ಪ್ರಸಾದಕ್ಕೂ ಎಫ್ಎಸ್ಎಸ್ಎಐ ಪ್ರಮಾಣ ಪತ್ರ ಬೇಕಾ – ಡಾ| ರವೀಶ ಪಡುಮಲೆ ಪ್ರಶ್ನೆ
ಕರ್ನಾಟಕಕ್ಕೆ ಡಾ.ಪ್ರಸಾದ್ ಭಂಡಾರಿಯಂತ ವ್ಯಕ್ತಿ ಸಿಗುವುದಿಲ್ಲ – ಉಜ್ವಲ್ ಪ್ರಭು
ಪುತ್ತೂರು: ಅದೆಷ್ಟೋ ಕಾಲದಿಂದಲೂ ದೇವಸ್ಥಾನಗಳಲ್ಲಿ ಪ್ರಸಾದ ಭೋಜನ, ತೀರ್ಥಪ್ರಸಾದ ನಂಬಿಕೆ ಆಧಾರದಲ್ಲಿ ನಡೆಯುತ್ತಿದ್ದರೂ ಇವತ್ತು ಪ್ರಸಾದಕ್ಕೂ ಎಫ್ಎಸ್ಎಸ್ಎಐ ಪ್ರಮಾಣ ಪತ್ರ ಆದೇಶ ಮಾಡುವವರು ಇಹಲೋಕ ತ್ಯಜಿಸಿದಾಗ ಬಾಯಿಗೆ ಬಿಡುವ ತುಳಸಿ ನೀರಿಗೂ ಪ್ರಮಾಣ ಪತ್ರ ಕೇಳುವ ಸಾದ್ಯತೆ ಇದೆಯೋ ಎಂದು ಹಿಂದೂ ಸಮಾಜ ಚಿಂತನೆ ಮಾಡಬೇಕಾದ ಅವಶ್ಯಕತೆ ಇದೆ ಎಂದು ಸಿವಿಲ್ ಇಂಜಿನಿಯರ್ , ದೈವನರ್ತಕ ಡಾ| ರವೀಶ್ ಪಡುಮಲೆ ಹೇಳಿದರು.
ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಡೆಯುತ್ತಿರುವ 58ನೇ ವರ್ಷದ ಗಣೇಶೋತ್ಸವದಲ್ಲಿ ಸೆ.8ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಅಂದು ಸಂಘಟನೆಗಾಗಿ ಆರಂಭಗೊಂಡ ಗಣೇಶೋತ್ಸವ ಇವತ್ತು ಮೂಲ ತತ್ವ ಮರೆಯಾಗುತ್ತಿದೆ ಎಂಬ ಭಯದ ನಡುವೆ ಕಳೆದ ಹಲವು ವರ್ಷಗಳಿಂದ ಮೂಲ ತತ್ವ ಉಳಿಸಿಕೊಂಡು ಬಾಲಗಂಗಾಧರ ತಿಲಕರ ಚಿಂತನೆಯ ಆಧಾರದಲ್ಲಿ ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಯಶಸ್ವಿಯಾಗಿ ನಡೆಯುತ್ತಿದೆ. ಇವತ್ತು ಗಣೇಶೋತ್ಸವ ಆರಂಭಗೊಳ್ಳುವ ಸಮಯದಲ್ಲಿ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಎಂದು ಎಫ್ಎಸ್ಎಸ್ಎಐ ಪ್ರಮಾಣ ಪತ್ರ ಪಡೆಯುವ ಆದೇಶ ಹೊರಡಿಸಿದ್ದಾರೆ. ಅದೆಷ್ಟೋ ಕಾಲದಿಂದಲೂ ದೇವಸ್ಥಾನಗಳಲ್ಲಿ ಪ್ರಸಾದ ಭೋಜನ, ತೀರ್ಥಪ್ರಸಾದ ನೀಡುತ್ತಿರುವುದು ನಮಗೆ ಗೊತ್ತಿದ್ದ ವಿಚಾರ. ಇಂತಹ ಸಂದರ್ಭದಲ್ಲಿ ಈಗ ಪ್ರಸಾದಕ್ಕೂ ಪ್ರಮಾಣ ಪತ್ರ ಬೇಕೆಂದು ಆದೇಶ ಮಾಡಿದ ವ್ಯಕ್ತಿ ಭೂಲೋಕ ಬಿಟ್ಟು ದೇವರ ಪಾದ ಸೇರಿದಾಗ ಆತನಿಗೆ ತುಳಸಿ ನೀರು ಬಿಡುವ ಸಮಯ ಬಂದಾಗ ಆ ನೀರಿಗೂ ಪ್ರಮಾಣ ಪತ್ರ ಕೇಳುವ ಸಾಧ್ಯತೆ ಇದೆಯೋ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಈ ನಿಟ್ಟಿನಲ್ಲಿ ಹಿಂದೂ ಧರ್ಮವನ್ನು ಯಾವ ರೀತಿಯಲ್ಲಿ ವಿಭಜನೆ ಮಾಡಬಹುದು ಎಂಬ ಆಲೋಚನೆ ಒಂದು ಕಡೆ ನಡೆಯುತ್ತಿದ್ದರೂ ಸನಾತನ ಹಿಂದು ಧರ್ಮದ ಕಟ್ಟು ಪಾಡು ಹಿಡಿದುಕೊಂಡು ಅದರೊಂದಿಗೆ ಇನ್ನೊಂದು ಧರ್ಮಕ್ಕೂ ಗೌರವ ಕೊಡುವ ಕೆಲಸ ಮಾಡುತ್ತಿರುವುದು ಹಿಂದೂ ಧರ್ಮದ ಶ್ರೇಷ್ಠಗುಣ ಎಂದರು.
