ಇಲಾಖೆಗಳಿಗೆ ಜಾಗ ಕಾದಿರಿಸುವಂತೆ ಸರ್ವೆ ನಡೆಸಬೇಕು -ದ.ಕ.ಜಿಲ್ಲಾ ಕರ್ನಾಟಕ ರಾಜ್ಯ ರೈತ ಸಂಘ, ಹಸಿರು ಸೇನೆ ಆಗ್ರಹ

0

ಪುತ್ತೂರು: ಗ್ರಾಮ ಗ್ರಾಮಗಳಲ್ಲಿ ಅಂದಾಜು ನೂರು ಎಕ್ರೆಯಷ್ಟು ಜಾಗವನ್ನು ವಿವಿಧ ಇಲಾಖೆಗಳಿಗೆ ಕಾದಿರಿಸುವಂತೆ ಸುತ್ತೋಲೆ ಇದೆ. ಈ ನಿಟ್ಟಿನಲ್ಲಿ ನೂರಕ್ಕೆ ನೂರು ಸರಕಾರಿ ಜಾಗವಾಗಿದ್ದರೆ ಆ ಜಾಗವನ್ನು ಶಾಲಾ, ಕಾಲೇಜು, ಗ್ರಾಮ ಪಂಚಾಯತ್ ಕಚೇರಿ, ಸ್ಮಶಾನ ಮುಂತಾದ ಸರಕಾರಿ ಇಲಾಖೆಗಳಿಗೆ ಕಾದಿರಿಸಬೇಕು ಎಂದು ಕರ್ನಾಟಕ ರಾಜ್ಯ ರೈ ಸಂಘ ಹಾಗೂ ಹಸಿರು ರಾಜ್ಯ ಉಪಾಧ್ಯಕ್ಷ ಸುರೇಶ್ ಭಟ್ ಕೊಜಂಬೆ ಮತ್ತು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಅಮರನಾಥ ಆಳ್ವ ಆಗ್ರಹಿಸಿದ್ದಾರೆ.


ದ.ಕ.ಜಿಲ್ಲೆಯ ಒಂದೊಂದು ಗ್ರಾಮದಲ್ಲಿ ಸುಮಾರು 200 ಎಕ್ರೆಯಷ್ಟು ಜಾಗ ಪಹಣಿ ಪತ್ರದಲ್ಲಿ ಸರಕಾರಿ ಎಂದು ನಮೂದಿಸಲಾಗಿದ್ದರೂ, ಕೆಲವರು 25-30 ಎಕ್ರೆಯಷ್ಟು ಸರಕಾರಿ ಜಾಗವನ್ನು ಅಕ್ರಮ ಮಾಡಿಕೊಂಡಿದ್ದು, ಯಾವುದೇ ಕೃಷಿ ಅಥವಾ ಗಡಿ ಗುರುತು ಮಾಡದೆ ಹಡೀಲು ಬಿದ್ದಿರುತ್ತದೆ. ಆದರೆ ಅರಣ್ಯ ಇಲಾಖೆ ರಸ್ತೆ ಬದಿಯಲ್ಲಿ ಯಾವುದೇ ಮರಗಳಿಲ್ಲದ ಜಾಗವನ್ನು ಬೇಲಿ ಹಾಕಿ ಅರಣ್ಯ ಇಲಾಖೆ ಜಾಗವೆಂದು ಬಿಂಬಿಸುತ್ತಿದ್ದಾರೆ ಎಂದು ಆರೋಪಿಸಿದರು.


