ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಅಷ್ಠಾದಶ ಸಂಭ್ರಮ, ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ-ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ, ಬ್ರಹ್ಮಕಲಶ,ಧಾರ್ಮಿಕ ಸಭೆ, ವಿಶೇಷ ಗೌರವಾರ್ಪಣೆ

0

ಕೂರೇಲು ಮಣ್ಣಿನ ಶಕ್ತಿಯನ್ನು ಸಮಾಜಕ್ಕೆ ತಿಳಿಸುವ ಕೆಲಸ ಆಗಿದೆ : ಸಂಜೀವ ಮಠಂದೂರು

ಪುತ್ತೂರು: ನಾವು ಮಣ್ಣನ್ನು ಮಾತೃ ಸಮಾನ, ದೈವ ಸಮಾನ ಎಂದು ನಂಬುವವರಾಗಿದ್ದೇವೆ. ಮಣ್ಣಿನ ಕಣಕಣದಲ್ಲೂ ದೈವಿಕ ಶಕ್ತಿ ಇದೆ ಎಂದು ತಿಳಿದುಕೊಂಡಿದ್ದೇವೆ. ಇಂತಹ ಕೂರೇಲು ಮಣ್ಣಿನ ಮಹತ್ವ,ಇಲ್ಲಿನ ಶಕ್ತಿಯನ್ನು ಸಮಾಜಕ್ಕೆ ತಿಳಿಸುವ ಕೆಲಸವನ್ನು ಸಂಜೀವ ಪೂಜಾರಿ ಕೂರೇಲುರವರು ಮಾಡಿದ್ದಾರೆ. ದೈವ ದೇವರು ಆರಾಧನೆ ಮಾಡಿದಾಗ ಮಾತ್ರ ಹಿಂದೂ ಸಮಾಜ ಉಳಿಯುತ್ತದೆ ಇಂತಹ ಕೆಲಸವನ್ನು ಕೂರೇಲು ಮಣ್ಣಿನಲ್ಲಿ ಮಾಡಿಕೊಂಡು ಬರಲಾಗುತ್ತಿದೆ. ಆದ್ದರಿಂದಲೇ ಸಂಜೀವಣ್ಣ ಒಬ್ಬ ಧರ್ಮಿಷ್ಠನಾಗಿ ಕಾಣುತ್ತಾರೆ ಎಂದು ಪುತ್ತೂರು ವಿಧಾನ ಸಭಾ ಕ್ಷೇತ್ರದ ಮಾಜಿ ಶಾಸಕ ಸಂಜೀವ ಮಠಂದೂರು ಹೇಳಿದರು.


ಅವರು ಆರ್ಯಾಪು ಗ್ರಾಮದ ಕೂರೇಲು ಶ್ರೀ ಮಲರಾಯ ದೈವಸ್ಥಾನದಲ್ಲಿ ಸೆ.12 ರಂದು ನಡೆದ ಶ್ರೀ ಮಲರಾಯ ದೈವಸ್ಥಾನದ ಅಷ್ಠಾದಶ ಸಂಭ್ರಮ, ಶ್ರೀ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೂ ಶ್ರೀನಾಗದೇವರ ಶಿಲಾ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಅಂಗವಾಗಿ ಕೂರೇಲುಗುತ್ತು ಧರ್ಮದೈವ ಮಲರಾಯ ಧರ್ಮಚಾವಡಿಯಲ್ಲಿ ನಡೆದ ಧಾರ್ಮಿಕ ಸಭೆ ಹಾಗೂ ವಿಶೇಷ ಗೌರವಾರ್ಪಣೆ ಕಾರ್ಯಕ್ರಮದಲ್ಲಿ ಹಿಂಗಾರ ಅರಳಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ದೈವ ದೇವರನ್ನು ಯಾರು ನಂಬುತ್ತಾರೊ ಅವರಿಗೆ ಜೀವನದಲ್ಲಿ ಯಶಸ್ಸು ಸಿಗುತ್ತದೆ, ದೈವ ದೇವರ ಅನುಗ್ರಹ ಪ್ರಾಪ್ತಿಯಾಗುತ್ತದೆ ಎಂಬುದಕ್ಕೆ ಸಂಜೀವ ಪೂಜಾರಿಯವರು ಉದಾಹರಣೆಯಾಗಿದ್ದಾರೆ ಎಂದು ಸಂಜೀವ ಮಠಂದೂರುರವರು, ಒಂದು ವಿಶೇಷವಾದ ಗೌರವಾರ್ಪಣೆ ನಡೆದಿದ್ದು ಇಲ್ಲಿ ತಂತ್ರಿಗಳಿಂದ ಹಿಡಿದು ದೈವ ಸೇವಕರಿಗೆ ಹಾಗೇ ಕುಟುಂಬದವರಿಗೆ ಸನ್ಮಾನ ನಡೆದಿರುವುದು ಸಂಜೀವಣ್ಣನವರ ವಿಶೇಷತೆಯನ್ನು ತೋರಿಸುತ್ತದೆ ಎಂದು ಹೇಳಿ ಶುಭ ಹಾರೈಸಿದರು.


