ಪುತ್ತೂರು: ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಆ.24ರಂದು “ಪ್ಲೇ ವಿದ್ ಮೆಷಿನ್” ಎಂಬ ವಿಶೇಷ ಕಾರ್ಯಾಗಾರವನ್ನು ಶಾಲಾ ಸಭಾಂಗಣದಲ್ಲಿ ಆಯೋಜಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಸಂತ ಫಿಲೋಮಿನಾ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯನಿ ಭಗಿನಿ ಲೋರಾ ಪಾಯಸ್, ರಕ್ಷಕ- ಶಿಕ್ಷಕ ಸಂಘದ ಉಪಾಧ್ಯಕ್ಷರಾದ ವಿವೇಕ್ ಆಳ್ವ, ನವೀನ್ ಕೋಡಿಬೈಲ್ ಕೃಷಿ ಯಂತ್ರ ಮತ್ತು ಸಲಕರಣೆಗಳ ವಿತರಕರು ಪುತ್ತೂರು, ಅಶ್ವಥ್ (ತಂತ್ರಜ್ಞಾನ) ಡಿನೆಟ್ ಇನ್ವರ್ಟರ್ ಸೇವೆಗಳು ಪುತ್ತೂರು, ಕಾರ್ತಿಕ್ ಶರ್ಮ, ಎಲೆಕ್ಟ್ರಿಷಿಯನ್ ಮತ್ತು ಇನ್ನೋವೇಟರ್ K- 4 Youtuber, ಪ್ರಶಾಂತ್ Regional Officer, ಬ್ಯಾಂಕ್ ಆಫ್ ಬರೋಡ ಪುತ್ತೂರು ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ವಿವೇಕ್ ಆಳ್ವರವರು ಪ್ರಾಸ್ತಾವಿಕವಾಗಿ ಮಾತನಾಡಿ, ʼಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಪ್ರತಿಯೊಂದು ಕ್ಷೇತ್ರಗಳಲ್ಲಿ ವಿದ್ಯಾರ್ಥಿಯು ನೈಪುಣ್ಯತೆಯನ್ನು ಗಳಿಸುವುದು ಹೇಗೆ? ಆರ್ಥಿಕ ಉಳಿತಾಯದ ಮಹತ್ವ ಏನು?ʼ ಎಂಬಿತ್ಯಾದಿ ವಿಷಯಗಳ ಬಗ್ಗೆ ಮನಮುಟ್ಟುವಂತೆ ಮಾಹಿತಿ ನೀಡಿದರು. ಬ್ಯಾಂಕ್ ಆಫ್ ಬರೋಡದ ರೀಜನಲ್ ಮ್ಯಾನೇಜರ್ ಪ್ರಶಾಂತ್ ಮಾತನಾಡಿ, ʼಶೂನ್ಯ ಬಂಡವಾಳದಲ್ಲಿ ವಿದ್ಯಾರ್ಥಿಗಳು ಹೇಗೆ ಉಳಿತಾಯ ಖಾತೆಯನ್ನು ತಮ್ಮ ಬ್ಯಾಂಕ್ ನಲ್ಲಿ ತೆರೆಯಬಹುದುʼ ಎಂಬುದನ್ನು ತಿಳಿಸಿಕೊಟ್ಟರು. ತದನಂತರ ಎಳವೆಯಲ್ಲಿಯೇ ವಿದ್ಯಾರ್ಥಿಗಳ ಅನಗತ್ಯ ವೆಚ್ಚಗಳಿಗೆ ಕಡಿವಾಣ ಹಾಗೂ ಉಳಿತಾಯದ ಮಹತ್ವ ತಿಳಿಸುವ ಉದ್ದೇಶದಿಂದ “ಉಳಿತಾಯ ಕಾರ್ಯ ಯೋಜನೆ” ಎಂಬ ವಿಷಯವನ್ನು ವೇದಿಕೆಯಲ್ಲಿರುವ ಗಣ್ಯರು, ವಿದ್ಯಾರ್ಥಿಗಳು ಹಾಗೂ ಸೇರಿರುವ ಸರ್ವರ ಜೊತೆ ಸೇರಿ ಸಾಂಕೇತಿಕವಾಗಿ ಉದ್ಘಾಟಿಸಿದರು.
ಯಂತ್ರಗಳ ಜೋಡಣೆ ಮತ್ತು ಮರುಜೋಡಣೆಯ ವಿಷಯವನ್ನು ಸಮಗ್ರವಾಗಿ ಕಲಿಯುವ ಚಿಂತನೆಯಿಂದ ಕಲಿಕೆಗೆ ಪೂರಕವಾಗುವಂತೆ ಈ ಯಂತ್ರಗಳನ್ನು ಕೋಡಿಬೈಲ್ ಕಂಪೆನಿಯವರು ಉದಾರ ಮನಸ್ಸಿನಿಂದ ಶಾಲೆಗೆ ನೀಡಿರುತ್ತಾರೆ ಈ ಯಂತ್ರೋಪಕರಣಗಳಿಗೆ ಸಂಬಂಧಿಸಿದ ಪ್ರಾತ್ಯಕ್ಷಿಕೆಯನ್ನು ಅಶ್ವಥ್ (ತಂತ್ರಜ್ಞಾನ) ಡಿನೆಟ್ ಅವರು ಶಾಲಾ ವಿದ್ಯಾರ್ಥಿಗಳಿಗೆ ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು. ಸಂಪನ್ಮೂಲ ವ್ಯಕ್ತಿಯಾಗಿದ್ದಂದ ಕಾರ್ತಿಕ್ ಶರ್ಮ ಅವರು ಮಿತವ್ಯಯದಲ್ಲಿ ಹೇಗೆ ನಾವು ತಂತ್ರಜ್ಞಾನವನ್ನು ಬಳಸಿಕೊಳ್ಳಬಹುದು ಎಂದು ಸವಿಸ್ತಾರವಾಗಿ ತಿಳಿಸಿದರು.
ಈ ಕಾರ್ಯಗಾರದಲ್ಲಿ ರಕ್ಷಕ -ಶಿಕ್ಷಕ ಸಂಘದ ಸದಸ್ಯರು ಹಾಗೂ ವಿದ್ಯಾರ್ಥಿಗಳ ಹೆತ್ತವರು ಭಾಗವಹಿಸಿದ್ದರು. ಶಾಲಾ ಮುಖ್ಯೋಪಾಧ್ಯಾಯನಿ ಕಾರ್ಯಗಾರಕ್ಕೆ ಆಗಮಿಸಿದ ಸರ್ವರನ್ನು ಸ್ವಾಗತಿಸಿದರು. ಶಾಲಾ ಸಹ ಶಿಕ್ಷಕಿ ಪ್ರಿಯಾ ಕಾರ್ಯಕ್ರಮ ನಿರೂಪಿಸಿ, ವಂದನಾರ್ಪಣೆಗೈದರು.