ಸಂಘದ ಸ್ವಯಂ ಸೇವಕ ಹುದ್ದೆಯಿಂದ ಮುರಳಿಕೃಷ್ಣ ಹಸಂತಡ್ಕ ಬಿಡುಗಡೆ- ಪಕ್ಷ ಸಂಘಟನೆಗೆ ವಿಹಿಂಪ ಸೂಚನೆ

0


ಪುತ್ತೂರು: ರಾಷ್ಟ್ರೀಯ ಸ್ವಯಂ ಸೇವಕ ಸಂಘದಲ್ಲಿ ಸಕ್ರೀಯರಾಗಿದ್ದು ಪರಿವಾರ ಸಂಘಟನೆಗಳಲ್ಲಿ ಸುದೀರ್ಘ 28 ವರ್ಷಗಳ ಕಾಲ ವಿವಿಧ ಜವಾಬ್ದಾರಿಗಳನ್ನು ನಿರ್ವಹಿಸಿದ ಮುರಳಿಕೃಷ್ಣ ಹಸಂತಡ್ಕ ಅವರನ್ನು ಇದೀಗ ಸಂಘದಿಂದ ಪೂರ್ಣವಾಗಿ ಬಿಡುಗಡೆಗೊಳಿಸಿ ಪಕ್ಷ ಸಂಘಟನೆಯನ್ನು ಮಾಡುವಂತೆ ವಿಶ್ವಹಿಂದು ಪರಿಷದ್ ಸೂಚನೆ ನೀಡಿದೆ. ಇದು ಪುತ್ತೂರಿನ ಮುಂದಿನ ರಾಜಕೀಯ ಬೆಳವಣಿಗೆಯಲ್ಲೂ ಕುತೂಹಲ ಮೂಡಿಸಿದೆ.

ವಿದ್ಯಾರ್ಥಿ ಜೀವನದಲ್ಲೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯಕರ್ತನಾಗಿ ಗುರುತಿಸಿಕೊಂಡಿದ್ದ ಮುರಳಿಕೃಷ್ಣ ಅವರು, ಆರಂಭದಲ್ಲಿ ಬಜರಂಗದಳದಲ್ಲಿ ಗುರುತಿಸಿಕೊಂಡಿದ್ದರು. ಬಜರಂಗದಳದ ಗ್ರಾಮಾಂತರ ಸಂಚಾಲಕರಾಗಿ ಮೊದಲು ಜವಾಬ್ದಾರಿ ಸ್ವೀಕರಿಸಿದ್ದರು. ಆ ಬಳಿಕ ಬಜರಂಗದಳ ಜಿಲ್ಲೆ, ರಾಜ್ಯ ಘಟಕದಲ್ಲೂ ಜವಾಬ್ದಾರಿ ನಿಭಾಯಿಸಿದ್ದಾರೆ. ಬಜರಂಗದಳ ದಕ್ಷಿಣ ವಿಭಾಗ ಪ್ರಾಂತ ಸಹಸಂಯೋಜಕರಾಗಿ 28 ವರ್ಷ ಸೇವೆ ಸಲ್ಲಿಸಿದ್ದಾರೆ. ವಿಶ್ವಹಿಂದು ಪ್ರಾಂತ ಗೋ ರಕ್ಷಾ ಪ್ರಮುಖರಾಗಿಯೂ ಜವಾಬ್ದಾರಿ ನಿರ್ವಹಿಸಿದ್ದಾರೆ. ಇದೀಗ ಸಂಘದ ಸೂಚನೆಯಂತೆ ಸಂಘಟನೆಯ ವಿವಿಧ ಜವಾಬ್ದಾರಿಯಿಂದ ಅವರನ್ನು ಬಿಡುಗಡೆಗೊಳಿಸಲಾಗಿದೆ. ಜು.13ರಂದು ಬೆಂಗಳೂರಿನಲ್ಲಿ ನಡೆದ ವಿಶ್ವಹಿಂದು ಪರಿಷತ್ ಪ್ರಾಂತೀಯ ಬೈಠಕ್‌ನಲ್ಲಿ ಅವರನ್ನು ಸಂಘಟನೆಗಳ ಜವಾಬ್ದಾರಿಯಿಂದ ವಿಮುಖಗೊಳಿಸಿ ಮುಂದೆ ಪಕ್ಷ ಸಂಘಟನೆ ಮಾಡುವಂತೆ ಸೂಚಿಸಲಾಗಿದೆ. ಈಗಾಗಲೇ ಬಿಜೆಪಿ ಪ್ರಾಥಮಿಕ ಸದಸ್ಯತ್ವ ಪಡೆದಿರುವ ಅವರು ಮುಂದೆ ಅದನ್ನು ನವೀಕರಣಗೊಳಿಸಿ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಎರಡು ವರ್ಷ ಪೂರ್ಣಗೊಳಿಸಿದ ಬಳಿಕ ಅವರಿಗೆ ಪಕ್ಷದಲ್ಲೂ ಜವಾಬ್ದಾರಿ ನೀಡಲಾಗುತ್ತದೆ ಎಂದು ತಿಳಿದುಬಂದಿದೆ.