ಯೋಜನೆಗಳಲ್ಲಿ ಭ್ರಷ್ಟಾಚಾರ:
ಕೃಷಿ ಇಲಾಖೆಗಳಿಂದ ಕೃಷಿಕರಿಗೆ ನೀಡುವ ಪೈಪುಗಳು ತೀರಾ ಕಳಪೆ ಮಟ್ಟದ್ದಾಗಿದೆ, ಇಲ್ಲಿ ಕಮೀಷನ್ ದಂದೆ ನಡೆದಿದೆ. ಆನೆ ಹಾವಳಿಗೆ ಅಳವಡಿಸಿದ ಸೋಲಾರ್ ತಂತಿ ಕೂಡಾ ಕಳಪೆಯಾಗಿದೆ. ಎಲ್ಲಾ ಕಡೆ ಭ್ರಷ್ಟಾಚಾರವಿದೆ. ಪ್ರಾಮಾಣಿಕತೆ ಇಲ್ಲ ಎಂದ ಸುರೇಶ್ ಭಟ್ ಅವರು ಎಲ್ಲಾ ಗ್ರಾಮ ಮಟ್ಟದಲ್ಲಿ ಮೆಸ್ಕಾಂ ಇಲಾಖೆಯವರಿಂದ ತೀರಾ ಹಳೆ ತಂತಿ, ಕಂಬಗಳನ್ನು ಹಾಗೂ ಅಪಾಯಕಾರಿ ಕಂಬಗಳನ್ನು ತೆರವುಗೊಳಿಸಬೇಕು, ಮನೆ ಹತ್ತಿರದಲ್ಲಿರುವ ಎಚ್ ಟಿ ಲೈನ್ ಗಳನ್ನು ತೆರವುಗೊಳಿಸಬೇಕು, ಕೃಷಿಕರಿಗೆ ಫಾರ್ಮ್ 50, 53, ಹಾಗೂ 57 ರಂತೆ ಸರಕಾರದಿಂದ ಮಂಜೂರಾದ ಜಾಗವನ್ನು ಸುಲಭ ರೀತಿಯಲ್ಲಿ ಕಂದಾಯ ಇಲಾಖೆಯವರು ಪ್ಲಾಟಿಂಗ್ ಮಾಡಿಕೊಡಬೇಕು, ನಿವೇಶ ರಹಿತರಿಗೆ ಪಂಚಾಯಿತಿಯಿಂದ ಸುಲಭ ರೀತಿಯಲ್ಲಿ ನಿವೇಶನ ಸೌಲಭ್ಯ ದೊಕುವಂತಾಗಬೇಕು, ಲೋಕೋಪಯೋಗಿ ಇಲಾಖೆಯಿಂದ ನಿರ್ಮಾಣಗೊಳ್ಳುವ ರಸ್ತೆ, ಸೇತುವೆ ತೀರಾ ಕಳಪೆಮಟ್ಟದ್ದಾಗಿದ್ದು, ಒಂದೆರಡು ಮಳೆಗೆ ಕೊಚ್ಚಿಕೊಂಡು ಹೋಗುವ ಸ್ಥಿತಿಯಲ್ಲಿದೆ. ಈ ಕುರಿತು ಗಮನಹರಿಸಿ ಗುತ್ತಿಗೆದಾರರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು, ಮುಂತಾದ ಹತ್ತು ಹಲವು ಸಮಸ್ಯೆಗಳನ್ನು ಸರಿಪಡಿಸುವಂತೆ ಆಗ್ರಹಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಾಸ್ಕರ ರೈ ಕೊಪ್ಪಳ, ನಂದ ಕಿರಣ್, ನವೀನ್ ಕುಮಾರ್, ಸಾಧು ಜೇಕಬ್ ಉಪಸ್ಥಿತರಿದ್ದರು.

ಪುತ್ತೂರು, ಕಡಬಕ್ಕೆ ನೂತನ ತಾಲೂಕು ಸಮಿತಿ ರಚನೆ
ರೈತ ಸಂಘದ ಪುತ್ತೂರು ಮತ್ತು ಕಡಬ ತಾಲೂಕು ನೂತನ ಸಮಿತಿಯನ್ನು ಸುರೇಶ್ ಭಟ್ ಘೊಷಿಸಿದರು. ಕಡಬ ತಾಲೂಕು ಅಧ್ಯಕ್ಷರಾಗಿ ಯತೀಂದ್ರ ಶೆಟ್ಟಿ, ಪ್ರಧಾನ ಕಾರ್ಯದರ್ಶಿಯಾಗಿ ಮನೋಜ್ ಶಿರಾಡಿ, ಕಾರ್ಯದರ್ಶಿಯಾಗಿ ಸುರೇಶ್ ಕೇವಳ ಹಾಗೂ ಪುತ್ತೂರು ತಾಲೂಕು ಅಧ್ಯಕ್ಷರಾಗಿ ರಕ್ಷಿತ್, ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್, ಕಾರ್ಯದರ್ಶಿಯಾಗಿ ಹೊನ್ನಪ್ಪ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.

LEAVE A REPLY

Please enter your comment!
Please enter your name here