ಪುತ್ತೂರು: ವಿದ್ಯಾಭಾರತಿ ಕರ್ನಾಟಕ ದಕ್ಷಿಣ ಕನ್ನಡ ಜಿಲ್ಲೆ ಹಾಗೂ ವಿವೇಕಾನಂದ ಕನ್ನಡ ಮಾಧ್ಯಮ ಶಾಲಾ ಸಹಯೋಗದಲ್ಲಿ ರಾಜ್ಯಮಟ್ಟದ ಖೋ-ಖೋ ಪಂದ್ಯಾಟ ಜರುಗಿತು.
ಉದ್ಘಾಟನಾ ಸಮಾರಂಭದಲ್ಲಿ ವಿದ್ಯಾಭಾರತಿ ಕರ್ನಾಟಕದ ಪ್ರಾಂತ ಆಧ್ಯಾತ್ಮಿಕ ಮತ್ತು ನೈತಿಕ ವಿಭಾಗ ಪ್ರಮುಖರಾದ ವೆಂಕಟರಮಣ ರಾವ್ ಮಂಕುಡೆಯವರು ಪಂಚಕೋಶಗಳ ವಿಕಾಸದ ದೃಷ್ಟಿಯಿಂದ ರಾಷ್ಟ್ರ-ಅಂತರಾಷ್ಟ್ರಮಟ್ಟದಲ್ಲಿ ವಿದ್ಯಾಭಾರತಿಯು ಶೈಕ್ಷಣಿಕ ಯೋಚನೆ-ಯೋಜನೆ ಮತ್ತು ಅನುಷ್ಠಾನಗಳು ಕಾರ್ಯಪ್ರವೃತ್ತವಾಗಿವೆ. ಕ್ರೀಡಾ ಚಟುವಟಿಕೆಗಳು ಈ ಯೋಜನೆಗಳ ಮಹತ್ವಪೂರ್ಣ ಭಾಗವಾಗಿವೆ. ಇದರಲ್ಲಿ ನಾವು ಸಕ್ರಿಯರಾಗಿ ತೊಡಗಿಕೊಂಡು ಯಶಸ್ವಿಗೊಳಿಸೋಣ ಎಂದು ಶುಭ ಹಾರೈಸಿದರು.
ಪುತ್ತೂರು ತಾಲೂಕು ದೈಹಿಕ ಶಿಕ್ಷಣ ಪ್ರಭಾರ ಪರಿವೀಕ್ಷಕ ಚಕ್ರಪಾಣಿ ಇವರು ಕ್ರೀಡಾಮನೋಭಾವ ಮಕ್ಕಳ ದೈಹಿಕ, ಮಾನಸಿಕ, ಬೌದ್ಧಿಕ ದೃಢತೆಯನ್ನು ಹೆಚ್ಚಿಸಲು ಸಹಕಾರಿಯಾಗಿದೆ ಎಂದರು. ಶಾಲಾ ಅಧ್ಯಕ್ಷರಾದ ರಮೇಶ್ಚಂದ್ರ ಕಾರ್ಯಕ್ರಮದ ಸಭಾಧ್ಯಕ್ಷತೆ ವಹಿಸಿ ಶುಭ ಹಾರೈಸಿದರು. ಶಾಲಾ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಜಯಂತ ಗೌಡ, ಅನ್ನಪೂರ್ಣಾ ಯೋಜನೆಯ ಅಧ್ಯಕ್ಷರಾದ ಸುಹಾಸ್ ಮಜಿ, ಮಾತೃಭಾರತಿ ಅಧ್ಯಕ್ಷರಾದ ಮಂಗಳಗೌರಿ, ವಿವೇಕ ಸಂಜೀವಿನಿ ಅಧ್ಯಕ್ಷರಾದ ನಾರಾಯಣ ಪೂಜಾರಿ ಉಪಸ್ಥಿತರಿದ್ದರು.
ಪ್ರೌಢ ಶಾಲಾ ಮುಖ್ಯಗುರುಗಳಾದ ಆಶಾ ಬೆಳ್ಳಾರೆ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಶಾಲಾ ಆಡಳಿತ ಮಂಡಳಿ ಕೋಶಾಧಿಕಾರಿ ಅಶೋಕ್ ಕುಂಬ್ಳೆ, ಪ್ರಾಥಮಿಕ ವಿಭಾಗದ ಮುಖ್ಯಗುರುಗಳಾದ ನಳಿನಿ ವಾಗ್ಲೆ ಉಪಸ್ಥಿತರಿದ್ದರು. ಅನ್ಯಾನ್ಯ ಜಿಲ್ಲೆಗಳಿಂದ ಆಗಮಿಸಿದ ಕ್ರೀಡಾತರಬೇತುದಾರರು ಹಾಗೂ ಕ್ರೀಡಾಪಟುಗಳನ್ನು ಮೆರವಣಿಗೆಯಲ್ಲಿ ಕರೆತರಲಾಯಿತು. ಸಹಶಿಕ್ಷಕಿ ಗೀತಾ ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ದೈಹಿಕ ಶಿಕ್ಷಣ ಶಿಕ್ಷಕರಾದ ದಾಮೋದರ್, ಹರಿಣಾಕ್ಷಿ, ನಮಿತಾ, ರಶ್ಮಿ ಸ್ಪರ್ಧಾ ಸಂಯೋಜಕರಾಗಿ ಸಹಕರಿಸಿದರು.