ಬಡಗನ್ನೂರು: ಬೆಳೆ ವಿಮೆ ಸಮೀಕ್ಷೆ ಈ ಮೊದಲಿನ ರೀತಿಯಲ್ಲಿ ಸಮೀಕ್ಷೆಗೆ ಅವಕಾಶ ಕಲ್ಪಿಸುವಂತೆ ಪುತ್ತೂರು ತಹಶಿಲ್ದಾರರಿಗೆ ಬರೆಯಲು ಬಡಗನ್ನೂರು ಗ್ರಾ.ಪಂ ವ್ಯಾಪ್ತಿಯ ಬಡಗನ್ನೂರು ಹಾಗೂ ಪಡುವನ್ಙೂರು ಗ್ರಾಮಗಳ ಗ್ರಾಮ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ಸಭೆಯು ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಅಧ್ಯಕ್ಷತೆಯಲ್ಲಿ ಆ.22ರಂದು ಗ್ರಾ.ಪಂ ಸಭಾಂಗಣದಲ್ಲಿ ನಡೆಯಿತು.
ರೈತರು ಬೆಳೆ ಸಮೀಕ್ಷೆ ಅಯಾ ಗ್ರಾಮದಲ್ಲಿ ಪ್ರತಿನಿಧಿಗಳನ್ನು ನೇಮಕ ಮಾಡಲಾಗಿದೆ. ಆದರೆ ಸರ್ವರ್ ಸಮಸ್ಯೆ ಮತ್ತು ಹೊಸ ಆ್ಯಪ್ ನಿಯಮ ಪದೇ ಪದೇ ರದ್ದುಗೊಳುವುದರಿಂದ ಬೆಳಗ್ಗೆಯಿಂದ ಮಧ್ಯಾಹ್ನದ ಹೊತ್ತಿಗೆ 2, 3 ಪಹಾಣಿ ಪತ್ರ ಮಾತ್ರ ಸಮೀಕ್ಷೆ ಮಾಡಲು ಸಾಧ್ಯವಾಗುತ್ತದೆ.ಈ ಬಗ್ಗೆ ಕಂದಾಯ ಇಲಾಖೆ ಹಾಗೂ ಕೃಷಿ ಇಲಾಖೆ ಜಂಟಿ ಸಭೆ ನಡೆಸಿ ಈ ಮೊದಲು ಸಮೀಕ್ಷೆ ಮಾಡುತ್ತಿದ್ದ ರೀತಿಯಲ್ಲಿ ಅವಕಾಶ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದರು. ಈ ಬಗ್ಗೆ ಸಮಸ್ಯೆ ಬಗೆಹರಿಸಲು ಪುತ್ತೂರು ತಹಶಿಲ್ದಾರರಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಪಡುವನ್ನೂರು ಗ್ರಾಮದ ಕನ್ನಡ್ಕ ಭಾಗದಲ್ಲಿ 15 ಹಣಕಾಸು ಯೋಜನೆಯಲ್ಲಿ ಮೋರಿ ನಿರ್ಣಯಕ್ಕೆ 56 ಸಾವಿರ ರೂಪಾಯಿ ಇಟ್ಟು ಮೋರಿ ನಿರ್ಮಾಣ ಮಾಡಲಾಗಿದೆ. ಅದರೆ ಮಳೆಯ ನೀರು ಮೋರಿಯಲ್ಲಿ ಹೋಗದೆ ರಸ್ತೆಯ ಮೇಲೆ ಹೋಗುತ್ತದೆ. 56 ಸಾವಿರ ಖರ್ಚು ಮಾಡಿ ನೀರು ಮೋರಿಯಲ್ಲಿ ಹೋಗದೆ ರಸ್ತೆ ಹೋಗುವುದಾದರೆ ಮೋರಿ ಮಾಡಿ ಏನು ಪ್ರಯೋಜನ ಎಂದು ಗುರು ಕಿರಣ್ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು. ಈ ಬಗ್ಗೆ ವಾರ್ಡ್ ಸದಸ್ಯ ವೆಂಕಟೇಶ್ ಪ್ರತಿಕ್ರಿಯಿಸಿ ನೀರು ಸರಿಯಾಗಿ ಮೋರಿಯಲ್ಲಿಯೇ ಹೋಗುತ್ತಿದೆ. ಸರಿಯಾಗಿ ಹೋಗುತ್ತಿಲ್ಲ ಎಂದು ಹೇಳಿದರು. ಯಾರು ಎಂದು ಪ್ರಶ್ನಿಸಿದರು .