ವಳಾಲು ಸರ್ಕಾರಿ ಪ್ರೌಢಶಾಲೆಯ ಶಿಕ್ಷಕರಾದ ಚಕ್ರಪಾಣಿ, ರಾಘವೇಂದ್ರರಿಗೆ ಬೀಳ್ಕೊಡುಗೆ

0

ನೆಲ್ಯಾಡಿ: ವರ್ಗಾವಣೆಗೊಂಡಿರುವ ವಳಾಲು ಸರ್ಕಾರಿ ಪ್ರೌಢಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರೂ, ಪ್ರಭಾರ ಮುಖ್ಯಗುರುಗಳೂ ಆಗಿದ್ದ ಚಕ್ರಪಾಣಿ ಎ.ವಿ.,ಹಾಗೂ ವಿಜ್ಞಾನ ಶಿಕ್ಷಕ ರಾಘವೇಂದ್ರ ಕೆ.,ಅವರಿಗೆ ಬೀಳ್ಕೊಡುಗೆ ಸಮಾರಂಭ ಆ.27ರಂದು ಬಜತ್ತೂರು ಗ್ರಾ.ಪಂ.ಸಭಾಂಗಣದಲ್ಲಿ ನಡೆಯಿತು.

ಎಸ್‌ಡಿಎಂಸಿಯ ನಾಮನಿರ್ದೇಶಿತ ಸದಸ್ಯರೂ ಆದ ಸಾಹಿತಿ ವಿಲ್ಫ್ರೆಡ್ ಡಿ.ಸೋಜ ಅವರು ಮಾತನಾಡಿ, ಶಿಕ್ಷಣ ಶಿಕ್ಷೆಯಲ್ಲ. ವಿದ್ಯೆ ವ್ಯಕ್ತಿತ್ವ ವಿಕಸನಕ್ಕೆ ದಾರಿ ಎಂಬ ಸಿದ್ಧಾಂತವನ್ನು ನಂಬಿ ಅದನ್ನು ಅಕ್ಷರಶಃ ಪಾಲಿಸಿದವರು ಶಿಕ್ಷಕರಾದ ಚಕ್ರಪಾಣಿ ಎ.ವಿ ಹಾಗೂ ರಾಘವೇಂದ್ರ ಕೆ., ಅವರು. ಈ ಇಬ್ಬರೂ ಶಿಕ್ಷಕರು ಜನತೆಯ ಹೃದಯ ಗೆದ್ದ ಶಿಕ್ಷಕರಾಗಿದ್ದಾರೆ ಎಂದರು. ಬಜತ್ತೂರು ಕ್ಲಸ್ಟರ್ ಸಿಆರ್‌ಪಿ ಮಂಜುನಾಥ್ ಅವರು ಮಾತನಾಡಿ, ಮಕ್ಕಳಿಗೆ ಶೈಕ್ಷಣಿಕವಾಗಿ ಸುಭದ್ರ ಅಡಿಪಾಯ ಹಾಕಿಕೊಡುವುದು ಪ್ರತಿಯೊಬ್ಬ ಶಿಕ್ಷಕನ ಗುರಿ. ಯಾವುದೇ ಶಿಕ್ಷಕನಲ್ಲಿಯೂ ಕರ್ತವ್ಯ ಬಹಳ ಮುಖ್ಯವಾಗುತ್ತದೆ. ಈ ಶಿಕ್ಷಕನ ಸಾಮರ್ಥ್ಯ ಊರಿನ ಅಭಿವೃದ್ಧಿಗೆ ಪೂರಕವಾಗುತ್ತದೆ. ಈ ನಿಟ್ಟಿನಲ್ಲಿ ಚಕ್ರಪಾಣಿ ಹಾಗೂ ರಾಘವೇಂದ್ರ ಅವರ ಕರ್ತವ್ಯದ ಸೇವೆ ಸಾರ್ಥಕವಾಗಿದೆ ಎಂದರು. ಶಾಲಾ ಎಸ್‌ಡಿಎಂಸಿ ಕಾರ್ಯಾಧ್ಯಕ್ಷ ಸಿದ್ದಪ್ಪ ನ್ಯಾಕ್ ಅಧ್ಯಕ್ಷತೆ ವಹಿಸಿದ್ದರು.

ಅತಿಥಿಗಳಾಗಿ ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಮಹೇಂದ್ರ ವರ್ಮ, ಬಜತ್ತೂರು ಪ್ರಾಥಮಿಕ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಗೋಪಾಲ ದಡ್ಡು, ಗ್ರಾ.ಪಂ ಸದಸ್ಯ ಉಮೇಶ್ ಓಡ್ರಪಾಲು, ವಳಾಲು ಮಸೀದಿ ಸಮಿತಿ ಪ್ರ.ಕಾರ್ಯದರ್ಶಿ ಸರ್ಫರಾಜ್ ವಳಾಲು ಉಪಸ್ಥಿತರಿದ್ದರು. ಎಸ್‌ಡಿಎಂಸಿ ಮಾಜಿ ಅಧ್ಯಕ್ಷರಾದ ಮುಕುಂದ ಬಜತ್ತೂರು, ವಸಂತ ಪಿಜಕ್ಕಳ, ವಿದ್ಯಾರ್ಥಿಗಳಾದ ಧನ್ಯಶ್ರೀ, ಯಶ್ಮಿತಾ, ಪ್ರಜ್ಞಾ, ಲಾವಣ್ಯ, ಸಚಿನ್, ಶಿಕ್ಷಕಿಯರಾದ ರೇವತಿ ಮತ್ತು ಶೈಲಶ್ರೀ ಅನಿಸಿಕೆ ವ್ಯಕ್ತಪಡಿಸಿದರು.

