ಕಷ್ಟದಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಸಹಾಯಹಸ್ತ ನೀಡುವುದೇ ಧರ್ಮ-ಅಶೋಕ್ ರೈ
ಪುತ್ತೂರು: ದೇಶವು ಸಾಮರಸ್ಯದಿಂದಿರಬೇಕಾದರೆ ನಮ್ಮಲ್ಲಿನ ಜಾತಿ-ಧರ್ಮಾಧರಿತ ವೈಷಮ್ಯ ಹೋಗಲಾಡಿಸಿ ಸಂಘಟಿತರಾಗಬೇಕು. ನಮ್ಮನ್ನು ಸಾಕಿ ಸಲಹಿದ ತಂದೆ-ತಾಯಿಯೇ ದೇವರ ಸ್ವರೂಪವಾಗಿದ್ದಾರೆ. ನಮ್ಮಲ್ಲಿನ ‘ಸಿಲ್ಲಿ ಮ್ಯಾಟರ‍್ಸ್’ ‘ಇಗೋ’ ಸಮಸ್ಯೆಯಿಂದಾಗಿ ಅದೆಷ್ಟೋ ಸಂಸಾರಗಳು ಬೀದಿಗೆ ಬಂದಿದೆ. ಜಾತಿ-ಮತ-ಧರ್ಮ ಮರೆತು ಕಷ್ಟದಲ್ಲಿರುವ ಕಟ್ಟಕಡೆಯ ವ್ಯಕ್ತಿಗೆ ಸಹಾಯಹಸ್ತ ನೀಡುವುದೇ ನಿಜವಾದ ಧರ್ಮವಾಗಿದೆ ಎಂದು ಶಾಸಕ ಅಶೋಕ್ ಕುಮಾರ್ ರೈ ಹೇಳಿದರು.
ದರ್ಬೆ ವಿನಾಯಕ ನಗರದಲ್ಲಿ ಸಂತ ಫಿಲೋಮಿನಾ ಕಾಲೇಜು ವಿದ್ಯಾರ್ಥಿ ಮಿತ್ರರಿಂದ ಪ್ರಾರಂಭಿಸಲ್ಪಟ್ಟ ಶ್ರೀ ಗಣೇಶೋತ್ಸವಕ್ಕೆ ಪ್ರಸ್ತುತ 42ನೇ ವರುಷದ ಸಂಭ್ರಮ. ಇದರ ಪ್ರಯುಕ್ತ ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಹಾಗೂ ಸಂತ ಫಿಲೋಮಿನಾ ವಿದ್ಯಾಸಂಸ್ಥೆ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಸೆ.7 ಹಾಗೂ 8 ರಂದು ಎರಡು ದಿನಗಳ ಕಾಲ ನಡೆದ ವಿವಿಧ ಧಾರ್ಮಿಕ ಕಾರ್ಯಕ್ರಮಗಳ ಆಚರಣೆಯಲ್ಲಿ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಭಾರತದಲ್ಲಿ ಶ್ರೀಗಣೇಶೋತ್ಸವನ್ನು ಶ್ರದ್ಧೆಯಿಂದ, ಭಕ್ತಿಯಿಂದ ಆಚರಿಸಲಾಗುತ್ತಿದೆ. ಇದೇ ರೀತಿ ಎಲ್ಲರೂ ಪರಸ್ಪರ ಸಾಮರಸ್ಯ, ಪ್ರೀತಿಯಿಂದ, ಒಗ್ಗಟ್ಟಿನಿಂದ, ಏಕತೆಯಿಂದ ಬಾಳಿದಾಗ ದೇಶ ವಿಶ್ವಗುರುವಾಗಬಲ್ಲುದು ಮಾತ್ರವಲ್ಲ ಅಭಿವೃದ್ಧಿ ದೃಷ್ಟಿಯಿಂದ ಭಾರತ ದೇಶವು ಸಶಕ್ತವಾಗಬೇಕಾದರೆ ಇಂತಹ ಗಣೇಶೋತ್ಸವದಂತಹ ಆಚರಣೆಗಳು ಮುನ್ನುಡಿಯಾಗಬಲ್ಲವು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ಜವಾಬ್ದಾರಿ ಅರಿತು ಮುಂದೆ ಸಾಗಿದಾಗ ಆಚರಣೆಗೆ ಮಹತ್ವ-ವಂ|ಆಂಟನಿ ಪ್ರಕಾಶ್:
ಸಂತ ಫಿಲೋಮಿನಾ ಕಾಲೇಜಿನ ಪ್ರಾಂಶುಪಾಲ ವಂ|ಡಾ|ಆಂಟನಿ ಪ್ರಕಾಶ್ ಮೊಂತೇರೊ ಮಾತನಾಡಿ, ಫಿಲೋಮಿನಾ ಗಣೇಶೋತ್ಸವ ಅಂದರೆ ಹಳತು-ಹೊಸಬರ ಸಂಗಮವಾಗಿದೆ. ಈ ಸಂಭ್ರಮದಲ್ಲಿ ಅನೇಕ ಪ್ರತಿಭೆಗಳ, ಸಾಧಕರನ್ನು ಗುರುತಿಸಿ ಅಭಿನಂದಿಸುವುದು ಸ್ಮರಣೀಯವಾಗಿದೆ. ಎಲ್ಲಾ ಉತ್ಸವಕ್ಕಿಂತ ಉತ್ತಮ ಉತ್ಸವ ಈ ಗಣೇಶೋತ್ಸವವಾಗಿದ್ದು ಈ ಉತ್ಸವದಲ್ಲಿ ಎಲ್ಲರೂ ಜಾತಿ-ಧರ್ಮ ಮರೆತು ಭಾಗಿಗಳಾಗುತ್ತಿರುವುದೇ ವಿಶೇಷವೇ ಸರಿ. ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿ ಅರಿತು ಮುಂದೆ ಸಾಗಿದಾಗ ಆಚರಣೆಗೆ ಮಹತ್ವ ಬರುತ್ತದೆ ಎಂದರು.
ಶಕ್ತಿಯುತ ಭಾರತವಾಗಬೇಕಾದರೆ ನಮ್ಮಲ್ಲಿನ ಸಣ್ಣ ವೈಷಮ್ಯವು ದೂರೀಕರಿಸಿ ಸಂಘಟಿತರಾಗಬೇಕು-ಬಾಲಚಂದ್ರ:
ಪುತ್ತೂರು ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆಮ್ಮಿಂಜೆ ಮಾತನಾಡಿ, ಭಾರತ ದೇಶದ ಜನರು ಸಂಘಟಿತರಾಗಬೇಕು ಎನ್ನುವ ನಿಟ್ಟಿನಲ್ಲಿ ಬಾಲ ಗಂಗಾಧರ್ ತಿಲಕ್‌ರವರು 1893ರಲ್ಲಿ ಶ್ರೀ ಗಣೇಶೋತ್ಸವನ್ನು ಆರಂಭಿಸಿದರು. ಈ ಗಣೇಶೋತ್ಸವ ಕೇವಲ ಭಾರತದಲ್ಲಿ ಮಾತ್ರವಲ್ಲ ಇಡೀ ವಿಶ್ವದಲ್ಲಿ ಶ್ರದ್ಧಾಭಕ್ತಿಯಿಂದ ಆಚರಿಸಲ್ಪಡುತ್ತದೆ. ಶಕ್ತಿಯುತ ಭಾರತ ನಿರ್ಮಾಣವಾಗಬೇಕಾದರೆ ನಮ್ಮಲ್ಲಿನ ಸಣ್ಣ ವೈಷಮ್ಯವು ದೂರೀಕರಿಸಿ ಸಂಘಟಿತರಾಗಬೇಕು ಜೊತೆಗೆ ಇಂದಿನ ಯುವಪೀಳಿಗೆ ಹಬ್ಬಗಳ ಮಹತ್ವವನ್ನು ಅರಿಯುವವರಾಗಬೇಕು ಎಂದರು.