ಸಂಜೀವಣ್ಣ ಒಬ್ಬ ಸ್ನೇಹ ಜೀವಿ, ಸಂಘ ಜೀವಿಯಾಗಿದ್ದಾರೆ: ಕಾವು ಹೇಮನಾಥ ಶೆಟ್ಟಿ
ಬಂಟರ ಯಾನೆ ನಾಡವರ ಮಾತೃ ಸಂಘದ ಪುತ್ತೂರು ತಾಲೂಕು ಅಧ್ಯಕ್ಷ ಕಾವು ಹೇಮನಾಥ ಶೆಟ್ಟಿಯವರು ಮಾತನಾಡಿ, ಸಂಜೀವ ಪೂಜಾರಿಯವರದ್ದು ಮತ್ತು ನನ್ನದು ಸುಮಾರು ೩೫ ವರ್ಷಗಳ ಪರಿಚಯವಾಗಿದ್ದು ಇವರೊಬ್ಬ ಸ್ನೇಹ ಜೀವಿ, ಸಂಘ ಜೀವಿಯಾಗಿದ್ದಾರೆ. ದೈವ ದೇವರನ್ನು ಭಕ್ತಿ,ಶ್ರದ್ಧೆಯಿಂದ ನಂಬಿದರೆ ದೈವ ದೇವರುಗಳು ನಮ್ಮ ಕೈ ಹಿಡಿಯುತ್ತವೆ ಎಂಬುದಕ್ಕೆ ಸಂಜೀವಣ್ಣ ಉದಾಹರಣೆಯಾಗಿದ್ದಾರೆ. ದೈವಗಳು ಅವರ ಕೈ ಹಿಡಿದಿವೆ. ಆದ್ದರಿಂದಲೇ ಅವರ ಬದುಕು ಬದಲಾವಣೆಯಾಗಿದೆ ಎಂದರು. ಸಂಜೀವ ಪೂಜಾರಿಯವರದ್ದು ವಿಶೇಷ ವ್ಯಕ್ತಿತ್ವ, ಇಂತಹ ವ್ಯಕ್ತಿತ್ವದವರು ಸಿಗುವುದು ಅಪರೂಪ ಎಂದ ಹೇಮನಾಥ ಶೆಟ್ಟಿಯವರು, ಕೂರೇಲು ತರವಾಡು ಕುಟುಂಬ ಸೇರಿದಂತೆ ತನ್ನೊಂದಿಗೆ ಕೈಜೋಡಿಸಿದ ಪ್ರತಿಯೊಬ್ಬರ ಹೆಸರನ್ನು ನೆನಪಿಟ್ಟುಕೊಂಡು ಅವರನ್ನು ಕರೆದು ಅವರಿಗೆ ಗೌರವಾರ್ಪಣೆ ಮಾಡಿರುವುದು ನನಗೆ ಅತ್ಯಂತ ಖುಷಿಕೊಟ್ಟಿದೆ. ಇದು ಅವರು ಮಾಡಿದ ಮಾದರಿ ಕಾರ್ಯವಾಗಿದೆ ಎಂದು ಹೇಳಿ ಶುಭ ಹಾರೈಸಿದರು.