ಈ ಬಗ್ಗೆ ಮಧ್ಯೆ ಪ್ರವೇಶಿಸಿದ ಮಾರ್ಗದರ್ಶಿ ಅಧಿಕಾರಿ ಧರ್ಮಪಾಲ್ ವಾರ್ಡ್ ಸಮಸ್ಯೆಯನ್ನು ಅಯಾ ವಾರ್ಡ್ ಸಭೆಗಳಲ್ಲಿ ಚರ್ಚಿಸಿ ಸರಿಪಡಿಸಬೇಕು. ಹಾಗಂತ ಗ್ರಾಮ ಸಭೆಯಲ್ಲಿ ಮಾತನಾಡಬಾರದು ಎಂದು ಅರ್ಥಕಲ್ಪಿಸಬೇಡಿ ಎಂದು ಸಮಾಧಾನಕರ ಉತ್ತರ ನೀಡಿದರು. ಈ ಬಗ್ಗೆ ಏನಾದರೂ ಸಮಸ್ಯೆಗಳಿದ್ದಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವ ಬಗ್ಗೆ ಪ್ರಭಾರ ಅಭಿವೃದ್ಧಿ ಅಧಿಕಾರಿ ಮೋನಪ್ಪ ಕೆ ಭರವಸೆ ನೀಡಿದರು.
ಮೊಟ್ಟೆ ಹಾಲು ಬೇಡ ಶಿಕ್ಷಕರನ್ನು ಕೊಡಿ:
ಶಿಕ್ಷಣಾ ಇಲಾಖೆ ಸೌಲಭ್ಯಗಳ ಮಾಹಿತಿಯನ್ನು ಕುಂಬ್ರ ಕ್ಲಸ್ಟರ್ ಮುಖ್ಯಸ್ಥೆ ನೀಡಿದರು. ಈ ಸಂದರ್ಭದಲ್ಲಿ ಬಡಗನ್ನೂರು ದ.ಕ.ಉ.ಹಿ. ಪ್ರಾ. ಶಾಲಾ ಶಾಲಾಭಿವೃದ್ಧಿ ಸಮಿತಿ ಸದಸ್ಯೆ ಸುಲೋಚನ ನೇರ್ಲಪ್ಪಾಡಿ ಹಾಲು ಮೊಟ್ಟೆ ಬೇಡ, ಉತ್ತಮ ಶಿಕ್ಷಕರನ್ನು ಕೊಡಿ. ಶಾಲೆಯಲ್ಲಿ ಒಂದರಿಂದ ಎಂಟನೇ ತರಗತಿವರೆಗೆ ಸುಮಾರು 88 ಮಕ್ಕಳಿದ್ದರೆ, ಎರಡು ಖಾಯಂ ಶಿಕ್ಷಕರು ಮಾತ್ರ ಇದ್ದಾರೆ. ಒಂದು ಅತಿಥಿ ಶಿಕ್ಷಕಿ ಇದರಿಂದ ಮಕ್ಕಳಿಗೆ ಪಾಠ ಪ್ರವಚನ ತೀರಾ ಕಷ್ಟವಾಗಿದೆ. ಶಾಲೆ ಬಿಟ್ಟು ಮಕ್ಕಳು ಮನೆ ಹೋದ ಮೇಲೆ 6 ಗಂಟೆಯವರೆಗೆ ಕುಳಿತು ಶಾಲಾ ಕೆಲಸ ಮಾಡಿ ಮನೆಗೆ ತೆರಳುತ್ತಾರೆ.
ಅದು ಅಲ್ಲದೆ ಈ ವರ್ಷ ಶತಮಾನೋತ್ಸವ ಸಂಭ್ರಮ ಆಚರಣೆಯಲ್ಲಿರುವ ಶಾಲೆ ಇದರ ಬಗ್ಗೆ ಹಲವಾರು ಕೆಲಸವಿರುತ್ತದೆ. ಇದರಿಂದ ಮಕ್ಕಳ ಭವಿಷ್ಯದ ದೃಷ್ಟಿಯಿಂದ ಶಿಕ್ಷಕರನ್ನು ಕೊಡಿ. ಇಲ್ಲದ್ದಲ್ಲಿ ಗ್ರಾ.ಪಂ ಎದುರು ಧರಣಿ ನಡೆಸುದಾಗಿ ಹೇಳಿದರು ಇವರೊಂದಿಗೆ ಸುಬ್ರಾಯ ನಾಯಕ್ ಧ್ವನಿ ಗೂಡಿಸಿದರು.ಈ ಬಗ್ಗೆ ಕ್ಲಸ್ಟರ್ ಮುಖ್ಯಸ್ಥೆ ಮೇಲಾಧಿಕಾರಿಯವರಿಗೆ ತಿಳಿಸಿ ಕ್ರಮಕೈಗೊಳ್ಳುವ ಬಗ್ಗೆ ಭರವಸೆ ನೀಡಿದರು.
