ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ: ಏಕಕಾಲದಲ್ಲಿ ಮೂರು ಅರ್ಜಿಗಳ ವಜಾಗೊಳಿಸಿದ ಹೈಕೋರ್ಟ್

0

ಸಂತೋಷ್ ರಾವ್ ಖುಲಾಸೆಗೊಳಿಸಿದ್ದ ಆದೇಶ ಎತ್ತಿಹಿಡಿದ ನ್ಯಾಯಪೀಠ

ಪುತ್ತೂರು:ಹನ್ನೆರಡು ವರ್ಷಗಳ ಹಿಂದೆ ನಡೆದಿರುವ ಧರ್ಮಸ್ಥಳದ ಕು|ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣದ ಮರು ತನಿಖೆ ಕೋರಿ ಪೋಷಕರು ಸಲ್ಲಿಸಿದ್ದ ಅರ್ಜಿ ಸೇರಿದಂತೆ ಒಟ್ಟು ಮೂರು ಅರ್ಜಿಗಳನ್ನು ಏಕಕಾಲದಲ್ಲಿ ವಜಾಗೊಳಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾರ್ಕಳದ ಸಂತೋಷ್ ರಾವ್ ಅವರನ್ನು ಖುಲಾಸೆಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ನ್ಯಾಯಮೂರ್ತಿಗಳಾದ ಶ್ರೀನಿವಾಸ್‌ಹರೀಶ್ ಕುಮಾರ್ ಮತ್ತು ಜೆ.ಎಂ.ಖಾಜಿ ಅವರಿದ್ದ ವಿಭಾಗೀಯ ಪೀಠ ಈ ಆದೇಶ ಮಾಡಿದೆ.

ಮರು ತನಿಖೆ ಕೋರಿದ್ದ ಸೌಜನ್ಯರ ತಂದೆ:
ಧರ್ಮಸ್ಥಳ ಗ್ರಾಮದ ಮಣ್ಣಸಂಕದ ಬಳಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾಗಿದ್ದ, ಉಜಿರೆ ಎಸ್‌ಡಿಎಂ ಕಾಲೇಜಿನ ವಿದ್ಯಾರ್ಥಿನಿ ಸೌಜನ್ಯ ಅವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣದ ಆರೋಪಿ ಸಂತೋಷ್ ರಾವ್ ಅವರನ್ನು ಸೆಷನ್ಸ್ ನ್ಯಾಯಾಲಯ ಖುಲಾಸೆಗೊಳಿಸಿದ್ದ ಬಳಿಕದ ಬೆಳವಣಿಗೆಯಲ್ಲಿ, ಪ್ರಕರಣದ ಮರು ತನಿಖೆ ಕೋರಿ ಸೌಜನ್ಯ ಅವರ ತಂದೆ ಚಂದಪ್ಪ ಗೌಡ ಅವರು ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದರು.ಅವರ ಅರ್ಜಿಯನ್ನು ಹೈಕೋರ್ಟ್ ಏಕಸದಸ್ಯ ಪೀಠ ವಜಾಗೊಳಿಸಿತ್ತು.ಇದರ ವಿರುದ್ಧ ಅವರು ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.ಇದೀಗ ವಿಭಾಗೀಯ ಪೀಠ ಕೂಡಾ ಅವರ ಅರ್ಜಿಯನ್ನು ವಜಾಗೊಳಿಸಿದೆ.ಪ್ರಕರಣದ ಮರು ತನಿಖೆ ಕೋರಿ ರಾಜ್ಯದ ಹಲವು ಕಡೆಗಳಲ್ಲಿ ಮಹೇಶ್ ಶೆಟ್ಟಿ ತಿಮರೋಡಿ ಮತ್ತು ಗಿರೀಶ್ ಮಟ್ಟಣ್ಣನವರ್ ನೇತೃತ್ವದಲ್ಲಿ ಈಗಾಗಲೇ ಪ್ರತಿಭಟನೆಗಳು ನಡೆದಿವೆ.


