ಸೆ.8 ಭೂಮಿ ಪೂಜನ
ವಿಟ್ಲ: ಕಂಬಳಬೆಟ್ಟು ಧರ್ಮನಗರ ಸಮಾಜ ಮಂದಿರದಲ್ಲಿ 53ನೇ ವರ್ಷದ ಗಣೇಶೋತ್ಸವ ಸೆ. 7,8 ಮತ್ತು 9ರಂದು ನಡೆಯಲಿದ್ದು, ಸೆ 8ರಂದು ಸಂಜೆ ಭೂಮಿ ಪೂಜನ ಎಂಬ ವಿಶೇಷ ಕಾರ್ಯಕ್ರಮ ಜರಗಲಿದೆ ಎಂದು ಗಣೇಶೋತ್ಸವ ಸಮಿತಿ ಅಧ್ಯಕ್ಷ ರಮೇಶ ಧರ್ಮನಗರ ತಿಳಿಸಿದರು.
ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರೇರಣೆಯೊಂದಿಗೆ ಕಳೆದ 52 ವರ್ಷಗಳಿಂದ ಗಣೇಶೋತ್ಸವ ಆಚರಿಸಲಾಗುತ್ತಿದೆ ಈ ಸಲ ವಿಶೇಷವಾಗಿ ಭೂಮಿ ಪೂಜನ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು. ಪ್ರತಿ ಮನೆಯಿಂದ ಐದು ಮುಷ್ಟಿ ಮಣ್ಣನ್ನು ತಂದು ಪೂಜಿಸಿ ಅನಂತರ ಅದರಲ್ಲಿ ಒಂದು ಮುಷ್ಟಿ ಮಣ್ಣನ್ನು ಪ್ರಸಾದ ರೂಪವಾಗಿ ಮನೆಗೆ ಕೊಂಡೊಯ್ದು ಮಣ್ಣಿನಲ್ಲಿ ಸೇರಿಸಿ ಭೂಮಿಯಲ್ಲಿ ಬದುಕಲು ಅವಕಾಶ ಮಾಡಿಕೊಟ್ಟ ಭೂಮಿ ತಾಯಿಗೆ ನಮನ ಸಲ್ಲಿಸಲಾಗುವುದು. ಭೂಮಿ ಪೂಜನ ಸಂದರ್ಭದಲ್ಲಿ ರಂಗಪೂಜೆ ಬಳಿಕ ಸಾಮೂಹಿಕ ಆರತಿ ಬೆಳಗುವಿಕೆ ಇದೆ ಎಂದರು. ವರ್ಷಂಪ್ರತಿಯಂತೆ ಮೂರು ದಿನ ಕೂಡ ಅಟೋಟ ಸ್ಪರ್ಧೆ, ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು, ಧಾರ್ಮಿಕ ಸಭೆ, ಬಹುಮಾನ ವಿತರಣೆ , ಶೋಭಾಯಾತ್ರೆ ,ಗಣಪತಿ ವಿಗ್ರಹ ವಿಸರ್ಜನೆ ಜರಗಲಿದೆ ಎಂದು ಅವರು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಗಣೇಶೋತ್ಸವ ಸಮಿತಿ ಕಾರ್ಯದರ್ಶಿ ಧನರಾಜ್ ಅಮೈ, ಮುಖಂಡರಾದ ಅಮೈ ವಸಂತ ಕುಮಾರ್, ಬಿ. ಸುಧಾಕರ ಶೆಟ್ಟಿ, ಮೂಡಾಯಿಮಾರು ಸತೀಶ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.