ರಫೀಕ್ ಅವರ ಆರೋಪದಲ್ಲಿ ಹುರುಳಿಲ್ಲ: ಪ್ರಶಾಂತ್ ಎನ್. ಸ್ಪಷ್ಟನೆ
ಉಪ್ಪಿನಂಗಡಿ: 34 ನೆಕ್ಕಿಲಾಡಿ ಗ್ರಾಮಕ್ಕೆ ಮತ್ತು ಪುತ್ತೂರು ನಗರ ಸಭೆಗೆ ಪೂರೈಕೆಯಾಗುವ ಕುಡಿಯುವ ನೀರು ನೀಡದಂತೆ ಈ ಹಿಂದಿನ ಅಧ್ಯಕ್ಷರು ಏನೋ ಮಾಡಿದ್ದಾರೆ ಎಂದು ಕಳೆದ ಗ್ರಾ.ಪಂ. ಸಭೆಯಲ್ಲಿ ಮುಹಮ್ಮದ್ ರಫೀಕ್ ಅವರು ನನ್ನ ಮೇಲೆ ಪರೋಕ್ಷವಾಗಿ ಆರೋಪ ಮಾಡಿದ್ದು, ಇದು ಯಾರದ್ದೋ ಓಲೈಕೆಗಾಗಿ ಮಾಡಿದ ಸಂಪೂರ್ಣ ಸುಳ್ಳಿನಿಂದ ಕೂಡಿದ್ದ ಆಧಾರರಹಿತವಾದ ಆರೋಪವಾಗಿದೆ. ಯಾಕೆಂದರೆ ನಾನು ಗ್ರಾ.ಪಂ. ಅಧ್ಯಕ್ಷನಾಗಿದ್ದ ಅವಧಿಯಲ್ಲೇ ನೆಕ್ಕಿಲಾಡಿ ಗ್ರಾಮಕ್ಕೆ ಉಚಿತ ಕುಡಿಯುವ ನೀರು ನೀಡುವ ಸಲುವಾಗಿ ಕೇಳಲಾದ ಅಪೇಕ್ಷಿತ ಪತ್ರಕ್ಕೆ ನಗರ ಸಭೆಯವರು ಸ್ಪಂದನೆ ನೀಡಲಿಲ್ಲವೆಂದು ಪ್ರತಿಭಟಿಸಿ, ಜಲಸಿರಿಯ 2ನೇ ಹಂತದ ಕಾಮಗಾರಿಗೆ ತಡೆಯೊಡ್ಡುವ ಕೆಲಸವನ್ನೂ ನಡೆಸಿದ್ದೇನೆ ಎಂದು ಗ್ರಾ.ಪಂ. ಸದಸ್ಯ ಪ್ರಶಾಂತ್ ಕುಮಾರ್ ನೆಕ್ಕಿಲಾಡಿ ಸ್ಪಷ್ಟಪಡಿಸಿದ್ದಾರೆ.
ಇಲ್ಲಿನ ಕುಮಾರಧಾರ ನದಿಯಿಂದ ಪುತ್ತೂರು ನಗರ ಸಭೆಗೆ ಪೂರೈಕೆಯಾಗುವ ಶುದ್ಧ ಕುಡಿಯುವ ನೀರನ್ನು 34 ನೆಕ್ಕಿಲಾಡಿ ಗ್ರಾಮಕ್ಕೂ ನೀಡಬೇಕೆಂದು ನನ್ನದೂ ಸೇರಿದಂತೆ ಇಲ್ಲಿನ ಗ್ರಾಮಸ್ಥರ ಬೇಡಿಕೆಯಾಗಿತ್ತು. ನಾನು ಗ್ರಾ.ಪಂ. ಸದಸ್ಯನಾದ ಬಳಿಕ ಇದಕ್ಕಾಗಿ ಹಲವಾರು ಹೋರಾಟಗಳನ್ನು ನಡೆಸಿದ್ದೇನೆ. ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಜಲಸಿರಿ ಯೋಜನೆಯಲ್ಲಿ ಪುತ್ತೂರು ನಗರಕ್ಕೆ ಶುದ್ಧ ಕುಡಿಯುವ ನೀರಿಗೆ ಸಂಬಂಧಿಸಿ 2ನೇ ಹಂತದ ಕಾಮಗಾರಿ ನಡೆಯುತ್ತಿದ್ದ ವೇಳೆಯೂ 34 ನೆಕ್ಕಿಲಾಡಿ ಗ್ರಾಮಕ್ಕೆ ಉಚಿತ ಕುಡಿಯುವ ನೀರು ನೀಡುವಂತೆ ನಗರ ಸಭೆಗೆ ಬೇಡಿಕೆ ಮಂಡಿಸಲಾಗಿದೆ. ಆದರೆ ಆ ಅಪೇಕ್ಷಿತ ಪತ್ರಕ್ಕೆ ಪುತ್ತೂರು ನಗರ ಸಭೆಯವರು ಲಿಖಿತ ಉತ್ತರ ನೀಡದ್ದರಿಂದ ಗ್ರಾಮಸ್ಥರು, ಗ್ರಾ.