೆ ಹಸ್ತಾಂತರ ಆದ ಕೂಡಲೇ ಸಮಿತಿ ಮಾಡಬೇಕೆಂಬ ಸುತ್ತೋಲೆ ಇದೆ. ಅದರಂತೆ ಬಳಕೆದಾರರ ಸಭೆ ಕರೆದು ಸಮಿತಿ ರಚನೆ ಮಾಡುತ್ತೇವೆ ಎಂದು ನಿಕಟಪೂರ್ವ ಅಧ್ಯಕ್ಷ, ಸದಸ್ಯರೂ ಆದ ಜನಾರ್ದನ ಪಟೇರಿ ಹೇಳಿದರು. ಈ ಬಗ್ಗೆಯೂ ವ್ಯಾಪಕ ಚರ್ಚೆ ನಡೆಯಿತು. ಮುಂದಿನ ಸಾಮಾನ್ಯ ಸಭೆಯಲ್ಲಿ ಚರ್ಚೆ ನಡೆಸಿ ಕುಡಿಯುವ ನೀರಿನ ಬಳಕೆದಾರರ ಸಭೆ ಕರೆಯುವುದಾಗಿ ಜನಾರ್ದನ ಪಟೇರಿ ಹೇಳಿದರು.


ಆಸ್ಪತ್ರೆಯಲ್ಲಿ ೨೪ ಗಂಟೆಯೂ ಸೇವೆ ಸಿಗಲಿ:
ನೆಲ್ಯಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 24 ಗಂಟೆಯೂ ಸೇವೆ ಸಿಗಬೇಕೆಂದು ಕಳೆದ ಗ್ರಾಮಸಭೆಯಲ್ಲಿಯೇ ನಿರ್ಣಯಿಸಲಾಗಿದೆ. ಈ ಬಗ್ಗೆ ಏನಾದರೂ ಕ್ರಮ ಆಗಿದೆಯೇ ಎಂದು ಗ್ರಾಮಸ್ಥ ರಘು ಪಾಲೇರಿ ಪ್ರಶ್ನಿಸಿದರು. ಈ ಬಗ್ಗೆ ಮತ್ತೆ ನಿರ್ಣಯ ಕೈಗೊಳ್ಳಲಾಯಿತು.


ಪವರ್‌ಮ್ಯಾನ್‌ಗಳ ನೇಮಿಸಿ:
ಗೋಳಿತ್ತೊಟ್ಟಿನಲ್ಲಿ ಒಬ್ಬರೇ ಪವರ್‌ಮ್ಯಾನ್ ಇದ್ದು ಹೆಚ್ಚುವರಿ ಪವರ್‌ಮ್ಯಾನ್ ನೇಮಕ ಮಾಡಬೇಕೆಂದು ರಘು ಪಾಲೇರಿ ಒತ್ತಾಯಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಇಂಜಿನಿಯರ್ ನಿತಿನ್‌ಕುಮಾರ್ ಅವರು, ಗೋಳಿತ್ತೊಟ್ಟಿನಲ್ಲಿ ಇಬ್ಬರು ಪವರ್‌ಮ್ಯಾನ್‌ಗಳಿದ್ದು ಒಬ್ಬರು ಕಂಬದಿಂದ ಬಿದ್ದು ಗಾಯಗೊಂಡಿದ್ದರಿಂದ ಅವರು ಉಪ್ಪಿನಂಗಡಿ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಲ್ಲಿದ್ದ ದುರ್ಗಾಸಿಂಗ್ ಅವರಿಗೂ ಭಡ್ತಿಯಾಗಿ ವರ್ಗಾವಣೆ ಆದೇಶ ಆಗಿದೆ ಎಂದರು. ಗೋಳಿತ್ತೊಟ್ಟಿಗೆ ಹೆಚ್ಚುವರಿ ಪವರ್‌ಮ್ಯಾನ್‌ಗಳ ನೇಮಕ ಮಾಡುವಂತೆ ಇಲಾಖೆಗೆ ಮನವಿ ಮಾಡಲು ನಿರ್ಣಯಿಸಲಾಯಿತು.


