ಕೋಡಿಂಬಾಡಿ: 41ನೇ ವರ್ಷದ ಗಣೇಶೋತ್ಸವ ಸಂಭ್ರಮ-ಆಕರ್ಷಕ ಶೋಭಾಯಾತ್ರೆ-ಗಮನ ಸೆಳೆದ ವಿಗ್ರಹದ ಜಲಸ್ಥಂಭನ

0

ಪುತ್ತೂರು: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೋಡಿಂಬಾಡಿ ಇದರ ವತಿಯಿಂದ ಅಶ್ವತ್ಥಕಟ್ಟೆ ವಠಾರದಲ್ಲಿ ಸೆ.7ರಂದು ಆರಂಭಗೊಂಡ 41ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಸಂಭ್ರಮಕ್ಕೆ ಸೆ.9ರಂದು ರಾತ್ರಿ ತೆರೆ ಬಿದ್ದಿದೆ. ವಿವಿಧ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಮೂರು ದಿನ ನಡೆದ ಗಣೇಶೋತ್ಸವದಲ್ಲಿ ಸಾವಿರಾರು ಮಂದಿ ಭಾಗಿಯಾಗಿದ್ದರು.


ಗಣೇಶೋತ್ಸವಕ್ಕೆ ಚಾಲನೆ:
ಶ್ರೀ ಮಹಾಗಣಪತಿ ಪ್ರತಿಷ್ಠಾ ಪೂಜೆಯೊಂದಿಗೆ ಸೆ.7ರಂದು ಬೆಳಿಗ್ಗೆ ಗಣೇಶೋತ್ಸವಕ್ಕೆ ಚಾಲನೆ ನೀಡಲಾಯಿತು. ಬಳಿಕ ಕೃಷಿ ಅಧಿಕಾರಿ ತಿರುಪತಿ ಭರಮಣ್ಣನವರ್ ಅವರು ಧ್ವಜಾರೋಹಣ ನೆರವೇರಿಸಿದರು. ನಂತರ ಗಣಹೋಮ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದಿಂದ ಮತ್ತು ಮಠಂತಬೆಟ್ಟು ಶ್ರೀ ಚಿನ್ಮಯೀ ಮಹಿಳಾ ಭಜನಾ ಮಂಡಳಿಯವರಿಂದ ಭಜನಾ ಸೇವೆ, ಕೋಡಿಂಬಾಡಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕತಿಕ ಕಾರ್ಯಕ್ರಮ, ರಾತ್ರಿ ಕೋಡಿಂಬಾಡಿ ಗ್ರಾ.ಪಂ. ಉಪಾಧ್ಯಕ್ಷ ಜಯಪ್ರಕಾಶ್ ಬದಿನಾರು ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭಾ ಕಾರ್ಯಕ್ರಮ, ವಿವಿಧ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಬಳಿಕ ಜಿಲ್ಲೆಯ ಪ್ರಸಿದ್ಧ ತಂಡಗಳಿಂದ ಮೇಘ ಗಾನ-ನಾಟ್ಯ ವೈಭವ ನಡೆಯಿತು. ಈ ದಿನ ಕೋಡಿಂಬಾಡಿಯ ವನಿತಾ ಸಮಾಜ ಮತ್ತು ವಿನಾಯಕನಗರ ಯುವಶಕ್ತಿ ಗೆಳೆಯರ ಬಳಗದವರು ಸ್ವಯಂಸೇವಕರಾಗಿ ಕಾರ್ಯ ನಿರ್ವಹಿಸಿದ್ದರು.


108 ತೆಂಗಿನ ಕಾಯಿ ಗಣಯಾಗ-ಧಾರ್ಮಿಕ ಸಭೆ:
2ನೇ ದಿನವಾದ ಸೆ.8ರಂದು ಬೆಳಿಗ್ಗೆ ವೇದಮೂರ್ತಿ ಶ್ರೀವತ್ಸ ಕೆದಿಲಾಯರವರ ನೇತೃತ್ವದಲ್ಲಿ 108 ತೆಂಗಿನ ಕಾಯಿ ಗಣಯಾಗ, ಗಣಯಾಗದ ಪೂರ್ಣಾಹುತಿ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನವೀನ್ ಬೆಳ್ಳಿಪ್ಪಾಡಿ ಮತ್ತು ತಂಡದವರಿಂದ ಸಂಗೀತ ರಸಮಂಜರಿ, ಸಂಜೆ ಶ್ರೀಶಾರದಾ ಕಲಾಕೇಂದ್ರದ ಉಪ್ಪಿನಂಗಡಿ ಶಾಖೆಯವರಿಂದ ಭರತ ನಾಟ್ಯ, ರಾತ್ರಿ ಗ್ರಾ.ಪಂ. ಅಧ್ಯಕ್ಷೆ ಮಲ್ಲಿಕಾ ಅಶೋಕ್ ಪೂಜಾರಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ, ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ನಂತರ ಉಪ್ಪಿನಂಗಡಿಯ ಗಯಾಪದ ಕಲಾವಿದರಿಂದ ಮುರಳಿ ಈ ಪಿರ ಬರೋಲಿ ತುಳು ನಾಟಕ ನಡೆಯಿತು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕೋಡಿಂಬಾಡಿ ಒಕ್ಕೂಟ ಮತ್ತು ಕೋಡಿಂಬಾಡಿಯ ಅಶ್ವತ್ಥಕಟ್ಟೆಯ ಧರ್ಮಶ್ರೀ ಕಲಾವೃಂದದವರು ಸ್ವಯಂಸೇವಕರಾಗಿ ಭಾಗವಹಿಸಿದ್ದರು.