ಪಂ. ಸದಸ್ಯರನ್ನು ಒಗ್ಗೂಡಿಸಿಕೊಂಡು ಬೊಳಂತಿಲದ ಬಳಿ ಜಲಸಿರಿ ಕಾಮಗಾರಿಯ ವಿರುದ್ಧ ಪ್ರತಿಭಟನೆ ನಡೆಸಿದ್ದಲ್ಲದೆ, ಕಾಮಗಾರಿಗೆ ತಡೆಯೊಡ್ಡುವ ಕಾರ್ಯವನ್ನೂ ನಡೆಸಿದ್ದೇನೆ. ಜಲಸಿರಿ ಕಾಮಗಾರಿ ಮುಗಿಯುವ ಹಂತಕ್ಕೆ ಬಂದಿದ್ದರೂ, ನಮ್ಮ ಬೇಡಿಕೆಯನ್ನು ಈಡೇರಿಸದ ಕುರಿತಾಗಿ ಸಾಮಾನ್ಯ ಸಭೆಯಲ್ಲಿ ವಿಚಾರ ಪ್ರಸ್ತಾಪಿಸಿ, ಜಲಸಿರಿ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ನಿರ್ಣಯವನ್ನೂ ಕೈಗೊಳ್ಳಲಾಗಿದೆ. ಅದಕ್ಕೆ ಪ್ರತಿಯಾಗಿ ಇದು ಸರಕಾರದ ಕಾಮಗಾರಿಯಾಗಿದ್ದು, ಇದನ್ನು ನಿಲ್ಲಿಸಲು ಸಾಧ್ಯವಿಲ್ಲ. ಈ ಬಗ್ಗೆ ಮತ್ತೆ ಏನಾದರೂ ಸಮಸ್ಯೆ ಬಂದಲ್ಲಿ ಜಿಲ್ಲಾಧಿಕಾರಿ ಹಾಗೂ ಸರಕಾರಕ್ಕೆ ಈ ಬಗ್ಗೆ ವರದಿ ನೀಡಲಾಗುವುದು ಎಂದು ನಗರ ಸಭೆಯಿಂದ ಗ್ರಾ.ಪಂ.ಗೆ ಪತ್ರವೂ ಬಂದಿದೆ. 34 ನೆಕ್ಕಿಲಾಡಿ ಗ್ರಾಮಕ್ಕೆ ಮತ್ತು ಪುತ್ತೂರು ನಗರ ಸಭೆಗೆ ಪೂರೈಕೆಯಾಗುವ ಶುದ್ಧ ಕುಡಿಯುವ ನೀರನ್ನು ಒದಗಿಸಿಕೊಡಬೇಕೆಂದು ನನ್ನ ಅಧ್ಯಕ್ಷೀಯ ಅವಧಿಯಲ್ಲಿ ಹಲವು ಪ್ರಯತ್ನಗಳನ್ನು ಮಾಡಲಾಗಿದೆ. ಆದರೆ ಇದರ ಬಗ್ಗೆ ಅರಿವಿಲ್ಲದ ಮುಹಮ್ಮದ್ ರಫೀಕ್ ಅವರು ನನ್ನ ಅನುಪಸ್ಥಿತಿಯಲ್ಲಿ ಜಮಾಬಂಧಿ ಸಭೆಯಲ್ಲಿ ಈ ರೀತಿ ಸುಳ್ಳು ಆರೋಪ ಮಾಡಿರುವುದು ಸರಿಯಲ್ಲ ಎಂದು ಗ್ರಾ.ಪಂ. ಸದಸ್ಯ ಪ್ರಶಾಂತ್ ಕುಮಾರ್ ಎನ್. ತನ್ನ ಸ್ಪಷ್ಟನೆಯಲ್ಲಿ ತಿಳಿಸಿದ್ದಾರೆ.