ಅನ್ನ, ಶಿಕ್ಷಣ, ಸಂಸ್ಕಾರ, ಸಾಮರಸ್ಯ, ಯೋಗಕ್ಷೇಮ ದೇವಸ್ಥಾನದ ಮೂಲಕ ಸಿಗಬೇಕು-ಮಹಾಲಿಂಗೇಶ್ವರ ದೇವಸ್ಥಾನ ವಠಾರದ ಗಣೇಶೋತ್ಸವ ಧಾರ್ಮಿಕ ಸಭೆಯಲ್ಲಿ ಆರ್‌ಎಸ್‌ಎಸ್‌ನ ರಾಜೇಶ್ ಪದ್ಮಾರ್

0

ಪುತ್ತೂರು: ಕ್ರಾಂತಿಕಾರಿ, ಅಹಿಂಸಾತ್ಮಕ, ಸಾಹಿತ್ಯಾತ್ಮಕ, ಸಮಾಜ ಸುಧಾರಣೆ, ಸಮಾಜವನ್ನು ಒಟ್ಟುಗೂಡಿಸುವಿಕೆಯ ಮೂಲಕ ಸ್ವಾತಂತ್ರ್ಯದ ಹೋರಾಟ ನಡೆದರೆ ದೇವಸ್ಥಾನದ ಮೂಲಕ ಅನ್ನ, ಶಿಕ್ಷಣ, ಸಂಸ್ಕಾರ, ಸಾಮರಸ್ಯ, ಯೋಗಕ್ಷೇಮಗಳಾದ 5 ರೀತಿಯ ಅಪೇಕ್ಷೆಗಳನ್ನು ಸಮಾಜ ವ್ಯಕ್ತಪಡಿಸುತ್ತದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ದಕ್ಷಿಣ ಪ್ರಾಂತ ಪ್ರಚಾರ ಪ್ರಮುಖ್ ರಾಜೆಶ್ ಪದ್ಮಾರ್ ಅವರು ಹೇಳಿದರು.


ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ವಠಾರದಲ್ಲಿ ನಡೆಯುತ್ತಿರುವ ಸಾರ್ವಜನಿಕ ಶ್ರೀ ಗಣೇಶೋತ್ಸವದ 3ನೇ ದಿನವಾದ ಸೆ.9ರಂದು ನಡೆದ ಧಾರ್ಮಿಕ ಸಭೆಯಲ್ಲಿ ಅವರು ದಿಕ್ಸೂಚಿ ಭಾಷಣ ಮಾಡಿದರು. ಭಾರತೀಯ ಸಮಾಜದ ಸಾಮಾಜಿಕ ಬದುಕು ದೇವಸ್ಥಾನದಿಂದ ಪ್ರಾರಂಭವಾಗುತ್ತದೆ. ಇತಿಹಾಸದಲ್ಲಿ ಆನೇಕ ಸಂದರ್ಭ ಆಕ್ರಮಣಕ್ಕೆ ಒಳಗಾಗಿದ್ದು ಕೂಡಾ ದೇವಸ್ಥಾನ. ದೇಗುಲ ನಮ್ಮ ಸಮಾಜದ ಶಕ್ತಿ ಕೇಂದ್ರ. ಸಮಾಜದ ಹಸಿವನ್ನು ನೀಗಿಸುವ ಕೇಂದ್ರ ದೇವಸ್ಥಾನ ಆಗಿತ್ತು. ಭಾರತದಲ್ಲಿ ಸಾಮರಸ್ಯದ ಕೇಂದ್ರವೇ ದೇವಸ್ಥಾನವಾಗಬೇಕು. ಆದರೆ ಇವತ್ತಿಗೂ ಸಮಸ್ಯೆಯ ಕೊರತೆ ಕಾಣುತ್ತಿದೆ. ಅಸ್ಪೃಶ್ಯತೆ, ಜಾತಿ ಪಿಡುಗು ಇನ್ನೂ ಇದೆ. ಇದು ಯಾವಾಗ ಶುರುವಾಯಿತು ಅನ್ನುವುದಕಿಂತ ಯಾವಾಗ ನಿಲ್ಲಿಸಬಹುದು ಎಂಬುದು ಮುಖ್ಯ. ತಾನೇನು ಮಾಡಬೇಕೆನ್ನುವ ಎಲ್ಲಾ ರೀತಿಯ ಸ್ವಭಾವ ಶುದ್ದಿ ನಮಗೆ ಬರಬೇಕು. ಅದು ಯೋಗ ಕ್ಷೇಮದ ಮೊದಲ ಭಾಗ ಎಂದ ಅವರು ಸ್ವಾತಂತ್ರ್ಯ ಪ್ರಾಪ್ತಿಯಾಗಿ ಎಲ್ಲಾ ರೀತಿಯ ಸಾಂವಿಧಾನಿಕ ಅಂಶಗಳನ್ನು ಪಾಲಿಸುವ ಮತ್ತು ಎಲ್ಲದರಲ್ಲೂ ವಿಕ್ರಮ ಪಾಲಿಸುವ ನಾವು ಜಗತ್ತಿನ 5ನೇ ಆರ್ಥಿಕತೆಯಾಗಿ, ವಿಜ್ಞಾನ ತಂತ್ರಜ್ಞಾನಗಳಲ್ಲಿ ಸಾಕಷ್ಟು ಮುಂದೆ ಬಂದಿದ್ದೇವೆ. ಒಲಂಪಿಕ್ಸ್‌ನಲ್ಲಿ ಪದಕಗಳು ಬಂದಿವೆ. ನೊಬೇಲ್ ಪಾರಿತೋಷಕ ಬರುತ್ತಾ ಇದೆ. ಆದರೆ ಹಿಂದೂ ಸಮಾಜದ ಏಕತೆಯ ವಿಚಾರ ಬಂದಾಗ ನಾವು ಎಲ್ಲಿದ್ದೇವೆ ಎಂದು ಪ್ರಶ್ನಿಸಬೇಕು. ಈ ನಿಟ್ಟಿನಲ್ಲಿ ಸಮಾಜದ ಮುಖ್ಯ ಕೇಂದ್ರ ಬಿಂದುವಾಗಿರುವ ಭಾರತದ ಎಲ್ಲಾ ದೇವಸ್ಥಾನಗಳಲ್ಲಿ ಸಮರಸತೆಯ ಕೇಂದ್ರಗಳಾಗಬೇಕೆನ್ನುವುದೇ ಎಲ್ಲಾ ಕಾಲಕಾಲಕ್ಕೆ ಬಂದ ಮಹಾಪುರುಷರ ಅಪೇಕ್ಷೆಯಾಗಿತ್ತು. ಶಂಕರಾಚಾರ್ಯ, ಬಸವಣ್ಣ, ಕನಕದಾಸ, ಪುರಂದರದಾಸ, ಅಂಬೇಡ್ಕರ್ ಸಹಿತ ಲೋಕಮಾನ್ಯ ಬಾಲಗಂಗಾಧರ ತಿಲಕರಿಂದಲೂ ಸಮಾನತೆಯ ಕೂಗು ಕೇಳಿ ಬರುತ್ತಿತ್ತು. ಆ ರೀತಿಯಲ್ಲಿ ಸಾರ್ವಜನಿಕ ಗಣೇಶೋತ್ಸವ ಅನ್ನುವಂತಹದ್ದು, ಆ ಸಾಮಾಜಿಕ ಏಕತೆಯನ್ನು ಪೋಷಿಸುವ ಸಾರ್ವಜನಿಕ ಹಬ್ಬವಾಗಿ ಮೂಡಿದೆ. ಹಿಂದೂ ಸಮಾಜದ ಏಕತೆಯನ್ನು ನೆನಪಿಸುವ ಕೆಂದ್ರವೇ ಗಣೇಶೋತ್ಸವ ಎಂದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಮಹಾವೀರ ಮಾಲ್ ಬೊಳುವಾರು ಇಲ್ಲಿನ ಕನ್ಸಲ್ಟೆಂಟ್ ಆರ್ಥೋಪೆಡಿಕ್ ಸರ್ಜನ್ ಡಾ. ಸಚಿನ್ ಹಾರಕರೆ ಅವರು ಮಾತನಾಡಿ ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರಿಂದ ಮೂಡಿ ಬಂದ ಸಾರ್ವಜನಿಕ ಗಣೇಶೋತ್ಸವ ಧಾರ್ಮಿಕತೆಯ ಮೂಲಕ ಸಮಾಜವನ್ನು ಒಗ್ಗೂಡಿಸುವ ಕಾರ್ಯ ನಿರಂತರವಾಗಿ ನಡೆಯುತ್ತಿದೆ. ಇದನ್ನು ಯಶಸ್ವಿಯಾಗಿ ಕೊಂಡೊಯ್ಯುತ್ತಿರುವ ಸಮಿತಿ ಪದಾಧಿಕಾರಿಗಳನ್ನು, ಸದಸ್ಯರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು.