ಸಿಬಿಐ ಅರ್ಜಿಯೂ ವಜಾ:
ಕು|ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಅವರು ನಿರಪರಾಧಿ ಎಂದು ಸೆಷನ್ಸ್ ನ್ಯಾಯಾಲಯ ಅವರನ್ನು ಬಿಡುಗಡೆಗೊಳಿಸಿತ್ತು.ಪ್ರಕರಣದ ತನಿಖೆ ನಡೆಸಿದ್ದ ಸಿಬಿಐ, ಸೆಷನ್ಸ್ ನ್ಯಾಯಾಲಯದ ತೀರ್ಪಿನ ವಿರುದ್ಧ ಸೆಕ್ಷನ್ 378(2)ರಡಿ ಹೈಕೋರ್ಟ್‌ಗೆ ಕ್ರಿಮಿನಲ್ ಮೇಲ್ಮನವಿ ಸಲ್ಲಿಸಿತ್ತು.ಸಿಬಿಐನ ಮೇಲ್ಮನವಿ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿದೆ.


ಸೆಷನ್ಸ್ ನ್ಯಾಯಾಲಯದ ತೀರ್ಪು ಎತ್ತಿಹಿಡಿದ ನ್ಯಾಯಪೀಠ:
ಸೌಜನ್ಯ ಅವರ ತಂದೆ ಸಲ್ಲಿಸಿದ್ದ ಅರ್ಜಿ, ಸಂತೋಷ್ ರಾವ್ ಸಲ್ಲಿಸಿದ್ದ ಅರ್ಜಿ ಮತ್ತು ಸಿಬಿಐ ಸಲ್ಲಿಸಿದ್ದ ಮೇಲ್ಮನವಿ ಸೇರಿದಂತೆ ಮೂರು ಅರ್ಜಿಗಳನ್ನೂ ಏಕಕಾಲದಲ್ಲಿ ವಜಾಗೊಳಿಸಿದ ಹೈಕೋರ್ಟ್ ವಿಭಾಗೀಯ ಪೀಠ, ಸೌಜನ್ಯ ಪ್ರಕರಣದ ಆರೋಪಿಯಾಗಿದ್ದ ಸಂತೋಷ್ ರಾವ್ ಅವರನ್ನು ನಿರಪರಾಧಿ ಎಂದು ಬಿಡುಗಡೆಗೊಳಿಸಿದ್ದ ಸೆಷನ್ಸ್ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.

ಪರಿಹಾರ ಕೋರಿ ಸಲ್ಲಿಸಿದ್ದ ಸಂತೋಷ್ ರಾವ್ ಅರ್ಜಿ
ಸೌಜನ್ಯ ಅತ್ಯಾಚಾರ,ಕೊಲೆ ಪ್ರಕರಣದ ಆರೋಪಿಯಾಗಿ ಬಂಽತನಾಗಿ,ಬಳಿಕ ಸಿಬಿಐ ತನಿಖೆ ನಡೆದು ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರೂ ನಿರ್ದೋಷಿಯಾಗಿ ಬಿಡುಗಡೆಗೊಂಡಿದ್ದ ಕಾರ್ಕಳದ ಸಂತೋಷ್ ರಾವ್ ಪರಿಹಾರ ಕೋರಿ ಸಲ್ಲಿಸಿದ್ದ ಅರ್ಜಿಯನ್ನೂ ಹೈಕೋರ್ಟ್ ವಜಾಗೊಳಿಸಿದೆ.ಪ್ರಕರಣದಲ್ಲಿ ತಾನು ನಿರಪರಾಧಿಯಾಗಿದ್ದರೂ ಎಂಟು ವರ್ಷಗಳ ಕಾಲ ತನ್ನನ್ನು ಕಾರಾಗೃಹದಲ್ಲಿಟ್ಟಿದ್ದಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಸಂತೋಷ್ ರಾವ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

LEAVE A REPLY

Please enter your comment!
Please enter your name here