ಪುತ್ತೂರು: ಯುವಕ ಮಂಡಲ ಕೊಳ್ತಿಗೆ ಪೆರ್ಲಂಪಾಡಿ ಮತ್ತು ಆದಿಶಕ್ತಿ ಮಹಿಳಾ ಮಂಡಲ ಪೆರ್ಲಂಪಾಡಿ ಇದರ ಜಂಟಿ ಆಶ್ರಯದಲ್ಲಿ ಶ್ರೀ ಕೃಷ್ಣ ಜನ್ಮಾಷ್ಠಮಿಯ ಪ್ರಯುಕ್ತ ಮೊಸರು ಕುಡಿಕೆ ಉತ್ಸವವು ಶ್ರೀ ಷಣ್ಮುಖದೇವ ಭಜನಾ ಮಂದಿರದ ಬಳಿಯ ಪಂಚಾಯತ್ ಬಯಲು ರಂಗಮಂದಿರದಲ್ಲಿ ಆ.26ರಂದು ಜರಗಿತು.
ಬೆಳಿಗ್ಗೆ ಪುಟಾಣಿಗಳಿಂದ ಕಾರ್ಯಕ್ರಮ ಉದ್ಘಾಟನೆಗೊಂಡು ನಂತರ ಮಕ್ಕಳಿಗೆ ಭಕ್ತಿಗೀತೆ, ಭಾವಗೀತೆ, ಕಬಡ್ಡಿ, ಮಹಿಳೆಯರಿಗೆ ತ್ರೋಬಾಲ್, ಹಗ್ಗಜಗ್ಗಾಟ, ಮೇಣದ ಬತ್ತಿ ಉರಿಸುವುದು, ಭಕ್ತಿಗೀತೆ, ಪುರುಷರಿಗೆ ಕಬಡ್ಡಿ, ಹಗ್ಗ ಜಗ್ಗಾಟ, ಮಡಿಕೆ ಒಡೆಯುವುದು, ಜಾರುಕಂಬ ಸೇರಿದಂತೆ ಹಲವು ರೀತಿಯ ಆಟೋಟ ಸ್ಪರ್ಧೆಗಳು ನಡೆಯಿತು. ಮಧ್ಯಾಹ್ನ ಸಾರ್ವಜನಿಕರಿಗೆ ಭೋಜನದ ವ್ಯವಸ್ಥೆಯನ್ನು ಮಾಡಲಾಯಿತು. 5 ವರ್ಷದ ಕೆಳಗಿನ ಮಕ್ಕಳಿಗೆ ಶ್ರೀಕೃಷ್ಣ ವೇಷ ಹಾಕುವ ಸ್ಪರ್ಧೆಯು ಜರಗಿತು. ಸುಮಾರು 30 ಶ್ರೀಕೃಷ್ಣ ವೇಷಧರಿಸಿದ ಪುಟಾಣಿ ಮಕ್ಕಳು ಭಾಗವಹಿಸಿದ್ದರು. ಸಂಜೆ ಸಭಾ ಕಾರ್ಯಕ್ರಮ ಜರಗಿತು. ಯುವಕ ಮಂಡಲದ ಅಧ್ಯಕ್ಷರಾದ ಹರ್ಷಿತ್ ಕುದ್ಕುಳಿ ಸಭಾಧ್ಯಕ್ಷತೆ ವಹಿಸಿದ್ದರು. ಪ್ರಾಸ್ತಾವಿಕ ಸ್ವಾಗತ ಮಾಡಿದ ಕೊಳ್ತಿಗೆ ಗ್ರಾಪಂ ಉಪಾಧ್ಯಕ್ಷ ಪ್ರಮೋದ್ ಕೆ.ಎಸ್.ರವರು ಯುವಕ ಮಂಡಲವು ನಡೆದು ಬಂದ ದಾರಿ, ಹಿರಿಯರ ಶ್ರಮದ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಅತಿಥಿಯಾಗಿದ್ದ ಶ್ರೀ ಷಣ್ಮುಖದೇವ ಪ್ರೌಢ ಶಾಲೆಯ ಸಂಚಾಲಕ ಪಿ.ಶಿವರಾಮ ಭಟ್ ಬೀರ್ಣಕಜೆಯವರು ಯುವಕ ಮಂಡಲದ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಷಣ್ಮುಖದೇವ ಭಜನಾ ಮಂದಿರದ ಅಧ್ಯಕ್ಷ ಶ್ರೀನಿವಾಸ ಕೊರ್ಬಂಡ್ಕ ದೊಡ್ಡಮನೆಯವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಆದಿಶಕ್ತಿ ಮಹಿಳಾ ಮಂಡಲದ ನೂತನ ಅಧ್ಯಕ್ಷೆ ನಾಗವೇಣಿ ಕೆ ಹಾಗೂ ನಿಕಟಪೂರ್ವ ಅಧ್ಯಕ್ಷೆ ಮಮತಾ ಗೋಳಿತ್ತಡ್ಕ ಉಪಸ್ಥಿತರಿದ್ದರು.
