ಶಿಕ್ಷಕರ ದಿನಾಚರಣೆ ಅಂಗವಾಗಿ ನಿವೃತ್ತರ ಸಮಾಗಮ-ಸನ್ಮಾನ

0

ವಿವಿಧ ಹಂತದ ನೌಕರರು ನಿವೃತ್ತಿಯಲ್ಲಿ ಒಂದೇ ಭಾವನೆಯ ಒಗ್ಗಟ್ಟಿರಲಿ – ವಾಲ್ಟರ್ ಹೆಚ್ ಡಿಮೆಲ್ಲೊ

ಪುತ್ತೂರು: ಉದ್ಯೋಗದಲ್ಲಿರುವಾಗ ವಿವಿಧ ಹಂತದ ನೌಕರರಾಗಿದ್ದರೂ, ನಿವೃತ್ತಿಯ ಬಳಿಕ ಎಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನ ಸಾಗಿಸೋಣ. ಉತ್ತಮ ಸಂಘಟಕರಾಗೋಣ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಬೆಳಗಾವಿ ವಿಭಾಗದ ನಿವೃತ್ತ ವಿಭಾಗೀಯ ಸಹ ನಿರ್ದೇಶಕರಾದ ವಾಲ್ಟರ್ ಹೆಚ್ ಡಿ’ಮೆಲ್ಲೊ ಅವರು ಹೇಳಿದರು.


ಕರ್ನಾಟಕ ರಾಜ್ಯ ನಿವೃತ್ತ ನೌಕರರ ಸಂಘ ಪುತ್ತೂರು ಇದರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್, ರೋಟರಿ ಕ್ಲಬ್ ಪುತ್ತೂರು ಈಸ್ಟ್‌ನ ಸಹಭಾಗಿತ್ವದಲ್ಲಿ ಪುತ್ತೂರು ರೋಟರಿ ಮನಿಷಾ ಸಭಾಂಗಣದಲ್ಲಿ ಸೆ.5ರಂದು ಶಿಕ್ಷಕರ ದಿನಾಚರಣೆ ಅಂಗವಾಗಿ ನಡೆದ ನಿವೃತ್ತರ ಸಮಾಗಮ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ನೌಕರರು ಸೇವೆಯಿಂದ ನಿವೃತ್ತಿ ಆದ ಬಳಿಕ ಸಂಘಟಿತರಾಗಿ ತಮ್ಮ ಮುಂದಿನ ಜೀವನದಲ್ಲಿ ಸಾರ್ಥಕ್ಯವನ್ನು ಪಡೆಯಲು ವಿವಿಧ ಆಯಾಮಗಳಲ್ಲಿ ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವ ನಿಟ್ಟಿನಲ್ಲಿ ಸಂಘಟಿತರಾಗಿ ತಮ್ಮ ಮುಂದಿನ ಜೀವನದಲ್ಲಿ ಆರೋಗ್ಯವಾಗಿ ನೆಮ್ಮದಿಯಿಂದ ಬದುಕು ಸಾಧಿಸುವ ನಿಟ್ಟಿನಲ್ಲಿ ಸಂಘದ ಎಲ್ಲಾ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಉದ್ಯೋಗದಲ್ಲಿರುವಾಗ ವಿವಿಧ ಹಂತದ ನೌಕರರಾಗಿದ್ದರೂ,ನಿವೃತ್ತಿಯ ಬಳಿಕ ಎಲ್ಲರೂ ಒಂದೇ ಎಂಬ ಭಾವನೆಯಿಂದ ಜೀವನ ಸಾಗಿಸೋಣ.ಈ ನೆಲೆಯಲ್ಲಿ ಇಂದಿನ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದರು.


43 ಮಂದಿಗೆ ಸನ್ಮಾನ:
ವಿವಿಧ ಇಲಾಖೆಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ 43 ಜನರನ್ನು ಸನ್ಮಾನಿಸಿ ಗೌರವಿಸುವುದರೊಂದಿಗೆ ಸಂಘದ ಅತೀ ಹಿರಿಯ ಸದಸ್ಯೆ ನಿವೃತ್ತ ಶಿಕ್ಷಕಿ ಜೋಸ್ಪಿನ್ ಗೋನ್ಸಾಲ್ವಿಸ್ ರವರನ್ನು ವೇದಿಕೆಯಲ್ಲಿ ಗೌರವಿಸಿ ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿದ ನಿವೃತ್ತ ಪ್ರಾಚಾರ್ಯ ಪ್ರೊ ಎ ವಿ ನಾರಾಯಣ ರವರು ಕಾರ್ಯಕ್ರಮದ ಆಯೋಜನೆ ಮಾಡುವಲ್ಲಿ ಶ್ರಮಿಸಿದ ಪದಾಧಿಕಾರಿಗಳಿಗೆ ಅಭಿನಂದನೆಯನ್ನು ತಿಳಿಸಿ ಸೇವಾ ನಿವೃತ್ತಿ ಪಡೆದ ನಾವೆಲ್ಲರೂ ಒಂದಾಗಿ ನಮ್ಮ ಮುಂದಿನ ಜೀವನದಲ್ಲಿ ಬರುವ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವ ಉದ್ದೇಶದಿಂದ ನಿಮ್ಮೆಲ್ಲರನ್ನು ಒಟ್ಟು ಸೇರಿಸಿ ಈ ಕಾರ್ಯಕ್ರಮವನ್ನು ಹಮ್ಮಿಕೊಂಡದಕ್ಕಾಗಿ ಸಂಘಕ್ಕೆ ಕೃತಜ್ಞತೆಯನ್ನು ಸಲ್ಲಿಸಿದರು.


