ಶಿಕ್ಷಕರ ದಿನಾಚರಣೆ ಪ್ರಯುಕ್ತ ದರ್ಬೆ ನಯಾ ಚಪ್ಪಲ್ ಬಜಾರ್‌ರವರಿಂದ ನಿವೃತ್ತ ಶಿಕ್ಷಕಿ ಪ್ರೆಸ್ಸಿ ಲೋಬೋರವರಿಗೆ ಸಮ್ಮಾನ

0

ಪುತ್ತೂರು: ಸೆ.5 ರಂದು ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನವನ್ನು ಆಚರಿಸಲ್ಪಡುವ ಶಿಕ್ಷಕರ ದಿನಾಚರಣೆಯ ದಿನದಂದು ದರ್ಬೆ ಬುಶ್ರಾ ಕಾಂಪ್ಲೆಕ್ಸ್‌ನಲ್ಲಿ ವ್ಯವಹರಿಸುತ್ತಿರುವ ಪಾದರಕ್ಷೆ ಉದ್ಯಮ ಮಳಿಗೆಯಾದ ನಯಾ ಚಪ್ಪಲ್ ಬಜಾರ್ ಸಂಸ್ಥೆಯು ನಿವೃತ್ತ ಶಿಕ್ಷಕಿ ಪ್ರೆಸ್ಸಿ ಲೋಬೊರವರನ್ನು ಸನ್ಮಾನಿಸಿ ‘ಗುರು ಸಮ್ಮಾನ’ ಕಾರ್ಯಕ್ರಮವನ್ನು ವಿಶೇಷವಾಗಿ ಆಚರಿಸಲಾಯಿತು.


ಮುಖ್ಯ ಅತಿಥಿ, ರೋಟರಿ ಕ್ಲಬ್ ಪುತ್ತೂರು ಸದಸ್ಯ ಡಾ.ಎಂ.ಎಸ್ ಭಟ್ ಮಾತನಾಡಿ, ರಫೀಕ್ ಮತ್ತು ನಾನು ರೋಟರಿಯಲ್ಲಿ ಬಹಳ ಆತ್ಮೀಯತೆಯಿಂದ ತೊಡಗಿಸಿಕೊಂಡವರು. ಮನಸ್ಸಿನಲ್ಲಿ ಗುರುಬ್ರಹ್ಮ, ಗುರುವಿಷ್ಣು, ಗುರು ಮಹೇಶ್ವರ ಎಂದು ಹೇಳಿದರೆ ಸಾಕಾಗುವುದಿಲ್ಲ. ಅದು ಸಾಕಾರಗೊಳ್ಳಬೇಕಾದರೆ ಗುರುವನ್ನು ಹೃದಯಾಂತರಾಳದಿಂದ ನೆನಪಿಸುವುದು ಅತೀ ಮುಖ್ಯವಾಗುತ್ತದೆ. ಶಿಕ್ಷಕರು ನಮ್ಮ ಜೀವನಕ್ಕೆ ಶಿಕ್ಷಣದ ಮೂಲಕ ಭದ್ರ ಬುನಾದಿ ಹಾಕಿಕೊಟ್ಟವರು. ತಮ್ಮ ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣವನ್ನು ಧಾರೆಯೆರೆದ ಶಿಕ್ಷಕಿಯನ್ನು ಸಮ್ಮಾನಿಸಿರುವುದು ಭದ್ರ ಬುನಾದಿಯ ದಾರಿದೀಪವಾಗಿದೆ ಎಂದರು.


ಇನ್ನರ್‌ವ್ಹೀಲ್ ಕ್ಲಬ್ ಮಾಜಿ ಅಧ್ಯಕ್ಷೆ ಹಾಗೂ ಡಾ.ಎಂ.ಎಸ್ ಭಟ್‌ರರ ಪತ್ನಿ ನಿವೃತ್ತ ಶಿಕ್ಷಕಿ ಶಂಕರಿ ಎಂ.ಎಸ್.ಭಟ್ ಮಾತನಾಡಿ, ಮನುಷ್ಯನ ಜೀವನದಲ್ಲಿ ಪ್ರಥಮವಾಗಿ ನೆನಪಿಗೆ ಬರುವುದು ಪ್ರಾಥಮಿಕ ಶಾಲೆಯ ಶಿಕ್ಷಕರು ಆಗಿದ್ದಾರೆ. ಸಣ್ಣ ವಯಸ್ಸಿನಲ್ಲಿ ನಾವು ಮಾಡುವ ತಪ್ಪನ್ನು ತಿದ್ದಿ ತೀಡಿದವರು ಅವರಾಗಿದ್ದು ಅವರನ್ನು ಎಂದಿಗೂ ಮರೆಯುವಂತಿಲ್ಲ. ನಾವು ಕಲಿಸಿದ ಮಕ್ಕಳು ಮುಂದೆ ದೊಡ್ಡವರಾದಾಗ ಗುರುತು ಹಿಡಿದು ಮಾತನಾಡಿಸುವಾಗ ಆಗುವ ಖುಶಿ ಬೇರೇನೆ. ಈ ನಿಟ್ಟಿನಲ್ಲಿ ರಫೀಕ್‌ರವರು ಅವರ ವಿದ್ಯಾರ್ಥಿ ಜೀವನದಲ್ಲಿ ಕಲಿಸಿದ ಶಿಕ್ಷಕಿಯನ್ನು ಗುರುತಿಸಿ ಸಮ್ಮಾನಿಸಿರುವುದು ಒಳ್ಳೆಯ ಬೆಳವಣಿಗೆ ಎಂದರು.


