ಉಪ್ಪಿನಂಗಡಿ: ಇಲ್ಲಿನ ಜ್ಞಾನ ಭಾರತಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ SSLC ವಿದ್ಯಾರ್ಥಿಗಳಿಗಾಗಿ ಅಂತರಾಷ್ಟ್ರೀಯ ಸಂಪನ್ಮೂಲ ವ್ಯಕ್ತಿ, ಬಹರೈನ್ ಕಿಂಗ್‌ಡಮ್ ವಿವಿಯ ಪ್ರಾಧ್ಯಾಪಕ ಡಾ. ಹಬೀಬುರ್ರಹ್ಮಾನ್ ಅವರಿಂದ ‘know thyself’ (ನಿಮ್ಮನ್ನು ತಿಳಿದುಕೊಳ್ಳಿ) ಎಂಬ ವಿಶೇಷ ತರಬೇತಿ ಕಾರ್ಯಗಾರ ನಡೆಯಿತು.
SSLC ಪರೀಕ್ಷೆಯ ಪ್ರಾಮುಖ್ಯತೆ ಮತ್ತು ಜೀವನದ ಗುರಿ ಮತ್ತು ತಮ್ಮ ಶಕ್ತಿಯ ಅರಿವು, ಭವಿಷ್ಯದ ಗುರಿ ಏನಿರಬೇಕು ಎಂಬುದರ ಬಗ್ಗೆ ಈ ಸಂದರ್ಭ ಅವರು ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರಲ್ಲದೆ, ವಿದ್ಯಾರ್ಥಿಗಳು ನಮ್ಮ ಭವಿಷ್ಯದ ನಾಯಕರು. ಅವರು ಸರಿಯಾದ ರೀತಿಯಲ್ಲಿ ಗುರಿ ತಲುಪಲು ಅವರಲ್ಲಿ ಯಾವ ಕೌಶಲ್ಯಗಳು ಇರಬೇಕು ಎಂಬುದನ್ನು ಚಟುವಟಿಕೆಗಳ ಮೂಲಕ ವಿವರಿಸಿದರು.
ಶಾಲಾ ಸಂಚಾಲಕ ಅಬ್ದುಲ್ ರವೂಫ್ ಯು.ಟಿ. ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ಗುರಿಯನ್ನು ಇಟ್ಟು ಅದರ ಈಡೇರಿಕೆಗೆ ಸತತ ಪ್ರಯತ್ನ ಮಾಡಿದಾಗ ಮಾತ್ರ ಗುರಿ ಈಡೇರಲು ಸಾಧ್ಯ ಎಂದರು. ಕಾರ್ಯಕ್ರಮದಲ್ಲಿ ಮುಖ್ಯ ಶಿಕ್ಷಕಿಯರಾದ ಅರುಣಾ, ತಾಹಿರ ಹಾಗೂ 10ನೇ ತರಗತಿಯ ಶಿಕ್ಷಕಿಯರಾದ ಸವಿತಾ ಮತ್ತು ನೇತ್ರಾವತಿ ಉಪಸ್ಥಿತರಿದ್ದರು.
ಶಾಲಾ ಪ್ರಾಂಶುಪಾಲ ಇಬ್ರಾಹೀಂ ಕಲೀಲ್ ಹೇಂತಾರ್ ಸ್ವಾಗತಿಸಿದರು. ಶಿಕ್ಷಕಿಯರಾದ ಸುಚಿತ್ರಾ ಡಾ. ಹಬೀಬುರ್ರಹ್ಮಾನ್ ಅವರ ಪರಿಚಯ ಮಾಡಿದರು.