ಆ.31ರಂದು 14ನೇ ವರ್ಷದ ವೈಭವದ ಪುತ್ತೂರು ಮೊಸರು ಕುಡಿಕೆ ಉತ್ಸವ

0

ಆ.24ರಂದು ಕಬಡ್ಡಿ ಪಂದ್ಯಾಟ, ಆ.25ರಂದು ಕೃಷ್ಣವೇಷ, ಶಂಖನಾದ ಸ್ಪರ್ಧೆ, 31ರಂದು ವಿವಿಧ ಸ್ಪರ್ಧೆಗಳು

ಪುತ್ತೂರು: ವಿಶ್ವಹಿಂದೂ ಪರಿಷದ್‌ನ ಸ್ಥಾಪನಾ ದಿನಾಚರಣೆಯ ಅಂಗವಾಗಿ ವಿಶ್ವಹಿಂದೂ ಪರಿಷದ್ ಪುತ್ತೂರು ಜಿಲ್ಲೆ ಮತ್ತು ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿಯಿಂದ ಆ.31ರಂದು ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ 14ನೇ ವರ್ಷದ ಪುತ್ತೂರು ಮೊಸರುಕುಡಿಕೆ ಉತ್ಸವ ಮತ್ತು ಪುತ್ತೂರು ನಗರದಲ್ಲಿ ಭವ್ಯ ಶೋಭಾಯಾತ್ರೆ ನಡೆಯಲಿದೆ. ಇದರ ಜೊತೆಗೆ ಆ.24ರಂದು ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ, ಆ.25ಕ್ಕೆ ಕೃಷ್ಣವೇಷ, ಶಂಖನಾದ ಸ್ಪರ್ಧೆ, ಆ.31ಕ್ಕೆ ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು ಜರುಗಲಿದೆ.


60ಸಾವಿರ ಗ್ರಾಮಗಳಲ್ಲಿ ಘಟಕಗಳು ಪೂರ್ಣ:
ವಿಶ್ವಹಿಂದೂ ಪರಿಷತ್ ಪುತ್ತೂರು ಜಿಲ್ಲಾಧ್ಯಕ್ಷ ಡಾ. ಕೃಷ್ಣಪ್ರಸನ್ನ ಅವರು ಮಾತನಾಡಿ ವಿಶ್ವಹಿಂದೂ ಪರಿಷತ್ತಿಗೆ ಶ್ರೀ ಕೃಷ್ಣ ಜನ್ಮಾಷ್ಟಮಿಯಂದು 60 ವರ್ಷ ತುಂಬುತ್ತಿದೆ. ವಿಶ್ವಹಿಂದೂ ಪರಿಷತ್ ವಿಶ್ವದ ಎಲ್ಲಾ ಹಿಂದೂ ಬಂಧುಗಳನ್ನು ಭೇದ ಬಾವವಿಲ್ಲದೆ ಒಗ್ಗೂಡಿಸುವ ಮೂಲಕ ವಿಶ್ವದೆಲ್ಲೆಡೆ ಸೇವೆ ಸುರಕ್ಷಾ ಸಂಸ್ಕಾರದ ಕಂಪನ್ನು ಪಸರಿಸಿ ಸಾರ್ಥಕ 59 ವರ್ಷಗಳನ್ನು ಪೂರೈಸಿದೆ. ಇಂತಹ ಪವಿತ್ರ ನಿಸ್ವಾರ್ಥ ಸೇವಾ ಮನೋಭಾವದ ಸಂಘಟನೆಯೇ ವಿಶ್ವ ಹಿಂದೂ ಪರಿಷದ್ ವಿಶ್ವದಾದ್ಯಂತ ಸನಾತನ ಧರ್ಮದ ಸಂರಕ್ಷಣೆ, ಸೇವಾ ಕಾರ್ಯ, ರಾಷ್ಟ್ರ ಕಾರ್ಯ, ಹಿಂದು ಮೌಲ್ಯಗಳ ರಕ್ಷಣೆಯ ಮೂಲಕ ಸಹಸ್ರಾರು ಕಾರ್ಯಕರ್ತರ ಅವಿರತ ಪ್ರಯತ್ನದ ಫಲವಾಗಿ ಹಿಂದೂ ಸಮಾಜದ ಮನೆ ಮನೆಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಈಗಾಗಲೇ ದೇಶದಲ್ಲೇ 50 ಸಾವಿರ ಗ್ರಾಮಗಳಲ್ಲಿ ಘಟಕಗಳಿದ್ದು ಮುಂದೆ 60 ವರ್ಷ ಪೂರ್ಣ ಆಗುವ ಸಂದರ್ಭ 60ಸಾವಿರ ಗ್ರಾಮಗಳಲ್ಲೂ ಘಟಕಗಳು ಪೂರ್ಣಗೊಳ್ಳಲಿದೆ. ಅದೇ ರೀತಿ ಪುತ್ತೂರು ಮೊಸರು ಕುಡಿಕೆಯು ವಿಶೇಷ ರೀತಿಯಲ್ಲಿ ನಡೆಯಲಿದೆ ಎಂದವರು ಹೇಳಿದರು


