18% ಡಿವಿಡೆಂಡ್ | ಹಿರಿಯ ಮೂರ್ತೆದಾರರಿಗೆ ಸನ್ಮಾನ | ಶೀಘ್ರದಲ್ಲೇ ಪುಣ್ಚತ್ತಾರಿನಲ್ಲಿ ನೂತನ ಶಾಖೆ
ಪುತ್ತೂರು: ಪುರುಷರಕಟ್ಟೆ ಶಿವಕೃಪಾ ಕಟ್ಟಡದಲ್ಲಿ ವ್ಯವಹರಿಸುತ್ತಿರುವ ಮೂರ್ತೆದಾರರ ಸೇವಾ ಸಹಕಾರಿ ಸಂಘ ನರಿಮೊಗರು ಇದರ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯು ಆ.25ರಂದು ಪೂರ್ವಾಹ್ನ ನರಿಮೊಗರು ಸೇವಾ ಸಹಕಾರಿ ಬ್ಯಾಂಕಿನ ರೈತ ಭವನ ಸಭಾಂಗಣದಲ್ಲಿ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಂಘ ಅಭಿವೃದ್ಧಿಯಲ್ಲಿ ವಿಶ್ವಾಸ, ಸಹಕಾರ, ಒಗ್ಗಟ್ಟು, ಟೀಮ್ ವರ್ಕ್ ಮುಖ್ಯ-ಸಂಜೀವ ಪೂಜಾರಿ:
ಮುಖ್ಯ ಅತಿಥಿ, ಬಿ.ಸಿ ರೋಡು ಮೂರ್ತೆದಾರರ ಸಹಕಾರಿ ಮಹಾಮಂಡಲದ ಅಧ್ಯಕ್ಷ ಸಂಜೀವ ಪೂಜಾರಿ ಮಾತನಾಡಿ, ಸಂಘದ ಉನ್ನತಿ ಬಗ್ಗೆ ಚರ್ಚೆ ನಡೆದಾಗ ಆ ಸಂಘವು ಅಭಿವೃದ್ಧಿ ಪಥದತ್ತ ಸಾಗಬಲ್ಲುದು. ಬಿಲ್ಲವ ಸಮಾಜ ಬಾಂಧವರು ಬ್ಯಾಂಕ್ ವ್ಯವಹಾರದಲ್ಲಿ ಹೆಚ್ಚೆಚ್ಚು ತೊಡಗಿಸಿಕೊಂಡು ಬಿಲ್ಲವ ಸಮಾಜದ ಬ್ಯಾಂಕ್‌ಗಳನ್ನು ಅಭಿವೃದ್ಧಿಗೊಳಿಸಬೇಕು. ಬಿಲ್ಲವ ಸಮಾಜದ ಬ್ಯಾಂಕ್‌ಗಳು ಅನೇಕ ಶಾಖೆಗಳನ್ನು ಹೊಂದಿದಾಗ ನಮ್ಮ ಸಮಾಜ ಬಾಂಧವರಿಗೆ ಹೆಚ್ಚಿನ ಉದ್ಯೋಗ ಲಭಿಸುವುದು. ಯಾವುದೇ ಸಂಘವು ಅಭಿವೃದ್ಧಿಯಾಗಬೇಕಾದರೆ ಅಲ್ಲಿ ವಿಶ್ವಾಸ, ಸಹಕಾರ, ಒಗ್ಗಟ್ಟು ಜೊತೆಗೆ ಟೀಮ್ ವರ್ಕ್ ಬೇಕಾಗುತ್ತದೆ ಎಂದರು.
