ಪ್ರಾಕೃತಿಕ ವಿಕೋಪದಿಂದ ತಾಲೂಕಿನಲ್ಲಿ 32 ಮನೆ, 7 ದನದ ಹಟ್ಟಿಗೆ ಹಾನಿ, 8 ಜಾನುವಾರು ಸಾವು-ರೂ.16.25ಲಕ್ಷ ಪರಿಹಾರ ವಿತರಣೆ

0

ಪುತ್ತೂರು: ತಾಲೂಕಿನ ವಿವಿಧ ಕಡೆಗಳಲ್ಲಿ ಈ ವರ್ಷ ಸಂಭವಿಸಿದ ಪ್ರಾಕೃತಿಕ ವಿಕೋಪದಿಂದಾಗಿ 32 ಮನೆ, 7 ದನದ ಹಟ್ಟಿಗೆ ಹಾನಿಯುಂಟಾಗಿದೆ. 4 ಜಾನುವಾರು ಸಾವನ್ನಪ್ಪಿದೆ. ಕಂದಾಯ ಇಲಾಖೆಯಿಂದ ಒಟ್ಟು ರೂ.14,32,500 ಪರಿಹಾರ ವಿತರಿಸಲಾಗಿದೆ.


ತಾಲೂಕಿನಲ್ಲಿ 7 ಮನೆಗಳಿಗೆ ಸಂಪೂರ್ಣ ಹಾನಿ, 6 ಮನೆಗಳಿಗೆ ತೀವ್ರ ಹಾನಿ, 5 ಮನೆಗಳಿಗೆ ಶೇ.25ಕ್ಕಿಂತ ಹೆಚ್ಚು ಹಾನಿ, 14 ಮನೆಗಳಿಗೆ ಶೇ.15ಕ್ಕಿಂತ ಹೆಚ್ಚು ಹಾನಿಯುಂಟಾಗಿದೆ. 7 ದನದ ಕೊಟ್ಟಿಗೆಗಳಿಗೆ ಹಾನಿಯುಂಟಾಗಿದೆ. 4 ದನ ಹಾಗೂ 4 ಕರು ಸೇರಿದಂತೆ ಒಟ್ಟು 8 ಜಾನುವಾರು ಮೃತಪಟ್ಟಿದೆ. ಸಂಪೂರ್ಣ ಹಾನಿಯಾದ ಮನೆಗಳಿಗೆ ರೂ.1.20 ಲಕ್ಷ, ತೀವ್ರ ಹಾನಿಯಾದ ಮನೆಗಳಿಗೆ ರೂ.50,000, ಶೇ.25ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ ರೂ.30,000 ಹಾಗೂ ಶೇ.15ಕ್ಕಿಂತ ಹೆಚ್ಚು ಹಾನಿಯಾದ ಮನೆಗಳಿಗೆ ರೂ.6,500ರಂತೆ ಕಂದಾಯ ಇಲಾಖೆಯಿಂದ ಪರಿಹಾರ ವಿತರಿಸಲಾಗಿದೆ.