ಕರ್ನಾಟಕಕ್ಕೆ ಡಾ.ಪ್ರಸಾದ್ ಭಂಡಾರಿಯಂತ ವ್ಯಕ್ತಿ ಸಿಗುವುದಿಲ್ಲ:
ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಯು ಆರ್ ಪ್ರಾಪರ್ಟೀಸ್ನ ಉದ್ಯಮಿ ಉಜ್ವಲ್ ಪ್ರಭು ಮಾತನಾಡಿ ನಾನು ಕೆಲವು ಮಂದಿಯನ್ನು ನನ್ನ ಸಂಸ್ಥೆಗೆ ರೋಲ್ ಮೊಡೇಲ್ ಮಾಡಿಕೊಂಡಿದ್ದೇನೆ. ಅದರಲ್ಲಿ ಒಬ್ಬರು ಹಿಂದೂ ಹೃದಯ ಸಾಮ್ರಾಟ್ ಪ್ರಸಾದ್ ಭಂಡಾರಿ. ಹಿಂದೂ ಸಂಘಟನೆ ಬಲಿಷ್ಠಗೊಳ್ಳಬೇಕೆಂದು ಕಷ್ಟಪಟ್ಟು ತಂದ ಸಂಘಟನೆಗೆ ಜಾತಿಯನ್ನು ತಂದರೆ ಸಂಘಟನೆ ಉಳಿಯುವುದಿಲ್ಲ. ಈ ನಿಟ್ಟಿನಲ್ಲಿ ಹಿಂದೂ ಸಂಘಟನೆಯನ್ನು ಗಟ್ಟಿಗೊಳಿಸಬೇಕು. ಅದಕ್ಕಾಗಿ ತನ್ನ ಸರ್ವಸ್ವವನ್ನು ತ್ಯಾಗ ಮಾಡಿರುವ ಡಾ.ಪ್ರಸಾದ್ ಭಂಡಾರಿಯಂತ ವ್ಯಕ್ತಿ ಕರ್ನಾಟಕದಲ್ಲಿ ಬೇರೊಬ್ಬರು ಸಿಗುವುದಿಲ್ಲ ಎಂದರು.
ಮುಖ್ಯ ಅತಿಥಿಯಾಗಿ ಮಾಜಿ ಸೈನಿಕ ಸುಂದರ ಗೌಡ ನಡುಬೈಲು ಮತ್ತು ಪ್ರಗತಿಪರ ಕೃಷಿಕ ರಾಮಕೃಷ್ಣ ಪುಣಚ ಮಾತನಾಡಿದರು. ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷ ವಿಶ್ವನಾಥ ಗೌಡ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅನ್ವಿತಾ ಮತ್ತು ಧನ್ವಿತಾ ಪ್ರಾರ್ಥಿಸಿದರು. ಪ್ರೇಮಲತಾ ರಾವ್ ಸ್ವಾಗತಿಸಿದರು. ರಮೇಶ್ ಪಜಿಮಣ್ಣು ವಂದಿಸಿದರು. ಲಕ್ಷ್ಮೀಪ್ರಭಾ ಕಾರ್ಯಕ್ರಮ ನಿರೂಪಿಸಿದರು. ಉದಯ ಹೆಚ್ ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮಕ್ಕೆ ಮೊದಲು ವಿವೇಕಾನಂದ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ವೈವಿಧ್ಯ ಪ್ರದರ್ಶನಗೊಂಡಿತ್ತು. ಸಭಾ ಕಾರ್ಯಕ್ರಮದ ಬಳಿಕ ಶ್ರೀ ಗಣೇಶನಿಗೆ ರಂಗಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಬಳಿಕ ಬೆನಕ ಆರ್ಟ್ಸ್ ಕುಡ್ಲ ಇವರಿಂದ ಪೊರಿಪುದಪ್ಪೆ ಜಲದುರ್ಗೆ ನಾಟಕ ಪ್ರದರ್ಶನಗೊಂಡಿತ್ತು. ಸುದ್ದಿ ಯುಟ್ಯೂಬ್ ಚಾನೆಲ್ ಮತ್ತು ಕೇಬಲ್ ಟಿವಿ ಚಾನೆಲ್ 92ರಲ್ಲಿ ಕಾರ್ಯಕ್ರಮದ ನೇರಪ್ರಸಾರ ನಡೆಯಿತು.