ಸಂಜೀವ ಪೂಜಾರಿಯವರಲ್ಲಿ ಒಂದು ದೈವಿಕ ಶಕ್ತಿ ಇದೆ: ಜಯಂತ ನಡುಬೈಲ್
ಪುತ್ತೂರು ಅಕ್ಷಯ ಕಾಲೇಜಿನ ಸಂಚಾಲಕರು, ಉದ್ಯಮಿಗಳು ಆಗಿರುವ ಜಯಂತ ನಡುಬೈಲ್ ಮಾತನಾಡಿ, ಸಂಜೀವ ಪೂಜಾರಿಯವರ ಬಹಳಷ್ಟು ಕಾರ್ಯಕ್ರಮಗಳಲ್ಲಿ ನಾನು ಭಾಗಿಯಾಗಿದ್ದೇನೆ. ಅವರ ಎಲ್ಲಾ ಕಾರ್ಯಕ್ರಮಗಳು ಬಹಳ ಅಚ್ಚುಕಟ್ಟಾಗಿ ವ್ಯವಸ್ಥಿತವಾಗಿ ನಡೆಯುವುದನ್ನು ಗಮನಿಸಿದರೆ ಅವರಲ್ಲೊಂದು ದೈವಿಕ ಶಕ್ತಿ ಇದೆ ಎಂಬುದು ತಿಳಿಯುತ್ತದೆ.ಕೂರೇಲು ತರವಾಡು ಕುಟುಂಬದವರನ್ನು ಸೇರಿಸಿಕೊಂಡು ಕೂರೇಲು ಧರ್ಮದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವನ್ನು ಬಹಳ ಅಚ್ಚುಕಟ್ಟಾಗಿ ಮಾಡಿಸಿದ್ದಾರೆ. ಅವರು ಮಾಡಿರುವ ವಿಶೇಷ ಗೌರವಾರ್ಪಣೆ ಕಾರ್ಯವನ್ನು ನೋಡಿದಾಗ ಇಂತಹ ಗೌರವಾರ್ಪಣೆ ಸಂಜೀವಣ್ಣನವರಿಂದ ಮಾತ್ರ ಸಾಧ್ಯ ಎಂಬುದು ಅರ್ಥವಾಗುತ್ತದೆ. ಅವರಿಗೆ ದೈವ ದೇವರು ಇನ್ನಷ್ಟು ಆಯುರಾರೋಗ್ಯ ಭಾಗ್ಯವನ್ನು ಕರುಣಿಸಲಿ ಎಂದು ಹೇಳಿ ಶುಭ ಹಾರೈಸಿದರು.


ಇದು ನಿಜವಾದ ಧರ್ಮದ ಕೆಲಸವಾಗಿದೆ :ಮಲ್ಲಿಕಾ ಪಕ್ಕಳ
ಮುಖ್ಯ ಅತಿಥಿಯಾಗಿದ್ದ ಧಾರ್ಮಿಕ ಪರಿಷತ್ತು ಸದಸ್ಯೆ ಮಲ್ಲಿಕಾ ಪಕ್ಕಳರವರು ಮಾತನಾಡಿ, 18 ವರ್ಷಗಳ ಬಳಿಕ ಕೂರೇಲು ಮಣ್ಣಿನಲ್ಲಿ ಶ್ರೀ ಮಲರಾಯ ದೈವಗಳಿಗೆ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಹಾಗೇ ನಾಗದೇವರ ಶಿಲಾಪ್ರತಿಷ್ಠೆ ಬ್ರಹ್ಮಕಲಶ ನಡೆದಿದೆ. ಈ ಕಾರ್ಯಕ್ರಮದಲ್ಲಿ ತಂತ್ರಿಗಳಿಗೆ, ದೈವದ ಸೇವೆ ಮಾಡುವವರಿಗೆ ಹಾಗೇ ಕೂರೇಲು ತರವಾಡು ಕುಟುಂಬಸ್ಥರಿಗೆ ಹಾಗೇ ಕಾರ್ಯಕ್ರಮಗಳಿಗೆ ವಿವಿಧ ರೀತಿಯಲ್ಲಿ ಸಹಕರಿಸಿದವರನ್ನು ಗೌರವಾರ್ಪಣೆ ಮಾಡುವ ಕೆಲಸ ನಡೆದಿದೆ. ಇದು ನಿಜವಾದ ಧರ್ಮದ ಕೆಲಸವಾಗಿದೆ ಎಂದು ಹೇಳಿ ಶುಭ ಹಾರೈಸಿದರು.