ಶೀಘ್ರದಲ್ಲಿಯೇ ಪುಣ್ಚತ್ತಾರಿನಲ್ಲಿ ನೂತನ ಶಾಖೆ ಪ್ರಾರಂಭ-ಸತೀಶ್ ಕೆಡೆಂಜಿ:
ಅಧ್ಯಕ್ಷತೆ ವಹಿಸಿದ ಮೂರ್ತೆದಾರರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿ ಮಾತನಾಡಿ, ನಮ್ಮ ಬಿಲ್ಲವ ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಸದಸ್ಯರಾಗಬೇಕು, ಖಾತೆಯನ್ನು ಹೊಂದುವಂತಾಗಬೇಕು. ನಮ್ಮ ಸಂಘದಲ್ಲಿ ಗ್ರಾಹಕ ಬಂಧುಗಳಿಗೆ ಠೇವಣಿ ಮೇಲೆ ಹೆಚ್ಚಿನ ಬಡ್ಡಿದರವನ್ನು ನೀಡುವ ಮೂಲಕ ಪ್ರೋತ್ಸಾಹಿಸುತ್ತಿದ್ದೇವೆ. ಸಂಘವು ಅರ್ಹತೆ ಆಧಾರದಲ್ಲಿ ಸಾಲವನ್ನು ನೀಡುತ್ತಿದ್ದು ಎಲ್ಲರ ಸಹಕಾರವಿದ್ರೆ ಸುಮಾರು ನೂರು ಕೋಟಿ ವ್ಯವಹಾರ ಮಾಡಲು ಬದ್ಧರಾಗಿದ್ದೇವೆ ಮಾತ್ರವಲ್ಲ ಗ್ರಾಹಕರ ಅನುಕೂಲತೆಗೋಸ್ಕರ ಶೀಘ್ರದಲ್ಲಿಯೇ ಕಾಣಿಯೂರು ಗ್ರಾಮದ ಪುಣ್ಚತ್ತಾರು ಎಂಬಲ್ಲಿ ನೂತನ ಶಾಖೆಯನ್ನು ಪ್ರಾರಂಭಿಸಲಿದ್ದೇವೆ ಎಂದರು.
ಸಂಘದ ಕಾರ್ಯಕ್ಷೇತ್ರ:
ಸಂಘದ ಕಾರ್ಯಕ್ಷೇತ್ರವು ಪುತ್ತೂರು ತಾಲೂಕಿನ ನರಿಮೊಗರು, ಶಾಂತಿಗೋಡು, ಮುಂಡೂರು, ಕೆಮ್ಮಿಂಜೆ, ಸರ್ವೆ ಹಾಗೂ ಕಡಬ ತಾಲೂಕಿನ ಸವಣೂರು, ಪುಂಚಪ್ಪಾಡಿ, ಕುದ್ಮಾರು, ಕಾಮಣ, ಬೆಳಂದೂರು, ಕಾಣಿಯೂರು, ಚಾರ್ವಾಕ ಮತ್ತು ದೋಲ್ಪಾಡಿ ಗ್ರಾಮಗಳನ್ನು ಒಳಗೊಂಡಿದೆ.
ಪ್ರೋತ್ಸಾಹಧನ ವಿತರಣೆ:
ಸಂಘದ ಕಾರ್ಯವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪ್ರಸಕ್ತ ಮೂರ್ತೆದಾರರಾದ ರಾಧಾಕೃಷ್ಣ ಪೂಜಾರಿ ಪುಂಚಪ್ಪಾಡಿ, ಆನಂದ ಪೂಜಾರಿ ಕಾಣಿಯೂರು ಹಾಗೂ ಗಂಗಾಧರ ಪೂಜಾರಿ ಕಾಣಿಯೂರುರವರಿಗೆ ಪ್ರೋತ್ಸಾಹಧನವನ್ನು ವಿತರಿಸಲಾಯಿತು.
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅಭಿನಂದನೆ:
ಈ ಸಂದರ್ಭದಲ್ಲಿ ಎಸೆಸ್ಸೆಲ್ಸಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಶಾಂತಿಗೋಡು ಪರಕ್ಕಮೆ ನಿವಾಸಿ ಎಸ್.ಸತೀಶ್‌ರವರ ಪುತ್ರ ಮೋಕ್ಷಿತ್ ಪಿ.ಎಸ್, ಬೆಳಂದೂರು ಗ್ರಾಮದ ಅಬೀರ ಮನೆ ಹರೀಶ್ ಬಿ.ಎನ್‌ರವರ ಪುತ್ರಿ ವಂದನಾ ಎ.ಎಚ್, ಶಾಂತಿಗೋಡು ಗ್ರಾಮದ ಮುಂಡೋಡಿ ಗಣೇಶ್ ಎಂ.ರವರ ಪುತ್ರಿ ಗೌತಮಿ, ಶಾಂತಿಗೋಡು ಗ್ರಾಮದ ಪಾಣಂಬು ವಸಂತ ಪಿ.ರವರ ಪುತ್ರಿ ಚಿನ್ಮಯಿ, ಪಿಯುಸಿಯಲ್ಲಿ ಡಿಸ್ಟಿಂಕ್ಷನ್ ಗಳಿಸಿದ ಕಾಮಣ ಗ್ರಾಮದ ಮರ್ಕಜೆ ಸತೀಶ್ ಕೆ.