ಭಾರತವನ್ನು ಸಶಕ್ತವನ್ನಾಗಿಸಲು ಈ ಹಬ್ಬ ಪ್ರಮುಖ ಕಾರಣ-ವಂ|ಅಶೋಕ್ ರಾಯನ್:
ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ವಂ|ಅಶೋಕ್ ರಾಯನ್ ಕ್ರಾಸ್ತಾ ಮಾತನಾಡಿ, ಗಣೇಶೋತ್ಸವ ಎಂಬುದು ಒಂದು ಜಾತಿಗೆ ಸೀಮಿತವಾಗಿಲ್ಲ. ಎಲ್ಲಾ ಜಾತಿ-ವರ್ಗದವರನ್ನು ಸೇರಿಸಿಕೊಂಡು ಸಾಮಾಜಿಕ ಆಯಾಮದೊಂದಿಗೆ ಈ ಗಣೇಶೋತ್ಸವವನ್ನು ಆಚರಿಸಲಾಗುತ್ತದೆ. ಮನುಷ್ಯನ ಮತ, ಜಾತಿ, ಧರ್ಮ, ಭಾಷೆ ಬೇರೆಯಾದರೂ ಅವನ್ನು ಹತ್ತಿರ ಕರೆಸಿಕೊಳ್ಳುವ ಶಕ್ತಿ ಈ ಗಣೇಶೋತ್ಸವ ಹಬ್ಬಕ್ಕಿದೆ. ಭಾರತ ದೇಶದ ಅಭಿವೃದ್ದಿ ದೃಷ್ಟಿಯಿಂದ ಹಾಗೂ ಭಾರತವನ್ನು ಸಶಕ್ತವನ್ನಾಗಿಸಲು ಈ ಹಬ್ಬ ಪ್ರಮುಖ ಕಾರಣವಾಗುತ್ತದೆ ಎಂದರು.
ಕಾಲೇಜು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ:
ಫಿಲೋಮಿನಾ ಕಾಲೇಜಿನ ಪದವಿ ವಿಭಾಗದಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ಬಿಕಾಂ ವಿಭಾಗದಲ್ಲಿ ರಿತೇಶ್ ರೈ(2ನೇ ರ‍್ಯಾಂಕ್), ಬಿಎಸ್ಸಿ ವಿಭಾಗದಲ್ಲಿ ಸುಧನ್ವ ಶ್ಯಾಂ ಎಸ್(2ನೇ ರ‍್ಯಾಂಕ್), ಬಿಸಿಎ ವಿಭಾಗದಲ್ಲಿ ಅರ್ಪಿತಾ ಕೆ(3ನೇ ರ‍್ಯಾಂಕ್), ಬಿಎ ವಿಭಾಗದಲ್ಲಿ ವಿನ್ಯ ರೈ(3ನೇ ರ‍್ಯಾಂಕ್), ಹಾಷಿಣಿ ಸಿಂಗ್ ಪಿ(7ನೇ ರ‍್ಯಾಂಕ್), ಸ್ವಾತಕೋತ್ತರ ವಿಭಾಗದ ಎಂಎಸ್ಸಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಚಂದ್ರಾಕ್ಷ(1ನೇ ರ‍್ಯಾಂಕ್), ಎಂಎಸ್‌ಡಬ್ಲ್ಯೂ ವಿಭಾಗದಲ್ಲಿ ಸಿತಾರ ಶಿರಿನ್(1ನೇ ರ‍್ಯಾಂಕ್), ಶಶಾಂಕ್ ಕೆ(2ನೇ ರ‍್ಯಾಂಕ್), ಎಂಕಾಂ ವಿಭಾಗದಲ್ಲಿ ರೀನಾ ಎ.ವಿ(10ನೇ ರ‍್ಯಾಂಕ್), ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದ ವಿದ್ಯಾರ್ಥಿಗಳಾದ ವಾಣಿಜ್ಯ ವಿಭಾಗದಲ್ಲಿ ಪ್ರತೀಕ್ಷಾ ಡಿ.ಎಸ್(10ನೇ ರ‍್ಯಾಂಕ್), ವಿಜ್ಞಾನ ವಿಭಾಗದಲ್ಲಿ ಹಲೀಮತ್ ಶೈಮಾ(8ನೇ ರ‍್ಯಾಂಕ್)ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಕ್ರೀಡಾಪಟುಗಳಿಗೆ ಸನ್ಮಾನ:
ಕ್ರೀಡೆಯಲ್ಲಿ ಉತ್ತಮ ಸಾಧನೆಗೈದ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಕ್ರೀಡಾಪಟುಗಳಾದ ದ್ವಿತೀಯ ವಿಜ್ಞಾನ ವಿಭಾಗದ ಜ್ಯೋತ್ಸ್ನಾ ಲೈಸಾ ಜಾನ್ಸನ್, ನೀತಿ ರೈ, ಅದ್ವಿತ್ ರೈ.ಬಿ, ಪ್ರಥಮ ವಿಜ್ಞಾನ ವಿಭಾಗದ ನಂದನ್ ನಾಯ್ಕ್(ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್), ದ್ವಿತೀಯ ವಿಜ್ಞಾನ ವಿಭಾಗದ ಮನ್ವಿತ್ ಕಣಜಾಲು(ಚೆಸ್), ಪ್ರಥಮ ವಾಣಿಜ್ಯ ವಿಭಾಗದ ನಿಖಿಲ್ ಬಿ.ಕೆ, ದ್ವಿತೀಯ ವಿಜ್ಞಾನ ವಿಭಾಗದ ತೃಪ್ತಿ ಎನ್(ಯೋಗಾಸನ), ದ್ವಿತೀಯ ವಿಜ್ಞಾನ ವಿಭಾಗದ ಪ್ರಣಾಮ್(ಕರಾಟೆ), ದ್ವಿತೀಯ ವಾಣಿಜ್ಯ ವಿಭಾಗದ ಆದರ್ಶ್ ಶೆಟ್ಟಿ(ಅಥ್ಲೆಟಿಕ್ಸ್), ಕೆ.ಆರ್ ಅಶ್ವಿನ್(ಹೈಜಂಪ್), ಅಮೃತಾ ಕೆ(ಹೈಜಂಪ್), ಪ್ರಥ್ವಿ ಕೆ(ಹ್ಯಾಮರ್ ತ್ರೋ), ದ್ವಿತೀಯ ವಿಜ್ಞಾನ ವಿಭಾಗದ ಇಶಿಕಾ ಕೆ(ಕರಾಟೆ), ಪದವಿ ಕಾಲೇಜಿನ ಅಂತಿಮ ಬಿಎ ವಿಭಾಗದ ತ್ರಿಶೂಲ್(ಲೈಫ್ ಸೇವಿಂಗ್ ಚಾಂಪಿಯನ್‌ಶಿಪ್), ಪ್ರಥಮ ಬಿಎಸ್ಸಿ ವಿಭಾಗದ ಸ್ಪಂದನ, ಅಂತಿಮ ಬಿಕಾಂನ ಅಭಿರಾಮಚಂದ್ರ ಅಡಿಗುಂಡಿ, ಮಹಮದ್ ಮುನಾಫ್, ಪ್ರಥಮ ಎಂಕಾಂನ ಬ್ಯೂಲಾ ಪಿ.ಟಿ, ದ್ವಿತೀಯ ಬಿಕಾಂನ ಶಬರೀಶ್, ಪ್ರಥಮ ಬಿಎ ವಿಭಾಗದ ರಂಜಿತ್ ಕುಮಾರ್ ಎಂ, ಪ್ರಥಮ ಬಿಎಸ್ಸಿ ವಿಭಾಗದ ಚೈತ್ರಿಕಾ, ದ್ವಿತೀಯ ಬಿಕಾಂನ ಯತೀಶ್ ಕೆ(ವೈಟ್‌ಲಿಪ್ಟಿಂಗ್), ಪ್ರಥಮ ಬಿಸಿಎ ವಿಭಾಗದ ವರ್ಷಾ(ಹ್ಯಾಮರ್ ತ್ರೋ), ಪ್ರಥಮ ಬಿಎ ವಿಭಾಗದ ಸಿಶಿಲ್, ದ್ವಿತೀಯ ಬಿಕಾಂನ ಜೆರೋಮ್ ತನ್ವೀರ್, ಅನ್ವೇಶ್ ರೈ(ಈಜು)ರವರುಗಳನ್ನು ಗುರುತಿಸಿ ಸನ್ಮಾನಿಸಲಾಯಿತು.
ಅಭಿನಂದನೆ:
ಶ್ರೀ ಗಣೇಶೋತ್ಸವ ಪ್ರಯುಕ್ತ ಹಮ್ಮಿಕೊಂಡ ಫಿಲೋಮಿನಾ ಕಾಲೇಜಿನ ಪುರುಷರ ಹಾಗೂ ಮಹಿಳೆಯರ ಮತ್ತು ಹಿರಿಯ ವಿದ್ಯಾರ್ಥಿಗಳ ಹಗ್ಗ-ಜಗ್ಗಾಟ ಹಾಗೂ ಚಿತ್ರಕಲಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಿ ಅಭಿನಂದಿಸಲಾಯಿತು.