ಚಿತ್ರ: ನವೀನ್ ರೈ ಪಂಜಳ


ಸಂಜೀವ ಪೂಜಾರಿಯವರು ಓರ್ವ ಮಹಾನ್ ದೈವ ಭಕ್ತ: ಡಾ| ಸುರೇಶ್ ಪುತ್ತೂರಾಯ
ಪುತ್ತೂರು ಮಹಾವೀರ ಆಸ್ಪತ್ರೆಯ ವೈದ್ಯರಾದ ಡಾ|ಸುರೇಶ್ ಪುತ್ತೂರಾಯರವರು ಮಾತನಾಡಿ,ಸಂಜೀವ ಪೂಜಾರಿಯವರು ಓರ್ವ ಮಹಾನ್ ದೈವಭಕ್ತರಾಗಿದ್ದಾರೆ. ಶಿಸ್ತು,ಭಕ್ತಿ,ಶ್ರದ್ಧೆಯಿಂದ ದೈವ ದೇವರನ್ನು ಆರಾಧಿಸಿದರೆ ಅದರಿಂದ ಒಳಿತಾಗುತ್ತದೆ ಎಂಬುದನ್ನು ನಾವು ಕೂರೇಲು ಮಣ್ಣಿನಲ್ಲಿ ಕಾಣಬಹುದು ಎಂದರು. ವಿಶಿಷ್ಠ ವ್ಯಕ್ತಿತ್ವದ ಸಂಜೀವಣ್ಣ ಸಮಾಜಕ್ಕೆ ಓರ್ವ ಮಾದರಿ ವ್ಯಕ್ತಿಯಾಗಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.


ಹಿಂದೂ ಸಮಾಜಕ್ಕೆ ಶಕ್ತಿ ತುಂಬುದ ಕೆಲಸ ಆಗಿದೆ : ಅರುಣ್ ಕುಮಾರ್ ಪುತ್ತಿಲ
ಹಿಂದೂ ಮುಖಂಡ ಅರುಣ್ ಕುಮಾರ್ ಪುತ್ತಿಲ ಮಾತನಾಡಿ, ಧರ್ಮ ಉಳಿದರೆ ಮಾತ್ರ ನಾವೆಲ್ಲ ಉಳಿಯಲು ಸಾಧ್ಯವಿದೆ. ಈ ನಿಟ್ಟಿನಲ್ಲಿ ನಂಬಿಕೆ ಮತ್ತು ಶ್ರದ್ಧೆಯ ಮೂಲಕ ಕೂರೇಲು ಮಣ್ಣಿನಲ್ಲಿ ಇಡೀ ಕುಟುಂಬವನ್ನು ಧರ್ಮದ ಆಧಾರದಲ್ಲಿ ಸೇರಿಸಿಕೊಂಡು ಧರ್ಮ ಕಾರ್ಯಗಳನ್ನು ಮಾಡುತ್ತಾ ಬಂದಿದ್ದು ಆ ಮೂಲಕ ಹಿಂದೂ ಸಮಾಜಕ್ಕೆ ಶಕ್ತಿ ತುಂಬುವ ಕೆಲಸವನ್ನು ಸಂಜೀವ ಪೂಜಾರಿಯವರು ಮಾಡಿದ್ದಾರೆ ಎಂದು ಹೇಳಿ ಶುಭ ಹಾರೈಸಿದರು.


ಭಕ್ತಿ,ಶ್ರದ್ಧೆಯಿಂದ ಮಾಡುವ ಕೆಲಸಗಳಿಗೆ ದೇವರ ಅನುಗ್ರಹ ದೊರೆಯುತ್ತದೆ: ದೇಜಪ್ಪ ಬಾಚಕೆರೆ
ಸರಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ, ವಿಶೇಷ ಗೌರವಾರ್ಪಣೆ ಸ್ವೀಕರಿಸಿದ ದೇಜಪ್ಪ ಪರವ ಬಾಚಕೆರೆಯವರು ಮಾತನಾಡಿ, ಯಾವುದೇ ಧರ್ಮ ಕಾರ್ಯಗಳನ್ನು ಶ್ರದ್ಧೆ,ಭಕ್ತಿಯಿಂದ ಮಾಡಿದಾಗ ಅದಕ್ಕೆ ದೈವ ದೇವರ ಅನುಗ್ರಹ ದೊರೆಯುತ್ತದೆ ಎಂಬುದನ್ನು ನಾವು ಕೂರೇಲು ಮಣ್ಣಿನಲ್ಲಿ ಕಾಣಬಹುದಾಗಿದೆ ಎಂದರು. ಇಂದು ಕೂರೇಲು ಮಣ್ಣಿನಲ್ಲಿ ವಿಶೇಷ ಗೌರವಾರ್ಪಣೆ ಪಡೆದಿರುವುದು ನನಗೆ ಅತೀವ ಸಂತೋಷ ತಂದಿದೆ, ಇದೆಲ್ಲಾ ಇಲ್ಲಿ ನೆಲೆಯಾದ ದೈವ ದೇವರ ಪ್ರಸಾದ ಎಂದು ಸ್ವೀಕರಿಸಿದ್ದೇನೆ ಎಂದು ಹೇಳಿ ಕೃತಜ್ಞತೆ ಸಲ್ಲಿಸಿದರು.


