ವಿಟ್ಲ: ಇಡ್ಕಿದು ಗ್ರಾಮ ಪಂಚಾಯತ್ ವ್ಯಾಪ್ತಿಯ ಉರಿಮಜಲು ಎಂಬಲ್ಲಿನ ಖಾಸಗಿ ವ್ಯಕ್ತಿಯೋರ್ವರ ಜಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಯಲ್ ಪ್ಲೇ ಕ್ಲಬ್ ಸ್ಟೇಡಿಯಂ ವಿರುದ್ದ ಉರಿಮಜಲು ಪರಿಸರದ ಸಾರ್ವಜನಿಕರು ಇಡ್ಕಿದು ಗ್ರಾಮ ಪಂಚಾಯತ್ ಅಭಿವೃದ್ದಿ ಅಧಿಕಾರಿ ಗೋಕುಲ್ ದಾಸ್ ಭಕ್ತ್ ರವರಿಗೆ ಮನವಿ ಸಲ್ಲಿಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.
ಬಂಟ್ವಾಳ ತಾಲೂಕು, ಇಡ್ಕಿದು ಗ್ರಾಮದ ಉರಿಮಜಲು ಎಂಬಲ್ಲಿ ’ರಾಯಲ್ ಪ್ಲೇ ಕ್ಲಬ್’ ಎಂಬ ಸ್ಟೇಡಿಯಂ ಸುಮಾರು 3-4 ತಿಂಗಳುಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಇದರಿಂದಾಗಿ ಈ ಪರಿಸರದ ನಾಗರಿಕರಿಗೆ ಬಹಳಷ್ಟು ತೊಂದರೆ ಅನುಭವಿಸುವಂತಾಗಿದೆ. ಈ ಸ್ಟೇಡಿಯಂ ತಡರಾತ್ರಿಯವರೆಗೆ, ಹೆಚ್ಚಿನ ಸಂದಂರ್ಭದಲ್ಲಿ ರಾತ್ರಿ ಇಡೀ ಕಾರ್ಯನಿರ್ವಹಿಸುತ್ತಿರುತ್ತದೆ. ಬೇರೆ ಬೇರೆ ಊರುಗಳಿಂದ ಅಪರಿಚಿತರ ರಾತ್ರಿಯ ಸಮಯದಲ್ಲಿ ಬಂದು ಗುಂಪುಕಟ್ಟಿಕೊಂಡು ರಸ್ತೆಯ ಬದಿಯಲ್ಲಿ ಸೇರಿಕೊಂಡಿರುತ್ತಾರೆ. ರಸ್ತೆಯ ಬದಿಯಲ್ಲಿ ಅಡ್ಡಾದಿಡ್ಡಿ ವಾಹನ ನಿಲ್ಲಿಸಿ ಅಲ್ಲಿ ಓಡಾಡುವ ಜನರಿಗೆ ಭಯದ ವಾತಾವರಣ ನಿರ್ಮಾಣವಾಗಿರುತ್ತದೆ. ದ್ವಿಚಕ್ರ ವಾಹನಗಳಲ್ಲಿ ಅತೀ ವೇಗ ಹಾಗೂ ಅಜಾಗರೂಕತೆಯ ವಾಹನ ಚಲಾವಣೆ, ದ್ವಿಚಕ್ರ ವಾಹನಗಳನ್ನು ಅತಿಯಾಗಿ ಶಬ್ಧ ಮಾಡಿ, ರಾತ್ರಿಯ ಸಮಯದಲ್ಲಿ ಊರ ಜನರಿಗೆ ತೊಂದರೆ ನೀಡುವಿದಲ್ಲದೇ, ಶಬ್ಧ ಮಾಲಿನ್ಯ ಉಂಟಾಗುತ್ತಿದೆ. ಗುಂಪು ಸೇರಿಕೊಂಡು ಗಾಂಜಾ ಮತ್ತು ಅಮಲು ಪದಾರ್ಥ ಸೇವನೆಯನ್ನು ಕೂಡಾ ಮಾಡುತ್ತಾರೆ ಎನ್ನುವ ಗುಮಾನಿ ಇದೆ.
ಸ್ಟೇಡಿಯಂ ಬಳಿ ತೆರೆಯಲಾಗಿರುವ ಅಂಗಡಿಯೂ ಅನಧಿಕೃತವಾಗಿದ್ದು, ಯಾವುದೇ ಪರವಾನಿಗೆ ಹೊಂದಿರುವುದಿಲ್ಲ. ಈ ಸ್ಟೇಡಿಯಂನಿಂದಾಗಿ ಊರಿನಲ್ಲಿ ಇನ್ನಾವುದೇ ಅಹಿತಕರ ಘಟನೆ ನಡೆಯುವುದನ್ನು ತಪ್ಪಿಸುವ ಸಲುವಾಗಿ ತಕ್ಷಣ ಆ ಪ್ಲೇ ಕ್ಲಬ್ / ಸ್ಟೇಡಿಯಂನ್ನು ಸ್ಥಗಿತಗೊಳಿಸಿ ಸಾರ್ವಜನಿಕರಿಗೆ ಉಂಟಾಗುವ ತೊಂದರೆಯನ್ನು ತಪ್ಪಿಸಬೇಕೆಂದು ಸಾರ್ವಜನಿಕರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ.