ಜಿಲ್ಲಾ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆ

0

ಫಲಾನುಭವಿಗಳಿಗೆ ಸೌಲಭ್ಯಗಳನ್ನು ಸುಲಭವಾಗಿ ಒದಗಿಸಿ: ಸಂಸದ ಬ್ರಿಜೇಶ್ ಚೌಟ

ಮಂಗಳೂರು: ಸರಕಾರದಿಂದ ಒದಗಿಸಲಾಗುವ ಸಬ್ಸಿಡಿ, ವಿವಿಧ ಯೋಜನೆಗಳು ಫಲಾನುಭವಿಗಳಿಗೆ ಸುಲಭವಾಗಿ ಸಿಗುವಂತಾಗಬೇಕು. ಅದಕ್ಕಾಗಿ ಅವರನ್ನು ಅಲೆದಾಡುವಂತೆ ಮಾಡಬಾರದು ಎಂದು ಸಂಸದ ಬ್ರಿಜೇಶ್ ಚೌಟರವರು ದ.ಕ. ಜಿಲ್ಲೆಯ ಬ್ಯಾಂಕ್‌ಗಳಿಗೆ ನಿರ್ದೇಶನ ನೀಡಿದ್ದಾರೆ.

ದ.ಕ. ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾ ಬ್ಯಾಂಕ್‌ಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.ಯೋಜನೆಗಳನ್ನು ಪಡೆಯಲು ಫಲಾನುಭವಿಗಳು ಬ್ಯಾಂಕ್‌ಗೆ ಬಂದಾಗ ಅವರನ್ನು ಮುಕ್ತ ಮನದಿಂದ ಸ್ವಾಗತಿಸಿ, ಯೋಜನೆಗಳ ಬಗ್ಗೆ ಅರ್ಥ ಮಾಡಿಸಿ ಮನವರಿಕೆ ಮಾಡುವ ಕಾರ್ಯವನ್ನು ಬ್ಯಾಂಕ್‌ ಅಧಿಕಾರಿ ಸಿಬ್ಬಂದಿ ಮಾಡಬೇಕು. ಎಸ್‌ಸಿ ಎಸ್‌ಟಿ, ಹಿಂದುಳಿದ ವರ್ಗ ಹಾಗೂ ಮಹಿಳೆಯರಿಗೆ ವಿಶೇಷ ಒತ್ತು ನೀಡಿ ಯೋಜನೆಗಳನ್ನು ಫಲಪ್ರದಗೊಳಿಸಲು ಆಸಕ್ತಿ ವಹಿಸಬೇಕು ಎಂದು ಅವರು ಕಿವಿಮಾತು ಹೇಳಿದರು.

ಬ್ಯಾಂಕ್‌ಗಳು ತಮ್ಮ ಅಧಿಕಾರಿ ಹಾಗೂ ಸಿಬ್ಬಂದಿಗೆ ಸ್ಥಳೀಯ ಭಾಷೆ, ಸಂಸ್ಕೃತಿಯ ಬಗ್ಗೆ ಆಸಕ್ತಿ, ಗೌರವ ಇರುವುದನ್ನು ಖಾತರಿಪಡಿಸಬೇಕು. ಬ್ಯಾಂಕ್‌ಗಳು ತಮ್ಮ ಸಿಎಸ್‌ಆ‌ರ್ ಚಟುವಟಿಕೆಗಳಿಗೆ ಒತ್ತು ನೀಡಬೇಕು ಎಂದು ಸಂಸದರು ಬ್ಯಾಂಕ್ ಅಧಿಕಾರಿಗಳಿಗೆ ಸಲಹೆ ನೀಡಿದರು.

ಜೀವನ್‌ ಜ್ಯೋತಿ ಬಿಮಾ ಯೋಜನೆ, ಪಿಎಂ ಸ್ವ ನಿಧಿ ಯೋಜನೆ ಬಗ್ಗೆ ಬಗ್ಗೆ ಗ್ರಾಹಕರಿಗೆ ಜಾಗೃತಿ ಮೂಡಿಸಿ ಹೆಚ್ಚಿನ ಸಂಖ್ಯಯಲ್ಲಿ ಈ ಯೋಜನೆಯ ಪ್ರಯೋಜನ ಪಡೆಯಲು ಬ್ಯಾಂಕ್‌ಗಳು ಆಸಕ್ತಿ ವಹಿಸಬೇಕು. ಎಂದು ಜಿ.ಪಂ. ಸಿಇಒ ಡಾ. ಆನಂದ್ ನಿರ್ದೇಶನ ನೀಡಿದರು.

