ಉಪ್ಪಿನಂಗಡಿ: ಇಲ್ಲಿನ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಕಾಲೇಜಿನ ವತಿಯಿಂದ ನಡೆಯಿತು.
ಈ ಸಂದರ್ಭ ನೀಟ್ ಪರೀಕ್ಷೆಯಲ್ಲಿ ವಿಶೇಷ ಸಾಧನೆ ಮಾಡಿದ ಅನ್ವರ್ ಮೊಹಮ್ಮದ್ ಅನ್ವರ್ ಸ್ವಾದಿಕ್, ಎಂಬಿಬಿಎಸ್ ಮಾಡಲು ರಷ್ಯಾಕ್ಕೆ ತೆರಳಲಿರುವ ಕಾಲೇಜಿನ ಹಳೆ ವಿದ್ಯಾರ್ಥಿ ಕೆ. ಆಯಿಷತುಲ್ ಮುಫೀದಾ, ವಿಜ್ಞಾನ ವಿಭಾಗದ ಅಂತಿಮ ಪರೀಕ್ಷೆಯಲ್ಲಿ ಅದ್ಭುತ ಸಾಧನೆ ಮಾಡಿದ ರಕ್ಷಿತಾ ಎನ್. ಇವರನ್ನು ಕಾಲೇಜು ವತಿಯಿಂದ ಸನ್ಮಾನಿಸಲಾಯಿತು.
ಕಾಲೇಜಿನಲ್ಲಿ ಸಿಇಟಿ ಹಾಗೂ ನೀಟ್ ತರಬೇತಿಗಳನ್ನು ನಡೆಸುವುದರ ಬಗ್ಗೆ ಪೋಷಕರೊಂದಿಗೆ ಈ ಸಂದರ್ಭ ಚರ್ಚಿಸಲಾಯಿತು. ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲ ಇಬ್ರಾಹೀಂ ಎಂ., ವಿದ್ಯಾರ್ಥಿಗಳಲ್ಲಿ ಸವಾಲುಗಳನ್ನು ಎದುರಿಸಿ ಸಾಧನೆಗೈಯ್ಯುವ ಬಗ್ಗೆ ಮಾತನಾಡಿದರು.
ಕಾಲೇಜು ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಅಜೀಜ್ ಬಸ್ತಿಕಾರ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗೆ ಸಿಇಟಿ ಮತ್ತು ನೀಟ್ ಪರೀಕ್ಷೆಯ ಅಗತ್ಯತೆಯ ಕುರಿತು ಜೀವಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಸುಲಕ್ಷಣ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಕಾಲೇಜು ಅಭಿವೃದ್ಧಿ ಸಮಿತಿಯ ಸದಸ್ಯ ಅಬ್ದುರ್ರಹ್ಮಾನ್ ಯುನಿಕ್, ಪೋಷಕ ಪ್ರತಿನಿಧಿ ಅಬ್ದುಲ್ ಮಜೀದ್ ಮಠ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಶ್ರೀಮತಿ ಸೀತಾ ಲಕ್ಷ್ಮೀ ಸ್ವಾಗತಿಸಿದರು. ಡಾ. ಜನಾರ್ದನ ಗೌಡ ವಂದಿಸಿದರು. ಡಾ ಮಂಜುಳಾ ಬಣಕರ್ ಕಾರ್ಯಕ್ರಮ ನಿರೂಪಿಸಿದರು.