ಬೃಹತ್ ಶೋಭಾಯಾತ್ರೆ ಅಟ್ಟಿಮಡಿಕೆ ಉತ್ಸವ:
ಪುತ್ತೂರು ಮೊಸರು ಕುಡಿಕೆ ಉತ್ಸವ ಸಮಿತಿ ಅಧ್ಯಕ್ಷೆ ಕೃಷ್ಣವೇಣಿಪ್ರಸಾದ್ ಮುಳಿಯ ಅವರು ಮಾತನಾಡಿ ವಿಶೇಷವಾಗಿ ಪುತ್ತೂರು ಮೊಸರು ಕುಡಿಕೆ ಉತ್ಸವದಲ್ಲಿ ಹಲವು ಸ್ಪರ್ಧೆಗಳನ್ನು ಮಕ್ಕಳಿಗೆ ಮತ್ತು ಸಾರ್ವಜನಿಕರಿಗೆ ನೀಡಲಾಗಿದೆ. ದೇಶವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅದಕ್ಕೆ ಸರಿಯಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ತಾಯಂದಿರನ್ನು ಕೇಂದ್ರವಾಗಿರಿಸಿ ಇಡೀ ಕುಟುಂವನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ ಎಂದ ಅವರು ಆ.24ರಂದು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗ ಬೆಳಿಗ್ಗೆ ಗಂಟೆ 10 ರಿಂದ ದಿ.ಟಿ.ರಾಧಾಕೃಷ್ಣ ಭಟ್ ಇವರ ಸ್ಮರಣಾರ್ಥ ಮೂರು ಮಾದರಿಯ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ ನಡೆಯಲಿದೆ. ಆ.25ಕ್ಕೆ ದಿ| ನಿತಿನ್ ಕುಮಾರ್ ನಿಡ್ಪಳ್ಳಿ ಇವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಕೃಷ್ಣವೇಷ ಸ್ಪರ್ಧೆ ನಡೆಯಲಿದೆ. ಪ್ರಗತಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಡಾ| ಸುಧಾ ಎಸ್ ರಾವ್ ಅವರು ಉದ್ಘಾಟಿಸಲಿದ್ದಾರೆ. ಡಾ| ಅನಿಲ ದೀಪಕ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಬಳಿಕ 2 ವರ್ಷದ ಒಳಗಿನ ಮಕ್ಕಳಿಗೆ ಪುತ್ತೂರು ಮುದ್ದುಕೃಷ್ಣ ಸ್ಪರ್ಧೆ ನಡೆಯಲಿದೆ. ಇದರಲ್ಲಿ ಪ್ರಥಮ ಬಹುಮಾನವಾಗಿ ಚಿನ್ನದ ಪದಕ, ದ್ವಿತೀಯ ಬೆಳ್ಳಿಯ, ತೃತೀಯ ಕಂಚಿನ ಪದಕವನ್ನು ನೀಡಲಾಗುವುದು. 2 ರಿಂದ 4 ವರ್ಷದ ಮಕ್ಕಳಿಗೆ ಕಂದಕೃಷ್ಣ, 4 ರಿಂದ 6 ವರ್ಷದ ಮಕ್ಕಳಿಗೆ ಬಾಲಕೃಷ್ಣ, 6 ರಿಂದ 9 ವರ್ಷದ ಮಕ್ಕಳಿಗೆ ಕಿಶೋರ ಕೃಷ್ಣ, 9 ರಿಂದ 16 ವಷದ ಮಕ್ಕಳಿಗೆ ರಧಾಕೃಷ್ಣ ವೇಷ ಸ್ಪರ್ಧೆ ನಡೆಯಲಿದೆ. 16 ವರ್ಷದ ಒಳಗಿನ ವಯೋಮಿತಿ ಮತ್ತು ವಯಸ್ಕರ ವಿಭಾಗದಲ್ಲಿ ಶಂಖನಾದ ಸ್ಪರ್ಧೆ ನಡೆಯಲಿದೆ ಎಂದವರು ಹೇಳಿದರು.


