ಭಾರತ್ ಸಿನಿಮಾಸ್‌ನಲ್ಲಿ ‘ಕಲ್ಜಿಗ’ ಕನ್ನಡ ಸಿನೆಮಾ ಬಿಡುಗಡೆ

0

ಪುತ್ತೂರು: ಹಿಮಾನಿ ಫಿಲಂಸ್ ಬ್ಯಾನರಿನಡಿಯಲ್ಲಿ ಮಂಗಳೂರು ಶೈಲಿಯ ಕನ್ನಡದಲ್ಲಿ ತುಳುನಾಡಿನ ಸೊಬಗು, ಕಾರಣಿಕ ಶಕ್ತಿಯನ್ನು ಪರಿಚಯಿಸಿಕೊಂಡು ನಿರ್ಮಾಣಗೊಂಡ ‘ಕಲ್ಜಿಗ’ ಕನ್ನಡ ಸಿನೇಮಾ ಸೆ.13ರಂದು ಜಿ.ಎಲ್ ವನ್ ಮಾಲ್‌ನಲ್ಲಿರುವ ಭಾರತ್ ಸಿನಿಮಾಸ್‌ನಲ್ಲಿ ಬಿಡುಗಡೆಗೊಂಡಿತು. ಕಲಿ ಯುಗದಲ್ಲಿ ದೈವ ದೇವರ ಪ್ರಾಧಾನ್ಯತೆಯೊಂದಿಗೆ ಭಕ್ತ ಪ್ರಧಾನವಾದ ಹಳ್ಳಿಯ ಸೊಬಗಿನೊಂದಿಗೆ ನಿರ್ಮಾಣಗೊಂಡಿರುವ ಕಲ್ಜಿಗ ಚಿತ್ರದಲ್ಲಿ ಧರ್ಮ ದಾರಿಯಲ್ಲಿ ಅಧರ್ಮದ ನೆರಳು ಬಿದ್ದ ನಂತರದಲ್ಲಿ ಘಟಿಸುವ ರೋಚಕ ಕಥನ ಚಿತ್ರದಲ್ಲಿದೆ. ಈ ಚಿತ್ರವು ಸೆ.13ರಂದು ರಾಜ್ಯದಾದ್ಯಂತ ತೆರೆ ಕಂಡಿದೆ.


ಸಿನೇಮಾವನ್ನು ದೀಪ ಬೆಳಗಿಸಿ ಚಾಲನೆ ನೀಡಿದ ಬ್ರಹ್ಮವಾಹಕ ಆಲಡ್ಕ ರಾಧಾಕೃಷ್ಣ ಪುತ್ತೂರಾಯ ಮಾತನಾಡಿ, ಕಲ್ಜಿಗ ಸಿನೇಮಾವು ಕಾಂತಾರದಂತೆ ಹೆಸರು ಪಡೆಯಲಿ. ಎಲ್ಲರ ಮನ ಮನೆ ತಲುಪುವ ಮುಖಾಂತರ ಶತ ದಿನ ಆಚರಿಸಲಿ ಎಂದು ಹಾರೈಸಿದರು. ಬಿಜೆಪಿ ಗ್ರಾಮಾಂತರ ಮಂಡಲದ ಮಾಜಿ ಅಧ್ಯಕ್ಷ ಸಾಜ ರಾಧಾಕೃಷ್ಣ ಆಳ್ವ ಮಾತನಾಡಿ, ಮಂಗಳೂರು ಶೈಲಿಯ ಕನ್ನಡದಲ್ಲಿ ನಿರ್ಮಾಣಗೊಂಡಿರುವ ಕಲ್ಜಿಗ ಸಿನಿಮಾವು ಉತ್ತಮ ರೀತಿಯಲ್ಲಿ ಮೂಡಿಬರಲಿದೆ. ಸಿನಿಮಾದ ಹೆಸರಿನಂತೆ ಜನರಿಗೆ ಮನರಂಜನೆಯ ಜೊತೆಗೆ ಸಮಾಜಕ್ಕೆ ಉತ್ತಮ ಸಂದೇಶ ಕೊಡುವ ಸಿನಿಮಾಗಿದೆ ಎಂದರು.ನ್ಯಾಯವಾದಿ ಮಹೇಶ್ ಕಜೆ ಮಾತನಾಡಿ, ತುಳುನಾಡಿನ ಕಾರಣಿಕ ಶಕ್ತಿಗಳನ್ನು ಆದರಿಸಿ ನಿರ್ಮಾಣಗೊಂಡಿರುವ ಚಿತ್ರಕ್ಕೆ ಇಲ್ಲಿಯ ಶಕ್ತಿಗಳ ಆಶೀರ್ವಾದ ಇದೆ. ಈ ಚಿತ್ರವು ಪರಿಪೂರ್ಣ ಚಿತ್ರವಾಗಿ ಮೂಡಿಬರಲಿದೆ ಎಂದರು.


ಪುರಸಭಾ ಮಾಜಿ ಅಧ್ಯಕ್ಷ ಯು. ಲೋಕೇಶ್ ಹೆಗ್ಡೆ, ನಿವೃತ್ತ ಶಿಕ್ಷಕ, ಅಂಕಣಕಾರ ನಾರಾಯಣ ರೈ ಕುಕ್ಕುವಳ್ಳಿ, ನಗರ ಸಭಾ ಸದಸ್ಯೆ ವಿದ್ಯಾ ಗೌರಿ, ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಮಹಾಬಲ ರೈ ವಳತ್ತಡ್ಕ, ವಸಂತಲಕ್ಷ್ಮೀ ಮಾತನಾಡಿ ಶುಭಹಾರೈಸಿದರು. ಪ್ರಗತಿಪರ ಕೃಷಿಕ ಬೈಲುಗುತ್ತು ಮಾರಪ್ಪ ಶೆಟ್ಟಿ, ಚಿತ್ರದ ಹಿನ್ನೆಲೆ ಸಂಗೀತಕಾರ ಪ್ರಸಾದ್ ಕೆ ಶೆಟ್ಟಿ, ನಿರ್ಮಾಪಕ ಶರತ್ ಆಳ್ವ ಕೂರೇಲು, ಭಾರತ್ ಸಿನಿಮಾಸ್‌ನ ವ್ಯವಸ್ಥಾಪಕ ಜಯರಾಮ ವಿಟ್ಲ, ಚಲನಚಿತ್ರ ವಿತರಕ ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು. ಪದ್ಮರಾಜ್ ಚಾರ್ವಾಕ ಸ್ವಾಗತಿಸಿ, ವಂದಿಸಿದರು.

LEAVE A REPLY

Please enter your comment!
Please enter your name here