ನಿವೃತ್ತ ಪ್ರಾಚಾರ್ಯ ಡಾ. ಮಾಧವ ಭಟ್ ಹೆಚ್ ರವರು ಅಭಿವಂದನಾ ಭಾಷಣ ಮಾಡಿದರು. ನಾವೆಲ್ಲರೂ ಹೆಚ್ಚು ಕಮ್ಮಿ 20ರಿಂದ 35 ವರ್ಷಗಳ ಅವಧಿಯ ಸೇವೆ ಸಲ್ಲಿಸಿ ನಿವೃತ್ತರಾಗಿದ್ದೇವೆ. ಇನ್ನೂ ಹೆಚ್ಚು ಕಡಿಮೆ 30 ರಿಂದ 40 ವರ್ಷಗಳ ಕಾಲ ನಿವ್ರತ್ತ ಜೀವನವನ್ನು ಸಾಧಿಸುವ ಸಂದರ್ಭ ನಮಗೆ ತ್ರಪ್ತಿಕರವಾದ ಪಿಂಚಣಿಯು ದೊರಕುತ್ತಿರುವುದು ನಮ್ಮೆಲ್ಲರ ಸೌಭಾಗ್ಯ. ಆರೋಗ್ಯಕರವಾದ ಬದುಕನ್ನು ಸಾಗಿಸಲು ಮನಸ್ಸಿಗೆ ನೆಮ್ಮದಿ ಇರಬೇಕು. ಅದಕ್ಕಾಗಿ ಪರಸ್ಪರ ಸ್ನೇಹ ಭಾವದಿಂದ ಇದ್ದು ಜೀವನದಲ್ಲಿ ನೆಮ್ಮದಿಯನ್ನು ಪಡೆಯಲು ಸಂಘಟಿತರಾಗಿ ಪರಸ್ಪರ ವಿಚಾರ ವಿನಿಮಯಗಳನ್ನು ಮಾಡುತ್ತಾ ಜೀವಿತ ಕಾಲವನ್ನು ಸಾರ್ಥಕ್ಯ ಗೊಳಿಸಬೇಕೆಂದು ಹೇಳುತ್ತಾ ಸಂಘಟಕರ ದೂರದೃಷ್ಟಿ ವ್ಯಕ್ತಿತ್ವದಿಂದ ಕಾರ್ಯಕ್ರಮವು ಸಾಕಾರಗೊಂಡಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ರವರು ಮಾತನಾಡಿ ನಿವೃತರಾದಾಗ ಸರ್ಕಾರದಿಂದ ದೊರಕಿದ ಆರ್ಥಿಕ ಸವಲತ್ತುಗಳನ್ನು ಬಹಳ ಎಚ್ಚರದಿಂದ ನಿರ್ವಹಿಸಬೇಕು. ವಿವಿಧ ಇಲೆಕ್ಟ್ರಾನಿಕ್ ಮಾಧ್ಯಮಗಳ ಮೂಲಕ ನಮ್ಮನ್ನು ವಂಚಿಸುವ ಕಾರ್ಯಗಳು ಆಗುತ್ತಿರುವುದನ್ನು ಗಮನಿಸಿಕೊಂಡು ನಮ್ಮ ವ್ಯವಹಾರವನ್ನು ಎಚ್ಚರಿಕೆಯಿಂದ ನಿರ್ವಹಿಸಬೇಕು. ಸೇವಾ ನಿವೃತ್ತಿ ಪಡೆದ ನಿಮ್ಮ ಮುಂದಿನ ಭವಿಷ್ಯ ಉಜ್ವಲವಾಗಲಿ ಎಂದು ಶುಭಹಾರೈಸಿದರು.


