2017ರ ಸೆಪ್ಟೆಂಬರ್ 5ರಂದು ರಾತ್ರಿ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು.ಈ ಪ್ರಕರಣದಲ್ಲಿ 11ನೇ ಆರೋಪಿಯಾಗಿ ಬಂಧಿಸಲ್ಪಟ್ಟು ಜುಲೈ 18, 2018ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಮೋಹನ್ ನಾಯಕ್ ಅವರಿಗೆ 2023ರ ಡಿಸೆಂಬರ್ 7ರಂದು ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.ಇದರ ವಿರುದ್ಧ, ಕರ್ನಾಟಕ ಸರಕಾರ ಹಾಗೂ ಮೃತ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿ, ಮೋಹನ್ ನಾಯಕ್ ಅವರ ಜಾಮೀನು ರದ್ದುಪಡಿಸುವಂತೆ ಕೋರಿದ್ದರು.ಆದರೆ ಜಾಮೀನು ರದ್ದತಿಗೆ ಸುಪ್ರೀಂ
ಕೋರ್ಟ್ ನಿರಾಕರಿಸಿದೆ.
ಪುತ್ತೂರು: ಏಳು ವರ್ಷಗಳ ಹಿಂದೆ ನಡೆದಿರುವ ಪತ್ರಕರ್ತೆ ಹಾಗೂ ಸಾಮಾಜಿಕ ಕಾರ್ಯಕರ್ತೆ ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣದ 11ನೇ ಆರೋಪಿಯಾಗಿರುವ ಪುತ್ತೂರು ಚಿಕ್ಕಮುಡ್ನೂರು ಕೆಮ್ಮಾಯಿ ಮೂಲದವರಾಗಿರುವ ಸುಳ್ಯ ತಾಲೂಕಿನ ಸಂಪಾಜೆ ನಿವಾಸಿ ಮೋಹನ್ ನಾಯಕ್ ಅವರಿಗೆ ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಸುಪ್ರೀಂ ಕೋರ್ಟ್ ಎತ್ತಿಹಿಡಿದಿದೆ.
2017ರ ಸೆಪ್ಟೆಂಬರ್ ೫ರಂದು ರಾತ್ರಿ ಗೌರಿ ಲಂಕೇಶ್ ಅವರ ಹತ್ಯೆಯಾಗಿತ್ತು.ಪ್ರಕರಣದ ತನಿಖೆಗೆ ವಿಶೇಷ ತಂಡ ರಚನೆ ಮಾಡಲಾಗಿತ್ತು.ಈ ಪ್ರಕರಣದಲ್ಲಿ 11ನೇ ಆರೋಪಿಯಾಗಿ ಮೋಹನ್ ನಾಯಕ್ ಅವರನ್ನು 2018ರ ಜುಲೈ 17ರಂದು ಬಂಧಿಸಲಾಗಿತ್ತು.ಜುಲೈ 18, 2018ರಿಂದ ನ್ಯಾಯಾಂಗ ಬಂಧನದಲ್ಲಿದ್ದ ಮೋಹನ್ ನಾಯಕ್ ಅವರಿಗೆ 2023ರ ಡಿಸೆಂಬರ್ 7ರಂದು ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.ಇದರ ವಿರುದ್ಧ, ಕರ್ನಾಟಕ ಸರಕಾರ ಹಾಗೂ ಮೃತ ಗೌರಿ ಲಂಕೇಶ್ ಅವರ ಸಹೋದರಿ ಕವಿತಾ ಲಂಕೇಶ್ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿ, ಮೋಹನ್ ನಾಯಕ್ ಅವರ ಜಾಮೀನು ರದ್ದುಪಡಿಸುವಂತೆ ಕೋರಿದ್ದರು.