ರವರ ಪುತ್ರಿ ಸುಹಾನಿ ಎಸ್.ಕೆ, ಬೆಳಂದೂರು-ಕುದ್ಮಾರು ಗ್ರಾಮದ ಪಾಣೆ ಜಗನ್ನಾಥ ಕೆ.ರವರ ಪುತ್ರಿ ಸೌಜನ್ಯ ಜೆ, ಬೆಳಂದೂರು ಕೆಲೆಂಬಿರಿ ವಸಂತ ಪೂಜಾರಿ ಬಿ.ರವರ ಪುತ್ರ ಮನ್ವಿತ್ ಸುವರ್ಣ ಬಿ.ವಿ, ಚಾರ್ವಾಕ ಗ್ರಾಮದ ಎಣ್ಮೂರು ಕುಸುಮಾಧರ ಪೂಜಾರಿರವರ ಪುತ್ರ ಅಂಕುಶ್ ಇ.ಕೆ, ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್‌ನಲ್ಲಿ ಶಾಂತಿಗೋಡು ಗ್ರಾಮದ ಕೈಂದಾಡಿ ಯೋಗೀಶ್‌ರವರ ಪುತ್ರ ಅನೀಶ್ ಕೆ.ವೈರವರುಗಳಿಗೆ ಸ್ಮರಣಿಕೆ ನೀಡಿ ಅಭಿನಂದಿಸಲಾಯಿತು.
ಸಭೆಯಲ್ಲಿ ಮಹಾಸಭೆಯ ತಿಳುವಳಿಕೆ ಪತ್ರ, 2023-24ನೇ ಸಾಲಿನ ಆಡಳಿತ ವರದಿ, ಲೆಕ್ಕಪರಿಶೋಧಿತ ಲೆಕ್ಕಪತ್ರ ಮಂಡನೆ ಮತ್ತು ಅಂಗೀಕಾರ, 2024-25ನೇ ಸಾಲಿಗೆ ಅಂದಾಜು ಬಜೆಟ್ ಮಂಡನೆ ಮತ್ತು ಅಂಗೀಕಾರ, 2023-24ನೇ ಸಾಲಿನ ಆಯವ್ಯಯ ಮೀರಿದ ವೆಚ್ಚಗಳ ಮಂಜೂರಾತಿ,2023-24ನೇ ಸಾಲಿನ ನಿವ್ವಳ ಲಾಭವನ್ನು ವಿವಿಧ ನಿಧಿಗಳಿಗೆ ವಿಂಗಡಿಸುವುದು ಹಾಗೂ ಡಿವಿಡೆಂಡ್ ಘೋಷಣೆ, 2024-25ನೇ ಸಾಲಿನ ಲೆಕ್ಕಪರಿಶೋಧಕರ ನೇಮಕದ ಕುರಿತು ಚರ್ಚಿಸಿ ಅಂಗೀಕರಿಸಲಾಯಿತು.
ಆಶಾ ಯೋಗೀಶ್ ಪೂಜಾರಿ ಕೈಂದಾಡಿ ಪ್ರಾರ್ಥಿಸಿದರು. ನಿರ್ದೇಶಕ ಉದಯಕುಮಾರ್ ಕೋಲಾಡಿ ಸ್ವಾಗತಿಸಿದರು. ಸಂಘದ ಉಪಾಧ್ಯಕ್ಷೆ ಪದ್ಮಾವತಿ ಮುಂಡೋಡಿ, ನಿರ್ದೇಶಕರಾದ ಎಚ್.ಅಣ್ಣಿ ಪೂಜಾರಿ ಹಿಂದಾರು, ಸಂತೋಷ್ ಕುಮಾರ್ ಮರಕ್ಕೂರು, ಜಯಂತ ಪೂಜಾರಿ ಕೊಡಂಗೆ, ದಾಮೋದರ ಪೂಜಾರಿ ಕರ್ಪುತ್ತಮೂಲೆ, ಗಣೇಶ್ ಸಾಲ್ಯಾನ್ ಪಜಿಮಣ್ಣು, ಗೌರವ ಸಲಹೆಗಾರ ಸಂತೋಷ್ ಕುಮಾರ್ ಮರಕ್ಕೂರು ಉಪಸ್ಥಿತರಿದ್ದರು. ನಿರ್ದೇಶಕಿ ಗೀತಾ ಕೆ.ಕುರೆಮಜಲು ವಂದಿಸಿದರು. ಸಂಘದ ಪ್ರಭಾರ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಶನ್ ಎ, ಶಾಖಾ ವ್ಯವಸ್ಥಾಪಕಿ ಶೃತಿ, ಕಂಪ್ಯೂಟರ್ ಆಪರೇಟರ್ ಗಳಾದ ರಮ್ಯಶ್ರೀ ಕೆ, ರೂಪಿಕಾ ಕೆ, ಗುಮಾಸ್ತೆ ಕು.ಶ್ವೇತಾಶ್ರೀ, ದೈನಿಕ ಠೇವಣಿ ಸಂಗ್ರಾಹಕರಾದ ಚಂದ್ರಶೇಖರ ಕುರೆಮಜಲು, ಕಿರಣ್ ಕೋಡಿಬೈಲು, ಸರಾಫರಾದ ಜನಾರ್ದನ ಆಚಾರ್ಯ ಶಾಂತಿಗೋಡು, ದಾಮೋದರ ಆಚಾರ್ಯ ಪುರುಷರಕಟ್ಟೆರವರು ವಿವಿಧ ರೀತಿಯಲ್ಲಿ ಸಹಕರಿಸಿದರು.
