ಉಪ್ಪಿನಂಗಡಿ: ಇಲ್ಲಿನ 48ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವವು ಉಪ್ಪಿನಂಗಡಿಯ ಶ್ರೀ ಲಕ್ಷ್ಮೀ ವೆಂಕಟ್ರಮಣ ಕಲ್ಯಾಣ ಮಂಟಪದಲ್ಲಿ ಸೆ.7ರಂದು ಆರಂಭಗೊಂಡಿದ್ದು, ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಬೆಳಗ್ಗೆ ಶ್ರೀ ಗಣಪತಿ ದೇವರ ವಿಗ್ರಹ ಪ್ರತಿಷ್ಠೆಯೊಂದಿಗೆ ಗಣಹೋಮ ನಡೆಯಿತು.
ಈ ಸಂದರ್ಭ ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಗಾಂಧಿಪಾರ್ಕ್, ಕಾರ್ಯದರ್ಶಿ ಜಯಪ್ರಕಾಶ್ ಶೆಟ್ಟಿ ಶ್ರೀನಿಧಿ, ಕೋಶಾಧಿಕಾರಿ ಚಂದ್ರಹಾಸ ಹೆಗ್ಡೆ, ಉಪಾಧ್ಯಕ್ಷ ಯು. ಯತೀಶ್ ಶೆಟ್ಟಿ, ಜೊತೆ ಕಾರ್ಯದರ್ಶಿಗಳಾದ ಶರತ್ ಕೋಟೆ, ಕೀರ್ತನ್ ಕುಮಾರ್ ಕೊಲ, ಸಮಿತಿಯ ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು, ರವೀಶ್ ಎಚ್.ಟಿ., ಜಗದೀಶ್ ಶೆಟ್ಟಿ, ಗೋಪಾಲ ಹೆಗ್ಡೆ, ವಿಶ್ವನಾಥ ಶೆಟ್ಟಿ ಕಂಗ್ವೆ ಮತ್ತಿತರರು ಉಪಸ್ಥಿತರಿದ್ದರು.
ಇಲ್ಲಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶ್ರೀ ಗಣೇಶೋತ್ಸವವು ವಿಜೃಂಭಣೆಯಿಂದ ನಡೆಯಲಿದೆ. ಇಂದು ಆಟೋಟ ಸ್ಪರ್ಧೆಗಳು, ಭಜನಾ ಸೇವೆಗಳು ನಡೆದು, ಮಧ್ಯಾಹ್ನ 12-45ಕ್ಕೆ ಮಹಾಪೂಜೆಯಾಗಿ, ಪ್ರಸಾದ ವಿತರಣೆಯಾಗಲಿದೆ. ಮಧ್ಯಾಹ್ನ 2.30ರಿಂದ ರಂಗೋಲಿ ಸ್ಪರ್ಧೆ, ಚಿತ್ರ ಸ್ಪರ್ಧೆ, ಭಜನಾ ಸೇವೆ, ಭಕ್ತಿ ಗೀತೆ ಸ್ಪರ್ಧೆಗಳು ನಡೆಯಲಿವೆ. ರಾತ್ರಿ 7ರಿಂದ ಡಾ. ಎಸ್.ಪಿ. ಗುರುದಾಸ್ ಮಂಗಳೂರು ಇವರಿಂದ ‘ಗಿರಿಜಾ ಕಲ್ಯಾಣ- ಶ್ರೀ ಗಣೇಶ ಮಹಿಮೆ’ ಕಥಾ ಕೀರ್ತನೆ ನಡೆಯಲಿದ್ದು, ರಾತ್ರಿ 9.30ಕ್ಕೆ ಮಹಾಪೂಜೆಯಾಗಿ ಪ್ರಸಾದ ವಿತರಣೆ ನಡೆಯಲಿದೆ.
ಸೆ.8ರಂದು ಬೆಳಗ್ಗೆ 9ರಿಂದ ಧಾರ್ಮಿಕ ವಿಧಿ-ವಿಧಾನಗಳು, ಭಜನಾ ಸೇವೆಗಳು ನಡೆದು, ಮಧ್ಯಾಹ್ನ 12-45ಕ್ಕೆ ಮಹಾಪೂಜೆಯಾಗಿ ಪ್ರಸಾದ ವಿತರಣೆಯಾಗಲಿದೆ. ಮಧ್ಯಾಹ್ನ 2.30ರಿಂದ ರಾತ್ರಿ 7ರವರೆಗೆ ‘ವಿಶ್ವರಥ ವಿಶ್ವಾಮಿತ್ರ’ ಯಕ್ಷಗಾನ ತಾಳಮದ್ದಳೆ ನಡೆಯಲಿದೆ. ರಾತ್ರಿ 7ರಿಂದ ಸಮಿತಿಯ ಅಧ್ಯಕ್ಷ ಕೆ. ಸುಧಾಕರ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ಸಭಾ ಕಾರ್ಯಕ್ರಮ ಮತ್ತು ಬಹುಮಾನ ವಿತರಣೆ ನಡೆಯಲಿದ್ದು, ವಕೀಲರಾದ ಮಹೇಶ್ ಕಜೆ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ. ಉಪ್ಪಿನಂಗಡಿ ಶ್ರೀ ಸಹಸ್ರಲಿಂಗೇಶ್ವರ- ಮಹಾಕಾಳಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಕೆ. ರಾಧಾಕೃಷ್ಣ ನಾಯ್ಕ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಗಣ್ಯ ಅತಿಥಿಯಾಗಿ ಭಾರತೀಯ ಭೂಸೇನೆಯ ಯೋಧ ಸುಧೀರ್ ಶೆಟ್ಟಿ ಉಪಸ್ಥಿತಿ ಇರಲಿದ್ದಾರೆ. ಈ ಸಂದರ್ಭ ಉಪ್ಪಿನಂಗಡಿಯ ಪೌರ ಕಾರ್ಮಿಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮ ನಡೆಯಲಿದೆ. ರಾತ್ರಿ 8.30ರಿಂದ ಮಹಾರಂಗಪೂಜೆಯಾಗಿ, ಪ್ರಸಾದ ವಿತರಣೆ, ಅನ್ನ ಸಂತರ್ಪಣೆ ನಡೆಯಲಿದೆ.
ಸೆ.9ರಂದು 10ಕ್ಕೆ ಗಣಹೋಮ, ಕುಣಿತ ಭಜನಾ ಸೇವೆ ನಡೆಯಲಿದೆ. 11:30ರಿಂದ ಡಿ.ಪಿ. ಮ್ಯೂಸಿಕಲ್ ರಾಮನಗರ ಇವರಿಂದ ಭಕ್ತಿ- ಭಾವ- ಜನಪದ ಹಾಡುಗಳ ರಸಮಂಜರಿ ನಡೆಯಲಿದೆ. ಮಧ್ಯಾಹ್ನ 12:45ಕ್ಕೆ ಮಹಾಪೂಜೆಯಾಗಿ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಲಿದೆ. ಬಳಿಕ ಭಜನಾ ಸೇವೆ ನಡೆದು, ಸಂಜೆ 6ಕ್ಕೆ ಮಹಾಪೂಜೆಯಾಗಿ, ಶ್ರೀ ಗಣಪತಿ ದೇವರ ವಿಗ್ರಹ ವಿಸರ್ಜನೆಯ ಭವ್ಯ ಶೋಭಾಯಾತ್ರೆ ನಡೆಯಲಿದೆ.