ಆ.31ಕ್ಕೆ ಹಲವು ಸ್ಪರ್ಧೆಗಳು:
ಆ.31ಕ್ಕೆ ಪುತ್ತೂರು ಮೊಸರು ಕುಡಿಕೆ ವಿಶೇಷ ಉತ್ಸವ, ಶೋಭಾಯಾತ್ರೆ ನಡೆಯಲಿದ್ದು, ಬೆಳಗ್ಗಿನಿಂದಲೇ ವಿವಿಧ ಸ್ಪರ್ಧೆಗಳು ನಿರಂತರ ನಡೆಯಲಿದೆ. 11 ವರ್ಷದಿಂದ 16 ವರ್ಷದೊಳಗಿನ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಭಾರತಮಾತೆಯ ಚಿತ್ರ ಬಿಡಿಸುವುದು, ಸ್ಮರಣಶಕ್ತಿ, ಅಡ್ಡಕಂಬ, ದೇಶಭಕ್ತಿಗೀತೆ, ಗುಂಡೆಸೆತ, ಭಗವದ್ಗೀತೆ ಕಂಠಪಾಠ, ಮಡಿಕೆ ಒಡೆಯುವ ಸ್ಪರ್ಧೆಗಳು, ಮಹಿಳೆಯರಿಗೆ ಸಂಗೀತ ಕುರ್ಚಿ, ಮಡಿಕೆ ಒಡೆಯುವುದು, ರಂಗವಲ್ಲಿ ಸ್ಪರ್ಧೆ, ಗುಂಡೆಸೆತ, 8 ಜನರ ತಂಡದ ಮಹಿಳೆಯರ ಹಗ್ಗಜಗ್ಗಾಟ, ಯುವಕರಿಗೆ ಉದ್ದಕಂಬ ಸ್ಪರ್ಧೆ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ನೀಡಲಾಗುವುದು ಎಂದು ಮುಳಿಯ ಕೃಷ್ಣವೇಣಿಪ್ರಸಾದ್ ಹೇಳಿದರು.


ಬೊಳುವಾರಿನಿಂದ ಶೋಭಾಯಾತ್ರೆಗೆ ಚಾಲನೆ:
ಆ.31ರ ಮಧ್ಯಾಹ್ನ ಗಂಟೆ 2.30 ರಿಂದ ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಮುಂಭಾಗದಿಂದ ಪುತ್ತೂರು ಮೊಸರು ಕುಡಿಕೆ ಉತ್ಸವದ ಶೋಭಾಯಾತ್ರೆ ಮತ್ತು ಹಿಂದೂ ಯುವಕರಿಂದ ಅಟ್ಟಿಮಡಿಕೆ ಒಡೆಯುವ ಸಾಹಸ ಸ್ಪರ್ಧೆಯ ಉದ್ಘಾಟನೆ ನಡೆಯಲಿದೆ ಎಂದು ಮೊಸರು ಕುಡಿಕೆ ಉತ್ಸವ ಸಮಿತಿ ಸಂಚಾಲಕ ಪುತ್ತೂರು ಉಮೇಶ್ ನಾಯಕ್ ತಿಳಿಸಿದರು. ವಿಶ್ವಹಿಂದು ಪರಿಷದ್ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಪ್ರದೀಪ್ ಸರಿಪಲ್ಲ ಅವರು ಧ್ವಜ ಹಸ್ತಾಂತರ ಮಾಡುವ ಮೂಲಕ ಶೋಭಾಯಾತ್ರೆಗೆ ಚಾಲನೆ ನೀಡಲಿದ್ದಾರೆ.