ಸನ್ಮಾನಿತ ಶಿಕ್ಷಕಿ ಪ್ರೆಸ್ಸಿ ಲೋಬೊರವರ ಶಿಷ್ಯ ಅಶ್ರಫ್ ಬಸ್ತಿಕ್ಕಾರ್ ಉಪ್ಪಿನಂಗಡಿ ಪ್ರಾಸ್ತಾವಿಕವಾಗಿ ಮಾತನಾಡಿ, ಬೇರೆ ಬೇರೆ ಆಚರಣೆ ಸಂದರ್ಭಗಳಲ್ಲಿ ನಯಾ ಚಪ್ಪಲ್ ಬಜಾರ್‌ನ ರಫೀಕ್ ಎಂ.ಜಿರವರು ವಿಶೇಷವಾದ ನೆನಪಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಉದ್ಯಮದ ಯಶಸ್ಸಿಗೆ ಸಾಕ್ಷಿಯಾಗಿದ್ದಾರೆ. ನಿವೃತ್ತ ಶಿಕ್ಷಕಿ ಪ್ರೆಸ್ಸಿ ಲೋಬೊರವರು ಸಮಾಜದಲ್ಲಿ ಹೇಗೆ ಬದುಕಬೇಕು ಎನ್ನುವುದನ್ನು ಶಿಕ್ಷಣದ ಮುಖೇನ ಕಲಿಸಿ ಕೊಟ್ಟಿದ್ದಾರೆ. ನಾಲ್ಕು ಗೋಡೆ ಮಧ್ಯೆ ಕಲಿಯುತ್ತಿದ್ದ ನಮ್ಮನ್ನು ಮರದ ಕೆಳಗೆ ಕುಳ್ಳಿರಿಸಿ ಅಕ್ಷರಾಭ್ಯಾಸವನ್ನು ಕಲಿಸುವ ಮೂಲಕ ಪರಿಸರದ ಸೊಬಗನ್ನು ಅವರು ತೋರಿಸಿಕೊಟ್ಟಿರುತ್ತಾರೆ. ಶಿಕ್ಷಕರು ನಿವೃತ್ತಿಯಾದರೂ ಅವರು ಎಂದೂ ಶಿಕ್ಷಕರೇ ಎಂದು ಹೇಳಿ ಶುಭ ಹಾರೈಸಿದರು.


ಪುತ್ತೂರು ವರ್ತಕ ಸಂಘದ ಕಾರ್ಯದರ್ಶಿ ಮನೋಜ್ ಟಿ.ವಿ ಮಾತನಾಡಿ, ಶಾಲೆಯಲ್ಲಿ ಮುಂದಿನ ಬೆಂಚ್‌ನಲ್ಲಿ ಉತ್ತಮವಾಗಿ ಕಲಿಯುವ ವಿದ್ಯಾರ್ಥಿ ಹಾಗೂ ಲಾಸ್ಟ್ ಬೆಂಚ್‌ಗಳಲ್ಲಿ ಕುಳಿತುಕೊಳ್ಳುವ ವಿದ್ಯಾರ್ಥಿಗಳಿಗೆ ಬಹಳ ಸಾಮ್ಯತೆಯಿದೆ. ಲಾಸ್ಟ್ ಬೆಂಚ್ ವಿದ್ಯಾರ್ಥಿಗಳು ಶಿಕ್ಷಕರಿಂದ ಪೆಟ್ಟು ತಿಂದರೂ ಮುಂದೆ ಭವಿಷ್ಯದಲ್ಲಿ ಪೆಟ್ಟು ಕೊಟ್ಟ ಶಿಕ್ಷಕರನ್ನೇ ಅವರು ಗೌರವಿಸುವುದು, ನೆನಪಿಸುವುದಾಗಿದೆ. ಶಿಕ್ಷಕ ವೃತ್ತಿಯಲ್ಲಿ ಶಿಕ್ಷಕರಿಗೆ ಅನೇಕ ಅಭಿಮಾನಿಗಳಾಗುತ್ತಾರೆ. ಉನ್ನತ ಹಂತಕ್ಕೆ ಹೋಗುವ ಪ್ರತಿಯೋರ್ವ ವಿದ್ಯಾರ್ಥಿ ಹಿಂದೆ ಶಿಕ್ಷಕರು ಇದ್ದೇ ಇದ್ದಾರೆ ಎಂದರು.