ವಿಸರ್ಜನಾ ಪೂಜೆ:
3ನೇ ದಿನವಾದ ಸೆ.9ರಂದು ಬೆಳಿಗ್ಗೆ ತಿರುಪತಿ ತಿರುಮಲ ಟ್ರಸ್ಟ್ ಮಹಿಳಾ ಭಜನಾ ಮಂಡಳಿ ಬೊಳುವಾರು ಪುತ್ತೂರು ಇವರಿಂದ ಭಜನಾ ಸೇವೆ, ಗಣಹೋಮ, ಅಶ್ವತ್ಥಪೂಜೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ, ಸಂಜೆ ವಿಸರ್ಜನಾ ಪೂಜೆ, ಬಳಿಕ ಶ್ರೀ ಮಹಾಗಣಪತಿಯ ಆಕರ್ಷಕ ಶೋಭಾಯಾತ್ರೆ ನಡೆಯಿತು. ಅರ್ಚಕ ಬಾಲಕೃಷ್ಣ ಐತಾಳ್ ಅವರ ನೇತೃತ್ವದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳು ನೆರವೇರಿತು.

ಗಣೇಶೋತ್ಸವ ಸಮಿತಿಯ ಅಧ್ಯಕ್ಷ ಕೇಶವ ಭಂಡಾರಿ ಕೈಪ, ಗೌರವಾಧ್ಯಕ್ಷ ವಾರಿಸೇನ ಜೈನ್ ಕೋಡಿಯಾಡಿ, ಪ್ರಧಾನ ಕಾರ್ಯದರ್ಶಿ ದೇವಾನಂದ ಕೆ. ಕೋಡಿಂಬಾಡಿ, ಕಾರ್ಯದರ್ಶಿ ಯೋಗೀಶ್ ಸಾಮಾನಿ ಸಂಪಿಗೆದಡಿ, ಕೋಶಾಧಿಕಾರಿ ಭರತ್ ಗೌಡ ನಿಡ್ಯ, ಉಪಾಧ್ಯಕ್ಷರಾದ ಜಯಪ್ರಕಾಶ್ ಬದಿನಾರು, ದೀಕ್ಷಿತ್ ಎಂ.ಎಲ್., ಅಶೋಕ ಪ್ರಭು ದಾರಂದಕುಕ್ಕು, ಉಮೇಶ್ ಪನಿತೋಟ, ದಯಾನಂದ ಪಳ್ಳತ್ತಾರು, ಚೆನ್ನಣ್ಣ ಗೌಡ ಬರೆಮೇಲು, ಶಾರದಾ ಸಿ. ರೈ ಸರೋಳಿ, ಸತೀಶ್ ಮಡಿವಾಳ ಸೇಡಿಯಾಪು, ಚಂದ್ರಶೇಖರ ಕುಲಾಲ್ ಸೇಡಿಯಾಪು, ಶೇಖರ ಪೂಜಾರಿ ನಿಡ್ಯ, ಗೌರವ ಸಲಹೆಗಾರರಾದ ಸೀತಾರಾಮ ಶೆಟ್ಟಿ ಹೆಗ್ಡೆಹಿತ್ಲು, ಕೆ. ಬಾಲಕೃಷ್ಣ ಬೋರ್ಕರ್ ಕೂರ್ನಡ್ಕ, ಜಯಾನಂದ ಕೋಡಿಂಬಾಡಿ, ಎ.ಮುರಳೀಧರ ರೈ ಮಠಂತಬೆಟ್ಟು, ಪಿ.ಸಂಕಪ್ಪ ಶೆಟ್ಟಿ ಮಠಂತಬೆಟ್ಟು, ಕುಮಾರನಾಥ ಎಸ್. ಪಳ್ಳತ್ತಾರು, ಯನ್.ಸುಭಾಸ್ ನಾಯಕ್ ನೆಕ್ಕರಾಜೆ, ರಮೇಶ್ ನಾಯಕ್ ನಿಡ್ಯ, ನಿರಂಜನ ರೈ ಮಠಂತಬೆಟ್ಟು ಸೇರಿದಂತೆ ಹಲವರು ಭಾಗಿಯಾಗಿದ್ದರು.

