ಪುತ್ತೂರು: ಇವತ್ತು ನನಗೆ ಅತ್ಯಂತ ಸಂತೋಷದ ದಿನ. ನಿಮಗೆ ದೇವರ ಆಶೀರ್ವಾದ ಸದಾ ಇರಲಿ. ದೇವರ ಮೇಲೆ ಭಾರ ಹಾಕಿ ಒಳ್ಳೆಯ ಕೆಲಸ ಮಾಡಿ. ಈಗ ಮಾಡುತ್ತಿರುವ ಒಳ್ಳೆಯ ಕೆಲಸವನ್ನು ಮುಂದುವರಿಸಿ ಎಂದು ಆನಂದ ಭಾಷ್ಪ ಹರಿಸಿದ ನಿವೃತ್ತ ಶಿಕ್ಷಕಿ ವಿಲ್ ಹೆಲ್ಮಿನಾ ಅಮ್ಮಣ್ಣ ತನ್ನ ವಿದ್ಯಾರ್ಥಿ ಶಾಸಕ ಅಶೋಕ್ ಕುಮಾರ್ ರೈ ಅವರಿಗೆ ಹೇಳಿದ್ದಾರೆ.
ಶಿಕ್ಷಕ ದಿನಾಚರಣೆಯಂದು ಶಾಸಕ ಅಶೋಕ್ ಕುಮಾರ್ ರೈ, ಬಾಲ್ಯದಲ್ಲಿ ತನಗೆ ಇಂಗ್ಲೀಷ್ ಶಿಕ್ಷಕಿಯಾಗಿದ್ದ ಬೊಳುವಾರು ನಿವಾಸಿ ಅಮ್ಮಣ್ಣ ಅವರ ಮನೆಗೆ ತೆರಳಿ ಅವರಿಗೆ ಆರತಿ ಬೆಳಗಿ, ಅವರಿಂದ ಅಶೀರ್ವಾದ ಪಡೆದ ಕ್ಷಣ ಅಮ್ಮಣ್ಣ ಟೀಚರ್, ಆನಂದ ಭಾಷ್ಪ ಹರಿಸಿ ತನ್ನ ಶಿಷ್ಯನನ್ನು ಗೌರವಿಸಿದರು. ನಿಮ್ಮ ಮಾರ್ಗದರ್ಶನದಿಂದ ನಾನು ಇವತ್ತು ಶಾಸಕನಾಗಿದ್ದೇನೆ. ಹಿಂದೆಯೂ ಮಾರ್ಗದರ್ಶನ ನೀಡಿದ್ದೀರಿ. ಈಗಲೂ ತಪ್ಪಿದ್ದರೆ ತಿದ್ದುವ ಕೆಲಸಮಾಡಿ. ಪ್ರಾಮಾಣಿಕತೆಯಾಗಿ ಭ್ರಷ್ಠಾಚಾರ ರಹಿತವಾಗಿ ಕೆಲಸ ಮಾಡುವ ಪ್ರಯತ್ನ ಮಾಡುತ್ತಿದ್ದೇನೆ ಎಂದು ಶಾಸಕ ಅಶೋಕ್ ರೈ ಹೇಳಿದರು. ಈ ಸಂದರ್ಭ ಅಮ್ಮಣ್ಣ ಟೀಚರ್, ನಿಮ್ಮ ಮನಸ್ಸಿಗೆ ಯಾವುದು ಸರಿ ಕಾಣುತ್ತದೆ ಅದನ್ನು ಮಾಡಿ. ನಿಮ್ಮ ದಾರಿ ಉತ್ತಮವಾಗಿದೆ ಎಂದು ಆಶೀರ್ವದಿಸಿದರು. ಗುರು ಶಿಷ್ಯರ ಈ ಸಂಭಾಷಣೆಗೆ ಆಸ್ಕರ್ ಆನಂದ್, ಪುತ್ತೂರು ವಾಣಿಜ್ಯ ಕೈಗಾರಿಕಾ ಸಂಘದ ಮಾಜಿ ಅಧ್ಯಕ್ಷ ಜಾನ್ ಕುಟೀನ್ಹಾ, ರಂಜಿತ್ ಬಂಗೇರ, ಇಬ್ರಾಹಿಂ ಬೊಳುವಾರು ಸಹಿತ ಹಲವಾರು ಮಂದಿ ಸಾಕ್ಷಿಯಾದರು.
ಅಮಣ್ಣ ಟೀಚರ್ ನನಗೆ ಇಂಗ್ಲೀಷ್ ಕಲಿಸಿದ ಟೀಚರ್
ಬಾಲ್ಯದಲ್ಲಿ ನಮ್ಮನ್ನು ಸರಿ ದಾರಿಗೆ ತರಲು ತಂದೆ ತಾಯಿಗಳ, ಪೋಷಕರ, ಪ್ರಯತ್ನ ಒಂದು ಕಡೆಯಾದರೆ ಶಿಕ್ಷಕರು ಪಾತ್ರವೂ ಮಹತ್ವದ್ದು. ಈ ನಿಟ್ಟಿನಲ್ಲಿ ಶಿಕ್ಷಕರ ದಿನಾಚರಣೆಯಂದು ಅಮ್ಮಣ್ಣ ಟೀಚರ್ ಅವರ ಮನೆಗೆ ತೆರಳಿ ಅವರ ಅಶೀರ್ವಾದ ಪಡೆದುಕೊಂಡಿದ್ದೇನೆ. ಅಮ್ಮಣ್ಣ ಟೀಚರ್ ನನಗೆ ಇಂಗ್ಲೀಷ್ ಕಲಿಸಿದ ಟೀಚರ್. ಈ ಸ್ಥಾನಮಾನಕ್ಕೆ ಏರಬೇಕಾದರೆ ಗುರುಹಿರಿಯರ ಆಶೀರ್ವಾದ, ದೈವದೇವರ ಅನುಗ್ರಹ, ನನಗೆ ಕಲಿಸಿದ ಟೀಚರ್‌ಗಳಿಂದಾಗಿ ಪುತ್ತೂರಿನ ಶಾಸಕನಾಗಿ ನಿಂತಿದ್ದೇನೆ. ಎಂದು ಅಶೋಕ್ ಕುಮಾರ್ ರೈ ಹೇಳಿದ್ದಾರೆ.