ಸನ್ಮಾನ ಕಾರ್ಯಕ್ರಮ
ಈ ಸಂದರ್ಭದಲ್ಲಿ ಕೊಳ್ತಿಗೆ ಗ್ರಾಮದಲ್ಲಿ ವಿಶೇಷ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಜಿಲ್ಲಾ ಮಟ್ಟದ ಚೆಸ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾದ ದಿವ್ಯ ಮತ್ತು ರವಿಚಂದ್ರರವರ ಪುತ್ರಿ, ಪೆರ್ಲಂಪಾಡಿ ಸರಕಾರಿ ಶಾಲಾ ವಿದ್ಯಾರ್ಥಿನಿ ಸಾಕ್ಷಿ, ಎನ್ಎಂಎಂಎಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಸ್ಕಾಲರ್ಶಿಪ್ಗೆ ಆಯ್ಕೆಯಾದ ಜಯಂತಿ ಪಿ ಮತ್ತು ವೆಂಕಟ್ರಮಣ ಆಚಾರ್ಯ ಪೆರ್ಲಂಪಾಡಿ ಇವರ ಪುತ್ರ ಷಣ್ಮುಖದೇವ ಪ್ರೌಢ ಶಾಲಾ ವಿದ್ಯಾರ್ಥಿ ಪುನೀತ್ ಪಿ.ವಿ, ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಪಡೆದು ಪ್ರಾಂತ್ಯಮಟ್ಟಕ್ಕೆ ಆಯ್ಕೆಯಾದ ಲೀಲಾವತಿ ಜನಾರ್ದನ ಗೌಡರವರ ಪುತ್ರಿ, ವಿವೇಕಾನಂದ ಪ.ಪೂ.ಕಾಲೇಜು ವಿದ್ಯಾರ್ಥಿನಿ ವೀಕ್ಷಾ ಹಾಗೂ ಎತ್ತರ ಜಿಗಿತದಲ್ಲಿ ರಾಷ್ಟ್ರಮಟ್ಟದ ಸಾಧನೆ ಮಾಡಿದ ವನಿತಾ ರಾಘವ ಪೂಜಾರಿಯವರ ಪುತ್ರ, ಸಂತ ಫಿಲೋಮಿನಾ ಕಾಲೇಜಿನ ವಿದ್ಯಾರ್ಥಿ ಯಶ್ವಿನ್ ಕೆ.ಕೋಡಂಬುರವರುಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು.
ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಊರಿನ ಹಿರಿಯರು, ದಾನಿಗಳು, ಕ್ರೀಡಾಪಟುಗಳು, ಮಕ್ಕಳು ಸೇರಿದಂತೆ ಗ್ರಾಮಸ್ಥರು ಭಾಗವಹಿಸಿದ್ದರು. ಯುವಕ ಮಂಡಲದ ಸದಸ್ಯ ಪವನ್ ಡಿ.ಜಿ ದೊಡ್ಡಮನೆ ವಂದಿಸಿದರು. ವಿಜೇಶ್ ರೈ ಕೆಳಗಿನಮನೆ ಕಾರ್ಯಕ್ರಮ ನಿರೂಪಿಸಿದರು. ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳು ಸಹಕರಿಸಿದ್ದರು.