ಸ್ಟ್ಯಾಂಡ್ ಅಪ್ ಯೋಜನೆಯಡಿ ಜಿಲ್ಲೆಯ ವಿವಿಧ ಬ್ಯಾಂಕ್‌ಗಳಿಗೆ ಪ್ರಸಕ್ತ ಸಾಲಿಗೆ ಒಟ್ಟು 1300 ಗುರಿ ನೀಡಲಾಗಿದ್ದರೂ ಈವರೆಗೆ ಕೇವಲ 8 ಅರ್ಜಿಗಳು ಮಾತ್ರ ಸ್ವೀಕೃತವಾಗಿರುವ ಬಗ್ಗೆ ಸಂಸದ ಬ್ರಿಜೇಶ್ ಚೌಟ ಅಸಮಾಧಾನ ವ್ಯಕ್ತಪಡಿಸಿದರು.

ಪ್ರಧಾನ ಮಂತ್ರಿ ಜೀವನ್ ಬಿಮಾ ಯೋಜನೆಯಡಿ ಎಪ್ರಿಲ್ 2024ರಿಂದ ಜೂನ್ 2024ರವರೆಗೆ 6679 ಮಂದಿಯನ್ನು ನೋಂದಣಿ ಮಾಡಲಾಗಿದೆ. ಅಟಲ್ ಪಿಂಚಣಿ ಯೋಜನೆಯಡಿ ಈ ಅವಧಿಯಲಿಲ 12761, ಪ್ರಧಾನ ಮಂತ್ರಿ ಸುರಕ್ಷಾ ಬಿಮಾ ಯೋಜನೆಯಡಿ 18531 ಮಂದಿಯನ್ನು ನೋಂದಣಿ ಮಾಡಿರುವುದಾಗಿ ದ.ಕ. ಜಿಲ್ಲಾ ಲೀಡ್‌ ಬ್ಯಾಂಕ್‌ ವ್ಯವಸ್ಥಾಪಕಿ ಕವಿತಾ ಶೆಟ್ಟಿ ವಿವರ ನೀಡಿದರು.

ಮುದ್ರಾ ಯೋಜನೆಯಡಿ ಈ ಅವಧಿಯಲ್ಲಿ 15239 ಖಾತೆಗಳಲ್ಲಿ 193.87 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದೆ. ಜನಧನ್ ಯೋಜನೆಯಡಿ 16163 ಖಾತೆಗಳನ್ನು ತೆರೆಯಲಾಗಿದೆ. ಪಿಎಂ ಸ್ವನಿಧಿ ಯೋಜನೆಯಡಿ ಜಿಲ್ಲೆಯಲ್ಲಿ ಆಗಸ್ಟ್ 31ರವರೆಗೆ ಪ್ರಥಮ ಹಂತದಲ್ಲಿ 12209, ದ್ವಿತೀಯ ಹಂತದಲ್ಲಿ 3449 ಹಾಗೂ ತೃತೀಯ ಹಂತದಲ್ಲಿ 1340 ಮಂದಿಗೆ ಸಾಲ ಮಂಜೂರಾಗಿದೆ ಎಂದು ಅವರು ವಿವರ ನೀಡಿದರು.

ಪ್ರಧಾನ ಮಂತ್ರಿಯವರ ಉದ್ಯೋಗ ಸೃಷ್ಟಿ ಕಾರ್ಯಕ್ರಮ (ಪಿಎಂಇಜಿಪಿ) ದಡಿ ಕಿರು ಮತ್ತು ಮಧ್ಯಮ ಕೈಗಾರಿಕಾ ಚಚುವಟಿಕೆಗಳಿಗೆ ಸಾಲ ಪಡೆದು ಮರುಪಾವತಿಸಿದ್ದರೂ ನೂರಾರು ಉದ್ದಿಮೆದಾರರಿಗೆ ಸಿಗಬೇಕಾಗಿರುವ ಸಬ್ಸಿಡಿ ಹಲವು ವರ್ಷಗಳಿಂದ ದೊರೆತಿಲ್ಲ ಎಂಬ ಮಾಹಿತಿ ಬಗ್ಗೆ ಸಂಸದ ಬ್ರಿಜೇಶ್ ಚೌಟ ಕಳವಳ ವ್ಯಕ್ತಪಡಿಸಿದರು.