ಮನೆ ದೇವರ ಆಶೀರ್ವಾದ ಇದ್ದಾಗ ಎಲ್ಲವೂ ಸಾಧ್ಯ : ಹರೀಶ್ ಶಾಂತಿ
ಮಂಗಳೂರು ಗುರು ವೈದಿಕ ಸಮಿತಿಯ ಅಧ್ಯಕ್ಷರಾದ ಹರೀಶ್ ಶಾಂತಿ ಪುತ್ತೂರುರವರು ಮಾತನಾಡಿ,ಕುಟುಂಬದ ನಮ್ಮ ಮನೆಯ ದೈವ ದೇವರ ಆಶೀರ್ವಾದ ಇದ್ದಾಗ ಮಾತ್ರ ಜೀವನದಲ್ಲಿ ಎಲ್ಲವನ್ನು ಪಡೆಯಲು ಸಾಧ್ಯ. ಮನೆ ದೇವರ ಆಶೀರ್ವಾದಿಂದ ಎಲ್ಲವೂ ಸಾಧ್ಯವಿದೆ ಎಂದು ಹೇಳಿ ಶುಭ ಹಾರೈಸಿದರು.


ಧಾರ್ಮಿಕ ಸಭೆಯನ್ನು ತಂತ್ರಿಗಳಾದ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಶುಭಾಶೀರ್ವಾದ ಮಾಡಿದರು. ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲುರವರು ಸಭಾಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ವೇದಿಕೆಯಲ್ಲಿ ಬಂಬ್ರಾಣ ಕೊಟ್ಯದಮನೆಯ ಧರ್ಮದರ್ಶಿ ನಾರಾಯಣ ಪೂಜಾರಿ ಬಂಬ್ರಾಣ, ಸರಸ್ವತಿ ಸಂಜೀವ ಪೂಜಾರಿ ಕೂರೇಲು ಉಪಸ್ಥಿತರಿದ್ದರು. ಹರ್ಷಿತ್ ಪೂಜಾರಿ ಕೂರೇಲು ಸ್ವಾಗತಿಸಿದರು. ನೇಮಾಕ್ಷ ಸುವರ್ಣ ಸನ್ಮಾನಿತರ ಪರಿಚಯ ಪತ್ರ ಓದಿದರು. ಮನ್ವಿತಾ ಮತ್ತು ಮನೀಷಾ ಪ್ರಾರ್ಥಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಶ್ರೀನಾಗದೇವರ ಸನ್ನಿಧಿಯಲ್ಲಿ ಮತ್ತು ಶ್ರೀ ಮಲರಾಯ ಧರ್ಮಚಾವಡಿಯಲ್ಲಿ ನಡೆದ ವೈಧಿಕ ಕಾರ್ಯಕ್ರಮಗಳು:
ಕೂರೇಲು ಮಣ್ಣಿನಲ್ಲಿ ನೆಲೆಯಾಗಿರುವ ಮಲರಾಯ ಬಂಟ, ಮಹಿಷಂತಾಯ, ಗುಳಿಗ ದೈವ ಮತ್ತು ಪರಿವಾರ ದೈವಗಳ ಸಾನಿಧ್ಯ ಕ್ಷೇತ್ರವಾಗಿರುವ ಶ್ರೀ ಮಲರಾಯ ದೈವಸ್ಥಾನದಲ್ಲಿ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳ ನೇತೃತ್ವದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಕೂರೇಲು ಮಣ್ಣಿನ ಶ್ರೀ ನಾಗದೇವರಿಗೆ ಚಿತ್ರಕೂಟ ಶೈಲಿಯ ನಿರ್ಮಾಣ ಮಾಡಿರುವ ಶ್ರೀ ನಾಗದೇವರ ಕಟ್ಟೆಯಲ್ಲಿ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ, ಬ್ರಹ್ಮಕಲಶ ಹಾಗೂ ಧಾರ್ಮಿಕ ಸಭೆ, ವಿಶೇಷ ಗೌರವಾರ್ಪಣೆ ಕಾರ್ಯಕ್ರಮ ಸೆ.12 ರಂದು ಕೂರೇಲು ಶ್ರೀ ಮಲರಾಯ ದೈವಸ್ಥಾನದ ವಠಾರದಲ್ಲಿ ಜರಗಿತು. ಬೆಳಿಗ್ಗೆ ಶ್ರೀ ನಾಗದೇವರ ಸನ್ನಿಧಿಯಲ್ಲಿ ಶ್ರೀ ಮಹಾಗಣಪತಿ ಹೋಮ, ನಾಗ ಪ್ರತಿಷ್ಠಾ ಪ್ರಧಾನ ಹೋಮ, ಬ್ರಹ್ಮಕಲಶ ಪೂಜೆ ನಡೆದು ಬೆಳಿಗ್ಗೆ 7.34 ರ ಕನ್ಯಾ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ನಾಗದೇವರ ಶಿಲಾ ಪ್ರತಿಷ್ಠೆ ನಡೆದು ಪ್ರತಿಷ್ಠಾ ಪೂಜೆ, ಆಶ್ಲೇಷ ಬಲಿ, ಶ್ರೀ ನಾಗದೇವರಿಗೆ ಪಂಚಾಮೃತ, ಅಭಿಷೇಕ, ಕ್ಷೀರಾಭಿಷೇಕ, ಸಿಯಾಳಾಭಿಷೇಕ, ಬ್ರಹ್ಮಕಲಶಾಭಿಷೇಕ, ತಂಬಿಲ ಸೇವೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯಿತು. ಶ್ರೀ ಧರ್ಮದೈವಗಳ ಚಾವಡಿಯಲ್ಲಿ ಬೆಳಿಗ್ಗೆ ಶ್ರೀ ಮಹಾಗಣಪತಿ ಹೋ, ಬ್ರಹ್ಮಕಲಶ ಪೂಜೆ ನಡೆದು ಬೆಳಿಗ್ಗೆ 10.05 ರ ತುಲಾ ಲಗ್ನದ ಶುಭ ಮುಹೂರ್ತದಲ್ಲಿ ಶ್ರೀ ಮಲರಾಯ ಬಂಟ, ಮಹಿಷಂತಾಯ ದೈವಗಳ ಬಿಂಬ ಪ್ರತಿಷ್ಠೆ, ಶ್ರೀ ಗುಳಿಗ ದೈವದ ಶಿಲಾ ಪ್ರತಿಷ್ಠೆ, ತರವಾಡು ದೈವಗಳ ಬ್ರಹ್ಮಕಲಶಾಭಿಷೇಕ ನಡೆದು ತಂಬಿಲ ಸೇವೆ ಬಳಿಕ ಮಹಾಪೂಜೆ ನಡೆದು ಭಕ್ತಾಧಿಗಳಿಗೆ ಪ್ರಸಾದ ವಿತರಣೆ ನಡೆಯಿತು. ಕೂರೇಲು ತರವಾಡು ಕುಟುಂಬದ ನೂರಾರು ಮಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ದೈವಗಳ ಹಾಗೂ ನಾಗದೇವರ ಪ್ರಸಾದ ಸ್ವೀಕರಿಸಿದರು. ಕೂರೇಲು ಶ್ರೀ ಮಲರಾಯ ದೈವಸ್ಥಾನದ ಆಡಳಿತ ಮೊಕ್ತೇಸರ ಕೆ.ಸಂಜೀವ ಪೂಜಾರಿ ಕೂರೇಲು ಭಕ್ತಾಧಿಗಳಿಗೆ ಪ್ರಸಾದ ನೀಡಿ ಸತ್ಕರಿಸಿದರು. ಸರಸ್ವತಿ ಸಂಜೀವ ಪೂಜಾರಿ ಮತ್ತು ಹರ್ಷಿತ್ ಪೂಜಾರಿ ಕೂರೇಲು ಸೇರಿದಂತೆ ಕೂರೇಲು ತರವಾಡು ಮನೆಯ ಕುಟುಂಬಸ್ಥರು ಉಪಸ್ಥಿತರಿದ್ದರು.

ವಿಶೇಷ ಗೌರವಾರ್ಪಣೆ, ಸನ್ಮಾನ
ಕಾರ್ಯಕ್ರಮದ ಮುಖ್ಯ ಅಂಗವಾಗಿ ಕ್ಷೇತ್ರದ ತಂತ್ರಿವರ್ಯರಾದ ಕೆಮ್ಮಿಂಜೆ ಶ್ರೀ ಲಕ್ಷ್ಮೀಶ ತಂತ್ರಿಗಳಿಗೆ ಮತ್ತು ಸರಪಾಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಧರ್ಮದರ್ಶಿ ದೇಜಪ್ಪ ಪರವ ಬಾಚಕೆರೆಯವರಿಗೆ ವಿಶೇಷ ಗೌರವಾರ್ಪಣೆ, ಸನ್ಮಾನ ನಡೆಯಿತು. ಪೇಟಾ,ಹಾರ, ಶಾಲು,ಫಲಪುಷ್ಪ,ಸ್ಮರಣಿಕೆಯೊಂದಿಗೆ ವಿಶೇಷವಾಗಿ ಗೌರವಿಸಿ ಸನ್ಮಾನಿಸಲಾಯಿತು.

