ಪುತ್ತೂರು: ದ್ವಾರಕಾ ಪ್ರತಿಷ್ಠಾನ (ರಿ.) ಪುತ್ತೂರು ಇದರ ವತಿಯಿಂದ ವಿನಾಯಕ ಚೌತಿ ಹಬ್ಬದ ಪ್ರಯುಕ್ತ ‘ಸ್ಯಮಂತಕ ಮಣಿ’ ಎಂಬ ಯಕ್ಷಗಾನ ತಾಳಮದ್ದಳೆಯು ಮುಕ್ರಂಪಾಡಿ ಗೋಕುಲ ಬಡಾವಣೆಯ ನಂದಗೋಕುಲ ವೇದಿಕೆಯಲ್ಲಿ ಸೆ.7ರಂದು ನಡೆಯಿತು.
ವಿದ್ವಾನ್ ಗ.ನಾ ಭಟ್ಟ ಮೈಸೂರು ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಪ್ರತಿಷ್ಠಾನದ ಅಧ್ಯಕ್ಷ ಗೋಪಾಲಕೃಷ್ಣ ಭಟ್ಟ ಇವರು ಪ್ರಾಸ್ತಾವಿಕವಾಗಿ ಮಾತನಾಡಿ “ನಮ್ಮ ಹೊಸ ತಲೆಮಾರಿನ ಮಕ್ಕಳು ನಾಡಿನ ಕಲೆ, ಸಂಸ್ಕೃತಿಗಳನ್ನು ಕಲಿತುಕೊಳ್ಳುವ ಮನ ಮಾಡಬೇಕು, ಅವರಿಗೆ ವೇದಿಕೆಯನ್ನು ಹಿರಿಯರು ಕಲ್ಪಿಸಿ ಕೊಡಬೇಕು. ಈ ನಿಟ್ಟಿನಲ್ಲಿ ಹಿರಿಯ ಕಲಾವಿದರೊಂದಿಗೆ ಬೆರೆತು ಕಲೆಯ ಅನುಭವವನ್ನು ಪಡೆಯಲು ಯತ್ನಿಸಬೇಕು” ಎಂದರು. ಶ್ರೀ ರಾಮಕುಂಜೇಶ್ವರ ಮಹಾವಿದ್ಯಾಲಯದ ಪ್ರಾಂಶುಪಾಲ ಗಣರಾಜ ಕುಂಬ್ಳೆ ಕಲಾವಿದರ ಪಾತ್ರ ಪರಿಚಯ ಮಾಡಿದರು.
ಹಿಮ್ಮೇಳದಲ್ಲಿ ಭಾಗವತರಾಗಿ ರಮೇಶ್ ಭಟ್ ಪುತ್ತೂರು ಮತ್ತು ಸುರಭಿ ಚುಂತಾರು ಹಾಗೂ ಚೆಂಡೆ ಮದ್ದಳೆಯಲ್ಲಿ ಗಿರೀಶ್ ಭಟ್ ಕಿನಿಲಕೋಡಿ ಮತ್ತು ಕಿಶನ್ ಡಿ ಸಹಕರಿಸಿದರು. ಹಿಮ್ಮೇಳದಲ್ಲಿ ಹಿರಿಯರೊಂದಿಗೆ ವಿದ್ಯಾರ್ಥಿ ಕಲಾವಿದರಾದ ಆದಿತ್ಯಕೃಷ್ಣ , ನಿಯತಿ ಭಟ್, ಅಭಿನವ್ ಆಚಾರ್ ಕೆ ಸಹಕರಿಸಿದರು. ಮುಮ್ಮೇಳದಲ್ಲಿ ಬಲರಾಮನಾಗಿ ಡಾ. ಶ್ರೀಪತಿ ಕಲ್ಲೂರಾಯ ಪುತ್ತೂರು, ಶ್ರೀಕೃಷ್ಣನಾಗಿ ಗಣರಾಜ ಕುಂಬ್ಳೆ, ಜಾಂಬವಂತನಾಗಿ ವಿದ್ವಾನ್ ಗ.ನಾ.ಭಟ್ಟ ಮೈಸೂರು ಇವರು ಪಾತ್ರವಹಿಸಿದರು. ದ್ವಾರಕಾ ಪ್ರತಿಷ್ಠಾನದ ಕಾರ್ಯದರ್ಶಿಗಳಾದ ಅಮೃತ ಕೃಷ್ಣ ಸ್ವಾಗತಿಸಿ, ಧನ್ಯಶ್ರೀ ವಂದಿಸಿದರು.ಅಕ್ಷರಿ ಕಾರ್ಯಕ್ರಮ ನಿರ್ವಹಿಸಿದರು.