ಅತಿಕ್ರಮಣ ತೆರವುಗೊಳಿಸಲು ನಿರ್ಣಯ:
20 ವರ್ಷದ ಹಿಂದೆ ಹಕ್ಕುಪತ್ರ ನೀಡಿದ್ದರೂ ಜಾಗ ತೋರಿಸಿಕೊಟ್ಟಿಲ್ಲ ಎಂದು ಮಹಿಳೆಯರು ಸಭೆಯಲ್ಲಿ ಆರೋಪಿಸಿದರು. ಸಣ್ಣಂಪಾಡಿ ಸಮೀಪದ ಅರ್ತಿಗುಳಿಯಲ್ಲಿ ಮನೆ ನಿವೇಶನಕ್ಕೆ ಜಾಗ ಕಾದಿರಿಸಿದ್ದರೂ ಅಲ್ಲಿಗೆ ಯಾರೂ ಹೋಗುತ್ತಿಲ್ಲ ಎಂದು ಪಂಚಾಯತ್‌ನವರು ಹೇಳಿದರು. ಅರ್ತಿಗುಳಿಯಲ್ಲಿ ಸರ್ವೆ ನಂ.143/1ರಲ್ಲಿ 4.18 ಸೆಂಟ್ಸ್ ಜಾಗ ಮನೆ ನಿವೇಶನಕ್ಕೆ ಕಾದಿರಿಸಿ ಗ್ರಾ.ಪಂ.ಗೆ ಈ ಮೊದಲೇ ಹಸ್ತಾಂತರ ಮಾಡಲಾಗಿತ್ತು. ಇದರಲ್ಲಿ 2 ಎಕ್ರೆಗೂ ಹೆಚ್ಚು ಜಾಗ ಅತಿಕ್ರಮಣ ಆಗಿದೆ ಎಂದು ಗ್ರಾಮಸ್ಥರು ಆರೋಪಿಸಿದರು. ಈ ಬಗ್ಗೆ ಚರ್ಚೆ ನಡೆದು ಸದ್ರಿ ಜಾಗದ ಜಂಟಿ ಸರ್ವೆ ನಡೆಸಿ ಅತಿಕ್ರಮಣ ತೆರವುಗೊಳಿಸಲು ನಿರ್ಣಯಿಸಲಾಯಿತು.


ಕೊಣಾಲು ಶಾಲೆಗೆ ಬಂದ ಅನುದಾನ ಏನಾಯಿತು:
ಕೊಣಾಲು ಸರಕಾರಿ ಹಿ.ಪ್ರಾ.ಶಾಲೆಗೆ 10 ಲಕ್ಷ ರೂ.ಅನುದಾನ ಬಂದಿದ್ದು ಈ ಅನುದಾನ ಏನಾಯಿತು ಎಂದು ಎಸ್‌ಡಿಎಂಸಿ ಅಧ್ಯಕ್ಷ ಮೊಹಮ್ಮದ್ ರಫೀಕ್ ಅವರು ಪ್ರಶ್ನಿಸಿದರು. ಪಂಚಾಯತ್ ಅಧ್ಯಕ್ಷರು, ಉಪಾಧ್ಯಕ್ಷರು ಕರೆ ಮಾಡಿದರೂ ಗುತ್ತಿಗೆದಾರರು ಸ್ವೀಕರಿಸುವುದಿಲ್ಲ. ಇಂಜಿನಿಯರ್ ಅವರೂ ಸರಿಯಾದ ಮಾಹಿತಿ ನೀಡುತ್ತಿಲ್ಲ ಎಂದು ಮೊಹಮ್ಮದ್ ರಫೀಕ್ ಅವರು ಆಕ್ರೋಶ ವ್ಯಕ್ತಪಡಿಸಿದರು.

ನಿವೇಶನಕ್ಕೆ ಜಾಗ ಕಾದಿರಿಸಲು ದೃಢಪತ್ರ:
ಕೊಣಾಲು ಗ್ರಾಮದ ಕೋಲ್ಪೆಯಲ್ಲಿನ ಸರ್ವೆ ನಂ.29/1 ರಲ್ಲಿನ 59 ಸೆಂಟ್ಸ್ ಸರಕಾರಿ ಜಾಗವನ್ನು ನಿವೇಶನಕ್ಕೆ ಕಾದಿರಿಸುವಂತೆ ಮಾಡಿರುವ ಮನವಿ ಯಾವ ಹಂತದಲ್ಲಿದೆ ಎಂದು ಗ್ರಾಮಸ್ಥ ಉಮ್ಮರ್ ಯು.ಕೆ.ಪ್ರಶ್ನಿಸಿದರು. ಇದಕ್ಕೆ ಗ್ರಾಮ ಆಡಳಿತಾಧಿಕಾರಿ ಸತೀಶ್ ಅವರು ಉತ್ತರಿಸಿ, ಗ್ರಾಮ ಪಂಚಾಯಿತಿ ಕೋರಿಕೆಯಂತೆ ಸದ್ರಿ ಜಾಗದ ಕಡತ ತಯಾರಿಸಿ ಸಹಾಯಕ ಆಯುಕ್ತರಿಗೆ ಕಳುಹಿಸಿಕೊಡಲಾಗಿದೆ. ಈಗ ಪಂಚಾಯತ್‌ನಿಂದ ಎನ್‌ಒಸಿ ಕೊಡುತ್ತಿಲ್ಲ. ಆದ್ದರಿಂದ ಎಸಿ ಕಚೇರಿಯಲ್ಲಿಯೇ ಕಡತ ಪೆಂಡಿಂಗ್ ಇದೆ ಎಂದರು. ಸದ್ರಿ ಜಾಗದ ವಿವಾದ ಕೋರ‍್ಟ್‌ನಲ್ಲಿರುವುದರಿಂದ ಗ್ರಾಮ ಪಂಚಾಯಿತಿಯಿಂದ ಎನ್‌ಒಸಿ ಕೊಟ್ಟಿಲ್ಲ ಎಂದು ಪಿಡಿಒ ಜಗದೀಶ್ ಸ್ಪಷ್ಪಪಡಿಸಿದರು. ಇದರ ಪಕ್ಕದಲ್ಲಿರುವ ಜಾಗದವರ ತಕರಾರು ಇದೆ ಎಂದು ಉಪಾಧ್ಯಕ್ಷ ಬಾಬು ಪೂಜಾರಿ ಹೇಳಿದರು. ಇಲ್ಲಿ ಜಿ.ಪಂ.ಅನುದಾನದಲ್ಲಿ ನಿರ್ಮಾಣಗೊಂಡಿದ್ದ ಕಾಂಕ್ರಿಟ್ ರಸ್ತೆಯನ್ನು ಅಗೆದು ಹಾಕಲಾಗಿದೆ. ಈ ಬಗ್ಗೆಯೂ ಗ್ರಾ.ಪಂ.ನಿಂದ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಹಮ್ಮದ್ ರಫೀಕ್ ಆರೋಪಿಸಿದರು. ಗ್ರಾಮಸ್ಥ ಇಸ್ಮಾಯಿಲ್ ಕೋಲ್ಪೆ ಅವರು ಮಾತನಾಡಿ, ಸದ್ರಿ ವಿಚಾರ ಕಳೆದ 10 ವರ್ಷಗಳಿಂದ ಪ್ರತಿ ಗ್ರಾಮಸಭೆಯಲ್ಲೂ ಪ್ರಸ್ತಾಪ ಆಗುತ್ತಿದೆ. ಇದಕ್ಕೆ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಿ ಎಂದರು. ಎನ್‌ಒಸಿ ನೀಡುವ ಕುರಿತು ಚರ್ಚೆ ನಡೆದು ಸದ್ರಿ ಜಾಗವನ್ನು ನಿವೇಶನಕ್ಕೆ ಕಾದಿರಿಸಲು ಆಕ್ಷೇಪಣೆಯಿಲ್ಲ ಎಂದು ಪಿಡಿಒ ಅವರು ಸಭೆಯಲ್ಲೇ ದೃಢೀಕರಣ ನೀಡಿದರು.