ತಾಲೂಕಿನಲ್ಲಿ ಕೆಮ್ಮಿಂಜೆಯ ವಿಠಲ ಆಚಾರ್ಯ, ಆರ್ಯಾಪುವಿನ ಮಮತ, ಕೆಯ್ಯೂರಿನ ಅಣ್ಣು, ಕೊಳ್ತಿಗೆಯ ಸೀತಾಲಕ್ಷ್ಮೀ, ಬನ್ನೂರಿನ ಅಬ್ದುಲ್ ಮಜೀದ್, ಕೊಡಿಪ್ಪಾಡಿಯ ಬೊಮ್ಮಿ ಹಾಗೂ ಕೆಯ್ಯೂರಿನ ಬಟ್ಯ ಎಂಬವರ ಮನೆಗಳಿಗೆ ತೀವ್ರ ಹಾನಿಯುಂಟಾಗಿದೆ. 7 ಮನೆಗಳಿಗೆ ತಲಾ ರೂ.1,20ಲಕ್ಷದಂತೆ ರೂ.8.40ಲಕ್ಷ ಪರಿಹಾರ ಧನ ವಿತರಿಸಲಾಗಿದೆ. ನೆಟ್ಟಣಿಗೆ ಮುಡ್ನೂರಿನ ಖತೀಜಮ್ಮ, ಕೊಳ್ತಿಗೆಯ ಭಾರತಿ, ಮಾಡ್ನೂರಿನ ಕಮಲ, ಮರಿಯಮ್ಮ, ಅರಿಯಡ್ಕದ ವೆಂಕಪ್ಪ ನಾಯ್ಕ, ಮಾಡ್ನೂರಿನ ಸಫಿಯ ಎಂಬವರ ಮನೆಗೆ ಭಾಗಶಃ ಹಾನಿಯಾಗಿದ್ದು ತಲಾ ರೂ.50,000ದಂತೆ ಪರಿಹಾರ ಧನ ವಿತರಿಸಲಾಗಿದೆ. ಕೆಯ್ಯೂರಿನ ಸಾರಮ್ಮ ಹಾಗೂ ಸರ್ವೆಯ ಪಿ.ಧರ್ಣಪ್ಪ ಮೂಲ್ಯ ಎಂಬವರಿಗೆ ತಲಾ ರೂ.30,000, ಮಾಡ್ನೂರಿನ ಕಮಲ ಮೂಲ್ಯ, ಮುತ್ತಮ್ಮ, ಪಾಣಾಜೆಯ ಲಕ್ಷ್ಮೀರವರ ಮನೆಗಳಿಗೆ ತಲಾ ರೂ.25,000, ಬಡಗನ್ನೂರಿನ ಸರಸ್ವತಿ, ಕೆದಂಬಾಡಿಯ ಭಾಗೀರಥಿ, ಕಸಬದ ನಾರಾಯಣ, ರತ್ನ, ಅಮೀನ, ಬಜತ್ತೂರಿನ ಖತೀಜಮ್ಮ, ಚಿಕ್ಕಮುಡ್ನೂರಿನ ಲಕ್ಷ್ಮೀ, ಬಲ್ನಾಡಿನ ಚೋಮ ನಾಯ್ಕ, ನಿಡ್ಪಳ್ಳಿ ಕೊರಪೋಳು, ನೆಟ್ಟಣಿಗೆ ಮುಡ್ನೂರಿನ ಕುಸುಮ, ಕೆದಂಬಾಡಿಯ ಯಮುನಾ, ಕೋಡಿಂಬಾಡಿಯ ಗೀತಾ, ಕುಡಿಪ್ಪಾಡಿಯ ಅಣ್ಣು, 34 ನೆಕ್ಕಿಲಾಡಿಯ ನರಸಿಂಹ ನಾಯಕ್‌ರವರಿಗೆ ತಲಾ ರೂ.6,500ರಂತೆ ಒಟ್ಟು ರೂ.91,000 ಪರಿಹಾರ ಧನ ವಿತರಿಸಲಾಗಿದೆ. ಮಳೆನೀರು ನುಗ್ಗಿದ ಮನೆಗಳ ಸ್ವಚ್ಛತೆಗೆ ತಲಾ ರೂ.5000 ದಂತೆ 7 ಮನೆಗಳಿಗೆ ಒಟ್ಟು ರೂ.35,000 ಪರಿಹಾರ ಧನ ವಿತರಿಸಲಾಗಿದೆ.


8 ಜಾನುವಾರು ಸಾವು, 7 ಹಟ್ಟಿಗಳಿಗೆ ಹಾನಿ:ಪ್ರಾಕೃತಿಕ ವಿಕೋಪದಿಂದಾಗಿ ತಾಲೂಕಿನಲ್ಲಿ 7 ದನದ ಹಟ್ಟಿಗಳಿಗೆ ಹಾನಿಯುಂಟಾಗಿದೆ. 4 ದನ ಹಾಗೂ 4 ಕರು ಮೃತಪಟ್ಟಿದೆ. ಒಂದು ದನಕ್ಕೆ ತಲಾ ರೂ.37,500ದಂತೆ ರೂ.1.50ಲಕ್ಷ ಹಾಗೂ ಕರುವಿಗೆ ತಲಾ ರೂ.20,000 ಒಟ್ಟು 80,000 ಪರಿಹಾರ ಹಾಗೂ ದನದ ಕೊಟ್ಟಿಗೆಗೆ ತಲಾ ರೂ.3000ದಂತೆ ಒಟ್ಟು ರೂ.21,000 ಪರಿಹಾರ ಧನ ವಿತರಿಸಲಾಗಿದೆ ಎಂದು ತಾಲೂಕು ಕಚೇರಿಯಿಂದ ಮಾಹಿತಿ ಲಭ್ಯವಾಗಿದೆ.

LEAVE A REPLY

Please enter your comment!
Please enter your name here