ಅನುದಾನಿತ ಶಾಲೆಗೂ ಅತಿಥಿ ಶಿಕ್ಷಕರನ್ನು ನೀಡಿ:
ಪಟ್ಟೆ ಶ್ರೀ ಕೃಷ್ಣ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 148 ಮಕ್ಕಳಿದ್ದರೆ ಖಾಯಂ ಶಿಕ್ಷಕರು ಇಬ್ಬರು ಹಾಗೂ ಇಬ್ಬರು ಗೌರವ ಶಿಕ್ಷಕಿಯರು ಇದರಿಂದ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಉದ್ದೇಶದಿಂದ ಅನುದಾನಿತ ಶಾಲೆಗೂ ಅತಿಥಿ ಶಿಕ್ಷಕರನ್ನು ನೀಡಿ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಶಂಕರಿ ಸಭೆಯಲ್ಲಿ ಹೇಳಿದರು. ಈ ಬಗ್ಗೆ ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ಮಾತನಾಡಿ, ಮುಂದಿನ ದಿನಗಳಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳುವುದು ಎಂದು ಹೇಳಿದರು. ಪಟ್ಟೆ ಸೀರೆ ಹೊಳೆಗೆ ಶಾಶ್ವತ ತಡೆಗೋಡೆ ನಿರ್ಮಾಣ ಮಾಡುವ ಬಗ್ಗೆ ನಿರ್ಣಯ ಮಾಡಲಾಯಿತು. ಕಂದಾಯ, ಶಿಕ್ಷಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಅರೋಗ್ಯ ಇಲಾಖಾಧಿಕಾರಿಗಳು ಇಲಾಖಾ ಸೌಲಭ್ಯಗಳ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಗ್ರಾ.ಪಂ ಉಪಾಧ್ಯಕ್ಷೆ ಸುಶೀಲಾ ಪಕ್ಯೋಡ್, ಸದಸ್ಯರಾದ ರವಿರಾಜ ರೈ ಸಜಂಕಾಡಿ, ಸಂತೋಷ್ ಆಳ್ವ ಗಿರಿಮನೆ, ಕುಮಾರ ಅಂಬಟೆಮೂಲೆ, ಕಲಾವತಿ ಗೌಡ ಪಟ್ಲಡ್ಕ, ವಸಂತ ಗೌಡ ಕನ್ನಯ, ರವಿಚಂದ್ರ ಸಾರೆಪ್ಪಾಡಿ, ಪದ್ಮನಾಭ ಕನ್ನಡ್ಕ, ಲಿಂಗಪ್ಪ ಮೋಡಿಕೆ ವೆಂಕಟೇಶ್ ಕನ್ನಡ್ಕ, ಶ್ರೀಮತಿ ಕನ್ನಡ್ಕ, ಜ್ಯೋತಿ ಅಂಬಟೆಮೂಲೆ, ಹೇಮಾವತಿ ಮೋಡಿಕೆ, ಧರ್ಮೇಂದ್ರ ಕುಲಾಲ್ ಪದಡ್ಕ, ಸವಿತಾ ನೇರೋತ್ತಡ್ಕ, ಸುಜಾತ ಮೈಂದನಡ್ಕ ,ದಮಯಂತಿ ಕೆಮನಡ್ಕ ಹಾಗೂ ವಿವಿಧ ಇಲಾಖಾಧಿಕಾರಿಗಳು, ಶಾಲಾ ಶಿಕ್ಷಕರು, ಅಂಗನವಾಡಿ ಕಾರ್ಯಕರ್ತರು, ಆರೋಗ್ಯ ಕಾರ್ಯಕರ್ತರು, ಅಶಾ ಕಾರ್ಯಕರ್ತರು ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.
ಸುಳ್ಯಪದವು ಬೀದಿ ದೀಪ ದುರಸ್ತಿ ಮಾಡಿ:
ಸುಳ್ಯಪದವು ಭಾಗದಲ್ಲಿ ಬೀದಿ ದೀಪ ದುರಸ್ತಿ ಪಡಿಸಲು ಕಳೆದ 9 ತಿಂಗಳುಗಳಿಂದ ವಾರ್ಡ್ ಸದಸ್ಯರಿಗೆ ಮನವಿ ಮಾಡಲಾಗಿದೆ ಅದರೂ ದುರಸ್ತಿ ಮಾಡಿಲ್ಲ. ಯಾವಾಗ ದುರಸ್ತಿ ಮಾಡುತ್ತೀರಿ? ಇದಕ್ಕೆ ಸರಿಯಾದ ಉತ್ತರ ನೀಡಬೇಕು ಎಂದು ಗುರು ಕಿರಣ್ ಪಟ್ಟುಹಿಡಿದರು. ಅಧ್ಯಕ್ಷೆ ಪುಷ್ಪಲತಾ ಉತ್ತರಿಸಿ, ಮುಂದಿನ ಕ್ರಿಯಾ ಯೋಜನೆ ಇಟ್ಟು 6 ತಿಂಗಳಲ್ಲಿ ದುರಸ್ತಿ ಮಾಡುದಾಗಿ ಹೇಳಿದರು. ಈ ಮಧ್ಯೆ ಸದಸ್ಯ ರವಿರಾಜ ರೈ ಸಜಂಕಾಡಿ ಒಂದು ವಾರದೊಳಗೆ ಮೂರು ಬೀದಿ ದೀಪ ದುರಸ್ತಿ ಮಾಡಿಕೊಡುವ ಭರವಸೆ ನೀಡಿ ಸಮಾಧಾನಕರಿಸಿದರು.
ಪುತ್ತೂರು ಸುಳ್ಯಪದವು ಬೆಳಗ್ಗೆ 7.45ಕ್ಕೆ ಬಂದು ಸುಳ್ಯಪದವಿನಿಂದ 8 .10ಕ್ಕೆ ಹೊರಡುವ ಸರಕಾರಿ ಬಸ್ ಕೆಲವು ದಿವಸಗಳಿಂದ ಸರಿಯಾದ ಸಮಯಕ್ಕೆ ಬಾರದೆ ಶಾಲಾ ಮತ್ತು ಕಾಲೇಜ್ ಮಕ್ಕಳು ಸಂಕಷ್ಟ ಎದುರಿಸುತ್ತಾರೆ. ಈ ಬಗ್ಗೆ ಸಂಬಂಧ ಪಟ್ಟ ಸಾರಿಗೆ ಇಲಾಖಾಧಿಕಾರಿಗಳಿಗೆ ಬರೆಯುವಂತೆ ಒತ್ತಾಯಿಸಿದರು. ಮತ್ತು ಪುತ್ತೂರಿನಿಂದ ಮುಡಿಪಿನಡ್ಕ ವರೆಗೆ ಬರುವ ಬಸ್ಸು ಪ್ರಸ್ತುತ ರದ್ದಾಗಿದೆ. ಅದನ್ನು ಪ್ರಾರಂಭಿಸಿ ಬಡಗನ್ನೂರು ವರೆಗೆ ಬರುವಂತೆ ಆಗಬೇಕು ಎಂದರು. ಈ ಬಗ್ಗೆ ಸಂಬಂಧ ಪಟ್ಟ ಅಧಿಕಾರಿಗಳಿಗೆ ಬರೆಯಲು ನಿರ್ಣಯ ಕೈಗೊಳ್ಳಲಾಯಿತು.
ಮಾರ್ಗದರ್ಶಿ ಅಧಿಕಾರಿಯಾಗಿ ಪಶುಸಂಗೋಪನಾ ಇಲಾಖಾ ಸಹಾಯಕ ನಿರ್ದೇಶಕ ಧರ್ಮಪಾಲ್ ಪಶುಸಂಗೋಪನೆ ಇಲಾಖಾ ಮಾಹಿತಿ ನೀಡಿ 1962 ಕರೆ ಮಾಡಿ ಉಚಿತ ಚಿಕಿತ್ಸೆ ಮಾಡುವ ಸೌಲಭ್ಯ ಪಡೆದುಕೊಳ್ಳುವಂತೆ ಹೇಳಿದರು. ಆಡಳಿತ ಮುಖ್ಯ ಅಲ್ಲ, ಕೆಲಸ ಮುಖ್ಯ. ಜನಸಾಮಾನ್ಯರು ವಾರ್ಡ್ ಸಭೆಯಲ್ಲಿ ಮಾತನಾಡಿ ಸಮಸ್ಯೆ ಬಗೆಹರಿಸಬೇಕು. ಗ್ರಾಮ ಸಭೆಯಲ್ಲಿ ಅಧಿಕಾರಿಗಳಿಂದ ಇಲಾಖಾ ಸೌಲಭ್ಯ ಮಾಹಿತಿ ತಿಳಿದುಕೊಂಡು ನಾವು ಅಭಿವೃದ್ಧಿ ಹೊಂದುವ ಜತೆಗೆ ಗ್ರಾಮ ಮತ್ತು ದೇಶದ ಅಭಿವೃದ್ಧಿಯಲ್ಲಿ ಸಹಕರಿಸುವಂತೆ ಎಂದು ಹೇಳಿ ಶುಭ ಹಾರೈಸಿದರು.
ಕೃಷಿ, ತೋಟಗಾರಿಕೆ, ಅರಣ್ಯ ಪೋಲಿಸ್, ಸಾರಿಗೆ,ಇಂಜಿನಿಯರ್ ಇಲಾಖೆ ಗೈರು ಗ್ರಾ.ಪಂ ಸದಸ್ಯ ಸಂತೋಷ್ ಆಳ್ವ ಗಿರಿಮನೆ ತರಾಟೆ:
ಗ್ರಾಮೀಣ ಪ್ರದೇಶದ ಜನರಿಗೆ ಅತೀ ಅಗತ್ಯವಾಗಿ ಮಾಹಿತಿ ಬೇಕಾದ ಇಲಾಖೆಗಳು ಗೈರು ಹಾಜರಿ ಬಗ್ಗೆ ತರಾಟೆಗೆ ತೆಗೆದುಕೊಂಡ ಅವರು ವರ್ಷದಲ್ಲಿ ಎರಡು ಸಲ ನಡೆಯುವ ಗ್ರಾಮ ಸಭೆಯಲ್ಲಿ ಭಾಗವಹಿಸಿ ಇಲಾಖಾ ಮಾಹಿತಿ ನೀಡಲು ಸಾಧ್ಯವಾಗುತ್ತಿಲ್ಲ ಅಂದಾಗ ಗ್ರಾಮ ಸಭೆ ನಡೆಸಿ ಪ್ರಯೋಜನವೇನು? ಎಂದು ಪ್ರಶ್ನಿಸಿದ ಅವರು, ಅಧಿಕಾರಿಗಳಿಗೆ ಬರಲು ಸಾಧ್ಯವಾಗದೆ ಇದ್ದ ಸಂದರ್ಭದಲ್ಲಿ ಅವರ ಪರವಾಗಿ ಇಲಾಖೆಯಿಂದ ಒಬ್ಬರನ್ನು ಕಳಿಸುವ ಜವಾಬ್ದಾರಿ ಅವರದ್ದಾಗಿದೆ. ಇದನ್ನು ಮೇಲಾಧಿಕಾರಿಗಳ ಗಮನಕ್ಕೆ ತರಬೇಕು ಹಾಗೂ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ನಿರ್ಣಯಕ್ಕೆ ಆಗ್ರಹಿಸಿದರು.
ಸಬೆಯ ಅಧ್ಯಕ್ಷತೆ ವಹಿಸಿದ್ದ ಗ್ರಾ.ಪಂ ಅಧ್ಯಕ್ಷೆ ಪುಷ್ಪಲತಾ ದೇವಕಜೆ ಮಾತನಾಡಿ ಗ್ರಾ.ಪಂ ನ ಎಲ್ಲ ಸಂಪನ್ಮೂಲಗಳನ್ನು ಕ್ರೋಢೀಕರಿಸಿ ಗ್ರಾಮದ ಅಭಿವೃದ್ಧಿ ಮಾಡಲಾಗುತ್ತಿದೆ ಗ್ರಾಮದ ಅಭಿವೃದ್ಧಿಗೆ ಸಹಕರಿಸಿದ ಹಾಗೂ ಗ್ರಾಮ ಸಭೆ ಯಶಸ್ವಿಯಾಗಿ ನಡೆಯಲು ಸಹಕರಿಸಿ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.