ಶೃಂಗಾರಮಯ:
42ನೇ ಸಂಭ್ರಮಾಚರಣೆಯ ಪ್ರಯುಕ್ತ ಟ್ರಸ್ಟ್ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ಕಾಲೇಜಿನ ವಿದ್ಯಾರ್ಥಿ ಘಟಕದಿಂದ ವಿನಾಯಕ ನಗರವು ಕೇಸರಿಮಯದಿಂದ ಹಾಗೂ ಲೈಟಿಂಗ್ಸ್‌ಗಳಿಂದ ಕಂಗೊಳಿಸುತ್ತಿತ್ತು. ವಿನಾಯಕ ನಗರದಿಂದ ದರ್ಬೆ ಜಂಕ್ಷನ್‌ವರೆಗೆ ರಸ್ತೆಯ ಡಿವೈಡರ್‌ನಲ್ಲಿ ಕೇಸರಿ ಬಾವುಟಗಳು, ಕೇಸರಿ ತೋರಣಗಳು, ಫ್ಲೆಕ್ಸ್‌ಗಳಿಂದ ವಿನಾಯಕ ನಗರವು ಶೃಂಗಾರಮಯಗೊಂಡಿದೆ.
ಸಂತ ಫಿಲೋಮಿನಾ ಹಿರಿಯ ವಿದ್ಯಾರ್ಥಿಗಳ ಶ್ರೀ ಗಣೇಶೋತ್ಸವ ಸೇವಾ ಟ್ರಸ್ಟ್ ಅಧ್ಯಕ್ಷ ಪ್ರಕಾಶ್ ಮುಕ್ರಂಪಾಡಿ, ಕಾರ್ಯದರ್ಶಿ ಸುಹಾಸ್ ಪ್ರಭು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀ ಗಣೇಶೋತ್ಸವ ವಿದ್ಯಾರ್ಥಿ ಘಟಕದ ಅಧ್ಯಕ್ಷ ಸೃಜನ್ ರೈ ಸ್ವಾಗತಿಸಿ, ಜೊತೆ ಕಾರ್ಯದರ್ಶಿ ರಿಶಿಕ ರೈ ವಂದಿಸಿದರು. ಭವ್ಯಶ್ರೀರವರು ಸನ್ಮಾನಿತ ವಿದ್ಯಾರ್ಥಿಗಳ ಪರಿಚಯ ಮಾಡಿದರು. ಹಿರಿಯ ವಿದ್ಯಾರ್ಥಿನಿ ವರ್ಷಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ಗಣೇಶೋತ್ಸವ ಟ್ರಸ್ಟ್ ಕಾರ್ಯದರ್ಶಿ ಶಿವಪ್ರಸಾದ್ ಎ, ಕೋಶಾಧಿಕಾರಿ ದುರ್ಗಾಪ್ರಸಾದ್, ಟ್ರಸ್ಟಿಗಳಾದ ಡಾ.ಅಶೋಕ್ ಕುಮಾರ್ ರೈ, ಮಂಜುನಾಥ್ ಡಿ, ಸಿಎ ಅನಂತಪದ್ಮನಾಭ ಕೆ, ವಿಶ್ವಾಸ್ ಶೆಣೈ, ಶ್ರೀಧರ ಹೆಗ್ಡೆ, ಜನಾರ್ದನ ಎಸ್.ಭಟ್, ವೆಂಕಟಕೃಷ್ಣ ಎಂ.ಎನ್, ದಿನೇಶ್ ಪ್ರಸನ್ನ, ನಾಗೇಶ್ ಪೈ, ಬೆಟ್ಟ ಪಿ.ಎಸ್ ನಾಗಾರಾಜ, ದೇಲಂತಿಮಾರು ನಿತ್ಯಾನಂದ ಶೆಟ್ಟಿ, ಹರಿಣಿ ಪುತ್ತೂರಾಯ, ವೇಣುಗೋಪಾಲ್ ಪಿ.ಎಲ್ ಹಾಗೂ ಸದಸ್ಯರು ಸಹಕರಿಸಿದರು.
ವಿಗ್ರಹ ಪ್ರತಿಷ್ಠಾಪನೆ..