ಗೌರಿ ಹತ್ಯೆಯ ಕ್ರಿಮಿನಲ್ ಪಿತೂರಿಯ ಭಾಗವಾಗಿರುವ ಮೋಹನ್ ನಾಯಕ್‌ಗೆ ನೀಡಲಾದ ಜಾಮೀನನ್ನು ರದ್ದುಗೊಳಿಸಲು ನಿರ್ದೇಶನ ನೀಡುವಂತೆ ಕವಿತಾ ಅವರು ಸುಪ್ರೀಂಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸತೀಶ್‌ಚಂದ್ರ ಶರ್ಮಾ ಅವರ ಪೀಠವು ಕವಿತಾ ಲಂಕೇಶ್ ಅವರು ಸಲ್ಲಿಸಿದ್ದ ಮೇಲ್ಮನವಿ ಅರ್ಜಿಯನ್ನು ವಿಚಾರಣೆಗೆ ಸ್ವೀಕರಿಸಿ, ಕರ್ನಾಟಕ ಸರಕಾರ ಮತ್ತು ಆರೋಪಿ ಮೋಹನ್ ನಾಯಕ್ ಅವರಿಗೆ ಕಳೆದ ಜನವರಿಯಲ್ಲಿ ನೋಟೀಸ್ ಜಾರಿ ಮಾಡಿತ್ತು. ಇದೀಗ ಮೇಲ್ಮನವಿಯ ವಿಚಾರಣೆ ಪೂರ್ಣಗೊಳಿಸಿದ ನ್ಯಾಯಮೂರ್ತಿಗಳಾದ ಬೇಳ ಎಂ.ತ್ರಿವೇದಿ ಮತ್ತು ಸತೀಶ್‌ಚಂದ್ರ ಶರ್ಮ ಅವರಿದ್ದ ವಿಭಾಗೀಯ ಪೀಠ,ಆರೋಪಿ ಮೋಹನ್ ನಾಯಕ್ ಅವರಿಗೆ ಕರ್ನಾಟಕ ಹೈಕೋರ್ಟ್ ಜಾಮೀನು ಮಂಜೂರು ಮಾಡಿರುವ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ,ಜಾಮೀನು ಮಂಜೂರು ಮಾಡಿರುವ ಕರ್ನಾಟಕ ಹೈಕೋರ್ಟ್‌ನ ಆದೇಶವನ್ನು ಎತ್ತಿಹಿಡಿದಿದೆ.
ಬೆಂಗಳೂರಿನಲ್ಲಿ ಬಾಡಿಗೆ ಮನೆ ಮಾಡಿದ್ದ ಮೋಹನ್ ನಾಯಕ್ ಅವರು, ಗೌರಿ ಹತ್ಯೆಯ ಆರೋಪಿಗಳಿಗೆ ಆಶ್ರಯ ನೀಡಿದ್ದರೆಂಬ ಆರೋಪವಿದೆ.ಮೋಹನ್ ನಾಯಕ್ ಅವರಿಗೆ ಗೋವಾ ರಾಜ್ಯದ ಸಂಘಟನೆಯೊಂದರ ಮೂಲಕ ಪ್ರಕರಣದ ಮೊದಲ ಆರೋಪಿ ಅಮೋಲ್ ಕಾಳೆಯ ಪರಿಚಯವಾಗಿತ್ತು.ಬೆಂಗಳೂರಿನಲ್ಲಿ ಮೋಹನ್ ನಾಯಕ್ ಅವರು ಮಾಡಿದ್ದ ಬಾಡಿಗೆ ಮನೆಗೆ ಪ್ರಕರಣದ ಆರೋಪಿ ಅಮೋಲ್ ಕಾಳೆ ಬರುತ್ತಿದ್ದನಲ್ಲದೆ,ಎರಡನೆ ಆರೋಪಿ ಪರಶುರಾಮ್ ವಾಗೋರೆಯನ್ನೂ ಜತೆಗೆ ಕರೆದೊಯ್ಯುತ್ತಿದ್ದ.ಈ ಮನೆಯಲ್ಲಿಯೇ ಗೌರಿ ಹತ್ಯೆಗೆ ಆರಂಭಿಕ ತಯಾರಿಗಳನ್ನು ಮಾಡಿದ್ದರು.ಆನಂತರ ಮೋಹನ್ ನಾಯಕ್ ಬೆಂಗಳೂರಲ್ಲಿ ಪಡೆದುಕೊಂಡಿದ್ದ ಬಾಡಿಗೆ ಮನೆ ಖಾಲಿ ಮಾಡಿ, ಮಂಗಳೂರಿಗೆ ತೆರಳಿದ್ದರು ಎಂದು ಆರೋಪಿಸಲಾಗಿದೆ.