ಈ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಪ್ರೆಸ್ಸಿ ಲೋಬೋರವರ ಶಿಷ್ಯಂದಿರಾದ ಅಶ್ರಫ್ ಬಸ್ತಿಕ್ಕಾರ್, ರಿಯಾಜ್ ಎಂ.ಜಿ, ನಝೀರ್ ಮಠ, ಝಾಯಿದಾ ಎಂ.ಜಿ, ನಝೀಮಾ ಎಂ.ಜಿ, ನಸೀಮ ಎಂ.ಜಿರವರು ಪ್ರೆಸ್ಸಿ ಲೋಬೊರವರಿಗೆ ಕಾಣಿಕೆಗಳನ್ನು ನೀಡುವ ಮೂಲಕ ಗೌರವಿಸಲಾಯಿತು. ನಯಾ ಚಪ್ಪಲ್ ಬಜಾರ್ ಪಾಲುದಾರ ರಫೀಕ್ ಎಂ.ಜಿ ಸ್ವಾಗತಿಸಿ, ನಝೀರ್ ಮಠ ವಂದಿಸಿದರು. ಈ ಸಂದರ್ಭದಲ್ಲಿ ಮಳಿಗೆಯ ಮ್ಯಾನೇಜರ್ ಪ್ರಶಾಂತ್ ಹಾಗೂ ಸಿಬ್ಬಂದಿ ಸಹಕರಿಸಿದರು.

ಗುರು ಸಮ್ಮಾನ..
ಸುಮಾರು 40 ವರುಷಗಳ ಹಿಂದೆ ನಯಾ ಚಪ್ಪಲ್ ಬಜಾರ್ ಪಾದರಕ್ಷೆ ಮಳಿಗೆಯ ಪಾಲುದಾರರಾದ ರಫೀಕ್ ಎಂ.ಜಿ ಹಾಗೂ ಅವರ ಸಹೋದರರು, ಸಹೋದರಿಯರು ಉಪ್ಪಿನಂಗಡಿ ಸಂತ ಫಿಲೋಮಿನಾ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಜನೆಗೈಯುತ್ತಿದ್ದ ಸಂದರ್ಭದಲ್ಲಿ ಅಲ್ಲಿಗೆ ಶಿಕ್ಷಕಿಯಾಗಿ ಆಗಮಿಸಿದ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕ ಜೆರೋಮಿಯಸ್ ಪಾಯಿಸ್‌ರವರ ಪತ್ನಿ ಪ್ರೆಸ್ಸಿ ಲೋಬೊರವರನ್ನು ಗುರುತಿಸಿ, ‘ಗುರು ಸಮ್ಮಾನ’ ಮಾಡುವ ಮೂಲಕ ಶಿಕ್ಷಕರ ದಿನಾಚರಣೆಯನ್ನು ಆಚರಿಸಲಾಯಿತು.

ರಫೀಕ್‌ರವರ ಗುಣ ಮೆಚ್ಚಬೇಕು..
ಸನ್ಮಾನ ಸ್ವೀಕರಿಸಿ ಮಾತನಾಡಿದ ನಿವೃತ್ತ ಶಿಕ್ಷಕಿ ಪ್ರೆಸ್ಸಿ ಲೋಬೊರವರು, ರಫೀಕ್‌ರವರೋರ್ವ ಆದರ್ಶ ಹಾಗೂ ಪ್ರತಿಭಾವಂತ ವಿದ್ಯಾರ್ಥಿ ಮಾತ್ರವಲ್ಲ ಅವರಂತೆ ಹಲವಾರು ವಿದ್ಯಾರ್ಥಿಗಳು ಇದ್ದಾರೆ. ನಾನು ಕಲಿಸಿದ ಹಲವಾರು ವಿದ್ಯಾರ್ಥಿಗಳು ಇಂದು ಸಮಾಜದ ಉನ್ನತ ಸ್ತರದಲ್ಲಿ ಕಂಗೊಳಿಸುತ್ತಿರುವುದು ನನಗೆ ಖುಶಿ ತರುತ್ತದೆ. ಡಾ.ಸರ್ವಪಲ್ಲಿ ರಾಧಾಕೃಷ್ಣನ್‌ರವರ ಜನ್ಮದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದ ರಫೀಕ್‌ರವರ ಮನೋಭಾವನೆಯನ್ನು ಮೆಚ್ಚಬೇಕು ಎಂದರು.

LEAVE A REPLY

Please enter your comment!
Please enter your name here