ಬೊಳುವಾರು ಶ್ರೀ ಆಂಜನೇಯ ಮಂತ್ರಾಲಯದ ಬಳಿ ಪ್ರಾರಂಭವಾಗುವ ಶೋಭಾಯಾತ್ರೆಯಲ್ಲಿ ಶ್ರೀ ಕೃಷ್ಣನ ಸುಂದರ ರಥದೊಂದಿಗೆ ಕೊಂಬು ಕಹಳೆಯೊಂದಿಗೆ ವಿಶೇಷ ಆಕರ್ಷಣೆಯಾಗಿ ಚಂದಳಿಕೆ ವೀರಾಂಜನೇಯ ವ್ಯಾಯಾಮ ಶಾಲೆಯಿಂದ ತಾಲೀಮು ಪ್ರದರ್ಶನ, ಬಂಟ್ವಾಳ ತಾಲೂಕಿನ ಪ್ರಸಿದ್ಧ ಕುಣಿತ ಭಝನಾ ತಂಡಗಳಿಂದ ಕುಣಿತ ಭಜನೆ, ಕೀಲುಕುದುರೆ, ಗೊಂಬೆ, ನಾಸಿಕ್ ಬ್ಯಾಂಡ್ ಮತ್ತು ವಿವಿಧ ಕಲಾತಂಡಗಳು ಭಾಗವಹಿಸಲಿದೆ. ದಿ| ಗುರುಕೃಷ್ಣ ಸುಳ್ಯ ಇವರ ಸ್ಮರಣಾರ್ಥ ವೀರ ಯುವಕರಿಂದ ಸಾಹಸಮಯ ಅಟ್ಟಿಮಡಿಕೆ ಒಡೆಯುವ ಸ್ಪರ್ಧೆಯು ಮುಖ್ಯರಸ್ತೆಯ ಮೂಲಕ ಸಾಗಿ ಅಂಚೆ ಕಚೇರಿಯ ಬಳಿಯಿಂದ ದೇವಸ್ಥಾನದ ಗದ್ದೆಗೆ ಸಾಗಿ ಸಂಜೆ ಗಂಟೆ 6.30 ರಿಂದ ವಿಶ್ವಹಿಂದೂ ಪರಿಷದ್ ಸ್ಥಾಪನ ದಿನದ ಷಷ್ಠಿಪೂರ್ತಿ ಸಂಭ್ರಮದ ಸಭಾ ಕಾರ್ಯಕ್ರಮ ನಡೆಯಲಿದೆ ಎಂದು ಹೇಳಿದರು. ವಿಶ್ವಹಿಂದು ಪರಿಷದ್ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ್ ಮೆಂಡನ್ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಪುತ್ತೂರು ಸಿಟಿ ಆಸ್ಪತ್ರೆಯ ಸರ್ಜನ್ ಡಾ. ಗೋಪಿನಾಥ್ ಪೈ, ಬ್ರಹ್ಮನಗರ ಮಾರಿಯಮ್ಮ ದೇವಸ್ಥಾನದ ಅಧ್ಯಕ್ಷ ಅಶೋಕ್ ಬ್ರಹ್ಮನಗರ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಇದೇ ಸಂದರ್ಭ ವಿಶ್ವಹಿಂದೂ ಪರಿಷತ್‌ನಲ್ಲಿ ಸಕ್ರೀಯರಾಗಿ ತೊಡಗಿಸಿಕೊಂಡು ನಿಧನರಾದ ಕುಟುಂಬವನ್ನು ಗೌರವಿಸುವ ಕಾರ್ಯಕ್ರಮವೂ ನಡೆಯಲಿದೆ. ಅಟ್ಟಿಮಡಿಕೆ ಸ್ಪರ್ಧಾ ವಿಜೇತರಿಗೆ ನಗದು ಬಹುಮಾನ ವಿತರಿಸಲಾಗುವುದು ಎಂದವರು ಉಮೇಶ್ ನಾಯಕ್ ತಿಳಿಸಿದರು.


ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟ:
ಆ.24ರಂದು ನಡೆಯುವ ಮ್ಯಾಟ್ ಅಂಕಣದ ಕಬಡ್ಡಿ ಪಂದ್ಯಾಟವನ್ನು ಬೆಳಿಗ್ಗೆ ಹೊಟೇಲ್ ಅಶ್ವಿನಿ ಇದರ ಮಾಲಕ ಅಶ್ವಿನ್ ರೈ ಕಬಡ್ಡಿ ಅಂಕಣದ ಉದ್ಘಾಟನೆ ಮಾಡಲಿದ್ದಾರೆ. ಬಳಿಕ ಹೈಸ್ಕೂಲ್ ವಿಭಾಗದ ಹುಡುಗರ ಆಹ್ವಾನಿತ 6 ತಂಡಗಳ ಕಬಡ್ಡಿ ಪಂದ್ಯಾಟ, ಮಧ್ಯಾಹ್ನ ಗಂಟೆ 1 ರಿಂದ ವಿಶೇಷವಾಗಿ ಕಾರ್ಯಕರ್ತರ 7 ತಂಡಗಳ ಲೀಗ್ ಮಾದರಿಯ ಕಬಡ್ಡಿ ಪಂದ್ಯಾಟ ನಡೆಯಲಿದೆ. ಸಂಜೆ ಗಂಟೆ 7 ಕ್ಕೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು ಅಧ್ಯಕ್ಷತೆ ವಹಿಸಲಿದ್ದಾರೆ. ಬಜರಂಗದಳ ಮಂಗಳೂರು ವಿಭಾಗ ಸಂಯೋಜಕ ಪುನೀತ್ ಅತ್ತಾವರ, ಜಜರಂಗದಳ ಪುತ್ತೂರು ಜಿಲ್ಲಾ ಸಂಯೋಜಕ ಭರತ್ ಕುಮ್ಡೇಲು ಅವರು ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ನಳೀಲು ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಮೊಕ್ತೇಸರ ಸಂತೋಷ್ ಕುಮಾರ್ ರೈ ನಳಿಲು ಸಹಿತ ಹಲವಾರು ಮಂದಿ ಗಣ್ಯರ ಉಪಸ್ಥಿತಿಯಲ್ಲಿ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಗಂಟೆ 8 ರಿಂದ ಪುರುಷರ ಹೊನಲು ಬೆಳಕಿನ ಮ್ಯಾಟ್ ಅಂಕಣದ ಮುಕ್ತ ಕಬಡ್ಡಿ ಪಂದ್ಯಾಟ ನಡೆಯಲಿದೆ. ವಿಜೇತರಿಗೆ ನಗದು ಬಹುಮಾನ ಇಡಲಾಗಿದೆ ಎಂದು ವಿಶ್ವಹಿಂದು ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷ ದಾಮೋದರ್ ಪಾಟಾಳಿ ಹೇಳಿದರು.

ಪತ್ರಿಕಾಗೋಷ್ಟಿಯಲ್ಲಿ ಮೊಸರುಕುಡಿಕೆ ಉತ್ಸವ ಸಮಿತಿ ಉಪಾಧ್ಯಕ್ಷೆ ವಿ ಪ್ರಭಾವತಿ ಬೊಳುವಾರು, ಕಾರ್ಯದರ್ಶಿ ಜಗದೀಶ್ ನೀರ್ಪಾಜೆ, ಸಹ ಕಾರ್ಯದರ್ಶಿ ಶರಾವತಿ ರವಿನಾರಾಯಣ, ವಿಶ್ವಹಿಂದೂ ಪರಿಷದ್ ಜಿಲ್ಲಾ ಸಹ ಕಾರ್ಯದರ್ಶಿ ಶ್ರೀಧರ್ ತೆಂಕಿಲ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here