224 ಮಂದಿಗೆ ವಿಶೇಷ ಸನ್ಮಾನ
ಕಾರ್ಯಕ್ರಮದಲ್ಲಿ ವಿಶೇಷ ಆಕರ್ಷಣೆಯಾಗಿ ಸುಮಾರು 224 ಮಂದಿಗೆ ವಿಶೇಷ ಸನ್ಮಾನ ಕಾರ್ಯಕ್ರಮ ನಡೆಯಿತು. ಇದರಲ್ಲಿ ಮುಖ್ಯವಾಗಿ ಬ್ರಹ್ಮಕಲಶೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಸಹಕಾರ ನೀಡಿದ ಕೂರೇಲು ತರವಾಡು ಕುಟುಂಬಸ್ಥರಿಗೆ, ಅಡುಗೆ ವಿಭಾಗದವರಿಗೆ, ಪೊಲೀಸ್ ಇಲಾಖೆಯವರಿಗೆ, ಅಗ್ನಿಶಾಮಕ ದಳ, ಮೆಸ್ಕಾಂ ಇಲಾಖೆಯವರಿಗೆ, ಬ್ಯಾಂಕ್ ಉದ್ಯೋಗಗಳಿಗೆ, ಬೀಡಿ ಕಂಟ್ರಾಕ್ಟ್‌ದಾರರಿಗೆ, ವೆಲ್ಡಿಂಗ್,ಮೇಸ್ತ್ರೀ, ಪೈಟಿಂಗ್ ವಿಭಾಗದವರಿಗೆ, ಪರ್ಪುಂಜ ಸ್ನೇಹ ಯುವಕ ಮಂಡಲ ಮತ್ತು ಮಹಿಳಾ ಮಂಡಲದ ಪದಾಧಿಕಾರಿಗಳಿಗೆ, ಛಾಯಾಚಿತ್ರಗಾರರಿಗೆ, ಆರ್ಟಿಸ್ಟ್‌ಗಳಿಗೆ ಇದಲ್ಲದೆ ವಿವಧ ರೀತಿಯಲ್ಲಿ ಸಹಕಾರ ನೀಡಿದ ಕರಸೇವಕರಿಗೆ ಸೇರಿದಂತೆ ಸುಮಾರು 224 ಜನರಿಗೆ ಈ ಸಂದರ್ಭದಲ್ಲಿ ಶಾಲು,ಸ್ಮರಣಿಕೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಇತಿಹಾಸದಲ್ಲೇ 200 ಕ್ಕೂ ಅಧಿಕ ಮಂದಿಯನ್ನು ಒಂದೇ ದಿನ ಗುರುತಿಸಿ ಗೌರವಿಸಿದ್ದು ವಿಶೇಷವಾಗಿತ್ತು.


