ಪುಡಾ ಅಧ್ಯಕ್ಷತೆ: ಮಹಮ್ಮದ್ ಆಲಿಗೆ ರಾಜ್ಯ ನಾಯಕರ ಬೆಂಬಲ- ಲ್ಯಾನ್ಸಿ ಮಸ್ಕರೇನ್ಹಸ್‌ರಿಗೆ ನೀಡಲು ಹೇಮನಾಥ ಶೆಟ್ಟಿ ಆಗ್ರಹ ?

0

ಪುತ್ತೂರು: ನ್ಯಾಯವಾದಿ, ನೋಟರಿ ಭಾಸ್ಕರ ಕೋಡಿಂಬಾಳ ಅವರ ರಾಜೀನಾಮೆಯಿಂದ ತೆರವಾಗಿರುವ ಪುತ್ತೂರು ನಗರ ಯೋಜನಾ ಪ್ರಾಧಿಕಾರ(ಪುಡಾ)ದ ಅಧ್ಯಕ್ಷ ಹುದ್ದೆಗೆ ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮ್ಮದ್ ಆಲಿಯವರ ಹೆಸರನ್ನು ರಾಜ್ಯ ನಾಯಕರು ಬೆಂಬಲ ಸೂಚಿಸಿದ್ದು, ಪುಡಾ ಸದಸ್ಯ ಲ್ಯಾನ್ಸಿ ಮಸ್ಕರೇನ್ಹಸ್ ಅವರನ್ನು ಅಧ್ಯಕ್ಷರಾಗಿ ಮಾಡುವಂತೆ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಒತ್ತಾಯಿಸಿದ್ದಾರೆ. ಇದರಿಂದಾಗಿ ಯಾರಿಗೆ ಅವಕಾಶವಾಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದ್ದು ಚೆಂಡು ಶಾಸಕ ಅಶೋಕ್ ಕುಮಾರ್ ರೈಯವರ ಅಂಗಳದಲ್ಲಿದೆ.


ಪುತ್ತೂರು ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾಗಿ ಭಾಸ್ಕರ ಕೋಡಿಂಬಾಳ ಹಾಗೂ ಸದಸ್ಯರಾಗಿ ಉದ್ಯಮಿ, ರೈ ಎಜ್ಯುಕೇಶನ್ ಆಂಡ್ ಚಾರಿಟೇಬಲ್ ಟ್ರಸ್ಟ್‌ನ ನಿಹಾಲ್ ಪಿ.ಶೆಟ್ಟಿ, ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲ್ಯಾನ್ಸಿ ಮಸ್ಕರೇನ್ಹಸ್ ಹಾಗೂ ನಗರಸಭೆಯ ಮಾಜಿ ಸದಸ್ಯ ಅನ್ವರ್ ಕಾಸಿಂ ಅವರನ್ನು ಸರಕಾರ ನಾಮನಿರ್ದೇಶನಗೊಳಿಸಿತ್ತು.


ಶಾಸಕರ ಅಸಮಾಧಾನ- ರಾಜೀನಾಮೆ ನೀಡಿದ್ದ ಕೋಡಿಂಬಾಳ:
ಪುಡಾ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ತನ್ನ ಕಾರ್ಯವೈಖರಿ ಬಗ್ಗೆ ಶಾಸಕ ಅಶೋಕ್ ಕುಮಾರ್ ರೈಯವರು ದೂರವಾಣಿ ಕರೆ ಮಾಡಿ ಏನೋ ಅಸಮಾಧಾನ ವ್ಯಕ್ತಪಡಿಸಿದ್ದರೆಂದು ಭಾಸ್ಕರ ಕೋಡಿಂಬಾಳ ಅವರು ಪುಡಾ ಅಧ್ಯಕ್ಷತೆಗೆ ರಾಜೀನಾಮೆ ನೀಡಿದ್ದರು.


ಮಹಮ್ಮದ್ ಆಲಿಗೆ ರಾಜ್ಯ ನಾಯಕರ ಬೆಂಬಲ, ಲ್ಯಾನ್ಸಿಯವರಿಗೆ ನೀಡಲು ಹೇಮನಾಥ ಶೆಟ್ಟಿ ಆಗ್ರಹ:
ಭಾಸ್ಕರ ಕೋಡಿಂಬಾಳ ಅವರ ರಾಜೀನಾಮೆಯಿಂದ ತೆರವಾಗಿರುವ ಪುಡಾ ಅಧ್ಯಕ್ಷ ಹುದ್ದೆಗೆ ಪುರಸಭೆಯ ಮಾಜಿ ಉಪಾಧ್ಯಕ್ಷರೂ ಆಗಿರುವ ಆರ್ಯಾಪು ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಎಚ್.ಮಹಮ್ಮದ್ ಆಲಿಯವರ ಹೆಸರನ್ನು ಸೂಚಿಸಲಾಗಿದ್ದು, ಅಲ್ಪಸಂಖ್ಯಾತ ಕ್ರೈಸ್ತ ಸಮುದಾಯದವರಾಗಿರುವ ನಗರ ಕಾಂಗ್ರೆಸ್ ಮಾಜಿ ಅಧ್ಯಕ್ಷ,ಮಾಜಿ ಪುರಸಭೆಯ ಉಪಾಧ್ಯಕ್ಷರೂ ಆಗಿರುವ ಲ್ಯಾನ್ಸಿ ಮಸ್ಕರೇನ್ಹಸ್ ಅವರನ್ನು ಪುಡಾ ಅಧ್ಯಕ್ಷರಾಗಿ ಆಯ್ಕೆ ಮಾಡಲು ಕ್ರಮಕೈಗೊಳ್ಳುವಂತೆ ಕೆಪಿಸಿಸಿ ಸಂಯೋಜಕ ಕಾವು ಹೇಮನಾಥ ಶೆಟ್ಟಿಯವರು ಶಾಸಕ ಅಶೋಕ್ ಕುಮಾರ್ ರೈಯವರಿಗೆ ಮನವಿ ಮಾಡಿದ್ದಾರೆ. ಒಂದು ವೇಳೆ ಲ್ಯಾನ್ಸಿ ಮಸ್ಕರೇನ್ಹಸ್ ಅವರಿಗೆ ಅವಕಾಶ ನೀಡದೇ ಇದ್ದಲ್ಲಿ ಲ್ಯಾನ್ಸಿ ಮಸ್ಕರೇನ್ಹಸ್ ಮತ್ತು ಅನ್ವರ್ ಕಾಸಿಂ ಅವರು ಪುಡಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಲಿದ್ದಾರೆ ಎಂದು ಹೇಮನಾಥ ಶೆಟ್ಟಿಯವರು ಹೇಳಿರುವುದಾಗಿ ವರದಿಯಾಗಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ಯಾವುದೇ ಆಯ್ಕೆ ಸಂದರ್ಭದಲ್ಲಿ ಸ್ಥಳೀಯ ಶಾಸಕರ ಶಿಫಾರಸ್ಸಿಗೆ ಆಧ್ಯೆತೆ ಇರುವುದರಿಂದ ಪೂಡಾ ವಿಚಾರದಲ್ಲಿ ಚೆಂಡು ಶಾಸಕ ಅಶೋಕ್ ಕುಮಾರ್ ರೈಯವರ ಅಂಗಳದಲ್ಲಿದ್ದು ಮಹಮ್ಮದಾಲಿಯವರಿಗೆ ಅವಕಾಶವಾಗಲಿದೆಯೇ ಅಥವಾ ಲ್ಯಾನ್ಸಿ ಮಸ್ಕರೇನ್ಹಸ್ ಅವರಿಗೆ ಅದೃಷ್ಟವೋ?ಇಲ್ಲವೇ ಈ ಇಬ್ಬರನ್ನೂ ಬಿಟ್ಟು ಮೂರನೇಯವರಿಗೆ ಅವಕಾಶವಾಗಲಿದೆಯೇ? ಮೂರನೇಯವರಾದರೆ ಯಾರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

LEAVE A REPLY

Please enter your comment!
Please enter your name here