ಶಾಂತಿನಗರ ಕೆರೆಯಲ್ಲಿ ಗಮನ ಸೆಳೆದ ಜಲಸ್ಥಂಭನ
ಸೆ.9ರಂದು ಸಂಜೆ ಗಣಪತಿಯ ಶೋಭಾಯಾತ್ರೆ ಕೋಡಿಂಬಾಡಿಯ ಅಶ್ವತ್ಥಕಟ್ಟೆ ವಠಾರದಿಂದ ಹೊರಟು ಸೇಡಿಯಾಪು, ದಾರಂದಕುಕ್ಕುವರೆಗೆ ಸಾಗಿ ಮರಳಿ ಕೋಡಿಂಬಾಡಿ ವಿನಾಯಕನಗರದಿಂದಾಗಿ ಮಠದಬೆಟ್ಟು ಶ್ರೀ ರಾಜರಾಜೇಶ್ವರಿ ದೇವಸ್ಥಾನ, ಮಠಂತಬೆಟ್ಟು ಶ್ರೀ ಮಹಿಷಮರ್ದಿನಿ ದೇವಸ್ಥಾನದ ಬಳಿಯಿಂದ ಹಿಂತಿರುಗಿ ಶಾಂತಿನಗರ ಶ್ರೀ ಮಹಾವಿಷ್ಣು ದೇವಸ್ಥಾನದವರೆಗೆ ಸಾಗಿ ಶಾಂತಿನಗರದ ಕೆರೆಯಲ್ಲಿ ಶ್ರೀ ಮಹಾಗಣಪತಿ ವಿಗ್ರಹದ ಜಲಸ್ಥಂಭನ ನಡೆಯಿತು. ಆಕರ್ಷಕ ಶೋಭಾಯಾತ್ರೆಗೆ ನೆಕ್ಕಿಲಾಡಿ ಅಂಬೆಲದ ಶ್ರೀ ರಾಜಶ್ರೀ ಭಜನಾ ಮಂಡಳಿಯವರ ಕುಣಿತ ಭಜನೆ ಮೆರಗು ನೀಡಿತ್ತು. ಶಾಂತಿನಗರ ಕೆರೆಯಲ್ಲಿ ನಡೆದ ಗಣೇಶನ ವಿಗ್ರಹದ ಜಲಸ್ಥಂಭನ ಕಾರ್ಯಕ್ರಮ ಗಮನ ಸೆಳೆಯಿತು. ಗಣಪತಿಯ ವಿಗ್ರಹವನ್ನು ಮಂಟಪದಲ್ಲಿ ಕುಳ್ಳಿರಿಸಿ ಕ್ರೇನ್ ಮೂಲಕ ಕೆರೆಗೆ ಇಳಿಸಲಾಯಿತು. ಕ್ರೇನ್‌ನಲ್ಲಿ 6 ಮಂದಿ ಕೆರೆಗೆ ಇಳಿದು ಗಣಪತಿಯ ವಿಗ್ರಹವನ್ನು ಜಲಸ್ಥಂಭನಗೊಳಿಸಿದರು. ಮಂಟಪದ ವ್ಯವಸ್ಥೆಯನ್ನು ಕೋಡಿಂಬಾಡಿಯ ಅಶ್ವತ್ಥಕಟ್ಟೆಯ ಧರ್ಮಶ್ರೀ ಕಲಾವೃಂದದ ವತಿಯಿಂದ ಮಾಡಲಾಗಿದ್ದು ಸೇಡಿಯಾಪು ಎಸ್.ಎನ್. ಕ್ರೇನ್ ಸರ್ವೀಸ್‌ನ ಗಣೇಶ್ ಕುಲಾಲ್ ಅವರು ಕ್ರೇನ್ ವ್ಯವಸ್ಥೆ ಮಾಡಿದ್ದರು. ಈ ದಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸೇಡಿಯಾಪು ಒಕ್ಕೂಟದವರು ಸ್ವಯಂಸೇವಕರಾಗಿ ಭಾಗವಹಿಸಿದ್ದರು.

LEAVE A REPLY

Please enter your comment!
Please enter your name here