ಸನ್ಮಾನ:
ವರ್ಗಾವಣೆಗೊಂಡ ಶಿಕ್ಷಕರಾದ ಚಕ್ರಪಾಣಿ ಎ.ವಿ ಹಾಗೂ ರಾಘವೇಂದ್ರ ಕೆ ಅವರಿಗೆ ಶಾಲಾ ಶಿಕ್ಷಕರು ಹಾಗೂ ಎಸ್‌ಡಿಎಂಸಿ ಪರವಾಗಿ ಶಾಲು ಹೊದಿಸಿ ಸನ್ಮಾನಿಸಲಾಯಿತು. ವಿದ್ಯಾರ್ಥಿಗಳು ಮತ್ತು ವಿವಿಧ ಸಂಘಟನೆಗಳ ವತಿಯಿಂದಲೂ ಸನ್ಮಾನ-ಅಭಿನಂದನೆಯ ಕಾರ್ಯಕ್ರಮ ನಡೆಯಿತು. ಸನ್ಮಾನ ಸ್ವೀಕರಿಸಿದ ಶಿಕ್ಷಕ ಚಕ್ರಪಾಣಿ ಅವರು ಮಾತನಾಡಿ, ಶಿಕ್ಷಕರು ಮಾತನಾಡದೆ ಅವರ ‘ಕೆಲಸ’ ಗಳು ಮಾತನಾಡಿದಾಗ ಮಾತ್ರ ನಿಜವಾದ ಸಾಧಕರಾಗುತ್ತಾರೆ. ಯಾವುದೇ ಶಿಕ್ಷಕನಿಗೂ ಒಂದು ಕನಸು ಬೇಕು. ಇಲ್ಲವಾದರೆ ಆತ ತನ್ನ ವೃತ್ತಿಯಲ್ಲಿ ಯಶಸ್ವಿಯಾಗಲು ಸಾಧ್ಯವಿಲ್ಲ. ಸರ್ಕಾರಿ ಶಾಲೆಗಳು ಅಭಿವೃದ್ಧಿಯಾಗಬೇಕಾದರೆ ಶಿಕ್ಷಕರು ಮಾತ್ರವಲ್ಲ ಪೋಷಕರ ಸಹಕಾರ ಅತೀ ಅಗತ್ಯ. ಪೋಷಕರು ಸರ್ಕಾರಿ ಶಾಲೆಗಳಿಗೆ ತಮ್ಮ ಮಕ್ಕಳನ್ನು ಸೇರಿಸುವಲ್ಲಿ ಮೊದಲ ಆದ್ಯತೆ ನೀಡಿದರೆ ಶಾಲೆಯೊಂದಿಗೆ ಊರು ಕೂಡಾ ಅಭಿವೃದ್ಧಿಯಾಗುತ್ತದೆ ಎಂದರು. ಶಿಕ್ಷಕ ರಾಘವೇಂದ್ರ ಕೆ ಅವರು ಮಾತನಾಡಿ, ಇಲ್ಲಿನ ಜನತೆ ಸಹಕಾರ ಪ್ರಿಯರು. ಯಾವುದೇ ಸಂದರ್ಭ ಇರಲಿ ಶಾಲಾ ಕಾರ್ಯಕ್ರಮಗಳಿಗೆ ನೆರವು ನೀಡಲು ಹಿಂದೆ ಮುಂದೆ ನೋಡುವುದಿಲ್ಲ. ಇತರ ಭಾಗಗಳಿಗೆ ಹೋಲಿಸಿದರೆ ಇಲ್ಲಿ ರಾಜಕೀಯದ ನುಸುಳಾಟ ಅತ್ಯಂತ ಕಡಿಮೆಯಾಗಿದೆ. ಎಸ್‌ಡಿಎಂಸಿ ತಂಡವೂ ತುಂಬಾ ಉತ್ತಮ ಸಹಕಾರ ನೀಡುತ್ತದೆ. ಶಾಲಾಭಿಮಾನಕ್ಕೆ ವಳಾಲು ಸರ್ಕಾರಿ ಪ್ರೌಢಶಾಲೆ ಒಂದು ಉತ್ತಮವಾದ ಮಾದರಿ ಎಂದರು.

ಕಾರ್ಯಕ್ರಮದಲ್ಲಿ ದಾಮೋದರ ಗೌಡ ಶೇಡಿ, ವಾಸು ದಡ್ಡು, ಹಮೀದ್ ಎಚ್, ಅನಿತಾ ಪಿಜಕ್ಕಳ, ಮರಿಯಮ್ಮ ರೋಡ್ರಿಗಸ್, ಪ್ರೆಸಿಲ್ಲಾ ಡಿಸೋಜ, ಲೀಲಾ, ಅಣ್ಣಿ ಪೂಜಾರಿ, ಅಶ್ರಫ್, ಅಜೀಜ್ ವಳಾಲು, ಗಣೇಶ್ ನಂಜಳಿ ಮತ್ತಿತರರು ಇದ್ದರು. ಪ್ರಭಾರ ಮುಖ್ಯಗುರು ಆನಿ ಸ್ವಾಗತಿಸಿದರು. ಶಿಕ್ಷಕಿ ಶ್ವೇತಾ ವಂದಿಸಿದರು. ಶಿಕ್ಷಕಿ ಪುಷ್ಪಲತಾ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here