ಬಹುಮಾನ ವಿತರಣೆ:
ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ವಿವಿಧ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಯಿತು. ಸ್ಪರ್ಧಾ ನಿರ್ವಹಣೆ ಮಾಡಿದ ಶಿಕ್ಷಕ ಶ್ರೀಕಾಂತ್ ಕಂಬಳಕೋಡಿ ವಿಜೇತರ ಪಟ್ಟಿ ಓದಿದರು. ಇದೇ ಸಂದರ್ಭ ಅವರನ್ನು ಸಮಿತಿಯಿಂದ ಸನ್ಮಾನಿಸಲಾಯಿತು. ಜೊತೆಗೆ ಸಮಿತಿಗೆ ಅತೀ ಹೆಚ್ಚು ದೇಣಿಗೆ ಸಂಗ್ರಹಿಸಿದ ಅಶ್ವಿನಿ ಪ್ರಸಾದ್ ಮತ್ತು ಗಣಪತಿ ದೇವರ ಪೀಠ ನಿರ್ಮಾಣ ಮಾಡಿ ಉಚಿತವಾಗಿ ಸಮಿತಿಗೆ ಒದಗಿಸಿದ ತೀರ್ಥರಾಮ ಪಡೀಲ್ ಅವರನ್ನು ಗೌರವಿಸಲಾಯಿತು. ಮೂರು ದಿನಗಳ ಕಾಲ ಸಾಂಸ್ಕೃತಿಕ ವೇದಿಕೆಯಲ್ಲಿ ವಿವಿಧ ಭಜನಾ ತಂಡದ ನಿರ್ವಹಣೆ ಮಾಡಿದ ಉದಯ ಹೆಚ್ ಮತ್ತು ಹಲವು ಕಾರ್ಯಕ್ರಮಗಳಿಗೆ ಸಹಕಾರ ನೀಡಿದ ಆದರ್ಶ ಆಸ್ಪತ್ರೆಯ ದಯಾನಂದ ಪಿ ಅವರನ್ನು ಅಭಿನಂದಿಸಲಾಯಿತು. ಭಾರತೀಯ ವಾಯು ಸೇನೆಯ ನಿವೃತ್ತ ಸೈನಿಕ ಮತ್ತು ಪ್ಯಾರಚೂಟ್ ಸ್ಕೈಡೈವಿಂಗ್‌ನ ನಿವೃತ್ತ ತರಬೇತುದಾರ ರಾಮಚಂದ್ರ ಪುಚ್ಚೇರಿ ಮತ್ತು ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟ್ರಮಣ ದೇವಸ್ಥಾನದ ಆಡಳಿತ ಮೊಕ್ತೇಸರ ಪ್ರಗತಿಪರ ಕೃಷಿಕ ಮನೋಜ ಶೆಣೈ, ಬಹುಮಾನ ವಿತರಣೆ ಮಾಡಿದ ಉಪತಹಸೀಲ್ದಾರ್ ಕವಿತಾ ಎಸ್ ಅವರು ಮಾತನಾಡಿದರು. ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಸುಜೀಂದ್ರ ಪ್ರಭು, ಕಾರ್ಯಾಧ್ಯಕ್ಷ ರಾಧಾಕೃಷ್ಣ ನಂದಿಲ, ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ಉಪಾಧ್ಯಕ್ಷ ರವೀಂದ್ರ ಶೆಟ್ಟಿ ನುಳಿಯಾಲು, ಜೊತೆ ಕಾರ್ಯದರ್ಶಿ ನೀಲಂತ್, ಕೋಶಾಧಿಕಾರಿ ಶ್ರೀನಿವಾಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಅಮೃತ ಪ್ರಾರ್ಥಿಸಿದರು. ಜಯಶ್ರೀ ಶೆಟ್ಟಿ ಸ್ವಾಗತಿಸಿದರು. ಸಮಿತಿ ಪ್ರಧಾನ ಕಾರ್ಯದರ್ಶಿ ಅಶೋಕ್ ಕುಂಬ್ಳೆ, ರಾಜೇಶ್ ಬನ್ನೂರು ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ರಂಗಪೂಜೆ ನಡೆಯಿತು. ಬಳಿಕ ತುಳು ಹಾಸ್ಯಮಯ ನಾಟಕ ಅಮ್ಮೆರ್ ಪ್ರದರ್ಶನಗೊಂಡಿತು. ಕಾರ್ಯಕ್ರಮದ ನೇರ ಪ್ರಸಾರ ಸುದ್ದಿ ಯು ಟ್ಯೂಬ್ ಚಾನೆಲ್ ಮತ್ತು ಕೇಬಲ್ ಟಿವಿ 93 ಚಾನೆಲ್‌ನಲ್ಲಿ ಪ್ರಸಾರಗೊಂಡಿತ್ತು.