ಈರ್ವರಿಗೆ ಸನ್ಮಾನ..
ಶಾಂತಿಗೋಡು ಗ್ರಾಮದ ಪಾಣಂಬು ನಿವಾಸಿ ಬಾಬು ಪೂಜಾರಿ ಹಾಗೂ ತಂಕು ಪೂಜಾರಿರವರ ಪುತ್ರರಾಗಿದ್ದು ತನ್ನ 18ನೇ ವಯಸ್ಸಿನಲ್ಲಿಯೇ ಮಾವ ಸಂಕಪ್ಪ ಪೂಜಾರಿರವರೊಂದಿಗೆ ಮೂರ್ತೆಗಾರಿಕೆಯನ್ನು ಆರಂಭಿಸಿ 32 ವರ್ಷಗಳ ಕಾಲ ಮೂರ್ತೆಗಾರಿಕೆಯಲ್ಲಿ ತೊಡಗಿಸಿಕೊಂಡ ಆನಂದ ಪೂಜಾರಿರವರನ್ನು ಹಾಗೂ ಮುಂಡೂರು ಗ್ರಾಮದ ಕುರೆಮಜಲು ಪದ್ಮಪ್ಪ ಪೂಜಾರಿ ಹಾಗೂ ಸುಶೀಲ ದಂಪತಿ ಪುತ್ರರಾಗಿದ್ದು ತನ್ನ 15ನೇ ವಯಸ್ಸಿನಲ್ಲಿಯೇ ತಂದೆಯೊಂದಿಗೆ ಮೂರ್ತೆಗಾರಿಕೆಯಲ್ಲಿ ತೊಡಗಿಸಿಕೊಂಡು ಒಟ್ಟು 45 ವರ್ಷಗಳ ಕಾಲ ಮೂರ್ತೆಗಾರಿಕೆಯಲ್ಲಿ ತೊಡಗಿಸಿಕೊಂಡ ಕೂಸಪ್ಪ ಪೂಜಾರಿರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ಶೇ.18% ಡಿವಿಡೆಂಡ್..
ವರದಿ ಸಾಲಿನಲ್ಲಿ ‘ಎ’ ತರಗತಿಯ 25 ಮಂದಿ ಸದಸ್ಯರು ಸೇರ್ಪಡೆಗೊಂಡು ವರ್ಷಾಂತ್ಯಕ್ಕೆ ಒಟ್ಟು 471 ಮಂದಿ ಸದಸ್ಯರಿದ್ದಾರೆ. ಸಂಘವು ವಾರ್ಷಿಕ ರೂ.25 ಕೋಟಿ ವ್ಯವಹಾರ ನಡೆಸಿದ್ದು ಇದು ಸಂಘದ ನಿರ್ದೇಶಕರ, ಸಿಬ್ಬಂದಿಗಳಿಂದ ಸಾಧ್ಯವಾಗಿದೆ. ಆದ್ದರಿಂದ ಈ ಬಾರಿ ಸಂಘವು ಶೇ.18 ಡಿವಿಡೆಂಡ್‌ನ್ನು ನೀಡುತ್ತಿದ್ದೇವೆ ಎಂದು ಅಧ್ಯಕ್ಷ ಸತೀಶ್ ಕುಮಾರ್ ಕೆಡೆಂಜಿರವರು ಘೋಷಣೆ ಮಾಡಿದರು.