ಮನೆ ತೆರಿಗೆ:
ಮನೆ ತೆರಿಗೆ ದರ ವಿಧಿಸುವಲ್ಲಿ ವ್ಯತ್ಯಾಸವಾಗಿದೆ ಎಂದು ವೆಂಕಪ್ಪ ಗೌಡ ಡೆಬ್ಬೇಲಿ ಹೇಳಿದರು. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಮೇಲ್ವಿಚಾರಕಿ ಪುಷ್ಪಾವತಿ, ಸಮುದಾಯ ಆರೋಗ್ಯಾಧಿಕಾರಿ ಸುಧಾ ಎಂ.ಆರ್., ಕೃಷಿ ಇಲಾಖೆಯ ಭರಮಣ್ಣನವರ, ಬ್ಯಾಂಕ್‌ಗಳ ಪರವಾಗಿ ಗೀತಾವಿಜಯ್, ಮೆಸ್ಕಾಂ ಉಪ್ಪಿನಂಗಡಿ ಶಾಖಾ ಸಹಾಯಕ ಅಭಿಯಂತರ ನಿತಿನ್‌ಕುಮಾರ್, ಗ್ರಾಮ ಆಡಳಿತಾಧಿಕಾರಿ ಸತೀಶ್, ಪಶು ಸಂಗೋಪನಾ ಇಲಾಖೆಯ ರವೀಂದ್ರ, ನೆಲ್ಯಾಡಿ ಹೊರಠಾಣೆ ಹೆಡ್‌ಕಾನ್ಸ್‌ಸ್ಟೇಬಲ್ ಪ್ರವೀಣ್ ಅವರು ಇಲಾಖಾವಾರು ಮಾಹಿತಿ ನೀಡಿದರು.


ಉಪಾಧ್ಯಕ್ಷ ಕೆ.ಬಾಬು ಪೂಜಾರಿ, ಸದಸ್ಯರಾದ ವಿ.ಸಿ.ಜೋಸೆಫ್, ವಾರಿಜಾಕ್ಷಿ, ನೋಣಯ್ಯ ಗೌಡ ಡೆಬ್ಬೇಲಿ, ಶೋಭಾಲತಾ, ಜಾನಕಿ, ಜನಾರ್ದನ ಗೌಡ, ಜೀವಿತಾ, ಗುಲಾಬಿ ಕೆ., ಎ.ಬಾಲಕೃಷ್ಣ, ಹೇಮಲತಾ, ಪದ್ಮನಾಭ ಪೂಜಾರಿ, ಶಿವಪ್ರಸಾದ್ ಎಸ್.ಎಸ್.ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪಿಡಿಒ ಜಗದೀಶ್ ಸ್ವಾಗತಿಸಿದರು. ಸಿಬ್ಬಂದಿ ಪುಷ್ಪಾಜಯಂತ್ ವಂದಿಸಿದರು. ಸಿಬ್ಬಂದಿಗಳು ಸಹಕರಿಸಿದರು.

LEAVE A REPLY

Please enter your comment!
Please enter your name here