ದುಬೈನ ಫಾರ್ಚ್ಯೂನ್ ಹೊಟೇಲ್‌ಗೆ 2.5 ಕೋಟಿ ರೂ.ವಂಚನೆ ಪ್ರಕರಣ-SPPಯಾಗಿ ಶಿವಪ್ರಸಾದ್ ಆಳ್ವ ನೇಮಕ

0

ಮಂಗಳೂರು: ಅನಿವಾಸಿ ಭಾರತೀಯ ಉದ್ಯಮಿ ವಕ್ವಾಡಿ ಪ್ರವೀಣ್ ಕುಮಾರ್ ಶೆಟ್ಟಿಯವರು ಆಡಳಿತ ನಿರ್ದೇಶಕರಾಗಿರುವ ದುಬೈನ ಹೋಟೆಲೊಂದಕ್ಕೆ 2.5 ಕೋಟಿ ರೂ.ಗಳಿಗೂ ಅಧಿಕ ಹಣ ವಂಚಿಸಿರುವ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಲ್ಲಿ ಪ್ರಾಸಿಕ್ಯೂಶನ್ ಪರ ವಾದಿಸಲು ವಿಶೇಷ ಸರಕಾರಿ ಅಭಿಯೋಜಕರಾಗಿ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿ ಪುತ್ತೂರು ಮೂಲದ ಶಿವಪ್ರಸಾದ್ ಆಳ್ವ (Shivaprasad Alva) ಅವರನ್ನು ನೇಮಿಸಿ ಸರಕಾರ ಆದೇಶಿಸಿದೆ.


ದುಬೈನ ಫಾರ್ಚ್ಯೂನ್ ಗ್ರೂಪ್ ಆಫ್ ಹೋಟೆಲ್ಸ್‌ಗೆ ಸಂಬಂಧಿತ ಹೋಟೆಲೊಂದಕ್ಕೆ ಉದ್ಯೋಗಕ್ಕೆ ಸೇರಿದ್ದ ಬಾರ್ಕೂರು ಮೂಲದ ನಾಗೇಶ್ ಪೂಜಾರಿ 2.5 ಕೋಟಿಗೂ ಅಧಿಕ ಹಣ ವಂಚಿಸಿದ್ದಾಗಿ ಆರೋಪಿಸಿ ಫಾರ್ಚ್ಯೂನ್ ಹೋಟೆಲ್ ಮ್ಯಾನೇಜರ್ ಸುನೀಲ್ ಕುಮಾರ್ ಎಂಬವರು ನೀಡಿದ ದೂರಿನಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.ತನ್ನ ವಿರುದ್ಧ ದಾಖಲಾಗಿರುವ ಪ್ರಕರಣ ರದ್ದುಗೊಳಿಸುವಂತೆ ಆರೋಪಿ ನಾಗೇಶ್ ಪೂಜಾರಿ ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ವಜಾಗೊಳಿಸಿತ್ತು.ಆರೋಪಿ ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಕುಂದಾಪುರದ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯ ವಜಾಗೊಳಿಸಿತ್ತು.ಹೈಕೋರ್ಟ್ ಮತ್ತು ಜಿಲ್ಲಾ ನ್ಯಾಯಾಲಯದ ಆದೇಶವನ್ನು ಮರೆ ಮಾಚಿ ಆರೋಪಿಯು ಬ್ರಹ್ಮಾವರ ಜೆಎಂಎಫ್‌ ಸಿ ನ್ಯಾಯಾಲಯಕ್ಕೆ ಶರಣಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಇದನ್ನು ಪ್ರಶ್ನಿಸಿ ಸರಕಾರ ಸಲ್ಲಿಸಿದ ಅರ್ಜಿಯನ್ನು ವಿಚಾರಣೆ ನಡೆಸಿದ ಜಿಲ್ಲಾ ನ್ಯಾಯಾಲಯ ಆರೋಪಿಗೆ ಮಂಜೂರು ಮಾಡಲಾಗಿದ್ದ ಜಾಮೀನನ್ನು ರದ್ದುಪಡಿಸಿತ್ತು.ಇದೀಗ ಈ ಪ್ರಕರಣದಲ್ಲಿ ಸರಕಾರದ ಪರ ವಾದಿಸಲು ಶಿವಪ್ರಸಾದ್ ಆಳ್ವ ಅವರನ್ನು ವಿಶೇಷ ಸರಕಾರಿ ಅಭಿಯೋಜಕರಾಗಿ ನೇಮಕಗೊಳಿಸಲಾಗಿದೆ.


ಪುತ್ತೂರು ದರ್ಬೆ ಕಾವೇರಿಕಟ್ಟೆ ನಿವಾಸಿಯಾಗಿದ್ದು ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು ಮತ್ತು ಕಾರವಾರ ಜಿಲ್ಲೆಯನ್ನು ಒಳಗೊಂಡ ಮಂಗಳೂರು ವಲಯದ ಹಿರಿಯ ಕಾನೂನು ಅಧಿಕಾರಿಯಾಗಿರುವ ಕೆ.ಶಿವಪ್ರಸಾದ್ ಆಳ್ವ ಅವರು ಹಲವು ಪ್ರಮುಖ ಪ್ರಕರಣಗಳಲ್ಲಿ ವಿಶೇಷ ಸರಕಾರಿ ಅಭಿಯೋಜಕರಾಗಿ ಕಾರ್ಯನಿರ್ವಹಿಸಿ ಅಪರಾಧಿಗಳಿಗೆ ಶಿಕ್ಷೆ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ.

LEAVE A REPLY

Please enter your comment!
Please enter your name here