ರೋಟರಿ ಕ್ಲಬ್ ಪುತ್ತೂರು ಈಸ್ಟ್ ಇದರ ಅಧ್ಯಕ್ಷ ಡಾ.ರವಿಪ್ರಕಾಶ್ ಕಜೆಯವರು ಮಾತನಾಡಿ ಇಂತಹ ಒಂದು ಅಪೂರ್ವ ಸಂದರ್ಭದಲ್ಲಿ ನಾವು ಭಾಗಿಗಳಾಗಿದ್ದೇವೆ. ಹಿರಿಯರಾದ ತಮ್ಮನ್ನೆಲ್ಲ ಅಭಿನಂದಿಸುವುದರ ಮೂಲಕ ನಮ್ಮ ಸಂಘಟನೆಗಳ ಪದಾಧಿಕಾರಿಗಳಿಗೆ ಹೆಮ್ಮೆ ಅನಿಸುತ್ತದೆ. ಮುಂದಿನ ದಿನಗಳಲ್ಲಿ ತಮ್ಮೆಲ್ಲರ ಜೀವನ ಸುಖಕರವಾಗಿ ಸಾಗಲೆಂದು ಹಾರೈಸುತ್ತೇನೆ.
ಸಭಾಧ್ಯಕ್ಷತೆ ವಹಿಸಿದ ರಾಜ್ಯ ನಿವೃತ್ತ ನೌಕರರ ಸಂಘದ ಅಧ್ಯಕ್ಷ ಬಿ ಐತ್ತಪ್ಪ ನಾಯ್ಕ್ ಮಾತನಾಡಿ ಎಲ್ಲ ನಿವೃತ್ತ ನೌಕರರು ಒಂದು ಸೂರಿನಲ್ಲಿ ಒಟ್ಟು ಸೇರಿ ತಮ್ಮ ದು:ಖ ದುಮ್ಮಾನಗಳನ್ನು ಪರಸ್ಪರ ಮಾತುಕತೆಯಿಂದ ಪರಿಹರಿಸಿಕೊಂಡು ಮುನ್ನಡೆಯೋಣ. ನಮಗೆ ಮುಂದಿನ ದಿನಗಳಲ್ಲಿ ಎದುರಾಗಬಹುದಾದ ಎಲ್ಲ ಸಮಸ್ಯೆಗಳನ್ನು ಸಂಘದ ಮೂಲಕ ಪರಿಹರಿಸಿಕೊಂಡು ಒಂದು ನೆಮ್ಮದಿಯ ಜೀವನವನ್ನು ಸಾಗಿಸೋಣ. ಸರ್ಕಾರದ ಸೇವಕರಾಗಿ ನಾವು ಮಾಡಿದ ಸೇವೆಗೆ ನಿವೃತ್ತರಾದ ಬಳಿಕವೂ ಪಿಂಚಣಿಯ ಮೂಲಕ ಸರ್ಕಾರವು ನಮಗೆ ನೆಮ್ಮದಿಯ ಜೀವನ ಸಾಗಿಸಲು ದಾರಿ ಮಾಡಿಕೊಟ್ಟಿದೆ ನಿಜವಾಗಿಯೂ ನಾವು ಪುಣ್ಯವಂತರು ಎಂದರು. ಯಶೋಧ ಪಿ ರಾವ್ ಪ್ರಾರ್ಥಿಸಿದರು. ತಿರುಮಲೇಶ್ವರ ಭಟ್ ರವರು ಸ್ವಾಗತಿಸಿ, ಜಗನ್ನಾಥ ರೈಯವರು ವಂದಿಸಿದರು. ಪ್ರೊ ಝೇವಿಯರ್ ಡೀಸೋಜರವರು ಕಾರ್ಯಕ್ರಮ ನಿರೂಪಿಸಿದರು. ಕೆ ಸುಂದರ ನಾಯ್ಕ್, ಶ್ರೀಧರ ರೈ ಎಚ್, ಗೋಪಾಲಕೃಷ್ಣ ಉಪಾಧ್ಯಾಯ, ಸುಬ್ರಹ್ಮಣ್ಯ ಭಟ್, ಶಿವಾನಂದ ಎನ್ ಅತಿಥಿಗಳನ್ನು ಗೌರವಿಸಿದರು. ಸನ್ಮಾನಿತರ ಪಟ್ಟಿಯನ್ನು ಶರತ್ ಕುಮಾರ್ ರಾವ್ ಮತ್ತು ಶಶಿಕಲಾ ಎನ್ ವಾಚಿಸಿದರು. ಎ ಶಂಕರ ನಾಯಕ್,ಶಂಕರಿ ಎಂ ಎಸ್ ಭಟ್, ನಿರ್ಮಲ ಬಿ ಕೆ, ಜಯಂತಿ ಪಿ ನಾಯ್ಕ್ ಮತ್ತು ಕಚೇರಿ ಸಿಬ್ಬಂದಿ ಶ್ರೇಯ ಶೆಟ್ಟಿ ಸಹಕರಿಸಿದರು.

LEAVE A REPLY

Please enter your comment!
Please enter your name here