22 ಲಕ್ಷ ರೂಪಾಯಿಗಳ ಅಭಿವೃದ್ದಿ ಕೆಲಸಗಳ ಸಮರ್ಪಣೆ
ಕೂರೇಲು ಶ್ರೀ ಮಲರಾಯ ದೈವಸ್ಥಾನದ ಬ್ರಹ್ಮಕಲಶೋತ್ಸವ ನಡೆದ 18 ವರ್ಷಗಳ ಬಳಿಕ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ನಡೆಯುತ್ತಿದೆ. ಎಲ್ಲವೂ ಜ್ಯೋತಿಷ್ಯ ಚಿಂತನೆಯ ಪ್ರಕಾರ, ಶಿಲ್ಪಿಯಾಧರಿತವಾಗಿ ನಡೆದಿದೆ. ಮುಖ್ಯವಾಗಿ ಕೂರೇಲು ಶ್ರೀ ನಾಗದೇವರಿಗೆ ಚಿತ್ರಕೂಟ ಶೈಲಿಯ ನೂತನ ನಾಗನಕಟ್ಟೆ ನಿರ್ಮಾಣ ಮಾಡಿ ಅದರಲ್ಲಿ ಶ್ರೀ ನಾಗದೇವರ ಶಿಲಾಪ್ರತಿಷ್ಠೆ, ಶ್ರೀ ಮಲರಾಯ ದೈವಸ್ಥಾನಕ್ಕೆ ವಿಶೇಷವಾದ ಮೇಲ್ಛಾವಣಿ ,ಅಂತರ ಮಾಡು ನಿರ್ಮಿಸಲಾಗಿದೆ. ದೈವಸ್ಥಾನಕ್ಕೆ ಸುತ್ತು ಕೌಂಪೌಂಡು ನಿರ್ಮಾಣ, ನೂತನ ಶ್ರೀ ಗುಳಿಗ ದೈವದ ಕಟ್ಟೆ, ಶ್ರೀ ಮಲರಾಯ ದೈವದ ವಲಸರಿ ಗದ್ದೆಗೆ ಸುತ್ತು ಕೌಂಪೌಂಡ್ ನಿರ್ಮಾಣ, ದೈವಸ್ಥಾನ ಮತ್ತು ತರವಾಡು ಮನೆಯ ಅಂಗಳಕ್ಕೆ ಹಾಗೂ ಸುತ್ತಮುತ್ತ ಇಂಟರ್‌ಲಾಕ್ ಅಳವಡಿಸಲಾಗಿದೆ. ಶ್ರೀ ಮಲರಾಯ ಬಂಟ, ಮಹಿಷಂತಾಯ ದೈವದ ಮೊಗ ಮತ್ತು ಆಯುಧಗಳಿಗೆ ಬೆಳ್ಳಿ ಕವಚ ಸಮರ್ಪಣೆ ಹಾಗೇ ದೈವಗಳ ತರವಾಡು ಮನೆಯಲ್ಲಿ ನೆಲೆಯಾಗಿರುವ ವರ್ಣರ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಕೊರಗಜ್ಜ ದೈವಗಳು ಸೇರಿದಂತೆ ಎಲ್ಲಾ ದೈವಗಳ ಮೊಗ ಮತ್ತು ಆಯುಧಗಳಿಗೆ ಬೆಳ್ಳಿ ಕವಚ ಸಮರ್ಪಣೆ, ಶ್ರೀ ವರ್ಣರ ಪಂಜುರ್ಲಿ,ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ ದೈವಗಳಿಗೆ ಮಂಚ (ಪೀಠ)ದ ಸಮರ್ಪಣೆ ನಡೆಯಿತು. ಹೀಗೆ ಸುಮಾರು 22 ಲಕ್ಷ ರೂಪಾಯಿಗಳ ಅಭಿವೃದ್ಧಿ ನಡೆದಿದ್ದು ಶ್ರೀ ದೈವಗಳ ಪುನರ್ ಪ್ರತಿಷ್ಠೆಯ ಸಂದರ್ಭದಲ್ಲಿ ಈ ಅಭಿವೃದ್ಧಿ ಕೆಲಸಗಳ ಅರ್ಪಣೆ ನಡೆಯಿತು.


‘ ನಾನು ಇಲ್ಲಿ ನಿಮಿತ್ತ ಮಾತ್ರ ಎಲ್ಲವೂ ದೈವ ದೇವರ ಕೃಪೆ, ಒಂದು ಕಾಲದಲ್ಲಿ ಬರಡುಭೂಮಿಯಾಗಿದ್ದ ಕೂರೇಲು ಮಣ್ಣು ಇಲ್ಲಿನ ದೈವ ದೇವರು ಮತ್ತು ನಾಗ ದೇವರ ಆರಾಧನೆಯಿಂದ ಸಮೃದ್ಧಿಯಾಗಿದೆ.ಕೂರೇಲು ಕುಟುಂಬಸ್ಥರ ಸಹಕಾರವನ್ನು ಪಡೆದುಕೊಂಡು ದೈವ ದೇವರ ಆಶೀರ್ವಾದದಿಂದ ಕೆಲಸ ಕಾರ್ಯಗಳು ನಡೆಯುತ್ತಾ ಬಂದಿದೆ. ಎಲ್ಲವೂ ದೈವಗಳ ಇಚ್ಚೆಯಂತೆ ನಡೆಯುತ್ತಾ ಬಂದಿದ್ದು, ಇಲ್ಲಿ ನೆಲೆಯಾಗಿರುವ ಶ್ರೀ ದೈವಗಳು ಎಲ್ಲರಿಗೂ ಒಳ್ಳೆಯದನ್ನು ಮಾಡಲಿ ಎಂದು ಹೇಳಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.’
ಕೆ.ಸಂಜೀವ ಪೂಜಾರಿ ಕೂರೇಲು, ಆಡಳಿತ ಮೊಕ್ತೇಸರ ಶ್ರೀಮಲರಾಯ ದೈವಸ್ಥಾನ ಕೂರೇಲು

LEAVE A REPLY

Please enter your comment!
Please enter your name here