ಬೆಳಿಗ್ಗೆ ಪರ್ಲಡ್ಕದಿಂದ ಶ್ರೀ ಗಣೇಶನ ವಿಗ್ರಹವನ್ನು ತಂದು ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ದೀಪ ಬೆಳಗಿಸಿ ಬಳಿಕ ಮುಖ್ಯರಸ್ತೆಯಾಗಿ ದರ್ಬೆ ವಿನಾಯಕ ನಗರದ ವಿನಾಯಕ ಮಂಟಪದಲ್ಲಿ ಶ್ರೀ ಗಣೇಶನ ವಿಗ್ರಹವನ್ನು ಪ್ರತಿಷ್ಟಾಪನೆಗೊಳಿಸಲಾಯಿತು. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಪ್ರೀತಂ ಪುತ್ತೂರಾಯರವರ ನೇತೃತ್ವದಲ್ಲಿ ಗಣಹೋಮ, ಮಹಾಪೂಜೆ, ಪ್ರಸಾದ ವಿತರಣೆಯೊಂದಿಗೆ ವಿವಿಧ ಧಾರ್ಮಿಕ ಕಾರ್ಯಕ್ರಮ ಜರಗಿದವು.
ಅದ್ದೂರಿ ಶೋಭಾಯಾತ್ರೆ..
ಸೆ.8 ರಂದು ಬೆಳಿಗ್ಗೆ ಗಣಹೋಮ, ಮಧ್ಯಾಹ್ನ ಮಹಾಪೂಜೆ ನಡೆದಿದ್ದು, ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ಜರಗಿತು. ಈ ಅನ್ನಸಂತರ್ಪಣೆಯಲ್ಲಿ ಸುಮಾರು ಮೂರುವರೆ ಸಾವಿರ ಭಕ್ತರು ಪಾಲ್ಗೊಂಡರು. ಸಂಜೆ ಗಣಪತಿಯ ಅದ್ದೂರಿ ಶೋಭಾಯಾತ್ರೆಯು ಚೆಂಡೆ ವಾದ್ಯ, ಡಿ.ಜೆ ಹಾಗೂ ನಾಸಿಕ್ ಬ್ಯಾಂಡ್‌ನೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಹಾರಾಡಿಯ ಬಾವಿಯಲ್ಲಿ ವಿಸರ್ಜನೆಗೊಳಿಸಲಾಯಿತು.
ರಂಜಿಸಿದ ಅಮ್ಮೆರ್ ನಾಟಕ..
ಸೆ.7 ರಂದು ರಾತ್ರಿ ಸಭಾ ಕಾರ್ಯಕ್ರಮದ ಬಳಿಕ ಅಮ್ಮ ಕಲಾವಿದರು ಕುಡ್ಲ ಅಭಿನಯಿಸುವ ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ, ಕುಸಲ್ದರಸೆ ನವೀನ್ ಡಿ.ಕಾಪಿಕಾಡ್ ಇವರ ಸಲಹೆ ಸಹಕಾರದೊಂದಿಗೆ, ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿದ, ರಂಗ್‌ದ ರಾಜೆ ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ‘ಅಮ್ಮೆರ್’ ತುಳು ಹಾಸ್ಯಮಯ ನಾಟಕವು ಪ್ರದರ್ಶನಗೊಂಡು ಪ್ರೇಕ್ಷಕರನ್ನು ಮನರಂಜಿಸಿತು.
ಪ್ರಕಾಶ್ ಮುಕ್ರಂಪಾಡಿರವರಿಗೆ ಸನ್ಮಾನ..
ಕಳೆದ 41 ವರ್ಷಗಳಿಂದ ದರ್ಬೆ ವಿನಾಯಕ ನಗರದಲ್ಲಿ ಯಶಸ್ವಿಯಾಗಿ ಶ್ರೀ ಗಣೇಶೋತ್ಸವ ಜರಗಲು ಪ್ರಮುಖ ಕಾರಣಕರ್ತರಾಗಿರುವ ಶ್ರೀ ಗಣೇಶೋತ್ಸವ ಸಮಿತಿಯ ಗೌರವಾಧ್ಯಕ್ಷ ಪ್ರಕಾಶ್ ಮುಕ್ರಂಪಾಡಿರವರನ್ನು ಹಿರಿಯ ವಿದ್ಯಾರ್ಥಿಗಳು ಹಾಗೂ ಪ್ರಸಕ್ತ ವಿದ್ಯಾರ್ಥಿಗಳು ಜೊತೆಗೂಡಿ ಶಾಸಕ ಅಶೋಕ್ ರೈಯವರು ಶಾಲು ಹೊದಿಸಿ ಸನ್ಮಾನಿಸಿದರು.