ಮೋಹನ್ ನಾಯಕ್ ಪಾತ್ರದ ಬಗ್ಗೆ ಮಾತನಾಡಿದ 23 ಸಾಕ್ಷಿಗಳಲ್ಲಿ,ಮೋಹನ್ ನಾಯಕ್ ಅವರು ಬೆಂಗಳೂರು ಹೊರ ವಲಯದ ಕುಂಬಳಗೋಡಿನಲ್ಲಿ ಬಾಡಿಗೆ ಮನೆ ಪಡೆದಿರುವ ಬಗ್ಗೆ ಮಾತ್ರ ಸಾಕ್ಷಿಗಳು ಹೇಳಿಕೆ ನೀಡಿದ್ದರು ಹೊರತು ಗೌರಿ ಲಂಕೇಶ್ ಹತ್ಯೆಗೆ ಸಂಚು ರೂಪಿಸಿದ್ದ ಸಭೆಯ ಭಾಗವಾಗಿದ್ದರು ಎಂದು ಯಾರೂ ಹೇಳಿರಲಿಲ್ಲ.ಈ ಆಧಾರದಲ್ಲಿ ಹೈಕೋರ್ಟ್ ಆರೋಪಿ ಮೋಹನ್ ನಾಯಕ್‌ಗೆ ಜಾಮೀನು ಮಂಜೂರು ಮಾಡಿತ್ತು.ಈ ಪ್ರಕರಣದಲ್ಲಿ ಜಾಮೀನು ಪಡೆದುಕೊಂಡ ಮೊದಲ ಆರೋಪಿ ಮೋಹನ್ ನಾಯಕ್ ಆಗಿದ್ದಾರೆ.
ಹೈಕೋರ್ಟ್ ಅವರಿಗೆ ಜಾಮೀನು ಮಂಜೂರು ಮಾಡಿರುವುದನ್ನು ರದ್ದುಪಡಿಸಲು ನಿರ್ದೇಶನ ನೀಡುವಂತೆ ಕರ್ನಾಟಕ ಸರಕಾರ ಮತ್ತು ಕವಿತಾ ಲಂಕೇಶ್ ಅವರು ಸುಪ್ರೀಂ ಕೋರ್ಟ್‌ಗೆ ವಿಶೇಷ ಮೇಲ್ಮನವಿ ಸಲ್ಲಿಸಿದ್ದರು.ಆದರೆ ಹೈಕೋರ್ಟ್ ಆದೇಶಕ್ಕೆ ಸಂಬಂಧಿಸಿ ಮಧ್ಯಪ್ರವೇಶಿಸಲು ನಿರಾಕರಿಸಿರುವ ಸುಪ್ರೀಂ ಕೋರ್ಟ್, ಮೋಹನ್ ನಾಯಕ್ ಅವರಿಗೆ ಜಾಮೀನು ಮಂಜೂರು ಮಾಡಿರುವುದನ್ನು ಎತ್ತಿಹಿಡಿದಿದೆ.ಮೋಹನ್ ನಾಯಕ್ ಪರ ವಕೀಲರಾದ ಗೌತಮ್ ಎಸ್.ಭಾರದ್ವಾಜ್,ಅಶ್ವಿನ್ ಕುಮಾರ್ ಡಿ.ಎಸ್.,ಸುರ್ಭಿ ಮೆಹ್ತಾ ಮತ್ತು ಇಶಾನ್ ರಾಯ್ ಚೌಧರಿ ವಾದಿಸಿದ್ದರು.ಕಳೆದ ಜುಲೈ ತಿಂಗಳಲ್ಲಿ ಆರೋಪಿಗಳಾದ ಅಮಿತ್ ದಿಗ್ವೇಕರ್,ಕೆ.ನವೀನ್ ಕುಮಾರ್ ಮತ್ತು ಹೆಚ್.ಎಲ್.ಸುರೇಶ್ ಎಂಬವರಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ.