3.05 ಲಕ್ಷ ರೂ.ನಿವ್ವಳ ಲಾಭ; ಶೇ.15 ಡಿವಿಡೆಂಡ್, ಪ್ರತೀ ಲೀ.ಹಾಲಿಗೆ 79 ಪೈಸೆ ಬೋನಸ್ ಘೋಷಣೆ
ನೆಲ್ಯಾಡಿ: ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘದ 2023-24ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆ ಆ.30ರಂದು ಸಂಘದ ವಠಾರದಲ್ಲಿ ನಡೆಯಿತು. ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಪಿ.ಡೆನ್ನಿಸ್ ಪಿಂಟೊ ಅವರು ಮಾತನಾಡಿ, ಸಂಘವು ಸ್ಥಾಪನೆಗೊಂಡು 35 ವರ್ಷ ಕಳೆದಿದೆ. ಪ್ರಸ್ತುತ ಸಂಘದಲ್ಲಿ 226 ಮಂದಿ ಸದಸ್ಯರಿದ್ದರೂ 74 ಮಂದಿ ಮಾತ್ರ ಸಕ್ರೀಯ ಸದಸ್ಯರಿದ್ದಾರೆ. ಸಂಘವು 2023-24ನೇ ಸಾಲಿನಲ್ಲಿ 2,83,48,228.96 ರೂ.ವ್ಯವಹಾರ ಮಾಡಿದೆ. ದಿನವಹಿ ಸರಾಸರಿ 508 ಲೀ. ಹಾಲು ಸಂಗ್ರಹಣೆಯಾಗುತ್ತಿದ್ದು ವರದಿ ವರ್ಷದಲ್ಲಿ 1,85,524 ಲೀ.ಹಾಲು ಉತ್ಪಾದಕರಿಂದ ಖರೀದಿ ಮಾಡಲಾಗಿದೆ. ಇದರಲ್ಲಿ 69,41,091.51 ರೂ.ಮೌಲ್ಯದ ಹಾಲು ಒಕ್ಕೂಟಕ್ಕೆ ಹಾಗೂ 1,19,102 ರೂ.ಹಾಲು ಸ್ಥಳೀಯವಾಗಿ ಮಾರಾಟವಾಗಿದೆ.
ಹಾಲು ವ್ಯಾಪಾರದಿಂದ 5,86,704 ರೂ. ಹಾಗೂ ಪಶು ಆಹಾರ ಲವಣ ಮಿಶ್ರಣ ಮಾರಾಟದಿಂದ 40, 359 ಹಾಗೂ ಇತರ ಮೂಲಗಳಿಂದ 2,31,780 ರೂ ಆದಾಯ ಬಂದಿರುತ್ತದೆ. ಒಟ್ಟು ವ್ಯವಹಾರದಿಂದ 3,05,204.55 ರೂ.ನಿವ್ವಳ ಲಾಭಬಂದಿರುತ್ತದೆ. ಲಾಭಾಂಶದಲ್ಲಿ ಸಂಘದ ಸದಸ್ಯರಿಗೆ ಶೇ.15 ಡಿವಿಡೆಂಡ್ ಹಾಗೂ 1 ಲೀ.ಹಾಲಿಗೆ 79 ಪೈಸೆಯಂತೆ ಬೋನಸ್ ನೀಡಲಾಗುವುದು ಎಂದು ಹೇಳಿದರು. ಹಾಲು ಸಂಗ್ರಹಣೆಯಲ್ಲಿ ಕಳೆದ ವರ್ಷಕ್ಕಿಂತ ಶೇ.15ರಷ್ಟು ಕಡಿಮೆಯಾಗಿರುವುದರಿಂದ ಲಾಭದಲ್ಲೂ ಕೊರತೆಯಾಗಿದೆ. ಇದನ್ನು ಸರಿದೂಗಿಸಿಕೊಂಡು ಮುಂದಿನ ವರ್ಷ ಶೇ.10ರಷ್ಟು ಹಾಲು ಸಂಗ್ರಹಣೆ ಹೆಚ್ಚಳ ಮಾಡಬೇಕಾಗಿದೆ. ಒಕ್ಕೂಟದಿಂದ ಹಾಲು ಉತ್ಪಾದಕರಿಗೆ ಸಿಗುವ ಸವಲತ್ತು, ಅನುದಾನ ಸದ್ಬಳಕೆ ಮಾಡಿಕೊಂಡು ಹೈನುಗಾರಿಕೆ ಅಭಿವೃದ್ಧಿಪಡಿಸಬೇಕು. ಡಿಸಿಸಿ ಬ್ಯಾಂಕ್‌ನಿಂದಲೂ ಹೈನುಗಾರಿಕೆಗೆ ಸಾಲ ಸಾಲಭ್ಯ ಸಿಗುತ್ತಿದೆ ಎಂದು ಹೇಳಿದ ಡೆನ್ನಿಸ್ ಪಿಂಟೋ ಅವರು ಹಾಲು ಉತ್ಪಾದಕರಿಗೆ ಪ್ರತಿ ಲೀ.ಹಾಲಿಗೆ ಕನಿಷ್ಠ 50 ರೂ.ಸಿಗುವಂತಾಗಬೇಕು. ಒಕ್ಕೂಟ ವ್ಯವಸ್ಥೆಗೆ ಸದಸ್ಯರು ಬದ್ಧರಾಗಿರಬೇಕೆಂದು ಹೇಳಿದರು.
ದಕ್ಷಿಣ ಕನ್ನಡ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಉಪವ್ಯವಸ್ಥಾಪಕರಾದ ಡಾ.ಸತೀಶ್ ರಾವ್ ಅವರು ಮಾತನಾಡಿ, ಕಾಂಚನ ಹಾಲು ಉತ್ಪಾದಕರ ಸಹಕಾರಿ ಸಂಘ ಮಾದರಿ ಸಂಘವಾಗಿದೆ. ಅಚ್ಚುಕಟ್ಟಾಗಿ ನಿರ್ವಹಣೆ ಮಾಡಿಕೊಂಡು ಬರುತ್ತಿದೆ. ಹೈನುಗಾರಿಕೆ ಇದ್ದಲ್ಲಿ ಕೃಷಿಯೂ ಚೆನ್ನಾಗಿ ಆಗಲಿದೆ. ಹಾಲು ಉತ್ಪಾದಕರಿಗೆ ಪಶು ಆಹಾರದ ಖರ್ಚು ಕಡಿಮೆ ಮಾಡುವ ನಿಟ್ಟಿನಲ್ಲಿ ಒಕ್ಕೂಟದಿಂದ ಹಲವು ಸೌಲಭ್ಯ ಸಿಗುತ್ತಿದೆ. ಹುಲ್ಲು, ಜೋಳ, ಅಲಸಂಡೆ ಬೀಜ ವಿತರಣೆ ಮಾಡಲಾಗುತ್ತಿದೆ. ಹಾಲು ಉತ್ಪಾದಕರಿಗಾಗಿ ಒಕ್ಕೂಟ 19 ಯೋಜನೆ ಜಾರಿಗೆ ತಂದಿದ್ದು ಇದಕ್ಕಾಗಿ 18 ಕೋಟಿ ರೂ.ಖರ್ಚು ಮಾಡುತ್ತಿದೆ. ಈ ಎಲ್ಲಾ ಸವಲತ್ತು ಪಡೆದುಕೊಳ್ಳುವಂತೆ ಹೇಳಿದರು.
ಒಕ್ಕೂಟದ ಮೇಲ್ವಿಚಾರಕರಾದ ರಾಜೇಶ್ ಕಾಮತ್ ಮಾತನಾಡಿ, ಸಕ್ರೀಯ ಸದಸ್ಯರೇ ಸಂಘದ ಬೆನ್ನೆಲುಬು. ಸದಸ್ಯರು ಸಕಾರಾತ್ಮಕ ವಿಚಾರಗಳನ್ನೇ ಯೋಚಿಸಬೇಕು. ಹೈನುಗಾರಿಕೆಗೆ ಸರಕಾರವೂ ಉತ್ತೇಜನ ನೀಡುತ್ತಿದೆ. ಹಾಲಿನ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಬಂಜೆತನ ಶಿಬಿರ, ಮಾಹಿತಿ ಕಾರ್ಯಾಗಾರ, ಬ್ಯಾಂಕ್‌ಗಳ ಮೂಲಕ ಸಾಲ ಸೌಲಭ್ಯ, ಬಯೋಗ್ಯಾಸ್ ಯೋಜನೆ ಸೇರಿದಂತೆ ಸುಮಾರು 19 ಯೋಜನೆ ಒಕ್ಕೂಟ ಜಾರಿಗೆ ತಂದಿದೆ. ಮುಂದಿನ ದಿನಗಳಲ್ಲಿ ಸ್ಲರಿಗೂ ಸಹ ಬೆಲೆ ಬರಲಿದೆ. ಇವೆಲ್ಲವನ್ನೂ ಸದುಪಯೋಗ ಪಡೆದುಕೊಂಡು ಹಾಲು ಉತ್ಪಾದನೆ ಹೆಚ್ಚಿಸುವಂತೆ ಹೇಳಿದರು.
ಶಾಂತಿನಗರ ಸಂಘಕ್ಕೆ ಸೇರ್ಪಡೆಗೊಂಡ ಸದಸ್ಯರ ಸದಸ್ಯತ್ವ ರದ್ದತಿಗೆ ನಿರ್ಣಯ:
ಶಾಂತಿನಗರದಲ್ಲಿ ಹೊಸದಾಗಿ ಸಂಘ ಆರಂಭಗೊಂಡಿದ್ದು ಕಾಂಚನ ಸಂಘದ 66 ಸದಸ್ಯರೂ ಅಲ್ಲಿಗೆ ಸೇರ್ಪಡೆಗೊಂಡಿದ್ದಾರೆ. ಈ ಸದಸ್ಯರು ಕಾಂಚನ ಸಂಘದಿಂದ ಎನ್‌ಒಸಿ ಪಡೆದುಕೊಂಡು ಅಲ್ಲಿಗೆ ಸೇರ್ಪಡೆಯಾಗಬೇಕಿತ್ತು. ಆದರೆ ಅವರು ಎನ್‌ಒಸಿ ಪಡೆದುಕೊಳ್ಳದೇ ಇರುವುದರಿಂದ ಅವರ ಸದಸ್ಯತ್ವ ಇಲ್ಲಿಯೂ ಇದೆ. ಆದ್ದರಿಂದ ಈ ಸದಸ್ಯರ ಸದಸ್ಯತ್ವ ರದ್ದುಗೊಳಿಸುವ ಸಂಬಂಧ ಅವರಿಗೆ ನೋಟಿಸ್ ನೀಡಿ ಆರು ತಿಂಗಳ ಕಾಲಾವಕಾಶ ನೀಡುವುದು. ಆದರೂ ಬಾರದೇ ಇದ್ದಲ್ಲಿ ಅವರ ಸದಸ್ಯತ್ವವನ್ನು 3 ತಿಂಗಳು ಅಮಾನತಿನಲ್ಲಿಟ್ಟು ಬಳಿಕ ಅವರ ಷೇರಿನ ಮೊತ್ತವನ್ನು ಮೀಸಲು ನಿಧಿಗೆ ವರ್ಗಾಯಿಸಲು ಮಹಾಸಭೆಯಲ್ಲಿ ನಿರ್ಣಯಿಸಲಾಯಿತು.