ಇಂದು ವೈಭವದ ಶೋಭಾಯಾತ್ರೆ
ಭಕ್ತಿ ಪ್ರಧಾನವಾಗಿದ್ದು, ದೇಶ ಪ್ರೇಮ, ಕೃಷಿಗೆ ಆದ್ಯತೆ ಮತ್ತು ಯೋಧರ ಸೇವೆಯನ್ನು, ಸ್ವಾತಂತ್ರ್ಯ ಹೋರಾಟಗಾರರನ್ನು ಗುರುತಿಸುವ ಹಿಂದೂ ಸಂಸ್ಕಾರ ಸಂಸ್ಕೃತಿಯ ಅರಿವು ಮೂಡಿಸುವ ನಿಟ್ಟಿನಲ್ಲಿ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ ನಾಲ್ಕು ದಿನ ಪೂಜಿಸಲ್ಪಡುವ 58ನೇ ವರ್ಷದ ಗಣೇಶೋತ್ಸವದ ವೈಭವದ ಶೋಭಾಯಾತ್ರೆಯು ಸೆ.10ರಂದು ಸಂಜೆ ನಡೆಯಲಿದೆ. ಕಳೆದ ಮೂರು ದಿನಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಧಾರ್ಮಿಕ ಸಭೆಯೊಂದಿಗೆ ನಡೆದ ಗಣೇಶೋತ್ಸವ ಸೆ.10ರಂದು ಬೆಳಿಗ್ಗೆ ಭಜನಾ ಕಾರ್ಯಕ್ರಮ ಬಳಿಕ ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ.

ಸಂಜೆ ಗಂಟೆ 5ಕ್ಕೆ ಶ್ರೀ ದೇವರ ಶೋಭಯಾತ್ರೆಯು ವೈವಿಧ್ಯಮಯ ಸ್ತಬ್ದ ಚಿತ್ರಗಳು, ಕುಣಿತ ಭಜನೆಯೊಂದಿಗೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ರಥಬೀದಿಯಾಗಿ ರೈಲ್ವೇ ನಿಲ್ದಾಣ ರಸ್ತೆಯಾಗಿ ಹಾರಾಡಿಯಿಂದ ಬೊಳುವಾರು ಓಂ ಶ್ರೀ ಶಕ್ತಿ ಅಂಜನೇಯ ಮಂತ್ರಾಲಯದ ಬಳಿ ಸೇರಿ ಅಲ್ಲಿಂದ ಮುಖ್ಯರಸ್ತೆಯಾಗಿ ಕೆಎಸ್‌ಆರ್‌ಟಿಸಿ ಬಸ್‌ನಿಲ್ದಾಣ, ದರ್ಬೆ ವೃತ್ತ, ಪರ್ಲಡ್ಕ, ಭವಾನಿಶಂಕರ ದೇವಸ್ಥಾನದ ಮೂಲಕ ಕೋರ್ಟ್‌ರಸ್ತೆಯಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಬಳಿಯಿಂದ ದೇವಸ್ಥಾನದ ರಥಬೀದಿ ಬಳಿಯ ಕೆರೆಯಲ್ಲಿ ಜಲಸ್ಥಂಭನ ನಡೆಯಲಿದೆ.

LEAVE A REPLY

Please enter your comment!
Please enter your name here