2019ರಿಂದೀಚೆಗೆ ಪಿಎಂಇಜಿಪಿಯಡಿ ಸಾಲ ಪಡೆದವರು ಮರುಪಾವತಿ ಮಾಡಿದ್ದರೂ ಸಬ್ಸಿಡಿ ದೊರಕಿಲ್ಲ. ಇದರಿಂದಾಗಿ ಈ ಉದ್ದಿಮೆದಾರರು ಬೇರೆ ಯಾವುದೇ ರೀತಿಯ ಸಾಲ ಪಡೆಯಲು ಸಾಧ್ಯವಾಗದೆ ಉದ್ಯಮವನ್ನೇ ಮುಚ್ಚುವಂತಹ ಸ್ಥಿತಿಯೂ ಎದುರಾಗಿದೆ ಎಂದು ಸಭೆಯಲ್ಲಿ ಸಂಸದರ ಆಪ್ತ ಸಹಾಯಕರೊಬ್ಬರು ಮಾಹಿತಿ ನೀಡಿದರು.

ಸಾಲ ಪಡೆಯುವ ಉದ್ದಿಮೆದಾರರಿಗೆ ಅವರ ಖಾತೆಗೆ ಸಬ್ಸಿಡಿ ಹಣವನ್ನು ವರ್ಗಾಯಿಸಲಾಗುತ್ತದೆ. ಆದರೆ ಸಾಲ ಮರು ಪಾವತಿ ಬಳಿಕ ತರ್ಡ್ ಪಾರ್ಟಿಯ ಪರಿಶೀಲನೆ ಆಗಬೇಕಾಗುತ್ತದೆ. ಹಿಂದೆ ಜೆನೆಸಿಸ್ ಸಂಸ್ಥೆ ನಡೆಸುತ್ತಿದ್ದ ಪರಿಶೀಲನೆಯನ್ನು ಇದೀಗ ಕೇಂದ್ರ ಸರಕಾರವು ಪೋಸ್ಟಲ್ ಇಲಾಖೆಗೆ ವರ್ಗಾಯಿಸಿದೆ. ಎಲ್ಲಾ ರಾಜ್ಯಗಳಲ್ಲೂ ಇದೀಗ ಈ ಬಗ್ಗೆ ಪ್ರಕ್ರಿಯೆಗಳು ನಡೆಯುತ್ತಿದ್ದು ಇದರಿಂದಾಗಿ ಸಬ್ಸಿಡಿ ವಿತರಣೆ ವಿಳಂಬವಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರಗಳ ಸಹಾಯಕ ವ್ಯವಸ್ಥಾಪಕ ಅನಿಲ್‌ಕುಮಾ‌ರ್ ಮಾಹಿತಿ ನೀಡಿದರು.

ಕಳೆದ ಒಂದೂವರೆ ವರ್ಷದಿಂದ ಈ ಸಮಸ್ಯೆಯಾಗುತ್ತಿದ್ದರೂ ಇದನ್ನು ಸಂಬಂಧಪಟ್ಟವರ ಗಮನಕ್ಕೆ ತಾರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸಂಸದ ಬ್ರಿಜೇಶ್ ಚೌಟ, ಇಂತಹ ಸಮಸ್ಯೆಗಳ ಕುರಿತಂತೆ ಅಧಿಕಾರಿಗಳು ಸೂಕ್ತ ಸಮಯ ದಲ್ಲಿ ಸಂಬಂಧಪಟ್ಟವರಿಗೆ ಮಾಹಿತಿ ನೀಡಿ ಬಗೆಹರಿಸಲು ಸಹಕರಿಸಬೇಕು ಎಂದು ತಾಕೀತು ಮಾಡಿದರು.ಕೃಷಿ ಕ್ಷೇತ್ರದಲ್ಲಿ ಕಳೆದ ವರ್ಷವೂ ಜಿಲ್ಲೆಯು ತನ್ನ ಗುರಿ ಮೀರಿ ಸಾಧನೆ ಮಾಡಿದೆ ಎಂದು ನಬಾರ್ಡ್ ಡಿಜಿಎಂ ಸಂಗೀತ ತಿಳಿಸಿದರು. ಆರ್‌ಬಿಐ ಎಜಿಎಂ ಅರುಣ್ ಕುಮಾ‌ರ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here