ಸಂಘದ ಮಾಜಿ ಅಧ್ಯಕ್ಷರು, ಮಾಜಿ ನಿರ್ದೇಶಕರು, ಸದಸ್ಯರು ವಿವಿಧ ಸಲಹೆ ಸೂಚನೆ ನೀಡಿದರು. ಸಂಘದ ಉಪಾಧ್ಯಕ್ಷ ಯಂ.ಶಶಿಧರ ಗೌಡ, ನಿರ್ದೇಶಕರಾದ ಯಂ.ಹರಿಶ್ಚAದ್ರ ಗೌಡ, ಯಂ.ರವೀಂದ್ರ ಗೌಡ, ಯನ್.ಉಮೇಶ ಗೌಡ, ಸುರೇಶ್ ಕೆ., ಪ್ರೇಮ, ಹೊನ್ನಮ್ಮ, ನಾರಾಯಣ ಕೆ., ರುಕ್ಮಯ ಗೌಡ, ಶ್ರೀಧರ ಬಿ., ವಸಂತಿ ಬಿ.,ರತ್ನಾವತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸಂಘದ ಕಾರ್ಯದರ್ಶಿ ಕೆ.ಚಂದ್ರಶೇಖರ ಗೌಡ ವರದಿ ವಾಚಿಸಿದರು. ಉಮೇಶ್ ನೆಕ್ಕರೆ ಸ್ವಾಗತಿಸಿ, ನಾರಾಯಣ ಕೆ.ವಂದಿಸಿದರು. ಸುರೇಶ್ ಬಿದಿರಾಡಿ ಪ್ರಾರ್ಥಿಸಿದರು. ಹಾಲು ಪರೀಕ್ಷಕಿ ಭವಾನಿ ಬಿ ಸಹಕರಿಸಿದರು.
ಸನ್ಮಾನ/ಬಹುಮಾನ:
ಕಳೆದ ನವೆಂಬರ್ ತಿಂಗಳಿನಲ್ಲಿ ಪುಳಿತ್ತಡಿಯಲ್ಲಿ ನಡೆದ ಜಾನುವಾರು ಪ್ರದರ್ಶನ ಮೇಳದಲ್ಲಿ ಸಂಘದ ಸದಸ್ಯ ಸುಧಾಕರ ಮುದ್ಯ ಅವರ ಆರು ಕರುಗಳು ಪ್ರದರ್ಶನಗೊಂಡಿದ್ದು ಈ ಪೈಕಿ 1 ಕರು ಚಾಂಪಿಯನ್ ಆಗಿದೆ. ಈ ಹಿನ್ನೆಲೆಯಲ್ಲಿ ಸುಧಾಕರ ಅವರನ್ನು ಸಂಘದ ವತಿಯಿಂದ ಮಹಾಸಭೆಯಲ್ಲಿ ಶಾಲುಹಾಕಿ, ಸ್ಮರಣಿಕೆ, ಫಲಪುಷ್ಪ ನೀಡಿ ಸನ್ಮಾನಿಸಲಾಯಿತು. ವರದಿ ವರ್ಷದಲ್ಲಿ ಸಂಘಕ್ಕೆ ಅತೀ ಹೆಚ್ಚು ಹಾಲು ಹಾಕಿದ ಸದಸ್ಯರಿಗೆ ಬಹುಮಾನ ನೀಡಿ ಗೌರವಿಸಲಾಯಿತು. 3,96,583 ರೂ.ಮೌಲ್ಯದ ಹಾಲು ಪೂರೈಸಿದ ನಾರಾಯಣ ಕೆಳಗಿನಮನೆ ಪ್ರಥಮ, 3,10,484 ರೂ.ಮೌಲ್ಯದ ಹಾಲು ಪೂರೈಸಿದ ಡೆನ್ನಿಸ್ ಪಿಂಟೊ ಪುಯಿಲ ದ್ವಿತೀಯ ಹಾಗೂ 3,07,985 ರೂ.ಮೌಲ್ಯದ ಹಾಲು ಪೂರೈಸಿದ ಸುಧಾಕರ ಗೌಡ ಮುದ್ಯ ತೃತೀಯ ಬಹುಮಾನ ಪಡೆದುಕೊಂಡರು. 2023-24ನೇ ಸಾಲಿನಲ್ಲಿ ಸಂಘಕ್ಕೆ ಹಾಲು ಪೂರೈಸಿದ ಸದಸ್ಯರಿಗೆ ಪ್ರೋತ್ಸಾಹಕ ಬಹುಮಾನ ನೀಡಲಾಯಿತು.