ಪುತ್ತೂರಿನಲ್ಲಿ ಬಿಜೆಪಿ ಪ್ರಬಲ ನಾಯಕನಾಗುವ ಸಾಧ್ಯತೆ
ಪರಿವಾರ ಸಂಘಟನೆ ಒಂದು ತೀರ್ಮಾನ ತೆಗೆದುಕೊಳ್ಳುತ್ತದೆ ಎಂದರೆ ಅದರ ಹಿಂದೆ ದೂರ ದೃಷ್ಟಿಯಿರುತ್ತದೆ. ಅದೇ ಉದ್ದೇಶಕ್ಕಾಗಿ ಪುತ್ತೂರಿನ ರಾಜಕೀಯ ಬೆಳವಣಿಗೆಯಲ್ಲಿ ಸಂಘ ಪರಿವಾರ ಮುರಳಿಕೃಷ್ಣ ಹಸಂತಡ್ಕ ಅವರನ್ನು ಮುಂದೆ ಬಿಟ್ಟಿದೆ ಎನ್ನಲಾಗಿದೆ. ಮುರಳಿಕೃಷ್ಣ ಹಸಂತಡ್ಕ ಅವರಿಗೆ ಬಹಳ ಹಿಂದೆಯೇ ಬಿಜೆಪಿಯಿಂದ ಆಫರ್ ಇತ್ತು. ಆದರೆ ಅದನ್ನು ಬದಿಗೊತ್ತಿ ಸಂಘಟನೆಯಲ್ಲೇ ಮುಂದುವರಿದಿದ್ದರು. ಆದರೆ ಇದೀಗ ವಿಶ್ವಹಿಂದು ಪರಿಷದ್ ಸೂಚನೆಯಂತೆ ಅವರು ಬಿಜೆಪಿಯಲ್ಲಿ ಸಕ್ರಿಯರಾಗಲಿದ್ದಾರೆ. ಮುಂದಿನ ಎರಡು ವರ್ಷ ಅವರು ಸಾಮಾನ್ಯ ಕಾರ್ಯಕರ್ತರಂತೆ ಕೆಲಸ ನಿರ್ವಹಿಸಿ ಬಳಿಕ ಅವರಿಗೆ ಪಕ್ಷದಿಂದ ಜವಾಬ್ದಾರಿ ನೀಡಲಾಗುತ್ತದೆ. ಮುಂದೆ ವಿಧಾನಸಭೆ ಚುನಾವಣೆಯ ಸಂದರ್ಭ ಮುರಳೀಕೃಷ್ಣ ಹಸಂತಡ್ಕ ಅವರ ಹೆಸರೂ ಕೇಳಿ ಬರುವ ಸಾಧ್ಯತೆ ಬಹುತೇಕ ಖಚಿತವಾಗಲಿದೆ.

LEAVE A REPLY

Please enter your comment!
Please enter your name here